ಕಲಬುರಗಿ: ದೇಶದಲ್ಲಿಯೇ ಮಹಾಮಾರಿ ಕೊರೋನಾ ಸೊಂಕಿಗೆ ಮೊದಲ ಮೃತ ಪ್ರಕರಣ ವರದಿಯಿಂದ ಸುದ್ದಿಯಾದ ಕಲಬುರಗಿ ಜಿಲ್ಲೆಯಲ್ಲಿ ಇದೀಗ ಕೊರೋನಾ ಪೀಡಿತರು ತೀವ್ರಗತಿಯಲ್ಲಿ ಚೇತರಿಕೆ ಕಾಣುತ್ತಿದ್ದಾರೆ. ಸೋಂಕಿತರ ಪೈಕಿ ಶೇ.66ರಷ್ಟು ಜನ ಗುಣಮುಖರಾಗಿ ಮನೆಗೆ ಮರಳಿದ್ದಾರೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಜೂನ್ 24ರ ವರೆಗೆ ಪತ್ತೆಯಾದ 1254 ಕೊರೋನಾ ಪೀಡಿತರ ಪೈಕಿ 829 ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಗುಣಮುಖರಾದವರ ಪ್ರಮಾಣ ಶೇ.66 ರಷ್ಟಿದೆ. ಪ್ರಸ್ತುತ 412 ರೋಗಿಗಳು ಸಕ್ರಿಯರಾಗಿ ಚಿಕಿತ್ಸೆ ಪಡೆಯುತ್ತಿದ್ದು, ಇವರ ಪ್ರಮಾಣ ಶೇ.33. ಉಳಿದಂತೆ ಕೋವಿಡ್-19 ಸೋಂಕಿಗೆ 13 ಜನ ನಿಧನ ಹೊಂದಿದ್ದು, ಮರಣ ಪ್ರಮಾಣ ಶೇ.1 ರಷ್ಟು ಮಾತ್ರ. ಸೋಂಕಿಗೆ ಕೊನೆಯುಸಿರೆಳದ 13 ಜನರಲ್ಲಿ 60 ಮತ್ತು ಮೇಲ್ಪಟ್ಟ ಹಾಗೂ 55 ಮತ್ತು ಮೇಲ್ಪಟ್ಟ ವಯಸ್ಸಿನ ತಲಾ 5 ಜನರಿದ್ದಾರೆ. ಮರಣ ಹೊಂದಿದ 13 ಜನರ ಪೈಕಿ ಬಹುತೇಕರು ಮಾರಣಾಂತಿಕ, ದೀರ್ಘಕಾಲದ ಮತ್ತು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು.
ಕೊರೋನಾ ಪೀಡಿತ 1254 ಜನರ ಹಿನ್ನೆಲೆ ನೋಡಿದಾಗ 1033 ಸೋಂಕಿತರು (ಶೇ.82) ಮಹಾರಾಷ್ಟ್ರ ಪ್ರವಾಸ ಹಿನ್ನೆಲೆ, 160 ಸೋಂಕಿತರು (ಶೇ.12.75) ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದವರು, 20 ಸೋಂಕಿತರು (ಶೇ.1.59) ಮಹಾರಾಷ್ಟ್ರ ಹೊರತುಪಡಿಸಿ ಇತರೆ ರಾಜ್ಯ ಪ್ರವಾಸ ಹಿನ್ನೆಲೆ, 17 ಸೋಂಕಿತರು (ಶೇ.1.37) ಐ.ಎಲ್.ಐ ಹಿನ್ನೆಲೆ, 17 ಸೋಂಕಿತರು (ಶೇ.1.35) ತೀವ್ರ ಉಸಿರಾಟ ತೊಂದರೆ ಹಿನ್ನೆಲೆ ಹಾಗೂ 7 ಸೋಂಕಿತರು (ಶೇ.0.56) ಹೊರ ದೇಶ ಪ್ರವಾಸ ಹಿನ್ನೆಲೆಯಿಂದ ಸೋಂಕಿಗೆ ಗುರಿಯಾಗಿದ್ದಾರೆ.
ಐ.ಸಿ.ಯೂ.ನಲ್ಲಿ 9 ಜನ, ವೆಂಟಿಲೇಟರ್ ಮೇಲೆ ಯಾರೂ ಇಲ್ಲ: ಜಿಲ್ಲೆಯಲ್ಲಿ ಸಕ್ರಿಯ ಕೊರೋನಾ ಪೀಡಿತ 412 ರೋಗಿಗಳ ಪೈಕಿ ಇಂದಿನ ಸ್ಥಿತಿಯಲ್ಲಿ ಕೇವಲ 9 ಜನ ಮಾತ್ರ ಐ.ಸಿ.ಯೂ.ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರಿಗೆ ಸೋಂಕಿನ ತೀವ್ರತೆ ಇಲ್ಲದಿರುವುದರಿಂದ ಸಾಮಾನ್ಯ ವಾರ್ಡ್‍ನಲ್ಲಿಯೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಅಚ್ಚರಿಯ ಸಂಗತಿ ಅಂದರೆ ಪ್ರಸ್ತುತ ಜಿಲ್ಲೆಯಲ್ಲಿ ಯಾರೊಬ್ಬ ಕೋವಿಡ್-19 ರೋಗಿಯೂ ವೆಂಟಿಲೇಟರ್ ಮೇಲೆ ಚಿಕಿತ್ಸೆ ಪಡೆಯುತ್ತಿಲ್ಲ ಎಂದರು.
ಮಾರ್ಚ್ 10 ರಂದು ಕಲಬುರಗಿ ನಗರದ 76 ವರ್ಷದ ವಯೋವೃದ್ಧ ಸೌದಿ ಅರೇಬಿಯಾ ಪ್ರವಾಸ ಹಿನ್ನೆಲೆ ಮತ್ತು ವಯೋಸಹಜ ಕಾಯಿಲೆಯಿಂದ ಕೊರೋನಾ ಸೋಂಕಿಗೆ ತುತ್ತಾಗಿ ನಿಧನಗೊಂಡ ನಂತರ ಜಿಲ್ಲೆಯಲ್ಲಿ ಸೋಂಕು ಕಂಡುಬಂದಿತು. ಅಂದಿನಿಂದಲೆ ಜಿಲ್ಲೆಯಲ್ಲಿ ಒಂದು ರೀತಿಯ ಅಘೋಷಿತ ಬಂದ್ ಪರಿಸ್ಥಿತಿ ನಿರ್ಮಾಣವಾಗಿತ್ತು. ಒಂದು ರೀತಿಯಲ್ಲಿ ದೇಶದಲ್ಲಿ ಮೊದಲ ಸ್ವಯಂಘೋಷಿತ ಲಾಕ್ ಡೌನ್ ಇದಾಗಿತ್ತು.
ಲಾಕ್ ಡೌನ್ 3.0., 4.0 ಮತ್ತು ತದನಂತರ ದೇಶದಾದ್ಯಂತ ಲಾಕ್ ಡೌನ್‍ನಿಂದ ಸಿಲುಕಿಕೊಂಡ ವ್ಯಕ್ತಿಗಳು, ವಲಸೆ ಕಾರ್ಮಿಕರು, ಹಾಗೂ ಪ್ರವಾಸಿಗರು ತವರು ರಾಜ್ಯಕ್ಕೆ ಮರಳಲು ಅವಕಾಶ ಕಲ್ಪಿಸಿದ ಪರಿಣಾಮ ಮಹಾರಾಷ್ಟ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಗೆ ವಲಸೆ ಕಾರ್ಮಿಕರು ಮರಳಿದರು. ಇದು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಯಿತು. ಪ್ರಸ್ತುತ ಮಹಾರಾಷ್ಟ್ರದಿಂದ ಬರುವವರ ಸಂಖ್ಯೆ ಇಳಿಮುಖವಾಗಿದೆ.
ಇದಲ್ಲದೆ ಜಿಲ್ಲೆಯಲ್ಲಿ ಲಾಕ್ ಡೌನ್ ಕಟ್ಟುನಿಟ್ಟಿನ ಅನುಷ್ಠಾನದ ಜೊತೆಗೆ ಪರಿಣಿತ ವೈದ್ಯರ ಸಲಹೆ ಮತ್ತು 24×7 ಟೆಲಿ ಐ.ಸಿ.ಯೂ. ಮೂಲಕ ತಜ್ಞ ವೈದ್ಯರ ಸೇವೆ ಬಳಸಿಕೊಂಡು ಇಲ್ಲಿನ ಜಿಮ್ಸ್ ಮತ್ತು ಇ.ಎಸ್.ಐ.ಸಿ. ಆಸ್ಪತ್ರೆಯ ವೈದ್ಯ ಸಿಬ್ಬಂದಿಗಳು ಸತತ ಪರಿಶ್ರಮಪಟ್ಟು ದಿನದ 24 ಗಂಟೆ ರೋಗಿಗೆ ಉತ್ತಮ ಚಿಕಿತ್ಸೆ ನೀಡುತ್ತಿರುವ ಪರಿಣಾಮ ಸೋಂಕಿತರು ತೀವ್ರಗತಿಯಲ್ಲಿ ಚೇತರಿಕೆ ಕಾಣುತ್ತಿರುವುದಕ್ಕೆ ಕಾರಣವಾಗಿದೆ ಎಂದು ಡಿ.ಸಿ. ಶರತ್ ಬಿ. ವಿವರಿಸಿದರು.
ಭಯ ಬೇಡ, ಎಚ್ಚರವಿರಲಿ:- ಜಿಲ್ಲೆಯಲ್ಲಿ ಕೊರೋನಾ ಪೀಡಿತರ ಚೇತರಿಕೆ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಮರಣ ಪ್ರಮಾಣ ಕೇವಲ ಶೇ.1ರಷ್ಟಿದೆ. ಹೀಗಾಗಿ ಕೊರೋನಾ ಸೋಂಕಿಗೆ ಯಾರು ಆತಂಕಕ್ಕೊಳಗಾಗದೆ ಎಚ್ಚರಿಕೆಯ ಜೀವನ ನಡೆಸಬೇಕಾಗಿದೆ. ಲಾಕ್ ಡೌನ್ ಸಡಿಲಿಕೆ ನೀಡಿದ ಕಾರಣ ಯಾರು ಅನಗತ್ಯ ತಿರುಗಾಡಬಾರದು.
ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಲು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯ ಸೂಚನೆಗಳನ್ನು ಪಾಲಿಸುವುದಲ್ಲದೆ ಅಗತ್ಯ ಸಹಕಾರ ನೀಡಬೇಕು. ಕಡ್ಡಾಯ ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಕಾಪಾಡುವುದು ಮತ್ತು ಆಗಾಗ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳುವುದನ್ನು ಅಭ್ಯಾಸವಾಗಿ ಮಾಡಿಕೊಂಡಿದಲ್ಲಿ ಕಲಬುರಗಿಯನ್ನು ಕೊರೋನಾ ಮುಕ್ತ ಜಿಲ್ಲೆಯನ್ನಾಗಿ ಮಾಡಬಹುದಾಗಿದ್ದು, ಜಿಲ್ಲೆಯ ಮಹಾಜನತೆ ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಸರ್ಕಾರದೊಂದಿಗೆ ಸಹಕರಿಸಬೇಕು ಎಂದು ಡಿ.ಸಿ. ಶರತ್ ಬಿ. ಅವರು ಮನವಿ ಮಾಡಿದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…