ಆದರೆ ಮೊನ್ನೆ ಸಂಜೆ ಸಿಕ್ಕಾಗ ತುಂಬಾನೇ ಚೆಂದ ಕಾಣಿಸುತ್ತಿದ್ದಳು. ಹದಿನೆಂಟು ವರುಷಗಳ ಹಿಂದೆ ಅವಳಿಗೆ ಹದಿನೆಂಟರ ಹದಿ ಹರೆಯ. ತೆಳ್ಳಗೆ., ಸಜ್ಜೆ ಬಣ್ಣದ ಸಾದಗಪ್ಪಿನ ಸುಂದರಿ. ಹದಿನೆಂಟು ವರುಷಗಳ ಹಿಂದೆ ಯಂಕಂಚಿ ಜಾತ್ರೆಯಲಿ ಸಿಕ್ಕವಳು, ಮೊನ್ನೆ ಸಂಜೆ ತಂಗಾಳಿ ತೇಲಿ ಬರುವ ಹೊತ್ತಲಿ ಸಡನ್ನಾಗಿ ಸಿಕ್ಕಳು. ಇಪ್ಪತ್ತು ವರುಷಗಳ ಹಿಂದೆ ಮೊದಲ ಭೆಟ್ಟಿಯಲಿ ಹುಟ್ಟಿಕೊಂಡ ಹಿರಿ ಹಿರಿ ಹಿಗ್ಗುವ ಸಂತಸವೇ ಮತ್ತೆ ನಮ್ಮಲ್ಲಿ ಚೇತನಗೊಂಡಿತು.
ಏಕ ಕಾಲಕ್ಕೆ ನಮ್ಮಿಬ್ಬರಿಗೂ ಪರಮ ಅಚ್ಟರಿ!! ಸಿನೆಮಾ ಕತೆಗಳಲ್ಲಂತೆ ಕ್ಷಣ ಕಾಲ ಸ್ಟಿಲ್ಲಾದೆವು. ಲಗಾಮು ತುಳಿದು ನನ್ನ ಕಪ್ಪು ಕುದುರೆ ತರುಬಿದೆ. ಕುದುರೆಯೆಂದರೆ ಕುದುರೆಯಲ್ಲ. ಕಪ್ಪು ಕಲರಿನ ಹೀರೋ ಹೊಂಡಾ….
ಜಾಂಬಳ ವರ್ಣದ ಕಾಟನ್ ಸೀರೆ, ತಿಳಿ ಅರಿಶಿಣ ಬಣ್ಣದಂಚಿನ ಕೆಂಪು ಕುಪ್ಪಸ ಅವಳ ತುಂಬಿದ ಮೈ ತುಂಬಿ ಕೊಂಡಿದ್ದವು. ತಲೆ ತುಂಬ ಅರೆನೆರೆತ ಕೂದಲು. ಥೇಟ್ ಹಳ್ಳಿಯ ಮುಗುದೆಯಂತೆ ಜವಾರಿತನ ಬದುಕಿದ್ದಳು. ಅದಕ್ಕೆ
ನಾನು ಆರಂಭಕ್ಕೇ ಹೇಳಿದ್ದು ಚೆಂದ ಕಾಣಿಸುತ್ತಿದ್ದಳೆಂದು. ಮೊದಲಿಗಿಂತಲೂ ಖರೇನ ಹೇಳ್ತಿದೀನಿ ಈಗಲೇ ಹೆಚ್ಚು ಚೆಂದ ಕಂಡಳು. ಅದನ್ನವಳಿಗೂ ಹೇಳಿದೆ.
ಯಾವಾಗ ಬಂದೆ..? ಕೇಳಿದಳು. ಏನೋ…. ಕೇಳಿದಂತಾಗಿ ಏನುತ್ತರಿಸಿದೆನೋ…! ನೆನಪು ಹಾರಿ ಹೋಯಿತು. ಸಂಜೆಯ ವಾಕಿಂಗ್ ಮುಗಿಸಿ ತೋಟದ ಮನೆ ಕಡೆಗೆ ಹೊರಟಂತಿತ್ತು. ಮನಸಿನ ತೊಗಲು ಹರಿದು ಸ್ಪರ್ಶಿಸಲಾಗದ ಸುಖವೇ ಅನರ್ಘ್ಯವೆಂದು ಅನೇಕ ಬಾರಿ ಅಂದು ಕೊಂಡವರು. ಒಂದೇ ನೋವಿನ ದೋಣಿಯಲಿ ಪಯಣಿಸಿ ಬಂದ ಲೋಕ ಚರಿತರಂತೆ ಅದೆಷ್ಟೋ ಕಾಲ ಚರ್ಚಿಸಿದವರು.
ನೆನಪಿದೆಯಾ ನಿನಗೆ ? ನಾವಿಬ್ಬರೂ ಅಂದು ಹೊಳೆಯ ದಡದಲಿ ನಿಂದು ಮರುಳ ಮನೆಗಳ ಕಟ್ಟಿ ಆಟವಾಡಿದ ದಿವಸ
ನೆನಪಿದೆಯಾ ನಿನಗೆ ? ಯಾಕೋ ಗೊತ್ತಿಲ್ಲ… ಜಿಎಸೆಸ್ ಅವರ ಈ ಕವಿತೆ ಗಾಢವಾಗಿ ಕಾಡ ತೊಡಗಿತು.
ಹೌದು, ನಾವಿಬ್ಬರು ಕೆಂಪುಹಳ್ಳದ ಹುರ್ಮಂಜಿನಂತಹ ಉಸುಕಲ್ಲಿ ಮನೆಕಟ್ಟಿ ಗಂಡ – ಹೆಂಡತಿಯಾಗಿ ಆಡಿದ ಎಲ್ಲ ಆಟಗಳು ನೆನಪಾದವು. ನನಗೆ ಈಜು ಬರ್ತಿರ್ಲಿಲ್ಲ. ಅದು ಮೂರು ಹಳ್ಳಗಳು ಕೂಡುವಲ್ಲಿರುವ ಭಯಾನಕ ಸೆಳೆತದ ಸುಳಿ ಮಡುವು. ಅಂತಹ ಕಪ್ಪು ನೀರಿನ ಮಡುವಲ್ಲಿ ಆಳಕ್ಕೆ ಉಸಿರು ಕಟ್ಟಿ ಮುಳು ಮುಳುಗೇಳಿ ಬರುತ್ತಿದ್ದಾಕೆ ಒಮ್ಮೆ ನನ್ನನ್ನು ಎಳಕೊಂಡು ಮುಳುಗೆದ್ದಿದ್ದಳು. ನನಗೆ ನನ್ನವ್ವ ಹೆದರಿಸುತ್ತಿದ್ದ “ಜಕಣಿಯರು” ಆಗ ನೆನಪಾಗಿದ್ದರು.
ಏನಾಗಿದೆ ನಿನಗೆ..? ಆಗೆಲ್ಲಾ ಲಂಕೇಶ್, ಮಾರ್ಕ್ಸ್, ಮಾರ್ಕ್ವೆಜ್.. ಅಂತಿದ್ದಿ… ನನ್ನವ್ವ ಫಲವತ್ತಾದ ಕಪ್ಪು ನೆಲ.. ಬನದ ಕರಡಿಯ ಹಾಗೆ ಚಿಕ್ಕ ಮಕ್ಕಳ ಹೊತ್ತು ಸಾಕಿದಾಕೆ…. ಏನೇನೋ ಹೇಳಾಂವ ಯಾಕೆ ಏನಾಗಿದೆ ನಿನಗೀಗ…? ಎಂದು ಗೊಣಗಿ ಗುದ್ದಾಡುವ ದನಿಯಲಿ ಕೊಡವಿ ಬಿಟ್ಟಳು. ಕುದುರೆಯಿಂದ ಕೆಳಗಿಳಿದು ತುಡುಗು ಮಾಡಿದ ಪಾಪದ ಹುಡುಗನಂತೆ ಹಂಗೇ ನಿಂತಿದ್ದೆ. ಅವಳೆಲ್ಲ ಮಾತುಗಳಿಗೆ ಕಿವಿಯಾಗಿ ನಿಂತೇ ಇದ್ದೆ.
“…ಆ ಕೆಂಪು ಹಳ್ಳ ಮುತ್ತೈದೆಯಂತೆ ಮೈತುಂಬಿ, ಮುಂಚಿನಂತೆ ಹರಿಯುತ್ತಿಲ್ಲ. ಹಳ್ಳದೆದೆಯ ನರ ನಾಡಿಗಳಲ್ಲಿ ಸರ್ಕಾರ ಜಾಲಿಯ ಮುಳ್ಳು ಕಂಟಿಗಳೇ ತುಂಬಿಕೊಂಡಿವೆ. ನಾವು ಆಟವಾಡಿದ ಜಾಗ ಎಲ್ಲಿ ಮಾಯವಾಗಿದೆಯೋ ತಿಳಿಯುತ್ತಿಲ್ಲ…” ಇದೆಲ್ಲ ನನ್ನೊಳಗೆ ನಾನೇ ಮಾತಾಡಿಕೊಂಡೆ.
ಅವಳದು ಮುಂಚಿನಿಂದಲೂ ಲಿಪಿಗಿಂತ ಲಿಪ್ಲಾಂಗ್ವೇಜ್ ಅಧಿಕ. ಹೀಗಾಗಿ ನನ್ನ ವಾಟ್ಸ್ಯಾಪ್, ಫೇಸ್ಬುಕ್ ಬರಹ ನೋಡೋದಿಲ್ಲವೆಂದು ಖಡಾಖಂಡಿತ ಧಾಟಿಯಲಿ ಉಲಿದಳು. ಪ್ಲಾಸ್ಟಿಕ್ ಬ್ಯಾಟೊಂದನ್ನು ಹಿಡಕೊಂಡು ಪುಟ್ಟ ಬಾಲಕನೊಬ್ಬ ಅದೇ ರಸ್ತೆಯಲಿ ಆಟವಾಡಿಕೊಂಡಂತೆ ಬರುತ್ತಿದ್ದ. ಹತ್ತಿರಕೆ ಬಂದು ಯಾರ್ಮಮ್ಮೀ ಇವ್ರು ? ಕೇಳಿತು ಮಗು. ನಾನು ಯಾರೀ ಮಗು ಎಂದು ಕೇಳುವ ಮುನ್ನವೇ… ತನ್ನ ಗಂಡನ ಹೆಸರು ಹೇಳಿ, ಹೌದು ಅವನ ಹಸಿ ತ್ಯಾಜ್ಯದ ಫಲವೇ ಇವನು, ಎಂದಳು. ಅವಳ ಮಾತಲ್ಲಿ ವಿಷಾದಪೂರಿತ ವ್ಯಂಗ್ಯವಿತ್ತು. ಅಷ್ಟೊತ್ತಿಗೆ ಮಗು ಆಡುತ್ತಾಡುತ್ತಾ ದೂರ ಚಲಿಸಿತ್ತು.
ಸೂರ್ಯ ತಾಯಿಹೊಟ್ಟೆ ಸೇರಿ ಕಣ್ನಸುಕು ಮುಸುಕಿತು. ಕಣ್ಣಳತೆಗೂ ದೂರದ ತೋಟದ ಮನೆಯ ಕಡೆಯಿಂದ ಮಾಟದ ದೀವಟಿಗೆಯ ಮಿಂಚಿನ ಸೆಳಕು ಬೀಸಿದಂತಾಯಿತು. ನನಗೇಕೋ ಸೂರ್ಯನಿಲ್ಲದ ಸುತ್ತಲಿನ ಕತ್ತಲೆಗಿಂತ ಸಣ್ಣನೆಯ ಭಯದ ಕತ್ತಲು ಎದೆಯ ತುಂಬ ತುಳುಕ ತೊಡಗಿತು. ನಾಳೆ “ಮತ್ತೆ ಭೆಟ್ಟಿಯಾಗೋಣವೆಂದು” ಕಪ್ಪು ಕುದುರೆಯ ಲಗಾಮಿಗೆ ಕಿಕ್ ಹೊಡೆದು ಕತ್ತಲೆ ಸೀಳಿಕೊಳ್ಳುತ್ತ ಅರವತ್ತರ ವೇಗದಲ್ಲಿ ಕುದುರೆ ಓಡಿಸತೊಡಗಿದೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…