ಸಾಹಿತಿ, ನಿವೃತ್ತ ಪ್ರಾಧ್ಯಾಪಕ ಮಳಲಿ ವಸಂತಕುಮಾರ್ ಅವರು ಅನಾರೋಗ್ಯದಿಂದ ತೀರಿದ್ದಾರೆ.
ವಸಂತ ಮಳಲಿ ಅವರಿಗೆ ಪತ್ನಿ ಶಾಂತಾ, ಪುತ್ರಿ ಎಂ.ವಿ.ರೂಪಾ, ಪುತ್ರ ರನ್ನ ಅಂತ ಮಕ್ಕಳು ಇದ್ದಾರೆ. ಇವರ ಮತ್ತೊಬ್ಬ ಪುತ್ರಿ ಹೆಸರಾಂತ ಸಾಹಿತಿ ವಸು ಮಳಲಿ ಕೆಲವು ವರ್ಷಗಳ ಹಿಂದೆಯೇ ತೀರಿದ್ದಾರೆ.
ಹಾಸನ ಜಿಲ್ಲೆಯ ಮಳಲಿಯವರಾದ ಮಳಲಿ ವಸಂತಕುಮಾರ್ ಅವರು ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದವರು. ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿ ವೃತ್ತಿ ಬದುಕು ಆರಂಭಿಸಿದ ಅವರು, ಹಾಸನ ಮತ್ತು ಮಂಡ್ಯದ ಸ್ನಾತಕೋತ್ತರ ಕೇಂದ್ರಗಳ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದವರು. ಗೋಕಾಕ ಚಳವಳಿಯಲ್ಲೂ ಸಕ್ರೀಯವಾಗಿ ಭಾಗಿಯಾಗಿದ್ದವರು.
ಶಾಲೆಗಳಲ್ಲೇ ಬಿಸಿಯೂಟ ಸಿದ್ಧಪಡಿಸಿ ಮಕ್ಕಳಿಗೆ ವಿತರಿಸಿ
ಕಾವ್ಯ, ಕಥೆ, ನಾಟಕ, ವಿಮರ್ಶೆ, ಸಂಶೋಧನೆ, ಜಾನಪದ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಆಸಕ್ತಿ ಇದ್ದ ವಸಂತಕುಮಾರ್ ಮಳಲಿ ಅವರು ಮಳಲಿ ಗಿಡ್ಡಮ್ಮ, ಹೃದಯಗಂಗೆ, ಯಮಧರ್ಮ, ಲಂಕೇಶ್ವರ, ಸ್ಥಿತ್ಯಂತರ, ರಿಕ್ತ, ಹರ್ಷ, ವಿವಕ್ಷೆ ಸೇರಿದಂತೆ 40ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದವರು.
ಇಂತಹ ವಸಂತಕುಮಾರ್ ಮಳಲಿ ಅನಾರೋಗ್ಯದಿಂದ ತೀರಿದ್ದಾರೆ. ಅವರಿಗೆ ‘ಅನಂತ ನಮನ’ ಅರ್ಪಿಸುತ್ತಾ ಅವರ ಬಗೆಗೆ ಒಂದಿಷ್ಟು ಸವಿಸ್ತಾರವಾದ ಅವರ ಸಾಹಿತ್ಯ ಮತ್ತು ಬದುಕಿನ ಬಗೆಗೆ ನೋಡೋಣ.
ಡಾ. ಮಳಲಿ ವಸಂತ ಕುಮಾರ್ ಅವರು ತಮ್ಮ ಅಧ್ಯಯನ ಹಾಗೂ ಗ್ರಂಥ ರಚನೆಗಳಿಂದ ಜಾನಪದ ಕ್ಷೇತ್ರದಲ್ಲಿ ಪ್ರಖ್ಯಾತರಾಗಿರಾದವರು. ಮತ್ತು ವಸಂತ ಕುಮಾರ್ ಅವರು ಹುಟ್ಟಿದ್ದು ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಮಳಲಿ ಎಂಬಲ್ಲಿ.
ಉಪಚುನಾವಣೆ; ಕಾಂಗ್ರೆಸ್ ಮುಖಂಡರ ಸಭೆ ಶನಿವಾರ
ಇವರ ತಂದೆ ಪಟೇಲ್ ಚಿಕ್ಕೇಗೌಡರು, ತಾಯಿ ದೇವಮ್ಮ. ಪ್ರೌಢಶಾಲೆಯವರೆಗೆ ಓದಿದ್ದು ಮಳಲಿಯಲ್ಲಿ ಅದೂ ತಂದೆಯ ಮಾರ್ಗದರ್ಶನದಲ್ಲಿ.
ಮಹಾರಾಜ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದು ನಂತರ ಮಂಗಳೂರಿನ ಸ್ನಾತಕೋತ್ತರ ಕೇಂದ್ರದಿಂದ ಎಂ.ಎ ಪದವಿ ಗಳಿಸಿದರು. ಮದರಾಸು ವಿಶ್ವವಿದ್ಯಾಲಯದಿಂದ ಎಂ.ಫಿಲ್ ಪದವಿಯ ನಂತರ ‘ಕುವೆಂಪು ಅವರ ನಾಟಕಗಳು’ ಎಂಬ ವಿಷಯದ ಮೇಲೆ ಡಾ.ಎಚ್. ತಿಪ್ಪೇರುದ್ರಸ್ವಾಮಿಯವರ ಮಾರ್ಗದರ್ಶನದಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದವರು.
ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇರಿದ ಕೆಲವು ಕಾಲದ ನಂತರ ಯುವರಾಜ ಕಾಲೇಜಿನಲ್ಲಿ ಉಪಪ್ರಾಧ್ಯಾಪಕರಾಗಿ, ಮೈಸೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರಗಳಾದ ಹೇಮ ಗಂಗೋತ್ರಿ ಮಂಡ್ಯ ಸ್ನಾತಕೋತ್ತರ ಕೇಂದ್ರಗಳಲ್ಲಿ ಪ್ರಾಧ್ಯಾಪಕರಾಗಿ ನಿರ್ವಹಿಸಿದ ಅವರ ಕಾರ್ಯಗಳು ಸಾಹಿತ್ಯದ ಕೆಲಸ–ಕಾರ್ಯಗಳು ಹಲವಾರು.
ಇವರ ಮಾರ್ಗದರ್ಶನದಲ್ಲಿ ಹತ್ತು ವಿದ್ಯಾರ್ಥಿಗಳು ಡಾಕ್ಟರೇಟ್ ಪಡೆದಿದ್ದರೆ, ಹಲವಾರು ಮಂದಿ ಎಂ.ಫಿಲ್ ಪದವಿ ಪಡೆದಿದ್ದಾರೆ. ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ತಮ್ಮ ಸೃಜನಶೀಲತೆಯನ್ನು ಪ್ರದರ್ಶಿಸುತ್ತಾ ಬಂದಿದ್ದರೂ ಹೆಚ್ಚಿನ ಒಲವು ತೋರಿದ್ದು ಜನಪದ ಸಾಹಿತ್ಯದತ್ತ. ಹಾಸನ ಜಿಲ್ಲೆಯ ಸಮೃದ್ಧ ಜನಪದ ಸಾಹಿತ್ಯವನ್ನು ಪೋಷಿಸಿಕೊಂಡು ಬಂದಿರುವ ಗೊರೂರು, ಮತಿಘಟ್ಟ ಕೃಷ್ಣಮೂರ್ತಿ, ಎಸ್.ವಿ.ರಂಗಣ್ಣ, ಎಲ್. ಗುಂಡಪ್ಪ, ಎಸ್.ಕೆ.ಕರೀಂಖಾನ್, ಎಚ್.ಜೆ. ಲಕ್ಕಪ್ಪಗೌಡ ಇವರುಗಳ ಪ್ರೇರಣೆ ವಸಂತಕುಮಾರ್ ಮಳಲಿ ಅವರಿಗೆ ಬಹಳಷ್ಟು ಇದೆ. ಅದನ್ನು ಅವರು ಸದಾಕಾಲವೂ ನೆನಪು ಮಾಡಿಕೊಳ್ಳುತ್ತಿದ್ದರು.
ವಿದ್ಯಾರ್ಥಿ ದೆಸೆಯಲ್ಲಿಯೇ ಜಾನಪದ ಸಂಗ್ರಹ, ಜಾನಪದ ಶಾಸ್ತ್ರೀಯ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದ ಅವರು ಗ್ರಾಮದೇವತೆಯನ್ನು ಕುರಿತು ರಚಿಸಿದ ಮೊಟ್ಟ ಮೊದಲ ಕೃತಿ ‘ಮಳಲಿ ಗಿಡ್ಡಮ್ಮ’. ಗ್ರಾಮೀಣ ಪ್ರದೇಶದ ಸಂಸ್ಕೃತಿಯನ್ನು ಕೇಂದ್ರವಾಗಿಟ್ಟುಕೊಂಡು ರಚಿಸಿದ ಈ ಕೃತಿಯಲ್ಲಿ ದೇವಿಯನ್ನು ಕುರಿತು ಜನಪದದಲ್ಲಿರುವ ನಂಬಿಕೆ, ಪ್ರಾರ್ಥನೆ, ಗೀತೆಗಳು, ಹರೆಕಗಳ ವೈಶಿಷ್ಟ್ಯ ಮುಂತಾದವುಗಳನ್ನು ಹತ್ತು ಅಧ್ಯಾಯಗಳಲ್ಲಿ ಚರ್ಚಿಸಿದ್ದಾರೆ.
ಮಳಲಿಯವರ ಮತ್ತೊಂದು ಜನಪದ ಕೃತಿ ಎಂದರೆ ‘ಕೋಲು ಪದಗಳು’. ಈ ಕೃತಿಯಲ್ಲಿ ಐವತ್ತೆಂಟು ವಿವಿಧ ರೀತಿಯ ಕೋಲಾಟದ ಹಾಡುಗಳನ್ನು ಸಂಗ್ರಹಿಸಿ ಕೊಟ್ಟಿದ್ದಾರೆ. ಗ್ರಂಥದ ಪ್ರಸ್ತಾವನೆಯಲ್ಲಿ ಹಾಸನ ಜಿಲ್ಲೆಯಿಂದ ಹಿಡಿದು ಕರ್ನಾಟಕದ, ಭಾರತದ ಕೋಲಾಟಗಳ ಬಗೆಗಳ ಬಗ್ಗೆ ವಿಸ್ತೃತವಾದ ವಿವರಣೆಯನ್ನು ನೀಡಿದ್ದಾರೆ.
ಮಳಲಿಯವರೇ ಸ್ವತ: ಕೋಲಾಟದ ಕಲಾವಿದರಾಗಿರುವುದರಿಂದ ಕೋಲಾಟದ ಪದಗಳಲ್ಲಿ ಕಂಡು ಬರುವ ಸಾಹಿತ್ಯದ ಗುಣಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ ಶಾಸ್ತ್ರೀಯವಾಗಿ ಸಂಪಾದಿಸಿದ್ದಾರೆ.
ಮತ್ತೊಂದು ಇವರ ಗ್ರಂಥವೆಂದರೆ ‘ಜಡೆ ಕೋಲು’. ಇದರಲ್ಲಿ ಐವತ್ತೆರಡು ಪದ್ಯಗಳನ್ನು ಸಂಗ್ರಹಿಸಿದ್ದಾರೆ ವಸಂತಕುಮಾರ್ ಮಳಲಿಯವರು.
ಕೇಂದ್ರ ಬಿಂದುವಿನಲ್ಲಿ ಜಡೆಯ ಗಂಟನ್ನು ಕಟ್ಟಿ, ತುದಿಯಲ್ಲಿರುವ ಎಳೆಗಳನ್ನು ಸೊಂಟಕ್ಕೆ ಕಟ್ಟಿಕೊಂಡ ಕಲಾವಿದರು ಕೋಲಾಟವಾಡುತ್ತಾ ಪರಿಧಿಯಲ್ಲಿ ಸುತ್ತುತ್ತಾ ಬಂದರೂ ಗೋಜಲಾಗದೇ ಒಂದೇ ನಿರ್ದಿಷ್ಟ ರೂಪದಲ್ಲಿ ಜಡೆಯಂತೆ ಹೆಣೆದುಕೊಳ್ಳುವುದಷ್ಡೇ ಅಲ್ಲದೇ ಪುನ: ಜಡೆ ಬಿಚ್ಚುವಲ್ಲಿಯೂ ಸಿಕ್ಕಾಗದೇ ಅದೇ ರೀತಿ ಮೂಲರೂಪಕ್ಕೆ ತರವುದೇ ಈ ಜಡೆಕೋಲಿನ ವೈಶಿಷ್ಟ್ಯವಾಗಿದೆ.
ಜನಪದ ಸಾಹಿತ್ಯದಲ್ಲಿನ ಮನರಂಜನ ಪ್ರಕಾರಗಳನಷ್ಟೇ ತಮ್ಮ ಸಂಶೋಧನೆಯ ಚೌಕಟ್ಟಿಗೆ ಹಾಕಿಕೊಳ್ಳದೇ ಜನಪದ ವೈದ್ಯ ಪದ್ಧತಿಯ ಬಗ್ಗೆಯೂ ವಿಶೇಷ ಆಸಕ್ತಿಯಿಂದ ಮಾಹಿತಿ ಸಂಗ್ರಹಿಸಿ ರಚಿಸಿದ ಗ್ರಂಥ ‘ಕರ್ನಾಟಕ ಜನಪದ ವೈದ್ಯ’ ಕೃತಿಯಾಗಿದೆ.
ಶಾಸ್ತ್ರೀಯವಾಗಿ ಅಭ್ಯಾಸ ಮಾಡಿ ಪದವಿ ಪಡೆದ ವೈದ್ಯರುಗಳು ಹಳ್ಳಿಗಳಲ್ಲಿ ದೊರೆಯುತ್ತಿಲ್ಲದ ಸಂದರ್ಭದಲ್ಲಿ ನಾಟಿ ಔಷಧ, ಹಳ್ಳಿ ಔಷಧ, ಮನೆ ಮದ್ದು ಮುಂತಾದವುಗಳನ್ನು ತಿಳಿದಿದ್ದ ವೈದ್ಯ ವೃತ್ತಿಯ ಪಂಡಿತರುಗಳೇ ಔಷಧಿ ಸಸ್ಯಗಳನ್ನು ಪತ್ತೆ ಹಚ್ಚಿ ತಂದು ಅದನ್ನು ಸೂಕ್ತ ರೀತಿಯಲ್ಲಿ ಪರಿಷ್ಕರಿಸಿ, ಪುಡಿಮಾಡಿ ಪ್ರಮಾಣ ಬದ್ಧವಾಗಿ ಮಿಶ್ರಣಮಾಡಿ, ಮದ್ದನ್ನು ಸರಿಯಾದ ಪ್ರಮಾಣದಲ್ಲಿ ಹೇಗೆ ಉಪಯೋಗಿಸಬೇಕೆನ್ನುವುದರ ಕುರಿತ ಸಮಸ್ತ ಮಾಹಿತಿಯನ್ನೊದಗಿಸುವ ಕೃತಿ ಇದಾಗಿದೆ.
ಇವರ ಮತ್ತೊಂದು ಪ್ರಮುಖವಾದ ಜನಪದ ಕೃತಿಯೆಂದರೆ ‘ಜನಪದ ನಂಬಿಕೆಗಳು’. ಮನುಷ್ಯನ ಬದುಕಿನಲ್ಲಿ ನಂಬಿಕೆಯೇ ಪ್ರತಿಯೊಂದಕ್ಕೂ ತಳಹದಿ. ನಂಬಿಕೆ ಇಲ್ಲದೇ ಬಾಳುವೆ ಸಾಧ್ಯವೇ ಇಲ್ಲ. ಆದರೆ ಕೆಲವೊಂದು ವೇಳೆ ಅವಿದ್ಯಾವಂತ ಸಮುದಾಯದಲ್ಲಿ ವಿವೇಚನಾ ರಹಿತವಾಗಿ ನಂಬಿದಾಗ ಕೆಡುಕಿಗೆ ದಾರಿಯಾಗುವುದೂ ಉಂಟು. ಈ ರೀತಿ ನಂಬಿಕೆಗಳ ಒಳಿತು – ಕೆಡಕು, ಸಾಧಕ – ಬಾಧಕಗಳ ವೈಜ್ಞಾನಿಕ ವಿವರಣೆಗಳಿಂದ ಕೂಡಿರುವ ಕೃತಿ ಇದಾಗಿದೆ.
ವಸಂತಕುಮಾರ್ ರವರು ಬರೇ ಜನಪದ ಸಾಹಿತಿಯಾಗಿ ಸಂಶೋಧನಾ ಕೃತಿಗಳನ್ನು ಪ್ರಕಟಿಸಿದಷ್ಟೇ ಅಲ್ಲದೇ ಹಲವಾರು ಸೃಜನಶೀಲ ಕೃತಿಗಳನ್ನೂ ರಚಿಸಿದ್ದಾರೆ. ಇವರು ಬರೆದ ಹಲವಾರು ಕವಿತೆಗಳು ಪತ್ರಿಕೆಗಳಲ್ಲಿ ಪ್ರಕಟವಾದ ನಂತರ ಹೊರತಂದ ಮೊದಲ ಕವನ ಸಂಕಲನ ‘ಹೃದಯ ಗಂಗೆ’. ಈ ಕವನ ಸಂಕಲನದ ನಂತರ ಪ್ರಕಟವಾದ ಕವನ ಸಂಕಲನ ‘ಕರಾವು’. ಇದರಲ್ಲಿ ಬಿ.ಎಂ.ಶ್ರೀ, ಕುವೆಂಪು, ಪು.ತಿ.ನ, ಗಾಂಧಿ, ಬೋಸ್, ಮುಂತಾದವರುಗಳ ಬಗ್ಗೆ ಬರೆದ ವ್ಯಕ್ತಿ ಚಿತ್ರ ಕವಿತೆಗಳಿವೆ.
ಮತ್ತೊಂದು ಚುಟುಕುಗಳ ಸಂಕಲನ ‘ಕಡಲ ಕವಿತೆಗಳು’, ಇದರಲ್ಲಿ ೪೪ ಚುಟುಕ ಪದ್ಯಗಳಿವೆ. ಕವನ ಸಂಕಲನಗಳನ್ನು ಹೊರತಂದಂತೆಯೇ ಎರಡು ನಾಟಕಗಳನ್ನೂ ರಚಿಸಿದ್ದವರು ವಸಂತಕುಮಾರ್ ಮಳಲಿ ಅವರು. ಅವು ಯಮ ಧರ್ಮ ಮತ್ತು ಲಂಕೇಶ್ವರ. ಭಾರತೀಯ ಪುರಾಣ ಪ್ರಪಂಚದ ಪಾತ್ರಗಳನ್ನೂ ಆಧುನಿಕ ದೃಷ್ಟಿಕೋನದಿಂದ ರಚಿಸಿರುವ ನಾಟಕಗಳು ಇವು ಆಗಿವೆ.
ಸಾಂದರ್ಭಿಕವಾಗಿ ಹಲವಾರು ಕಥೆಗಳನ್ನು ರಚಿಸಿದ್ದು ಅವು ‘ಕಾಡು’ ಎಂಬ ಸಂಕಲನದಲ್ಲಿ ಸೇರಿವೆ. ಗ್ರಾಮೀಣ ಬದುಕಿನ ಮೌಲ್ಯ, ಸಂಘರ್ಷ, ಮೂಢನಂಬಿಕೆ, ಹೆಣ್ಣಿನ ಶೋಷಣೆ ಮುಂತಾದ ವಸ್ತುವಿನಿಂದ ಕೂಡಿವೆ. ‘ಕದಂಬ’ ಹಾಗೂ ‘ವಿವಕ್ಷೆ’ ಇವರ ಪ್ರಮುಖ ವಿಮರ್ಶಾ ಕೃತಿಗಳಲ್ಲದೇ, ಕವಿಗಳು ಕಂಡ ಕುವೆಂಪು, ಕುವೆಂಪು ನಾಟಕ ಸಮೀಕ್ಷೆ, ಚಿತ್ರಾಂಗದ ಸಮೀಕ್ಷೆ, ಚಂದ್ರಹಾಸ ನಾಟಕ ಸಮೀಕ್ಷೆ, ಕುವೆಂಪು ಕಾವ್ಯ ಮೀಮಾಂಸೆ ಮತ್ತು ಸಾಹಿತ್ಯ ವಿಮರ್ಶೆ, ಯದುಗಿರಿಯ ವೀಣೆ, ಗ್ರಂಥಾಮೃತ, ಸಂಸ್ಕೃತಿ ದೀಪಮಾಲೆ, ನಮ್ಮ ಕನ್ನಡ, ವಜ್ರ ಕಿರಣ, ಹೊಯ್ಸಳ ಸಂಪದ, ಯುಗದ ಕವಿಗೆ, ಸರಸ್ವತಿಯ ವರಪುತ್ರ, ಕನ್ನಡ ದೀಪ ಹೀಗೆಯೇ ಹಲವಾರು ಗ್ರಂಥಗಳನ್ನು ಸಂಪಾದಿಸಿರುವ ಮಳಲಿ ವಸಂತಕುಮಾರ್ ಅವರಿಗೆ 1990 ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ, ಹೊಯ್ಸಳ ಪ್ರಶಸ್ತಿ, ಸಾಹಿತ್ಯರತ್ನ ಪ್ರಶಸ್ತಿ, ರಾಷ್ಟ್ರೀಯ ಸದ್ಭಾವನ ಪ್ರಶಸ್ತಿ ಮುಂತಾದ ಪ್ರಶಸ್ತಿ ಗೌರವುಗಳೂ ದೊರೆತವು..!
ಹೀಗೆಯೇ ಸಾಹಿತ್ಯ ರಚನೆ ಮತ್ತು ಬದುಕು ಸಾಗಿಸಿದ ಮಳಲಿ ವಸಂತಕುಮಾರ್ ಅವರು ಈಗ ನಮ್ಮನ್ನು ಅಗಲಿದ್ದಾರೆ. ಅವರಿಗೆ ಇದೋ ಅನಂತಾನಂತ ನಮನಗಳು…
# ಕೆ.ಶಿವು.ಲಕ್ಕಣ್ಣವರ
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…