ಅಂಕಣ ಬರಹ

“ಮನೆ ನೋಡಾ ಬಡವರು…” ಹಾಗೆಂದರೇನು?

ಮನೆ ನೋಡಾ ಬಡವರು; ಮನ ನೋಡಾ ಘನ
ಸೋಂಕಿನಲ್ಲಿ ಶುಚಿ; ಸರ್ವಾಂಗ ಕಲಿಗಳು
ಪಸರಕ್ಕನುವಿಲ್ಲ; ಬಂದ ತತ್ಕಾಲಕ್ಕೆ ಉಂಟು
ಕೂಡಲ ಸಂಗನ ಶರಣರು ಸ್ವತಂತ್ರ ಧೀರರು

೧೨ನೇ ಶತಮಾನದ ವಚನ ಚಳವಳಿಯ ನೇತಾರ ವಿಶ್ವಗುರು ಬಸವಣ್ಣನವರನ್ನು ಜನಪದರು “ಬಸವ ರಾಜ್ಯದ ಸಿರಿಯು, ಬಸವ ಬೆವರಿನ ನಿಧಿಯು, ಬಸವ ಮಳೆ ಬೆಳೆ ನಾಡೊಗಳಗೆ ಬಸವನೆ ಸಗ್ಗ ಸೋಪಾನ, “ಸಾಧು ಸಾಧೆಲೆ ಬಸವ, ಓದು ಕಲಿಯುತು ಜನವು” ಎಂದು ಹಾಡಿ ಹೊಗಳಿದ್ದಾರೆ. ಅವರ ಸಮಕಾಲೀನ ಶರಣರು ತಾವು ಕಂಡಂತೆ ಅನೇಕ ರೀತಿಯಲ್ಲಿ ಹಾಡಿ ಹೊಗಳಿದ್ದಾರೆ. ಶೂನ್ಯಪೀಠದ ಅಧ್ಯಕ್ಷ, ವ್ಯೋಮಕಾಯ ಅಲ್ಲಮಪ್ರಭುಗಳು “ಭ ಎಂಬಲ್ಲಿ ಎನ್ನ ಭವ ಹರಿಯಿತ್ತು, ಸ ಎಂಬಲ್ಲಿ ಸರ್ವಜ್ಞಾನಿಯಾದೆನು, ವ ಎಂದು ವಚಿಸುವಡೆ ವಸ್ತು ಚೈತನ್ಯಾತ್ಮಕನಾದೆನು. ಇಂತೀ ಬಸವಾಕ್ಷರ ಮನದಲ್ಲಿ ತೊಳಗಿ ಬೆಳಗುವದ ಕಂಡು ಆನು ನೀನು ಬಸವಾ ಬಸವಾ ಎನುತಿರ್ದೆವು ಗುಹೇಶ್ವರ” ಎಂದು ಹೇಳಿದ್ದಾರೆ. ಮುಂದುವರಿದು ಎನಗೆಯೂ, ಗುರು ಗುಹೇಶ್ವರನಿಗೂ ವಿಳಾಸವಾದೆಯಲ್ಲ ಸಂಗನಬಸವ” ಎಂದು ಬಸವಣ್ಣನವರ ಮಹಿಮೆಯನ್ನು ಕೊಂಡಾಡಿದ್ದಾರೆ.”ಗುರು,ಲಿಂಗ ಜಂಗಮ ಬಸವಣ್ಣನ ಹೃದಯದಲ್ಲಿ ಹುಟ್ಟಿದವು” ಎಂದು ಸೊನ್ನಲಿಗೆಯ ಸಿದ್ಧರಾಮ ಹೇಳುತ್ತಾರೆ. “ಎತ್ತೆತ್ತ ನೋಡಿದಡತ್ತ ಬಸವನೆಂಬ ಬಳ್ಳಿ, ಎತ್ತಿ ನೋಡಿದಡೆ ಲಿಂಗವೆಂಬ ಗೊಂಚಲು, ಒತ್ತಿ ಹಿಂಡಿದಡೆ ಭಕ್ತಿಯೆಂಬ ರಸವು” ಎಂದು ವೀರ ಗಣಾಚಾರಿ ಮಡಿವಾಳ ಮಾಚಿದೇವರು ಹೇಳುತ್ತಾರೆ.

ಅದೇರೀತಿಯಾಗಿ ಇನ್ನೂ ಅನೇಕ ಶರಣರು ತಾವು ಕಂಡಂತೆ ಬಸವಣ್ಣನವರನ್ನು ಚಿತ್ರಿಸಿದ್ದಾರೆ. ಅದರಂತೆ ಬಸವಣ್ಣನವರು ಕೂಡ ತಾವು ಕಂಡಂತೆ ಶರಣರನ್ನು ಮನದುಂಬಿ ಹಾಡಿ ಹೊಗಳಿದ್ದಾರೆ. ಶರಣರ ವ್ಯಕ್ತಿತ್ವ ಕುರಿತು ಬಸವಣ್ಣನವರು ಬರೆದ ಅತ್ಯಂತ ಹೃದಯಸ್ಪರ್ಶಿ ವಚನವಿದು. ಮನೆ ಚಿಕ್ಕದಿದ್ದರೂ ಘನಮನ ಸಂಪನ್ನರು ನಮ್ಮ ಶರಣರು. ಸೋಂಕಿನಲ್ಲಿ ಶುಚಿಯಾಗಿರುವುದಲ್ಲದೆ ಸರ್ವಾಂಗ ಕಲಿಗಳಾಗಿದ್ದರು. ಅಂದಂದೇ ದುಡಿದುಣ್ಣುತ್ತಿದ್ದ ಶರಣರಿಗೆ ಸಂಗ್ರಹಬುದ್ಧಿ ಇರಲಿಲ್ಲ ವಿನಃ ದಾಸೋಹಭಾವ ಇತ್ತು ಎಂದು ಶರಣರ ಶುಚಿತ್ವ ಹಾಗೂ ಕಲಿತನವನ್ನು ವಿವರಿಸಿದ್ದಾರೆ. ಬಸವಣ್ಣನವರ ಈ ವಚನವು ಅಂದಿನ ಶರಣರ ನಿಲುವು ಏನಿತ್ತು ಎಂಬುದು ನಮಗೆ ಸ್ಪಷ್ಟವಾಗುತ್ತದೆ.

ಎಲ್ಲರೂ ಕಾಯಕ ಮಾಡಬೇಕು, ಯಾರಿಗೂ ಬೇಡದೆ ಬದುಕುವ ಛಲ ಬೆಳೆಸಿಕೊಳ್ಳಬೇಕು. ಉಳ್ಳವರು ತಮ್ಮ ಸಂಪತ್ತನ್ನು ಶಿವನಿಧಿಗೆ ಒಪ್ಪಿಸಬೇಕು. ಬಡತನವನ್ನು ಸ್ವೀಕರಿಸುತ್ತ ಹೃದಯ ಶ್ರೀಮಂತಿಕೆಯನ್ನು ಹೆಚ್ಚಿಸಿಕೊಂಡರು. ಬಡತನವನ್ನು ಆಹ್ವಾನಿಸುವಂತಹ ವೀರಗುಣ ಪಡೆದು ಭೌತಿಕ ಸುಖ ಲೋಲುಪತೆಯಿಂದ ದೂರ ಉಳಿದರು. ಹೀಗೆ ಭವ ಬಂಧನದಿಂದ ಬಿಡಿಸಿಕೊಂಡು ಸ್ವತಂತ್ರ ಧೀರರಾದರು. ಕಾಯಕ ಮತ್ತು ದಾಸೋಹ ಸಿದ್ಧಾಂತದ ಮೂಲಕ ನಿಜವಾದ ಸ್ವಾತಂತ್ರ್ಯವನ್ನು ಶರಣರು ಕಲಿಸಿಕೊಟ್ಟರು.

ಸ್ವಾತಂತ್ರ್ಯ ಎನ್ನುವುದು ಯಾರೂ ಕೊಡುವಂಥಹದ್ದಲ್ಲ. ಇದನ್ನು ಯಾರೂ ಕೊಡಲಿಕ್ಕೆ ಕೂಡ ಬರುವುದಿಲ್ಲ. ಅದು ನಮ್ಮೊಳಗೆ ಸೃಷ್ಟಿಯಾಗಬೇಕು. ಅದು ನಮ್ಮೊಳಗೆ ಸೃಷ್ಟಿಯಾಗಬೇಕಾದರೆ ಸ್ವಾಭಿಮಾನಿಗಳಾಗಿ ಬದುಕಬೇಕು. ಸ್ವಾಭಿಮಾನಿಯಾಗಿ ಬದುಕಬೇಕಾದರೆ ಕಾಯಕ ಮಾಡುತ್ತ ಯಾರಿಗೂ ಬೇಡದೆ ಬದುಕುವ ಛಲ ಬೆಳೆಸಿಕೊಳ್ಳಬೇಕು. ಬೇಡುವ ಸಂಸ್ಕೃತಿಯಿಂದ ಕೊಡುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು. ಅಂದಾಗ ಮಾತ್ರ ಸ್ವಾಭಿಮಾನದ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಹೇಳಿದ್ದಾರೆ.

ಯಾವುದೇ ಕಾಯಕವಾದರೂ ಮನಸ್ಸುಕೊಟ್ಟು ಮಾಡು. ಕಾಯಕದಿಂದ ಬಂದದ್ದನ್ನು ದಾಸೋಹಂ ಭಾವದಿಂದ ಶರಣ ಸಂಕುಲಕ್ಕೆ (ಗುರು, ಲಿಂಗ, ಜಂಗಮ)ಅರ್ಪಿಸು. ಅರ್ಪಿಸಿದ ನಂತರ ಉಳಿದದ್ದನ್ನು ಪ್ರಸಾದವಾಗಿ ಸ್ವೀಕರಿಸು. ರೋಗ ಬಂದರೆ ನರಳು, ನೋವಾದರೆ ಅರಚು, ಸಾವು ಬಂದರೆ ಸಾಯಿ ಇದಕ್ಕೆ ಆ ದೇವರ ಹಂಗೇಕೆ ಎಂದು ಲದ್ದೆಯ ಸೋಮಣ್ಣ ಪ್ರಶ್ನಿಸುತ್ತಾನೆ. ಆತ್ಮಗೌರವ, ಕಾಯಕನಿಷ್ಠೆ ಶರಣ ಸಂಕುಲಕ್ಕೆ ನಿಷ್ಠೆ. ಹೀಗಾಗಿ ದೇವರ ಹಂಗಿನಲ್ಲಿ ಕೂಡ ಇರಬಾರದು ಎಂದು ಹೇಳುತ್ತಾರೆ. ದುಡಿಯುವುದು ಸ್ವಾಭಿಮಾನದ ಪ್ರತೀಕ. ಬೇಡುವುದು ಅವಮಾನದ ಪ್ರತೀಕ ಎಂದು ಆತ ಸೂಚಿಸುತ್ತಾನೆ.

ದೇವರು ನಿರಾಕಾರವಾಗಿದ್ದಾನೆ. ಹಸಿವು ತೃಷೆಗಳು ಆತನ ಬಳಿ ಸುಳಿಯಲಾರವು. ಆದರೆ ಜನ ಲೌಕಿಕ ಜಗತ್ತಿನಲ್ಲಿದ್ದಾರೆ. ಅವರಿಗೆ ಹಸಿವು ನೀರಡಿಕೆಗಳಾಗುತ್ತವೆ. ಬಡವರಿಗಂತೂ ಹೊಟ್ಟೆ ತುಂಬಿಸಿಕೊಳ್ಳವುದೇ ದೈನಂದಿನ ಸಮಸ್ಯೆಯಾಗಿರುತ್ತದೆ. ಹೊಟ್ಟೆಪಾಡಿಗಾಗಿ ಕೆಲವರು ಸುಳ್ಳು ಹೇಳುವುದು ಸಹಜವಾಗಿದೆ. ಕಡು ಬಡವರ ಪರವಾದ ಧ್ವನಿಯಾಗಿ ದೇವರನ್ನೇ ಪ್ರಶ್ನಿಸುವ ಜೇಡರ ದಾಸಿಮಯ್ಯನವರು, ಹಾಗಾದರೆ ನಿನೊಮ್ಮೆ ಒಡಲುಗೊಂಡು ನೋಡು? ಆಗ ನಿನಗೇ ತಿಳಿಯುತ್ತದೆ ಎಂದು ದೇವರೊಂದಿಗೆ ದುಖಿಃತರ ಪರವಾಗಿ ವಾಗ್ವಾದಕ್ಕಿಳಿಯುತ್ತಾರೆ. ದೇವರ ಜೊತೆ ಇಷ್ಟೊಂದು ತಕರಾರು ತೆಗೆಯುತ್ತಾರೆ.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿವರು ಕೇವಲ ನೂಲಿನ ಎಳೆಯಿಂದಲೇ (ಚರಕ) ಇಡೀ ದೇಶದ ಜನರನ್ನು ತಮ್ಮತ್ತ ಆಕರ್ಷಿಸಿ ಕಲ್ಲೆದೆಯ ಬ್ರಿಟಿಷ್‌ರಿಂದ ಭಾರತವನ್ನು ಬಂಧಮುಕ್ತಗೊಳಿಸಿದರೆ, ಶರಣ ಸಂಕುಲದ ನೇತಾರನಾಗಿದ್ದ ಬಸವಣ್ಣನವರು ಇಷ್ಟಲಿಂಗವೆಂಬ ಬುಲ್ಡೋಜರ್ ಮೂಲಕ ಸಮಾಜದಲ್ಲಿದ್ದ ಜಾತಿಯತೆ, ಅಸಮಾನತೆ, ಅಸ್ಪೃಶ್ಯತೆ, ಮೇಲು-ಕೀಳು ಮುಂತಾದ ತರತಮ ಭಾವನೆಗಳನ್ನು ಕಿತ್ತು ಹಾಕಿ ಸರ್ವ ಸ್ವತಂತ್ರ ನಿಲುವುಗಳನ್ನು ಸಮಾಜದಲ್ಲಿ ನೆಲೆಗೊಳಿಸಿದರು.

  • ಕೃಪೆ: ಶೋಧವಾಣಿ
emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

13 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

15 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

22 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

22 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

23 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago