ಕಲಬುರಗಿ: ಪ್ರಸಕ್ತ ವರ್ಷ ವರ್ಗಾಣೆಯ ಪ್ರಕ್ರಿಯೆಯು ಜೂನ್ ೧೩ರಿಂದ ೧೪ರವರೆಗೆ ಅರ್ಜಿಗಳನ್ನು ಸಲ್ಲಿಸುವುದು ಹಾಗೂ ಜೂನ್ ೨೬ರಂದು ಕೌನ್ಸಿಲಿಂಗ್ ಹಮ್ಮಿಕೊಂಡಿದ್ದು, ಶಿಕ್ಷಕರ ವರ್ಗಾವಣೆ ಮಾರ್ಗಸೂಚಿಯಲ್ಲಿ ಉಂಟಾಗಿರುವ ಗೊಂದಲಗಳನ್ನು ನಿವಾರಿಸಿ ಸಕಾಲದಲ್ಲಿ ಪೂರ್ಣಗೊಳಿಸಬೇಕು ಎಂದು ರಾಜ್ಯ ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಬಿಜೆಪಿ ಸಹ ವಕ್ತಾರ ಶಶೀಲ್ ಜಿ. ನಮೋಶಿ ಅವರು ಇಲ್ಲಿ ಒತ್ತಾಯಿಸಿದರು.
ಸೋಮವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಯಮ ೨೧(೩)ರನ್ವಯ ಮೊದಲನೇ ಹಂತದಲ್ಲಿ ಯಾವುದೇ ತಾಲ್ಲೂಕಿನಲ್ಲಿ ಮಂಜೂರಾದ ವೃಂದಬಲದ ಶೇಕಡಾ ೩೦ರಷ್ಟು ಮತ್ತು ಹೆಚ್ಚಿನ ಖಾಲಿ ಇರುವ ತಾಲ್ಲೂಕುಗಳಲ್ಲಿ ನಿರ್ದಿಷ್ಟ ಹುದ್ದೆಯಲ್ಲಿನ ಶಿಕ್ಷಕರ ಪ್ರಕರಣಗಳಲ್ಲಿ ಕಡ್ಡಾಯ ವರ್ಗಾವಣೆ ಕೌನ್ಸಿಲಿಂಗ್ ಹಮ್ಮಿಕೊಳ್ಳುವುದಾಗಿ ತಿಳಿಸಿದ್ದು, ಅದನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಬೇಕು ಎಂದು ಆಗ್ರಹಿಸಿದರು.
ಪ್ರಸಕ್ತ ವರ್ಷದಲ್ಲಿಯೂ ಮೊದಲು ಕೌನ್ಸಿಲಿಂಗ್‌ಗೆ ಆದ್ಯತೆ ಕೊಡಲಾಗಿದೆ. ಆವುದೇ ತಾಲ್ಲೂಕಿನಲ್ಲಿ ಮಂಜೂರಾದ ವೃಂದ ಬಲದ ಶೇ. ೨೦ರಷ್ಟು ಮತ್ತು ಹೆಚ್ಚಿನ ಖಾಲಿ ಇರುವ ತಾಲ್ಲೂಕುಗಳಿಗೆ ನಿರ್ದಿಷ್ಟ ಹುದ್ದೆಯಲ್ಲಿನ ಶಿಕ್ಷಕರ ಪ್ರಕರಣಗಳಲ್ಲಿ (ಬಿಆರ್‌ಪಿ ಮತ್ತು ಸಿಆರ್‌ಪಿ) ಕಡ್ಡಾಯ ವರ್ಗಾವಣೆ ಕೌನ್ಸಿಲಿಂಗ್ ಹಮ್ಮಿಕೊಳ್ಳುವುದು ಎಂದು ತಿಳಿಸಲಾಗಿದೆ. ಸದರಿ ಹುದ್ದೆಯಲ್ಲಿ ಸೇವೆ ಸಲ್ಲಿಸಿರುವ ಶಿಕ್ಷಕರಿಗೆ ಒತ್ತಾಯಪೂರ್ವಕವಾಗಿ ಅನಾನುಕೂಲಕರ ಸ್ಥಳಗಳಿಗೆ ನಿಯುಕ್ತಿ ಮಾಡಿದಂತಾಗುತ್ತದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
೨೦೧೫ ಮತ್ತು ೨೦೧೬ನೇ ಸಾಲಿನಲ್ಲಿ ನಿರ್ದಿಷ್ಟ ಹುದ್ದೆಗೆ ಆಯ್ಕೆಯಾದಾಗ ಯಾವುದೇ ರೀತಿಯ ನಿರ್ಬಂಧನೆಗಳು ಇರಲಿಲ್ಲ. ಹಿಂದಿನಿಂದಲೂ ಸರ್ವ ಶಿಕ್ಷಣ ಅಭಿಯಾನಾ ಯೋಜನೆ ಹಾಗೂ ಡಿಪಿಇಪಿ ಯೋಜನೆ ಅಡಿಯಲ್ಲಿ ನಿರ್ದಿಷ್ಟ ಹುದ್ದೆಗಳಾದ ಬಿಆರ್‌ಪಿ ಮತ್ತು ಸಿಆರ್‌ಪಿಗಳಾಗಿ ಕರ್ತವ್ಯ ನಿರ್ವಹಿಸಿದ ಶಿಕ್ಷಕರಿಗೆ ಶಾಲೆಗಳಿಗೆ ಮರು ನಿಯುಕ್ತಿಗೊಳಿಸುವಾಗ ಅನುಕೂಲಕರ ಸ್ಥಳಗಳಿಗೆ ನಿಯುಕ್ತಿಗೊಳಿಸಿದ ಉದಾಹರಣೆಗಳಿವೆ ಎಂದು ಅವರು ಹೇಳಿದರು.
ವರ್ಗಾವಣೆ ಪ್ರಕ್ರಿಯೆ ೨ ಲಕ್ಷಕ್ಕಿಂತಲೂ ಮೇಲ್ಪಟ್ಟು ಶಿಕ್ಷಕರಿಗೆ ಸಂಬಂಧಿಸಿದ್ದು, ಪಾರದರ್ಶಕತೆ ಹಾಗೂ ಸ್ಪಷ್ಟತೆ ಇರಬೇಕು. ಈ ಸಂಬಂಧ ಕೇಂದ್ರ ಸ್ಥಾನದಲ್ಲಿ ಸಹಾಯವಾಣಿ ಪ್ರಾರಂಭಿಸಿ ಸಮಸ್ಯೆಗಳನ್ನು ಪರಿಹರಿಸಬೇಕು. ಕೋರಿಕೆಯ ವರ್ಗಾವಣೆಯಲ್ಲಿಯೂ ಕಡ್ಡಾಯ ವರ್ಗಾವಣೆಯಲ್ಲಿನ ನಿಯಮಗಳನ್ನು ಪಾಲಿಸಬೇಕು. ಪತಿ- ಪತ್ನಿ ಪ್ರಕರಣ, ವೈದ್ಯಕೀಯ ಸಮಸ್ಯೆ ಇರುವ ಶಿಕ್ಷಕರಿಗೂ ಸಹ ಇದನ್ನು ಅನ್ವಯಿಸಬೇಕು ಎಂದು ಅವರು ಒತ್ತಾಯಿಸಿದರು.
ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ರಜೆಯ ದಿನಗಳಲ್ಲಿ ಪೂರ್ಣಗೊಳಿಸುವಂತೆ ಆಗ್ರಹಿಸಿದ ಅವರು, ಪ್ರೌಢ ಶಾಲಾ ಶಿಕ್ಷಕರಿಗೆ ಕಳೆದ ಒಂದು ವರ್ಷದಿಂದ ಮೂರ‍್ನಾಲ್ಕು ತಿಂಗಳಿಗೊಮ್ಮೆ ವೇತನ ಪಾವತಿಯಾಗುತ್ತಿದ್ದು, ಇದು ಸರ್ಕಾರದ ದಿವಾಳಿತನಕ್ಕೆ ಸಾಕ್ಷಿಯಾಗಿದೆ ಎಂದು ಟೀಕಿಸಿದರು.
ಶಿಕ್ಷಕರ ವರ್ಗಾವಣೆಯಲ್ಲಿ ಸಿ ವಲಯದಿಂದ ಸಿ ವಲಯಕ್ಕೆ ವರ್ಗಾವಣೆ ಮಾಡಲು ಅವಕಾಶ ಕೊಡಬೇಕು ಎಂದು ಒತ್ತಾಯಿಸಿದ ಅವರು, ಕಳೆದ ನಾಲ್ಕು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಸಹ ಶಿಕ್ಷಕರಿಂದ ಮುಖ್ಯ ಗುರುಗಳ ಹುದ್ದೆಗೆ ಬಡ್ತಿಯನ್ನು ಆದ್ಯತೆ ಮೇಲೆ ಕೊಡಬೇಕು ಎಂದು ಆಗ್ರಹಿಸಿದರು.
ಈಗಾಗಲೇ ಈ ಬೇಡಿಕೆಗಳ ಕುರಿತು ರಾಜ್ಯದ ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಯವರ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಗಮನಹರಿಸಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಮಾಜಿ ಸಿಂಡಿಕೇಟ್ ಸದಸ್ಯ ಎಸ್.ಜಿ. ಭಾರತಿ ಅವರು ಉಪಸ್ಥಿತರಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…