ಬಿಸಿ ಬಿಸಿ ಸುದ್ದಿ

ಸೇಡಂನಲ್ಲಿ ‘ಅಮ್ಮ ಪ್ರಶಸ್ತಿ’ ಪ್ರದಾನ: ಸನ್ಮಾನ ಪತ್ರದೊಂದಿಗೆ ‘ತೊಗರಿ ಬೇಳೆ’, ‘ಕೌದಿ’ ಕಾಣಿಕೆ

ಕಲಬುರಗಿ: ಒಂದೇ ದಿನಾಂಕ, ಒಂದೇ ಸಮಯ, ಒಂದೇ ಸ್ಥಳ ಮತ್ತು ಸಮಾರಂಭದ ಸಾನಿಧ್ಯ ಸಹ ಒಬ್ಬರೇ.. ಇದು ಕಳೆದ ೨೦ ವರ್ಷಗಳಿಂದ ‘ಬದ್ಧತೆ’ಯಿಂದಾಗಿ ನಡೆಸಿಕೊಂಡು ಬರುತ್ತಿರುವ ‘ಅಮ್ಮ ಪ್ರಶಸ್ತಿ’ ಕಾರ್ಯಕ್ರಮದ ಹೈಲೈಟ್.

ಹೌದು, ಪತ್ರಕರ್ತ ಮತ್ತು ಲೇಖಕ ಮಹಿಪಾಲರೆಡ್ಡಿ ಮುನ್ನೂರ್ ಅವರ ಕಮಿಟ್‌ಮೆಂಟ್‌ನಿಂದಾಗಿ ಅಮ್ಮ ಪ್ರಶಸ್ತಿ ಇವತ್ತಿಗೆ ೨೦ ವರ್ಷದ ಸಂಭ್ರಮದಲ್ಲಿದೆ. ನವೆಂಬರ್ ೨೬, ಸಂಜೆ ೫.೩೦ ಕ್ಕೆ, ಸೇಡಂನ ಶ್ರೀ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪ ಮತ್ತು ನಾಲವಾರದ ಶ್ರೀ ಡಾ.ಸಿದ್ಧ ತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯ ವಹಿಸಿಕೊಳ್ಳುವ ಈ ಅಮ್ಮ ಪ್ರಶಸ್ತಿ, ಕಲಬುರಗಿ ಸೀಮೆ ದಾಟಿ ಹೋಗಿದ್ದು, ಈ ನೆಲದ ಅಭಿಮಾನದ ಸಂಗತಿ.

ಈಗ ೨೦ ನೇ ವರ್ಷದ ಸಂಭ್ರಮದಲ್ಲಿರುವ ಅಮ್ಮ ಪ್ರಶಸ್ತಿಯನ್ನು ಮಹಿಪಾಲರೆಡ್ಡಿ ಅವರು ತಮ್ಮ ಅಮ್ಮನ ನೆನಪಿನಲ್ಲಿ ಸ್ಥಾಪಿಸಿದ್ದಾರೆ. ಕಳೆದ ೧೯ ವರ್ಷವೂ ನಿಗದಿತವಾಗಿ ಕಾರ್ಯಕ್ರಮವನ್ನು ರೂಪಿಸಿದ್ದಾರೆ. ಕನ್ನಡದ ಪ್ರತಿಭಾವಂತ ಬರಹಗಾರರು ‘ಅಮ್ಮ ಪ್ರಶಸ್ತಿ’ಗಾಗಿ ತಮ್ಮ ಕೃತಿಗಳನ್ನು ಕಳುಹಿಸುವ ಮೂಲಕ ಪ್ರಶಸ್ತಿಯನ್ನು ಗುರುತಿಸಿದ್ದಾರೆ.

ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ‘ಅಮ್ಮ ಪ್ರಶಸ್ತಿ’ ರಾಜ್ಯದ ಗಣನೀಯ ಪ್ರಶಸ್ತಿಗಳಲ್ಲಿ ಒಂದಾಗಬೇಕು ಎಂಬ ಪ್ರತಿಷ್ಠಾನದ ಆಶಯಕ್ಕೆ ಅನುಗುಣವಾಗಿ ನಾಡಿನ ಖ್ಯಾತ ಲೇಖಕರು, ಕವಿಗಳು, ಪ್ರಕಾಶಕರು ಮತ್ತು ಲೇಖಕರ ಅಭಿಮಾನಿ ಓದುಗರು ಸ್ಪಂದಿಸಿದ್ದೇ ಇದೊಂದು ಗೌರವಾನ್ವಿತ ಪ್ರಶಸ್ತಿಯಾಗಿ ರೂಪುಗೊಂಡಿದೆ ಎಂಬುದಕ್ಕೆ ಸಾಕ್ಷಿ. ಮಹಿಪಾಲರೆಡ್ಡಿ ಅವರ ಪತ್ನಿ ರತ್ನಕಲಾ ಅವರು ಸಹ ಇದಕ್ಕೆ ಬೆಂಬಲವಾಗಿ ನಿಂತಿದ್ದಾರೆ, ಅಷ್ಟೇ ಅಲ್ಲದೇ, ತಮ್ಮ ಮಾವನವರಾದ ನಾಗಪ್ಪ ಮೇಷ್ಟ್ರು (ಮಹಿಪಾಲರೆಡ್ಡಿ ತಂದೆ) ಅವರ ಸ್ಮರಣಾರ್ಥ ಇಬ್ಬರು ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ಕೊಡುವ ಮೂಲಕ ಮಹಿಳಾ ಸ್ವಾವಲಂಬಿತನಕ್ಕೆ ಬೆಂಬಲವಾಗಿದ್ದಾರೆ. ಇದು ಕಳೆದ ೧೩ ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ.

ಅಮ್ಮ ಪ್ರಶಸ್ತಿ ಪುರಸ್ಕೃತರು : ಪತ್ರಕರ್ತೆ, ಲೇಖಕಿ ಭಾರತಿ ಹೆಗಡೆ ಅವರ ‘ಸೀತಾಳೆದಂಡೆಯ ಕಥೆಗಳು’ (ಕಥಾ ಸಂಕಲನ), ಸುರೇಶ ನಾಗಲಮಡಿಕೆ ಅವರ ಹಾಡು ಕಲಿಸಿದ ಹರ (ಸಂಸ್ಕೃತಿ ಕಥನ), ಐಎಎಸ್ ಅಧಿಕಾರಿ ಕೆ.ಎ.ದಯಾನಂದ ಅವರ ‘ಹಾದಿಗಲ್ಲು’ (ಆತ್ಮವೃತ್ತಾಂತ), ಕಿರಣ್ ಭಟ್ ಕಾರವಾರ ಅವರ ‘ರಂಗ ಕೈರಳಿ’ (ಪ್ರವಾಸ ಕಥನ), ಕಲಬುರಗಿಯ ಹಿರಿಯ ಪತ್ರಕರ್ತ ಶ್ರೀನಿವಾಸ ಸಿರನೂರಕರ್ ಅವರ ‘ಪುರಂದರದಾಸರ ಬಂಡಾಯ ಪ್ರಜ್ಞೆ’ (ವೈಚಾರಿಕ ಸಂಕಲನ), ಬೆಳಗಾವಿಯ ನದೀಂ ಸನದಿ ಅವರ ‘ಹುಲಿಯ ನೆತ್ತಿಗೆ ನೆರಳು’ ಮತ್ತು ಬೆಂಗಳೂರಿನ ಡಾ. ಸತ್ಯಮಂಗಲ ಮಹಾದೇವ ಅವರ ‘ಪಂಚವರ್ಣದ ಹಂಸ’ (ಕವನ ಸಂಕಲನ) ಈ ಕೃತಿಗಳು ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ಪ್ರತಿಷ್ಠಿತ ‘ಅಮ್ಮ ಪ್ರಶಸ್ತಿ’ ಪಡೆದಿವೆ.

ಅಮ್ಮ ಗೌರವ ಪುರಸ್ಕೃತರು:  ಕಳೆದ ೧೧ ವರ್ಷಗಳಿಂದ ಆರಂಭಗೊಂಡ ‘ಅಮ್ಮ ಗೌರವ ಪುರಸ್ಕಾರ’ಕ್ಕೆ ಈ ಬಾರಿಯೂ ನಾಡು-ನುಡಿಗೆ ನೀಡಿದ ಕೊಡುಗೆಯನ್ನು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಐವರು ಗಣನೀಯ ಸಾಧಕರನ್ನು ಗುರುತಿಸಿ ಸತ್ಕರಿಸಲಾಗುತ್ತದೆ.
ಈ ಬಾರಿಯ ‘ಅಮ್ಮ ಗೌರವ’ ಪುರಸ್ಕಾರಕ್ಕೆ ಬೀದರ ಜಿಲ್ಲೆಯ ಹಿರಿಯ ಲೇಖಕ ದೇಶಾಂಶ ಹುಡಗಿ, ಸೇಡಂನ ಶಿಕ್ಷಣ ಪ್ರೇಮಿ, ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ, ಹಿರಿಯ ವಕೀಲರು ಆಗಿರುವ ಧುರೀಣರಾದ ಎಂ. ನಾಗಪ್ಪ, ಹಿರಿಯ ಪತ್ರಕರ್ತ ಮತ್ತು ಕಸಾಪ ಮಾಜಿ ಅಧ್ಯಕ್ಷ ಪಿ.ಎಂ.ಮಣ್ಣೂರ ಹಾಗೂ ಕಿಡ್ನಿ ದಾನ ಮಾಡುವ ಮೂಲಕ ತಾಯ್ತನದ ಜವಾಬ್ದಾರಿಗೆ ಮಹತ್ವ ತಂದುಕೊಟ್ಟ ಕಲಬುರಗಿಯ ರೇಖಾಬಾಯಿ ಪಿ.ಅರಗಲಮನಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಶಸ್ತಿ ಪ್ರದಾನ : ಅಮ್ಮ ಪ್ರಶಸ್ತಿ ಪ್ರದಾನ ಸಮಾರಂಭವು ಸೇಡಂನ ಪಂಚಲಿಂಗೇಶ್ವರ ದೇವಾಲಯದಲ್ಲಿ ನ.೨೬ ರಂದು ಸಂಜೆ ೫.೩೦ ಕ್ಕೆ ನಾಲವಾರ ಶ್ರೀ ಕೋರಿಸಿದ್ದೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಡಾ.ಸಿದ್ದತೋಟೇಂದ್ರ ಮಹಾಸ್ವಾಮಿಗಳು ಮತ್ತು ಸೇಡಂನ ಶ್ರೀ ಸದಾಶಿವ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು. ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಹಾಗೂ ಸೇಡಂ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಕಾರ್ಯಕ್ರಮ ಉದ್ಘಾಟಿಸುವರು. ಲೋಕಸಭಾ ಸದಸ್ಯ ಡಾ.ಉಮೇಶ್ ಜಾಧವ ಮುಖ್ಯ ಅತಿಥಿಗಳಾಗಿರುವರು.

ಕಲಬುರಗಿ ರಂಗಾಯಣದ ಅಧ್ಯಕ್ಷ ಪ್ರಭಾಕರ ಜೋಶಿ ಪ್ರಶಸ್ತಿ ಪ್ರದಾನ ಮಾಡುವರು. ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಅಧ್ಯಕ್ಷತೆ ವಹಿಸುವರು. ಇದೇ ಸಂದರ್ಭದಲ್ಲಿ ‘ಹಾಡು ಕರ್ನಾಟಕ’ ಖ್ಯಾತಿಯ ಗಾಯಕ ಬಸವಪ್ರಸಾದ ಹೂಗಾರ ಅವರಿಂದ ಗೀತ ಸಂಭ್ರಮ ನಡೆಯಲಿದೆ ಎಂದು ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ತಿಳಿಸಿದ್ದಾರೆ.

ಸನ್ಮಾನದಲ್ಲಿ ತೊಗರಿ ಬೇಳೆ, ಕೌದಿ: ಅಮ್ಮ ಪ್ರಶಸ್ತಿ ಪಡೆದವರಿಗೆ ತಲಾ ೫೦೦೦ ರೂ. ನಗದು ಪುರಸ್ಕಾರ, ಪ್ರಮಾಣ ಪತ್ರ ಮತ್ತು ಸತ್ಕಾರ ಒಳಗೊಂಡಿರುತ್ತದೆ. ಕಳೆದ ಅನೇಕ ವರ್ಷಗಳಿಂದ ಪ್ರತಿಯೊಬ್ಬ ಅಮ್ಮ ಪುರಸ್ಕೃತರಿಗೆ ಎರಡು ಕೆಜಿ ತೊಗರಿ ಬೇಳೆ ಕೊಡುವುದರ ಮೂಲಕ ಈ ನೆಲದ ಕಣಜ ಅರ್ಪಿಸಲಾಗುತ್ತಿದೆ. ತವರು ಮನೆಯ ಸಡಗರದಂತೆ, ಎಲ್ಲ ಅಮ್ಮ ಪ್ರಶಸ್ತಿ ಪಡೆದವರಿಗೆ ಉಡಿತುಂಬುವಂತೆ ತೊಗರಿ ಬೇಳೆ ಕೊಟ್ಟು ಗೌರವಿಸಲಾಗುತ್ತಿದೆ. ಈ ಬಾರಿ ೨೦ ವರ್ಷ ಆಗಿದ್ದರಿಂದ ಅಮ್ಮ ಹೊಲಿದ ‘ಕೌದಿ’ ನೆನಪಿನ ಆಗರವೆಂಬಂತೆ, ಪ್ರತಿಯೊಬ್ಬರಿಗೆ ‘ಕೌದಿ’ ಕೊಟ್ಟು ಗೌರವಿಸಲಾಗುತ್ತಿದೆ. ಅಮ್ಮ ಪ್ರಶಸ್ತಿಗಾಗಿಯೇ ೧೨ ಕೌದಿಗಳನ್ನು ಅಮ್ಮಂದಿರು ಹೊಲಿದುಕೊಟ್ಟಿದ್ದಾರೆ. ಅದನ್ನು ಗೌರವಪೂರ್ವಕವಾಗಿ ಸನ್ಮಾನ ಕಾರ್ಯಕ್ರಮದಲ್ಲಿ ನೀಡಲಾಗುತ್ತಿದೆ.
emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

17 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago