“ಸಿಟ್ಟು ತನ್ನ ವೈರಿ, ಶಾಂತಿ ಪರರ ವೈರಿ” ಎಂಬ ನಾಣ್ನುಡಿ ಶಾಂತಿಗಿರುವ ಶಕ್ತಿ, ಅದರಿಂದುಂಟಾಗುವ ಪರಿಣಾಮಗಳನ್ನು ತಿಳಿಸಿಕೊಡುತ್ತದೆ. ಎಲ್ಲಿ ಶಾಂತಿ ನೆಲೆಸಿರುತ್ತದೋ ಅಲ್ಲಿ ಸಮಾಧಾನ ಕಾಲು ಮುರಿದುಕೊಂಡು ಬಿದ್ದಿರುತ್ತದೆ. ಅಲ್ಲಿ ಸಿಟ್ಟು, ಸೆಡವು ಕಂಡು ಬರುವುದಿಲ್ಲ. ಎಂತಹ ಕಠಿಣತಮ ಸಮಸ್ಯೆಗಳೂ ಅಲ್ಲಿ ಮಂಜಿನಂತೆ ಕರಗಿ ನೀರಾಗಬಲ್ಲವು.
ಅಂತರ ರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಪ್ರಾಧಾನ್ಯತೆ ತಂದು ಕೊಟ್ಟ ರಾಷ್ಟ್ರಪಿತ ಮಹಾತ್ಮ ಗಾಂದೀಜಿ ಇಡೀ ವಿಶ್ವಕ್ಕೆ ಶಾಂತಿಯ ಮಂತ್ರ ಬೋಧಿಸಿದರು. “ಅಶಾಂತ ರಹಿತವಾದ ಪರಿಪೂರ್ಣ ಶಾಂತಿ ಈ ಲೌಕಿಕ ಪ್ರಪಂಚದ ಅಶಾಂತಿಯಿಂದ ಸಂಪೂರ್ಣವಾಗಿ ಬಿಡುಗಡೆಯಾದಾಗಲೇ ಅಲೌಕಿಕ ಶಾಂತಿ” ಎಂದು ಅವರು ಒಂದು ಕಡೆ ಹೇಳುತ್ತಾರೆ. ಇದು ಅವರ ಕನಸಿನ ವಿಶ್ವಶಾಂತಿ ಕೂಡ ಆಗಿತ್ತು.
ಭರತ ಖಂಡದಲ್ಲಿ ಈವರೆಗೆ ಆಗಿ ಹೋದ ಬಹುತೇಕ ಮಹಾನ್ ಪುರುಷರು ಶಾಂತಿ ಧೂತರೇ ಆಗಿದ್ದಾರೆ. ಅದೇರೀತಿಯಾಗಿ ಎಲ್ಲ ಧರ್ಮಗಳ ಸಾರ ಕೂಡ ಇದುವೇ ಆಗಿದೆ. ಬುದ್ಧ ಭಾರತದಲ್ಲಿ ಹುಟ್ಟಿದ್ದರೂ ಆತನ ಬೌದ್ಧ ಧರ್ಮ ಅನೇಕ ರಾಷ್ಟ್ರಗಳಲ್ಲಿ ಚಾಚಿಕೊಂಡಿದೆ. ಆತ ಬೋಧಿಸಿದ್ದು ಶಾಂತಿ-ಕರುಣೆ ಮತ್ತು ಪ್ರೀತಿಯ ಮಾರ್ಗ. ಆಸೆಯೇ ದುಃಖಕ್ಕೆ ಮೂಲ ಎಂಬ ಪರಮ ಸತ್ಯದ ಮಂತ್ರ. ಶಾಂತಿ ಬಯಸುವವರು ಅವರ ತತ್ವಗಳನ್ನು ಆದರ್ಶವಾಗಿಟ್ಟುಕೊಳ್ಳಬೇಕು. ಆಗ ಮಾತ್ರ ಎಲ್ಲೆಡೆ ಶಾಂತಿ ನಳನಳಿಸಲು ಸಾಧ್ಯ.
ಎರಡನೇ ಮಹಾಯುದ್ಧದಲ್ಲಿ ಎರಡು ಲಕ್ಷ ಜನರು ಒಂದೇ ವೇಳೆಯಲ್ಲಿ ಸಾವನ್ನಪ್ಪಿರುವುದನ್ನು ಕಂಡ ಜಪಾನಿಗರು ಯೌವನಾವಸ್ಥೆಯಲ್ಲಿ ಸಿಟ್ಟು, ಕೋಪ, ತಾಪ ಮಾಡಬಾರದು ಎಂದು ಪ್ರತಿಜ್ಞೆ ಮಾಡಿದರು. ಮೇಲಾಗಿ ಅಲ್ಲಿ ಇವತ್ತಿಗೂ ಬುದ್ಧನ ಸಂದೇಶಗಳನ್ನು ಅನುಸರಿಸುತ್ತಿರುವುದರಿಂದ ಶಾಂತಿ-ಸಹಬಾಳ್ವೆ ಸಾಧ್ಯವಾಗಿದೆ.
ಅದರಂತೆ ಮಹಾವೀರ, ಏಸುಕ್ರಿಸ್ತ, ಮಹ್ಮದ್ ಪೈಗಂಬರ್, ಬಸವಣ್ಣ, ಕನಕ-ಪರಂದರರು ಸೇರಿದಂತೆ ಇನ್ನಿತರ ಅನೇಕ ಶ್ರೇಷ್ಠ ದಾರ್ಶನಿಕ ಪುರುಷರು ಸಹ ಶಾಂತಿ ಮಂತ್ರವನ್ನೇ ಸಾರಿದ್ದಾರೆ.
“ಅಹಿಂಸಾ ಪರಮೋಧರ್ಮ” ಎಂದು ಹೇಳಿದ ಮಹಾವೀರ, ಲೋಕದ ಡೊಂಕ ನೀವೇಕೆ ತಿದ್ದುವಿರಿ, ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ, ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ, ಇವನಾರವ, ಇವನಾರವ ಎಂದೆನಿಸದಿರಯ್ಯ, ಇವ ನಮ್ಮವ, ಇವ ನಮ್ಮವ ಎಂದೆನಿಸಯ್ಯ ಕೂಡಲಸಂಗಮ ದೇವ ಇವ ನಮ್ಮ ಮನೆಯ ಮಗನೆಂದಿನಿಸಯ್ಯ ಎಂದ ಬಸವಾದಿ ಪ್ರಮಥರೆಲ್ಲರದು ಸಮಾಜದಲ್ಲಿ ಶಾಂತಿ ಸ್ಥಾಪಿಸುವ ಹೆಬ್ಬಯಕೆಯ ಜೊತೆಗೆ ಸಕಲ ಜೀವಾತ್ಮರಿಗೆ ಲೇಸು ಬಯಸುವುದೇ ಆಗಿತ್ತು.
ಕಳಿಂಗ ಯುದ್ಧದ ನಂತರ ನಾನೆಂದಿಗೂ ಶಸ್ತ್ರಾಸ್ತ್ರ ಹಿಡಿದು ಯುದ್ಧ ಮಾಡುವುದಿಲ್ಲ ಎಂದು ಪಣತೊಟ್ಟ ಅಶೋಕ ಇಡೀ ಜಗತ್ತಿಗೆ ಯುದ್ಧದ ಬೀಕರತೆ ಹಾಗೂ ಶಾಂತಿಯ ಅವಶ್ಯಕತೆಯನ್ನು ತೋರಿಸಿಕೊಟ್ಟ. ವಿದೇಶಕ್ಕೆ ತೆರಳಿದ್ದವಿವೇಕಾನಂದರು ಭಾರತದ ಶಾಂತಿ, ಸಹೋದರತೆ, ಭಾತೃತ್ವ ಮುಂತಾದ ಶ್ರೇಷ್ಠತೆಯನ್ನು ಸಾರಿ ಹೇಳಿದರು. ಭಾರತಕ್ಕೆ ಬಂದ ಮದರ್ ತೆರೆಸಾ, ನೆಲ್ಸನ್ ಮಂಡೆಲಾ, ಆಂಗ್ ಸಾನ್ ಸೂಕಿ ಮುಂತಾದವರೆಲ್ಲರೂ ಶಾಂತಿಗಾಗಿ ನೋಬೆಲ್ ಮತ್ತು ಭಾರತ ರತ್ನದಂತಹ ಅತ್ಯಚ್ಛ ಪ್ರಶಸ್ತಿಗಳನ್ನೇ ತಮ್ಮ ಮುಡಿಗೇರಿಸಿಕೊಂಡರು.
ಯುದ್ಧ ವಿರಾಮದಿಂದ ಮಾತ್ರ ಶಾಂತಿ ಸಾಧಿಸಲಾಗದು. ಎಲ್ಲಿಯೇ ಆಗಲಿ ಜಗತ್ತಿನ ದ್ವೇಷ ಭಾವನೆಗಳನ್ನು ನಿರ್ಮೂಲನೆ ಮಾಡುವುದರಿಂದ ಮಾತ್ರ ಶಾಂತಿ ಸಾಧ್ಯ ಎಂಬುದು ಪಂಡಿತ ಜವಾಹರಲಾಲ್ ನೆಹರು ಅವರ ಅಭಿಮತವಾಗಿತ್ತು.
ಶಾಂತಿ ಎಂಬ ಕತ್ತಿಯೂ ಯಾರ ಕೈಯಲ್ಲಿದೆಯೋ ಅವನನ್ನು ದುರುಳರೇನು ಮಾಡಬಲ್ಲರು? ಎಂದು ಕಿಂಗ್‌ಸ್ಲೇ ಅಮೀನ್ ಪ್ರಶ್ನಿಸುತ್ತಾರೆ. ಮಹತ್ವಾಕಾಂಕ್ಷೆಯ ಅಂತ್ಯದಲ್ಲೇ ಶಾಂತಿಯ ಆರಂಭವಿದೆ ಎಂದು ಪಾಶ್ಚಾತ್ಯ ವಿದ್ವಾಂಸ ಯಂಗ್ ಹೇಳುತ್ತಾರೆ. ನಮ್ಮ ಬದುಕಿನಲ್ಲಿ ಇನ್ನೊಬ್ಬರನ್ನು ದ್ವೇಷ ಮಾಡದೆ ನೆಮ್ಮದಿಯಿಂದ ಬದುಕುವ ಶಾಂತಿಮಯ ಬದುಕನ್ನು ಕೊಡು. ಯಾರು-ಯಾರನ್ನೂ ದ್ವೇಷಿಸುವುದೇ ಬೇಡ ಎಂಬುದೇ ಶಾಂತಿಯ ಮಂತ್ರ. ಸ್ವಾರ್ಥ ಗುಣ ತೊರೆದವ, ಶಾಂತಿ ಪಡೆದವ, ಸತ್ಯ ಬಲ್ಲವನೇ ನಿಜವಾದ ಸುಖಿ ಎಂದು ಬಲ್ಲವರು ಹೇಳುತ್ತಾರೆ. ಅನ್ನದಾನ, ವಸ್ತ್ರದಾನ, ನೇತ್ರದಾನ, ಭೂ ದಾನ, ಕನ್ಯಾದಾನ..
ಹೀಗೆ ಎಲ್ಲ ದಾನಗಳಿಗಿಂತ ಸಮಾಧಾನವೇ ಶ್ರೇಷ್ಠ ದಾನವಾಗಿದೆ. ಎಲ್ಲರ ಹಸಿವು ಒಂದೇ ಆಗಿರಬೇಕು. ಶಾಂತಿಯೇ ಜೀವನದ ಮುಖ್ಯ ಸೂತ್ರವಾಗಬೇಕು. ೯೮೧ರಲ್ಲಿ ನಡೆದ ವಿಶ್ವಸಂಸ್ಥೆಯ ಎಲ್ಲ ರಾಷ್ಟ್ರಗಳ ಸದಸ್ಯರ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡಾಗಿನಿಂದಪ್ರತಿ ವರ್ಷ ಸೆ. ೨೧ರಂದು ಅಂತರರಾಷ್ಟ್ರೀಯ ಶಾಂತಿ ದಿನವನ್ನು ಆಚರಿಸಲಾಗುತ್ತಿದೆ. ಈಗಾಗಲೇ ಜಗತ್ತಿನ ಎಲ್ಲ ದೇಶದವರು ಶಾಂತಿ ಹುಡುಕುತ್ತ, ಅದನ್ನು ಸ್ಥಾಪಿಸುವ ಸಲುವಾಗಿ ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ಪರಸ್ಪರ ರಾಗ-ದ್ವೇಷಗಳನ್ನು ಮರೆತು ಶಾಂತಿ-ಸಹೋದರತೆಯ ಮಂತ್ರ ಪಠಿಸುವ ಕೆಲಸ ನಿತ್ಯ ನಡೆದಿದೆ.
ಇದು ಕೇವಲ ಆಚರಣೆಗೆ ಸೀಮಿತವಾಗದೆ ನಮ್ಮ ನಮ್ಮ ನಡೆಯಲ್ಲೂ ಬರಬೇಕು. ಅಂದಾಗ ಮಾತ್ರ ಶಾಂತಿ-ಸಹಬಾಳ್ವೆಯ ಸುಂದರ ಜಗತ್ತಿನ ನಿರ್ಮಾಣ ಸಾಧ್ಯ. ಪ್ರತಿಯೊಬ್ಬರೂ ಸುಂದರಗೊಳಿಸುವ ಕೆಲಸ ಮಾಡಿದಾಗ ಮಾತ್ರ ಶಾಂತಿಗೆ ಬೆಲೆ. ನಮಗೆಲ್ಲರಿಗೂ ನೆಲೆ.
(ಕೃಪೆ: ಶರಣ ಮಾರ್ಗ, ಅಕ್ಟೋಬರ್, ೨೦೧೮)
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…