ಹಲವು ಹೊಸ ತತ್ವ, ಸಿದ್ದಾಂತಗಳನ್ನು ಹುಟ್ಟು ಹಾಲುವ ಮೂಲಕ ವಿಶ್ವಕ್ಕೆ ಶ್ರೇಷ್ಠ ಕೊಡುಗೆ ನೀಡಿದ ಶರಣರು “ಗುರು”ವಿನ ಕುರಿತು ಹೊರ ಪರಿಕಲ್ಪನೆಯನ್ನು ನೀಡಿದ್ದಾರೆ. ಅಷ್ಟಾವರಣ, ಷಟಸ್ಥಲ, ಪಂಚಾಚಾರ ಎಂಬ ತಾತ್ವಿಕ ಆಭರಣಗಳನ್ನು ಕೊಡುವ ಮೂಲಕ ಅಂಗದ ಪಾವಿತ್ರ್ಯ ಹೆಚ್ಚಿಸಿದರು. ನಮ್ಮ ವಶದಲ್ಲಿರುವ ಅಂಗಕ್ಕೆ ಅಷ್ಟ ಆವರಣಗಳನ್ನು ಅಳವಡಿಸಿಕೊಳ್ಳಬೇಕು. ತನು ಪಾಪಿಯ ಕೂಸು. ಸಕಲೇಂದ್ರಿಯಗಳಿಂದ ಮಸಿ, ಮಣ್ಣು ಮಾಡುವ ಈ ತನುವನ್ನು ಅಷ್ಟಾವರಣಗಳ ಮೂಲಕ ಪವಿತ್ರಗೊಳಿಸಿಕೊಳ್ಳಬೇಕು. ಆ ಮೂಲಕ ಅಂಗದ ಪರಿವರ್ತನೆ ಕಾಣಬಹುದು. ಅಂದಾಗ ಮಾತ್ರ ಅಂಗ ದಾರಿದ್ರ್ಯ ದೂರಗಿ ಅಂತರಂಗದ ಶ್ರೀಮಂತಿಕೆ ಹೆಚ್ಚಾಗುತ್ತದೆ. ಆಚಾರವೆಂಬುದು ಅರಿವಿನ ಖಡ್ಗ. ಪ್ರಾಣಕ್ಕೆ ಹಾನಿಯಾಗದ ಹಾಗೆ ಕಾಪಾಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ಅಷ್ಟಾವರಣ ಸಂಪನ್ನ ಅನಿಸಿಕೊಳ್ಳಲಾರ ಎಂದು ಶರಣರು ನಮಗೆ ಹೇಳಿದ್ದಾರೆ.
ಅಷ್ಟಾವರಣ ಅಳವಡಿಸಿಕೊಂಡ ಗುರು ವ್ಯಾಪಾರಿ ಆಗಬಾರದು. ಗುರುವಾದವನು ಅಮರತ್ವವನ್ನು ಪಡೆದವನು. ಲಿಂಗ ಕರುಣಿಸಿ ಸತ್ಪಥ ತೋರಿಸುವ ಅವರ ಬದುಕಿನ ದಾರಿಗೆ ಬೆಳಕಾಗುವವನಾಗಿರಬೇಕು. ಗುರು ಮೊದಲು ತಾನು ಪಕ್ವವಾಗಿರಬೇಕು. ಅಂತರಂಗದ ವಿವೇಕ ವೃಕ್ಷದ ಪರಿಪಕ್ವ ಹಣ್ಣಾಗಿ ಲಿಂಗದ ಆಜ್ಞೆಯಿಂದ ತೊಟ್ಟು ಕಳಚಿದಂತವನಾಗಿರಬೇಕು ಎಂದು ಶರಣರು ಗುರುಗಳ ಲಕ್ಷಣ ವಿವರಿಸುತ್ತಾರೆ. ಆತ ಅರಿಷಡ್ವರ್ಗಗಳನ್ನು ಮೀರಿರಬೇಕು, ಲೋಕಚಾರವನ್ನು ಹೊದ್ದಿರಬಾರದು. ವ್ಯವಹಾರಿಕ ಬಂಧನದಿಂದ ಮುಕ್ತವಾಗಿದ್ದು, ಪಂಚ ಮಹಾಪಾತಕಗಳ ಕೂಡಿಕೊಳ್ಳದೆ ಇರಬೇಕು. ತತ್ವೋಪದೇಶ, ಸಿದ್ಧಾಂತದ ಮೂಲಕ ತನುವಿನ ಮಲಿನವನ್ನು ತೊಳೆಯಬೇಕು. ಅಂಗವನ್ನು ಚಿದಂಗವನ್ನಾಗಿ ಪರಿವರ್ತಿಸುವ ಶಕ್ತಿ ಇರಬೇಕು. ಅಂಗಗುಣಗಳನ್ನು ಕಳೆದು ಲಿಂಗಗುಣ ಸಂಪನ್ನರಾಗುವಂತೆ ಪ್ರೇರೇಪಿಸಬೇಕು. ಇಂತಹ ಗುರು ಮಾತ್ರ ಪ್ರತ್ಯೇಕ್ಷ ದೇವರಾಗಿ ಕಂಡು ಬರುತ್ತಾರೆ. ಈ ಲಕ್ಷಣಗಳನ್ನು ಒಳಗೊಂಡ ಯಾರೆ ಆಗಿರಲಿ ಅವರು ಗುರುವಾಗಲು ಯೋಗ್ಯ ಎಂಬುದನ್ನು ಶರಣರು ತಿಳಿಸುತ್ತಾರೆ.
ಗುರುವಿನಲ್ಲಿ ತಾಯಿ-ತಂದೆಯ ಸ್ವರೂಪ ಮನೆ ಮಾಡಿರಬೇಕು. ತಾಯಿಯ ಪ್ರೀತಿ, ವಾತ್ಸಲ್ಯ, ಮಮತೆಯನ್ನು ಶಿಷ್ಯನಿಗೆ ಧಾರೆಯೆರೆಯಬೇಕು. ಅಂಥವರು ಮಾತ್ರ ಗುರು ಅನಿಸಿಕೊಳ್ಳುತ್ತಾರೆ. ಅವರಲ್ಲಿ ತಂದೆಯ ಗತ್ತಿನ ಜೊತೆಗೆ ತಾಯಿಯ ಕಾರಣ್ಯ ಕೂಡ ಇರಬೇಕಾಗುತ್ತದೆ. ಮತ್ರ್ಯದ ಜಡತ್ವ ದೂರ ಮಾಡುವ ಶಕ್ತಿ ಹೊಂದಿರಬೇಕು. ಅಪಾಯದಲ್ಲಿದ್ದ ಶಿಷ್ಯನನ್ನು ತೆಪ್ಪದ ಹಾಗೆ ಬಂದು ದಡ ಸೇರಿಸುವ ಯೋಗ್ಯತೆ ಹೊಂದಿರಬೇಕು.
ತನ್ನ ಸಹಜ ಜ್ಞಾನದ ನಿರ್ಣಯದ ಮಾಗುವಿಕೆಯನ್ನು ಪರಿಣಾಮವನ್ನು ಎಲ್ಲರಿಗೂ ಹೇಳಬೇಕು. ಅಂದಾಗ ಮಾತ್ರ ಸಹಜತೆಯ ನಿರ್ಣಯ ಪ್ರಕಟವಾಗುತ್ತದೆ. ಶಿಷ್ಯನಿಗೆ ಇಷ್ಟಲಿಂಗ ದೀಕ್ಷೆ ಮಾಡುವ ಮೂಲಕ ಗುರುವಿನ ಪಕ್ವತೆ ಸಾರ್ಥಕತೆ ಪಡೆದುಕೊಳ್ಳುತ್ತದೆ. ಜಗದಗಲ, ಬಯಲ ಸ್ವರೂಪಿಯನ್ನು ಅಂಗೈಯಲ್ಲಿ ಚುಳುಕಾಗಿಸಬೇಕು. ಗುರುವಿನ ಲಿಂಗದೀಕ್ಷೆಯಿಂದ ಶಿಷ್ಯನಲ್ಲಿ ಭವದ ಕೋಟಲೆ ದೂರ ಆಗಿ ಆತನಲ್ಲಿ ಅನನ್ಯವಾದ, ಅತೀತ ಭಾವನೆ ಭಾವನೆ ಜಾಗೃತ ಆಗಬೇಕು. ಗುರು-ಶಿಷ್ಯರಲ್ಲಿ ಅಭಿನ್ನತೆ ಆಗಬೇಕು. ಶಿಷ್ಯನೂ ತೆರಹಿಲ್ಲದ ಸ್ಥಿತಿ ಮುಟ್ಟಬೇಕು. ಶಿಷ್ಯನ ಮನಸ್ಸಿನ ಮಂಟಪದಲ್ಲಿ ಲಿಂಗವನ್ನು ಮೂರ್ತಗೊಳಿಸಬೇಕು. ಆ ಲಿಂಗ ಧ್ಯಾನ ಮಂಟಪಕ್ಕೆ ಹೋಗಿ ಮಹಾ ಘನದಲ್ಲಿ ಮೂರ್ತಗೊಳ್ಳುವಂತಾಗಬೇಕು. ಅದು ಮಾತ್ರ ಪರಿಪೂರ್ಣ ದೀಕ್ಷೆ ಆಗುತ್ತದೆ. ಗುರುವಿನ ಹಸ್ತಸ್ಪರ್ಶದಿಂದ ಶಿಷ್ಯನ ಉದ್ಧಾರ ಮಾಡಬೇಕು. ಶಿಷ್ಯನ ಪೂರ್ವಾಪರ ಓದಿ, ತಿಳಿದು, ಕೇಳಿ ದೀಕ್ಷೆ ಕೊಡಬೇಕು. ಶಿಷ್ಯನೂ ಕೂಡ ಗುರುವಿನ ಪೂರ್ವಾಪರ ಓದಿ, ತಿಳಿದು, ಕೇಳಿ ಅರಿತು ದೀಕ್ಷೆ ಪಡೆಯಬೇಕು. ಗುರುವಿನ ಸ್ಪರ್ಶ ಪರುಷದ ಸ್ಪರ್ಶವಾಗಿರಬೇಕು. ತಾಯಿ ಮಗುವಿನ ಸಂಬಂಧದಂತೆ ಗುರು-ಶಿಷ್ಯರ ಸಂಬಂಧ ಇರಬೇಕು ಎಂದು ಶರಣರು ಹೇಳಿದ್ದಾರೆ.
ಗುರುಕೃಪೆ ಲಿಂಗದ ಪರಿಮಳದಂತೆ ಇರಬೇಕು. ಮಂಗಳದ ಮಜ್ಜನದಂತಿರಬೇಕು, ಭಕ್ತನಿಗೆ ಜಂಗಮ ಲಿಂಗವಾಗಿ ಕರುಣೆ ಇರಬೇಕು. ಈ ರೀತಿ ಇದ್ದಾಗ ಮಾತ್ರ ಯೋಗ್ಯ ಶಿಷ್ಯನಗಲು ಸಾಧ್ಯ. ಗುರು ಅರಿತು ಉಪದೇಶ ಮಾಡಬೇಕು. ಗುರುಪದೇಶ ನೇಗಿಲು ಇದ್ದ ಹಾಗೆ. ಶಿಷ್ಯನ ತನುವೆಂಬ ತೋಟದಲ್ಲಿ ಕಳೆಯಿಲ್ಲದಂತೆ ಮಾಡಬೇಕಾದ ಕೆಲಸ ಗುರುವಿನದು. ಅಸಾಧ್ಯವಾದುದ್ದನ್ನು ಸಾಧ್ಯವಾಗಿಸುವ ಸಾಮಥ್ರ್ಯವನ್ನು ಶಿಷ್ಯನಿಗೆ ಕರುಣಿಸಬೇಕು. ಅಂಗಕ್ಕೆ ಲಿಂಗ ಕೊಟ್ಟ ಕೂಡಲೇ ದೀಕ್ಷೆ ಎನಿಸುವುದಿಲ್ಲ. ಲಿಂಗವೆಂಬ ಮನವನ್ನು ನಿಷ್ಠೆಯಿಂದ ನಡೆಸಿಕೊಂಡು ಹೋಗಬೇಕು. ಮಂತ್ರೋಪದೇಶ ಮಾಡುವ ಮೂಲಕ ಮಂತ್ರಕಾಯವನ್ನಾಗಿ ಪರಿವರ್ತಿಸಬೇಕು. ಪರಮ ಪ್ರಕಾಶಜ್ಯೋತಿಯಾಗಿ ಅರಿವು ಪ್ರಸಾದವನ್ನು ಕೊಟ್ಟು ಶಿಷ್ಯನಿಗೆ ಅರಿವೆ ಗುರುವನ್ನಾಗಿ ಮಾಡಿಕೊಳ್ಳುವ ಸ್ಥಿತಿಗೆ ತರಬೇಕು. ಗುರುವಿನಲ್ಲಿ ಕೊರತೆ ಇರಬಾರದು. ಅರಿವು ಸಂಪಾದನೆಯಾದಾಗ ಬಾಹ್ಯ ಗುರು ಬೇಕಾಗಿಲ್ಲ. ತನ್ನ ತಾನರಿದಂವಂಗೆ ಅರಿವೆ ಗುರುವಾಗುತ್ತದೆ. ಇನ್ನಾರನ್ನೂ ನೆನವ ಹಂಗಿಲ್ಲ ಎಂದು ಹೇಳುತ್ತಾರೆ.
ಗುರು, ಲಿಂಗ, ಜಂಗಮದಲ್ಲಿ ದುರ್ಗುಣ ಇರಬಾರದು. ದುರ್ಗುಣಕ್ಕೆ ಪ್ರಾಯಶ್ಚಿತ್ತ ಕೂಡ ಇರುವುದಿಲ್ಲ ಎಂದು ಶರಣರು ಬಹಳ ನಿಷ್ಠುರವಾಗಿ ಹೇಳುತ್ತಾರೆ. ಗುರುವಾದವ ಮುಗ್ಧತೆ, ಪ್ರೀತಿ, ಮೃದುತ್ವ ಹೊಂದಿದನಾಗಿರಬೇಕು. ಮಾತುಗಳು ಜೋತಿರ್ಲಿಂಗವಾಗಬೇಕು. ಗುರು ಸತ್ಯ, ಸದಾಚಾರಿ ಸಂಪತ್ತು ಆಗಿರಬೇಕು. ತ್ರಿವಿಧ ದೀಕ್ಷೆ ಕೊಡುವಾಗ ಮೈಯಲ್ಲ ಕಣ್ಣಾಗಿರಬೇಕು. ಗುರುವಾದವರು ತನ್ನನ್ನು ಅರುಹಿಸುವುದಕ್ಕಿಂತ ನಮ್ಮನ್ನು ಅರುಹಿಸುವಂತಿರಬೇಕು. “ತಾಯಿ ಸತ್ತ ತಬ್ಬಲಿಯಂತೆ ಕಂಡ ಕಂಡವರೆದುರು ಹಲ್ಲು ತೆರೆದು ಹಲವರಿಗೆ ಉಪದೇಶ ಮಾಡಿ ಹೊಟ್ಟೆ ಹೊರೆದುಕೊಳ್ಳುವ ಸಂದೇಹಿಗಳು ಹೊರತು ಗರುವಲ್ಲ” ಇಂಥವರು ವಂದನೆಗೆ ಯೋಗ್ಯರಲ್ಲ ಎಂದು ಬಹಳ ಕಠೋರವಾಗಿ ವಿಡಂಬಿಸುತ್ತಾರೆ. ಆಚಾರವಿಲ್ಲದ ಗುರು ನರಕಕ್ಕೆ ಭಾಜನನಾಗುತ್ತಾನೆ. ಅಂಥವರನ್ನು ನಂಬಬೇಕಿಲ್ಲ. ಅನುಸರಿಬೇಕಿಲ್ಲ. ಅವರಿಂದ ದೂರ ಇರುವುದೇ ಸರಿಯಾದ ಮಾರ್ಗ ಎಂದು ಹೇಳುತ್ತಾರೆ.
ಗುರು-ಲಿಂಗ ಜಂಗಮದಲ್ಲಿ ತಪ್ಪು ಕಂಡರೆ ಮೌನವಾಗಿರಬಾರದು. ಮೌನವಾಗಿದ್ದರೆ ಅದು ಶರಣ ತತ್ವ, ಸಿದ್ಧಾಂತಕ್ಕೆ ಮಾಡಿದ ದ್ರೋಹ. ಭಕ್ತರಾದವರು ಅಂತಹ ಅಯೋಗ್ಯ ಗುರುಗಳ ಕಾಲಿಗೆ ತೊಡರಾಗುವಂತೆ ಇರಬೇಕು. ನಾವೇ ಗುರುವಾಗಿ ನಮ್ಮ ವಿಕಾಸಕ್ಕೆ ನಾವೇ ಕಾರಣರಾಗಬೇಕು ಎಂಬ ಹೊಸ ಚಿಂತನೆಯನ್ನು ಶರಣರು ಕೊಟ್ಟಿದ್ದಾರೆ. ಶರಣರ ರಕ್ಷಣೆಯ ಹೊಣೆ ಹೊತ್ತು ಅವರೆಲ್ಲರಲ್ಲೂ ಹೊಸ ಬೆಳಕು ಮೂಡಿಸಿದ ಬಸವಣ್ಣನ ಗುರುತನವನ್ನು ಎಲ್ಲರೂ ಬೆಳೆಸಿಕೊಳ್ಳಬೇಕಾಗಿದೆ. ಹೀಗಾಗಿ ಬಸವಣ್ಣನೇ ಗುರು, ಬವಸಣ್ಣನೇ ತಂದೆ, ಬಸವಣ್ಣನೇ ತಾಯಿ ಎಂಬುದನ್ನು ನಾವೆಲ್ಲರೂ ಒಪ್ಪಿಕೊಳ್ಳಬೇಕು. ಅಪ್ಪಿಕೊಳ್ಳಬೇಕು. ಆ ಗುರುವನ್ನು ಕಾಯದಲ್ಲಿ ಕೈ ಅಲಗಿನ ಹಾಗೆ ಇರಿಸಿಕೊಳ್ಳಬೇಕು. ಅಂದಾಗ ಮಾತ್ರ ನಮ್ಮ ಬದುಕಿಗೆ ಧನ್ಯತೆ ಪ್ರಾಪ್ತಿಯಾಗುತ್ತದೆ.
-ಡಾ.ಜಯಶ್ರೀ ದಂಡೆ
ಸ್ಥಳ: ಕಲ್ಬರ್ಗಿ ಬಸವ ಸಮಿತಿಯ ಅನುಭವ ಮಂಟಪ
ಜಯನಗರ, ಕಲಬುರಗಿ
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…