ಕರ್ನಾಟಕ ರಾಜ್ಯ ರೈತ ಸಂಘದ ಫಲವತ್ತಾದ ದಿನಗಳವು. ನನಗೆಷ್ಟು ಉತ್ಸಹವೆಂದರೆ ನನ್ನ ಹೆಗಲ ಮೇಲೆಯೂ ಹಸಿರು ಶಾಲು ಹಾಕಿಕೊಂಡು ಕಾಲೇಜಿಗೆ ಹೋಗುತ್ತಿದ್ದೆ. ಹಸಿರು ಶಾಲು ಕಂಡರೆ ಕೆಲವರಿಗೆ ಒಳಗೊಳಗೆ ಗುದುಮುರುಗಿ. ಆ ಸಂಕಟಕ್ಕೆ ಅವರು ಒಳಗಾಗಲೆಂದೆ ನಾನು ಬೇಕಂತಲೆ ಹಸಿರು ಶಾಲು ಹಾಕಿಕೊಂಡು ಡಿಗ್ರಿ ಕ್ಲಾಸಗೆ ಹೋಗುತ್ತಿದ್ದೆ.
ಇದಕ್ಕೆಲ್ಲ ಮುಖ್ಯ ಕಾರಣ ಅಪ್ಪ ಲಿಂಗಣ್ಣ ಸತ್ಯಂಪೇಟೆ. ಲಂಕೇಶ್ ಪತ್ರಿಕೆಯ ವರದಿಗಾರರಾಗಿ ,ಸರಕಾರಿ ಶಿಕ್ಷಕರಾಗಿಯೂ ಹಳ್ಳಿ ಹಳ್ಳಿಗೆ ಕರ್ನಾಟಕ ರಾಜ್ಯ ಸಂಘವನ್ನು ಸಂಘಟಿಸಿ, ಅಲ್ಲಿಯ ರೈತರನ್ನು ಜಾಗ್ರತೆಗೊಳಿಸಿ ಬರುತ್ತಿದ್ದರು. ಸಹಜವಾಗಿ ಅಪ್ಪನೊಂದಿಗೆ ಪ್ರೊ.ಎಂ.ಡಿ.ನಂಜುಂಡಸ್ವಾಮಿ, ಎನ್.ಡಿ. ಸುಂದರೇಶ್ ಹಾಗೂ ರೈತ ಸಂಘದ ಹಿರಿಯ ಧುರೀಣರಾದ ಹೆಚ್ ಎಸ್. ರುದ್ರಪ್ಪನವರ ಒಟನಾಟ ತುಂಬಾ ಆತ್ಮೀಯ ಹಾಗೂ ಸಲುಗೆಯದಾಗಿತ್ತು.
ಇಂಥ ಸಂದರ್ಭದಲ್ಲಿಯೆ ಸಂಘಟನೆಗೆ ಬಂದು ಸೇರ್ಪಡೆಯಾದವರು ಬೆಳಗಾವಿ, ಜಿಲ್ಲೆ ಬೈಲಹೊಂಗಲದ ಬಾಬಾಗೌಡ ಪಾಟೀಲ. ಮೊದಮೊದಲು ಇಡೀ ರಾಜ್ಯಕ್ಕೆ ಬಾಬಾ ಗೌಡರು ಅಷ್ಟು ಪರಿಚಿತವಾಗಿರಲಿಲ್ಲ. ಆಗ ಲಂಕೇಶ್ ಪತ್ರಿಕೆ ಉತ್ತುಂಗ ಪ್ರಸಾರದಲ್ಲಿದ್ದ ದಿನಗಳವು. ಏನಾದರೂ ಗಟ್ಟಿಯಾದ ಸಂಗತಿ ಪ್ರಕಟವಾಗಬೇಕಾದರೆ ಅದು ಲಂಕೇಶ್ ಮೂಲಕ ಸಾಧ್ಯ ಎಂದು ನಂಬಿಕೊಂಡ ದಿನಗಳವು. ಅದೇಕೋ ಕರ್ನಾಟಕ ರಾಜ್ಯ ರೈತ ಸಂಘ ಪ್ರೊ.ಎಂ.ಡಿ.ಎನ್. ಹಾಗೂ ಎನ್.ಡಿ. ಸುಂದರೇಶ್ ಮುಂಚೂಣಿ ನಾಯಕರ ಮುಖ ನೋಡಿ ಸುಸ್ತಾಗಿದ್ದರು. ಹೊಸ ಮುಖಗಳ ಪ್ರವೇಶ ಅಷ್ಟಾಗಿರಲಿಲ್ಲ.
ಅಪ್ಪ ಲಂಕೇಶ್ ಪತ್ರಿಕೆಯಲ್ಲಿ ಯಾವಾಗ ಬಾಬಾ ಗೌಡರ ಕುರಿತು ಸಂದರ್ಶನವೊಂದನ್ನು ಪ್ರಕಟಿಸಿದರೋ ಆಗ ಬಾಬಾ ಗೌಡರು ಮನೆ ಮಾತಾದರು. “ಎಲ್ಲರಂತ್ತಲ್ಲದ ರೈತ ನಾಯಕ” ಎಂಬ ಹೆಡ್ಡಿಂಗ್ ನೊಂದಿಗೆ ಪ್ರಕಟವಾದ ಬರಹ ಬೆಳಗಾಗುವಷ್ಟರಲ್ಲಿ ಬಾಬಾ ಗೌಡರನ್ನು ರೈತ ಸಂಘಟನೆಯ ಮುಂಚೂಣಿಯ ನಾಯಕರನ್ನಾಗಿ ಮಾಡಿತ್ತು. ಒಬ್ಬ ಐ.ಎ.ಎಸ್. ಓದಿದ್ದ ವ್ಯಕ್ತಿಯೊಬ್ಬ ತನ್ನೆಲ್ಲ ಓದು ಬರಹದ ಕಸುವನ್ನು ರೈತರ ಸಹಾಯಕ್ಕಾಗಿ ಖರ್ಚು ಮಾಡುವುದು ಸಣ್ಣ ಮಾತಾಗಿರಲಿಲ್ಲ. ಅವರ ಚಿಂತನಾ ಶಕ್ತಿ, ರೈತರ ಬಗೆಗಿನ ಕಾಳಜಿ, ವ್ಯವಸ್ಥೆಯ ಬಗ್ಗೆ ಅವರಿಗಿರುವ ಸಾತ್ವಿಕ ಸಿಟ್ಟು ಮುಂತಾದವುಗಳ ಕುರಿತು ಎರಡು ಪುಟ ಪ್ರಕಟವಾಗಿದ್ದವು.
ಅಂದಿನಿಂದ ಬಾಬಾಗೌಡ ಪಾಟೀಲ ಕರ್ನಾಟಕ ರಾಜ್ಯ ರೈತ ಸಂಘದ ಅಗ್ರಗಣ್ಯ ನಾಯಕರಲ್ಲಿ ಅವರೂ ಒಬ್ಬರು. ಕಾನೂನು ಅರಿವು ಧೈರ್ಯದ ಮಾತು, ಸಾತ್ವಿಕ ಆಕ್ರೋಶಗಳಿಂದ ಎದುರಿಗೆ ಇದ್ದ ರಾಜಕಾರಣಿ ಅಥವಾ ಅಧಿಕಾರಿಯ ಜಂಘಾಬಲವನ್ನೇ ಉಡುಗಿಸಿ ಬಿಡುತ್ತಿದ್ದರು. ಬಾಬಾ ಗೌಡರು ಮಾತನಾಡಿದರೆ ಅದು ಗುಡುಗಿದಂತೆ ಆಗುತ್ತಿತ್ತು.
ಒಂದು ಸಲ ಶಹಾಪುರ ತಾ.ಪ. ಕಚೇರಿಯ ಆವರಣದಲ್ಲಿ ರೈತರು ಸತ್ಯಾಗ್ರಹ ಮಾಡುತ್ತಿದ್ದರು. ಈ ಸತ್ಯಾಗ್ರಹವನ್ನು ಹೇಗಾದರೂ ಮಾಡಿ ಹಾಳುಮಾಡಬೇಕೆಂಬ ಹುನ್ನಾರ ಅಲ್ಲಿನ ಅಧಿಕಾರಿಗಳಿಗೆ. ಆದ್ದರಿಂದ ರೈತರು ಕುಳಿತ ಟೆಂಟ್ ಕಿತ್ತುವುದು , ಅಲ್ಲಿನ ಮಹಾತ್ಮಗಾಂಧೀಜಿಯ ಭಾವ ಚಿತ್ರ ಕಿತ್ತಿ ಬಿಸಾಡಿ ಹೊರ ಒಗೆದು, ಆ ಭಾವ ಚಿತ್ರದ ಮೇಲೆ ಕಾಲಿಟ್ಟು ಅವಮಾನಿಸಿ ಬಿಟ್ಟಿದ್ದರು.
ಮಹಾತ್ಮಗಾಂಧೀ ಅಂದರೆ ರಾಷ್ಟ್ರಪಿತ. ಅವರನ್ನು ಅವಮಾನಿಸುವುದೆಂದರೆ ರಾಷ್ಟ್ರವನ್ನು ಅವಮಾನಿಸಿದಂತೆ ಅಲ್ಲವೆ ? ರೈತರಿಗೆ ಕಿರುಕುಳ ನೀಡಲೆಂದೆ ಇದನ್ನೆಲ್ಲ ವ್ಯವಸ್ಥಿತವಾಗಿ ಮಾಡಿಸುತ್ತಿದ್ದ ಅಧಿಕಾರಿಯ ವಿರುದ್ಧ ನಾನು, ವೆಂಕಟೇಶ್ ಮಾನು ಶಾಲೆ, ಕಾಲೇಜುಗಳನ್ನು ತಿರುಗಾಡಿ ಹುಡುಗರಲ್ಲಿ ಜಾಗ್ರತೆಯನ್ನು ತುಂಬಿದೆವು. ಯುವಕರೆಲ್ಲ ಶಾಲಾ ಕಾಲೇಜು ಬಿಟ್ಟು ಹೊರಬಂದರು. ಆಗ ಈ ಯುವ ಚಳುವಳಿಗೆ ಶಕ್ತಿ ತುಂಬಲು ಅಪ್ಪ, ಸಿದ್ಧನಗೌಡ ಬಾಚಿಮಟ್ಟಿ ಮೈಲಾರಪ್ಪ ಸಗರ ,ಶಿವಣ್ಣ ಇಜೇರಿ ಮೊದಲಾದವರು ಇದ್ದರು. ಶಹಾಪುರದ ಬಸವೇಶ್ವರ ವೃತ್ತದಲ್ಲಿ ರಸ್ತೆ ರೋಖೋ ಚಳುವಳಿಯೂ ನಡೆಯಿತು.
ಒಂದೆರಡು ದಿನ ಬಿಟ್ಟು ವಿಭಾಗಾಧಿಕಾರಿ ಕಚೇರಿಯ
ಮುತ್ತಿಗೆಯನ್ನು ಬಾಬಾಗೌಡ ಪಾಟೀಲರ ನೇತೃತ್ವದಲ್ಲಿ ಹಾಕಲಾಯಿತು.
ಅಬ್ಬಾ ! ಆಗ ಅಕ್ಷರಶಃ ಬಾಬಾಗೌಡ ವಿ.ಕೆ.ಗೋರೆ ಎಂಬ ವಿಭಾಗಾಧಿಕಾರಿಯ ಕಚೇರಿಯ ಹೊರ ನಿಂತು ” ನಾವು ನಿನ್ನ ಸಂಬಳ ಕೊಡುವ ಧಣಿಗಳು ಬಂದಿದ್ದೇವೆ. ನಮ್ಮ ಮಾತನ್ನು ಕೇಳು. ಬಾಪುಜಿಯ ಚಿತ್ರವನ್ನು ಬೇಕಂತಲೆ ಕೆಡವಿ, ತುಳಿದು ಅವಮಾನಿಸಿದ ಅಧಿಕಾರಿಯ ಅಮಾನತ್ತು ಮಾಡು.ರೈತರ ಬೇಡಿಕೆ ಈಡೇರಿಸು. ಇಲ್ಲದೆ ಹೋದರೆ ರೈತರಾದ ನಾವೆಲ್ಲ ನಾವೇ ಸಜ್ಜು ಮಾಡಿಕೊಟ್ಟ ಕಚೇರಿಯ ಒಳಗೆ ಬರುತ್ತೇವೆ'” ಎಂದಿದ್ದರು.
ಬಾಬಾಗೌಡರ ಮಾತಿನ ಗಟ್ಟಿತನಕ್ಕೆ, ಸತ್ಯಾಸತ್ಯತೆ ಮನವರಿಕೆ ಮಾಡಿಕೊಂಡ ಆ ಅಧಿಕಾರಿ ಸ್ಥಳದಲ್ಲಿಯೇ ಭ್ರಷ್ಟ ಅಧಿಕಾರಿಯ ಅಮಾನತ್ತು ಆದೇಶ ಓದಿದ್ದ. ಇದು ಬಾಬಾಗೌಡರ ತಾಕತ್ತಾಗಿತ್ತು.
ಮುಂದೆ ಪ್ರೊಫೆಸರ್ ಅವರ ನಡುವೆ ಭಿನ್ನಾಭಿಪ್ರಾಯ ಬಂದು ರೈತ ಸಂಘಟನೆಯಿಂದ ಹೊರ ಬಂದರು. ಆದರೆ ಅವರೆಂದೂ ರೈತಪರವಾದ ನಿಲುವಿನಿಂದ ಹಿಂದೆ ಸರಿದಿರಲಿಲ್ಲ. ಶಾಸಕರಾಗಿ, ಕೇಂದ್ರ ಸಚಿವರಾಗಿದ್ದರು ಸಹ ರೈತರನ್ನು, ಹಳೆಯ ಸ್ನೇಹಿತರನ್ನು ಮರೆಯಲಿಲ್ಲ.
ಅಪ್ಪ ಲಿಂಗಣ್ಣ ಸತ್ಯಂಪೇಟೆ ಮರೆಯಾದಾಗ ಆತನ ಕುರಿತು ಮಾತನಾಡಲು ಬೆಳಗಾವಿಯಿಂದ ಕಲಬುರ್ಗಿಗೆ ಬಂದಿದ್ದರು. ಆ ಸಭೆಯ ವೇದಿಕೆಯ ಮೇಲೆ ನಾನೂ ಇದ್ದೆ. ಅವರು ಅಂದು ನನ್ನ ಮೇಲೆ ಹರಿಸಿದ ಕಾಳಜಿ, ಪ್ರೀತಿ ಪೂರ್ವಕ ನೋಟವನ್ನು ನಾನೆಂದೂ ಮರೆಯಲಾರೆ.
ನನ್ನ ಬಗ್ಗೆ ಕುಟುಂಬದ ಇತರರ ಬಗ್ಗೆ ಕೇಳಿದ್ದರು. ನಮ್ಮ ಲಿಂಗಾಯತ ಹೋರಾಟದ ಶಕ್ತಿಯಾಗಿದ್ದರು. ಬಸವಾದಿ ಶರಣರ ವಿಚಾರಗಳನ್ನು ಅವರು ಒಪ್ಪುತ್ತಿದ್ದರು. ಸಂಘಟನೆ, ಹೋರಾಟಗಳ ಮೂಲಕವೆ ತಮ್ಮ ವಿಶಿಷ್ಟವಾದ ಛಾಪು ಹೊಂದಿದ್ದರು. ಪ್ರತಿಭಟನೆಗಳ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸರಿ ಪಡಿಸಲು ಸಾಧ್ಯ ಎಂದರು ಅರಿತಿದ್ದರು.
ಸದಾ ಸಮಾಜ ಮುಖಿ ಹೋರಾಟಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಹೋರಾಟ ಮಾಡುತ್ತಿದ್ದ ಜೀವವೊಂದು ಕೊನೆಯುಸಿರೆಳೆಯಿತು.
ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…
ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…
ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…
ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…
ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…