ಇಡೀ ಕನ್ನಡ ನಾಡು ಸುತ್ತಾಡಿದ ಅಲ್ಲಮಪ್ರಭುದೇವರು ಆಧ್ಯಾತ್ಮದ ಸೆಳೆತವುಳ್ಳ ಶೈವ ಸಾಧಕರು, ಯೋಗಿಗಳನ್ನು ಭೇಟಿ ಮಾಡಿ ಅವರನ್ನು ಬಸವಣ್ಣನ ಕಲ್ಯಾಣಕ್ಕೆ ಬರುವಂತೆ ಮಾಡಿದ ಮಹಾನ್ ಯೋಗಿ. ಬಹುಶಃ ಈ ಕಾರಣಕ್ಕಾಗಿಯೇ ಅಲ್ಲಮಪ್ರಭುಗಳು ಮತ್ತೆ ಕಲ್ಯಾನಕ್ಕೆ ಬರುವವರೆಗೆ ಶೂನ್ಯಪೀಠವನ್ನು ಖಾಲಿ ಉಳಿಸಿಕೊಂಡು ಬಂದಿದ್ದರು ಎನಿಸುತ್ತದೆ.
ಆಗಿನ ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಕೇವಲ ಶೇ.೧೩ರಷ್ಟಿದ್ದ ಮುಸ್ಲಿಂ ಅರಸರು ಆಳ್ವಿಕೆ ನಡೆಸಿದ್ದರೂ ಉಳಿದವರು ಕೋಮು ಸೌಹಾರ್ದ ಕಾಪಾಡಿಕೊಂಡು ಬಂದಿದ್ದರು. ಇದಕ್ಕೆ ಕೊಡೇಕಲ್ ಬಸವಣ್ಣ ಮತ್ತು ತಿಂಥಣಿ ಮೌನೇಶ್ವರರು ಪ್ರಮುಖ ಸಾಕ್ಷಿಯಾಗಿದ್ದಾರೆ. ಈಭಾಗದ ಕೋಮುಸಾಮರಸ್ಯಕ್ಕೆ ತಾಜಾ ಉದಾಹರಣೆಯಾಗಿ ಹಿಂದು-ಮುಸ್ಲಿಂರು ಸೇರಿ ಮೋಹರಂ ಆಚರಿಸುವುದನ್ನು ಇಂದಿಗೂ ನಾವು ನೋಡಬಹುದು.
ಶರಣರ ನೆನಪಿಗಾಗಿ ಅವರ ಅನುಯಾಯಿಗಳು ಕೆಲವು ಸ್ಮಾರಕಗಳನ್ನು ಕಟ್ಟಿದ್ದಾರೆ. ಎಂತಹ ಆತಂಕದ ಪರಿಸ್ಥಿತಿ ಎದುರಾದಾಗಲೂ ಸೌಹಾರ್ದಯುತ ಬದುಕು ನಡೆಸಿದವರು ನಮ್ಮವರು. ಸೌಹಾರ್ದ ಸಂಸ್ಕೃತಿಗೆ ಪ್ರತೀಕ ಎನ್ನುವಂತೆ ಕಲಬುರಗಿ ತಾಲ್ಲೂಕಿನ ಹುಣಸಿಹಡಗಿಲ್, ಆಳಂದ ತಾಲ್ಲೂಕಿನ ಹೆಬ್ಳಿ, ಜಿರೋಳಿ ಹಾಗೂ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಅಷ್ಟೂರ ಈ ನಾಲ್ಕು ಕಡೆಗಳಲ್ಲಿ ಅಲ್ಲಮಪ್ರಭುದೇವರ ಸ್ಮಾರಕಗಳನ್ನು ಕಾಣಬಹುದು.
ಅಲ್ಲಮಪ್ರಭುಗಳ ಜೊತೆಗೆ ರೇವಣಸಿದ್ಧರು ಹಾಗೂ ಅವರ ಹೆಂಡತಿ ಗಂಗಮ್ಮ (ಮಾಯೆ) ಸುತ್ತಾಡಿದ್ದರು ಎಂಬುದಕ್ಕೆ ಅಲ್ಲಮಪ್ರಭುಗಳ ಗುಡಿ ಇರುವಲ್ಲಿ ರೇವಣಸಿದ್ಧ ಹಾಗೂ ಗಂಗಮ್ಮರ ಸಣ್ಣ ಸಣ್ಣ ದೇವಸ್ಥಾನ ಹಾಗೂ ಕಟ್ಟೆಗಳಿರುವುದನ್ನು ಗುರುತಿಸಬಹುದು.
ಹುಣಸಿಹಡಗಿಲ್ ಹಾಗೂ ಜಿರೊಳ್ಳಿಗಳಲ್ಲಿ ಕಟ್ಟಲಾಗಿದ್ದ ಗುಂಬಜ್‌ಗಳನ್ನು ಕಿತ್ತು ಹಾಕಿ ಹೊಸ ಕಟ್ಟಡ ನಿರ್ಮಿಸಲಾಗಿದೆ. ಹೆಬಳಿ ಮತ್ತು ಅಷ್ಟೂರಗಳಲ್ಲಿ ಹಾಗೆಯೇ ಉಳಿಸಿಕೊಂಡು ಬರಲಾಗಿದೆ. ಶರಣರ ಈ ನೆಲೆಗಳನ್ನು ಗಮನಿಸಿದರೆ ಇಂದಿಗೂ ಕೋಮುಸೌಹಾರ್ದತೆಯ ಕೇಂದ್ರವಾಗಿ ಅವುಗಳನ್ನು ಸಂರಕ್ಷಿಸಿಕೊಂಡು ಬಂದಿರುವುದನ್ನು ಕಾಣಬಹುದು. ಈ ಕಡೆಗಳಲ್ಲಿ ಹಿಂದೂ-ಮುಸ್ಲಿಂರು ಒಟ್ಟಿಗೆ ಜಾತ್ರೆ-ಉತ್ಸವ ನಡೆಸುವುದನ್ನು ಈಗಲೂ ಕಾಣುತ್ತೇವೆ. ಹುಣಸಿ ಹಡಗಿಲ್‌ನಲ್ಲಿರುವ ಅಲ್ಲಮನ ಕಟ್ಟೆಗಳಿಗೆ ಮಾಡ್ಯಾಳ, ಹೆಬಳಿ, ಜಿರೊಳ್ಳಿಗಳಿಂದ ಈಗಲೂ ಪಲ್ಲಕ್ಕಿ ನಂದಿಕೋಲು “ಚಾಜಾ” ನೆರವೇರುವುದನ್ನು ನಾವು ಕಾಣಬಹುದು. ಅಲ್ಲಿಯೇ ಅಲ್ಲಮಪ್ರಭುದೇವರ ಗುಂಡ ಇದೆ.
ಹೆಬ್ಳಿಯಲಿರುವ ಸ್ಮಾರಕ ಮೊದಲಿನಂತೆ ಉಳಿಸಿಕೊಂಡು ಬರಲಾಗಿದ್ದು, ಮೇಲ್ನೋಟಕ್ಕೆ ಮುಸ್ಲಿಂ ವಾಸ್ತುಶೈಲಿ ಅನಿಸಿದರೂ ಒಳಗಡೆ ಅಲ್ಲಮಪ್ರಭು ದೇವಾಲಯ ಇದೆ. ಅದೀಗ ಅಲ್ಲಮಪ್ರಭು ಮಜೇರಿ ಆಗಿದೆ. ಮಗ್ಗುಲಲ್ಲಿಯೇ ರೇವಣಸಿದ್ಧರ ಗುಡಿ, ಗಂಗಮ್ಮನ ಕಟ್ಟೆ ಕೂಡ ಇದೆ. ಜಿರೊಳಿಯಲ್ಲಿ ಗ್ರಾಮಸ್ಥರೆಲ್ಲರು ಸೇರಿ ೧ ಕೋಟಿ ರೂ. ವೆಚ್ಚದಲ್ಲಿ ಹೊಸ ದೇವಸ್ಥಾನ ನಿರ್ಮಾಣ ಮಾಡಿದ್ದಾರೆ. ಪಕ್ಕದಲ್ಲಿ ರೇವಣಸಿದ್ಧನ ಗುಡಿ, ಮಾಯೆ ಕಟ್ಟೆ ಕೂಡ ಇದೆ. ಆದರೆ ಮಸೀದಿಗಳಲ್ಲಿರುವಂತೆ ಇಂದಿಗೂ ಈ ದೇವಾಲಯದಲ್ಲಿ ಹೆಣ್ಣು ಮಕ್ಕಳು ಪ್ರವೇಶುವಂತಿಲ್ಲ ಎಂಬ ನಿಯಮವನ್ನು ಪಾಲಿಸಿಕೊಂಡು ಬರಲಾಗಿದೆ.
ಈ ನಾಲ್ಕು ಕಡೆಗಳಲ್ಲಿರುವ ಅಲ್ಲಮನ ಗುಡಿಗಳಿಗೆ ರೋಮಕೋಟಿ ಒಡೆಯರ್ ಅಧಿಕಾರ ಹೊಂದಿದ್ದು, ಕವಡೆಯವರು ಪೂಜಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ದೇವಸ್ಥಾನದ ಹೆಸರಿನಲ್ಲಿ ಒಂದಿಷ್ಟು ಜಮೀನು ಕೂಡ ಇರುವುದನ್ನು ನಾವು ಇಂದಿಗೂ ಕಾಣಬಹುದು. ಒಡೆಯರ್ ಹಾಗೂ ಪೂಜಾರಿಗಳು ಹಂಚಿಕೊಂಡು ಇದರ ಉಳುಮೆ ಮಾಡುತ್ತಿದ್ದಾರೆ. ಒಡೆಯರ್ ಒಬ್ಬರಿದ್ದು, ಆಯಾ ಊರುಗಳಿಗೆ ಪುಜಾರಿಗಳು ಮಾತ್ರ ಬೇರೆಯವರು ಇದ್ದಾರೆ.
ಮಾಡ್ಯಾಳದಲ್ಲಿ ಅಲ್ಲಮಪ್ರಭು, ರೇವಣಸಿದ್ಧ ಹಾಗೂ ಚಿನ್ಮಯ ಶರಣನ ಗುಡಿ, ಮಾಯೆ ಮೂರ್ತಿ ಇದೆ. ಅಲ್ಲೊಂದು ಶಂಕರಲಿಂಗ ದೇವಾಲಯ, ಅದರ ಎದುರು ನಂದಿ ದೇವಾಲಯ, ಪಕ್ಕದಲ್ಲಿಯೇ ಅಕ್ಕಮಹಾದೇವಿ ದೇವಾಲಯ ಕೂಡ ಇದೆ. ಗಂಗಮ್ಮನ ಗುಡಿ, ಮಲ್ಲಯ್ಯನ ಕಂಬಿ ಕೂಡ ಇದೆ. ಹುಣಸಿಹಡಗಿಲ್, ಹೆಬ್ಳಿ, ಜಿರೋಳಿ ಹಾಗೂ ಮಾಡ್ಯಾಳ ಗ್ರಾಮದ ಯುವಕರು ದೇವಸ್ಥಾನದ ಒಡೆಯರ್ ಹಾಗೂ ಪೂಜಾರಿಗಳು ಕೂಡಿ ಬಸವಕಲ್ಯಾಣದ ಅಷ್ಟೂರಿನಲ್ಲಿರುವ ಅಲ್ಲಮಪ್ರಭುದೇವರ ಗುಡಿಗೆ ಪಾದಯಾತ್ರೆ, ಉತ್ಸವ ಮೂಲಕ ತೆರಳಿ ಜಾತ್ರೆ ಮಾಡಿ ಬರುತ್ತಾರೆ. ನಂತರ ತಮ್ಮ ಊರುಗಳಲ್ಲಿ ಜಾತ್ರೆ ಮಾಡುವ ಸಾಂಸ್ಕೃತಿಕ ಸಂಬಂಧವನ್ನು ಇಂದಿಗೂ ಉಳಿಸಿಕೊಂಡು ಬಂದಿದ್ದಾರೆ.
ಅಷ್ಟೂರಿನಲ್ಲಿ ೧೩ ಗುಂಬಜ್‌ಗಳು ಕಾಣುತ್ತವೆ. ಅವೆಲ್ಲ ಶರಣರ ಗುಡಿಗಳಿದ್ದವು. ಅಲ್ಲಮಪ್ರಭುವಿನ ಗುಡಿಯೇ ಶಾವಲಿ ದರ್ಗಾ ಆಗಿರುವುದನ್ನು ಕಾಣಬಹುದು. ಜಗಜ್ಯೋತಿ ಕಟ್ಟೆ, ವೀರಭದ್ರೇಶ್ವರ ಗುಡಿಗಳು ಕೂಡ ಕಂಡು ಬರುತ್ತವೆ. ದರ್ಗಾದ ಉತ್ತರ ದಿಕ್ಕಿನಲ್ಲಿರುವ ಬಾಗಿನಲಿಂದ ಪ್ರತಿ ಶ್ರಾವಣ ಮಾಸದಲ್ಲಿ ಕವಡೆಯವರು (ಪೂಜಾರಿ) ಪೂಜೆ ನೆರವೇರಿಸುವುದನ್ನು ಕಾಣಬಹುದು. ಹಿಂದೊಮ್ಮೆ ಜಗಳವಾದಾಗ ಮುಸ್ಲಿಂ ಅಧಿಕಾರಿಗಳು ಹಕ್ಕಿನ ಬಿಲ್ಲೆ (ರಾಜಮುದ್ರೆ) ಕೊಟ್ಟಿರುವುದರಿಂದ ಇಂದಿಗೂ ಪರಸ್ಪರ ಸೌಹಾರ್ದಯುತವಾಗಿ ಈ ಜಾತ್ರೆ ನಡೆಯುವುದನ್ನು ನಾವು ಗಮನಿಸಬೇಕಿದೆ
ಸ್ಥಳ: ಬಸವ ಸಮಿತಿಯ ಅನುಭವ ಮಂಟಪ
ಜಯನಗರ, ಕಲಬುರಗಿ
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…