ನಮ್ಮ ನೆರೆಯ ಆಂಧ್ರದ ಗಡಿ ಬಾಗದಲ್ಲಿ ಬರುವ ಯಾದಗಿರಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ರಾಷ್ಟ್ರಕವಿ ಕುವೆಂಪು, ಮೈಸೂರು ಅರಸರು ಮತ್ತು ಆಡಳಿತ ನಿರ್ವಹಣೆ ಬಗ್ಗೆ ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪನವರು ಆಕ್ಷೇಪಾರ್ಹವಾಗಿ ಮಾತನಾಡಿದ್ದಾರೆ ಎಂಬುದು ಸಾಮಾಜಿಕ ಜಾಲ ತಾಣದಲ್ಲಿ ಸೇರಿದಂತೆ ಮಾಧ್ಯಮಗಳಲ್ಲಿ ಆಗ ಬಹು ದೊಡ್ಡ ಚರ್ಚೆ ನಡೆಯುತ್ತಿತ್ತು, ಅವರು ಮಾತನಾಡಿದುದರ ಬಗ್ಗೆ ಕೆಲವು ಸಂಗತಿಗಳನ್ನು ಜಿಜ್ಞಾಸೆಗೆ ಒಳಪಡಿಸಬಹುದಾಗಿದೆ.
“ಕನ್ನಡ ನಾಡು, ನುಡಿಯ ಬಗ್ಗೆ ರಾಷ್ಟ್ರಕವಿ ಕುವೆಂಪು ಅವರು ಒಬ್ಬರೇ ಕೆಲಸ ಮಾಡಿಲ್ಲ. ಅವರಂತೆ ರಾಜ್ಯದುದ್ದಕ್ಕೂ ಅನೇಕ ಕನ್ನಡದ ಮನಸ್ಸುಗಳು ಕೆಲಸ ಮಾಡಿವೆ. ಆದರೆ ಕುವೆಂಪು ಅವರೊಬ್ಬರನ್ನೇ ನೀವು ಯಾಕೆ ದೊಡ್ಡವರೆಂದು ಬಿಂಬಿಸುತ್ತಿದ್ದೀರಿ ಇದು ಸರಿಯಾದುದ್ದಲ್ಲ. ಅದೇರೀತಿಯಾಗಿ ಬೆಂಗಳೂರನ್ನು ರಾಜಧಾನಿಯನ್ನಾಗಿ ಮಾಡಿದ್ದರ ಬಗ್ಗೆಯೂ ಅವರು ಆಕ್ಷೇಪವೆತ್ತಿ ಮಧ್ಯ ಕರ್ನಾಟಕದ ದಾವಣಗೆರೆ ಕರ್ನಾಟಕದ ರಾಜಧಾನಿಯಾಗಬೇಕಿತ್ತು” ಎಂಬ ವಾದವನ್ನು ಪಾಪು ಅವರು ಈ ಮೊದಲಿನಿಂದಲೂ ಮಂಡಿಸುತ್ತ ಬಂದಿದ್ದಾರೆ.
ಮೈಸೂರು ರಾಜ್ಯವಾಗಿದ್ದಾಗಿನಿಂದಲೂ ಉತ್ತರ ಕರ್ನಾಟಕ, ಮುಂಬೈ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕಕ್ಕೆ ಮೈಸೂರು ಅರಸರ ಆಳ್ವಿಕೆಯಿಂದ ಇಲ್ಲಿಯವರೆಗೆ ಆದ ಅನ್ಯಾಯದ ಬಗ್ಗೆ ಹಲವು ವರ್ಷಗಳಿಂದ ತೀವ್ರ ಅಸಮಾಧಾನವನ್ನು ಕೂಡ ವ್ಯಕ್ತಪಡಿಸುತ್ತಿದ್ದಾರೆ. 96ರ ಈ ಇಳಿ ವಯಸ್ಸಿನಲ್ಲೂ ಕನ್ನಡ ನಾಡು ನುಡಿ, ಗಡಿ, ಪತ್ರಿಕೋದ್ಯಮ, ದೇಶ, ವಿದೇಶದ ಆಗಿನ ಮತ್ತು ಪ್ರಸ್ತುತ ಸಂದರ್ಭಗಳ ಬಗ್ಗೆ ಸಾಕ್ಷಾಧಾರಗಳ ಸಮೇತ ಮಾತನಾಡುತ್ತಿರುವ ಅವರು ತಮ್ಮ ನೋವು, ಅಸಹನೆ, ಆಕ್ರೋಶವನ್ನು ಹೊರಗೆಡುವುತ್ತಿರುವುದು ಸಮಕಾಲೀನ ಸಂದರ್ಭವನ್ನು ಎಚ್ಚರಗೊಳಿಸುವಂತಿದೆ ಎಂದು ನಾನು ಭಾವಿಸಿದ್ದೇನೆ.
ಬೆಂಗಳೂರು, ಮೈಸೂರು ಭಾಗ ಅಭಿವೃದ್ಧಿಯಾದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಅಭಿವೃದ್ಧಿಯಾಗದಿರುವುದಕ್ಕೆ ಅಂದಿನಿಂದ ಇಂದಿನವರೆಗೆ ಆಡಳಿತ ನಡೆಸುತ್ತಿರುವವರ ಮಲತಾಯಿ ಧೋರಣೆ ಜೊತೆಗೆ ಈ ಭಾಗದ ರಾಜಕೀಯ ಇಚ್ಛಾಶಕ್ತಿಯೂ ಕಾರಣ ಎಂಬುದನ್ನು ಅವರು ಪ್ರಸ್ತಾಪಿಸುತ್ತಲೇ ಬಂದಿದ್ದಾರೆ. ಕನ್ನಡ ನಾಡು, ನುಡಿ ಗಡಿಯ ಬಗ್ಗೆ ಸ್ಪಷ್ಟ ವಿಚಾರಗಳನ್ನು ಹೇಳುತ್ತ, ಕುವೆಂಪು ಅವರನ್ನು ಆ ಭಾಗದ ಜನ ದೊಡ್ಡವರನ್ನಾಗಿ ಮಾಡಿದ್ದಾರೆ. ಅಂತೆಯೇ ಅವರು ರಾಷ್ಟ್ರಕವಿ ಬಿರುದಾಂಕಿತರಾಗಿದ್ದಾರೆ. ಹಾಗೆ ನೋಡಿದರೆ ಅವರಿಗಿಂತ ಉತ್ತರ ಕರ್ನಾಟಕದಲ್ಲಿ ಕನ್ನಡ ನಾಡು, ನುಡಿ, ಸಂಸ್ಕೃತಿ, ಸಾಹಿತ್ಯ ಸಂವರ್ಧನೆಗಾಗಿ ದುಡಿದವರಿದ್ದಾರೆ. ಕರ್ನಾಟಕದ ಏಕೀಕರಣದ ಸಂದರ್ಭದಲ್ಲಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಪಾತ್ರ ಮಹತ್ತರದ್ದಾಗಿದೆ. ಆದರೆ ನಿಮಗೆ ಮಾತ್ರ ನಿಜವದ ಇತಿಹಾಸ ಪ್ರಜ್ಞೆಯೇ ಇಲ್ಲ ಎಂದು ಈಗಲೂ ಅವರನ್ನು ಭೇಟಿಯಾಗಲು ಬಂದವರಿಗೆ ತಿಳಿ ಹೇಳುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಕಿವಿಯಾರೆ ಕೇಳಿದ್ದೇನೆ.
ಹೈದರಾಬಾದ್ ಕರ್ನಾಟಕ ಪ್ರದೇಶದ ಸಮಗ್ರ ಅಭಿವೃದ್ಧಿಗಾಗಿ ಆಗ್ರಹಿಸಿ ಮಾಜಿ ಸಚಿವ ವೈಜನಾಥ ಪಾಟೀಲರು ಪ್ರತ್ಯೇಕ ರಾಜ್ಯದ ಬೇಡಿಕೆ ಇಟ್ಟಾಗ, ಅಖಂಡ ಕರ್ನಾಟಕ ಒಡೆಯುವುದು ಸರಿಯಲ್ಲ. ನೆಗಡಿಯಾಗಿದೆ ಎಂದ ಮಾತ್ರಕ್ಕೆ ಮೂಗು ಕೊಯ್ದುಕೊಳ್ಳುವುದು ಎಷ್ಡು ಉಚಿತ? ನಿಮ್ಮ ವೈಜನಾಥ ಪಾಟೀಲರಿಗೆ ತಿಳಿಸಿರಿ ಎಂದು ನನಗೆ ಫೋನ್ ಮಾಡಿ ತಿಳಿಸಿದ್ದರು. ಇದನ್ನು ವೈಜನಾಥ ಪಾಟೀಲರಿಗೆ ಹೇಳಿದಾಗ, ಮೂಗು ಹಿಡಿದರೆ ಬಾಯಿ ತರೆಯುತ್ತದೆ ಎಂಬಂತೆ ಆಗ ಮಾತ್ರ ಸರ್ಕಾರ ನಮ್ಮ ಕಡೆ ಕಣ್ಣು ತೆರೆದು ನೋಡುತ್ತದೆ ಎಂದು ಹೇಳಿ ಅವರು ಹೋರಾಟ ಮುಂದುವರಿಸಿದ್ದರು. ಈ ಭಾಗದ ಅನೇಕರ ಹೋರಾಟದ ಫಲವಾಗಿಯೇ ಎನ್ನವಂತೆ ಸರ್ಕಾರ ಹೈಕ ಅಭಿವೃದ್ಧಿಗಾಗಿ ಸಂವಿಧಾನದ 371 (ಜೆ) ಕಲಂ ತಿದ್ದುಪಡಿ ಮಾಡಿ ಕಾಯ್ದೆ ರೂಪಿಸಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.
ಶಿವಮೊಗ್ಗದ ಮಲೆನಾಡು ಪ್ರದೇಶ ಮೈಸೂರಿನಂತಹ ಸಾಂಸ್ಕೃತಿಕ ಪರಿಸರದಲ್ಲಿ ಬೆಳೆದ ಕುವೆಂಪು ಸಮಗ್ರ ಕರ್ನಾಟಕವನ್ನು ಸುತ್ತಿ ನೋಡಲಿಲ್ಲ ಎಂಬ ಅವರ ಮಾತುಗಳಲ್ಲಿ ಇದರಲ್ಲಿ ಅಂತಹ ವಿಶೇಷವೇನಿಲ್ಲ. ಆದರೆ ಸೂಕ್ತ ಪರಿಸರದ ಜೊತೆಗೆ ಏನೊಂದು ಸೌಕರ್ಯವಿಲ್ಲದೆ ಉತ್ತರ ಕರ್ನಾಟದ ಜನ ಬರೆದಿದ್ದಾರೆ. ಆದರೆ ಅವರಷ್ಟು ಬೆಳೆದಿಲ್ಲಂಬ ನೋವಿದೆ ವಿನಃ ರಾಷ್ಟ್ರಕವಿ ಕುವೆಂಪು ಅವರ ಬಗ್ಗೆ ಅಸಮಾಧಾನ ಇಲ್ಲ ಎಂದು ನಾನು ಭಾವಿಸಿದ್ದೇನೆ.
ಮೈಸೂರು, ಬೆಂಗಳೂರು ಸೇರಿದಂತೆ ಇಡೀ ರಾಜ್ಯವನ್ನು ಸಮಗ್ರ ದೃಷ್ಟಿಯಿಂದ ನೋಡಬೇಕು ಎಂಬ ಕಾಳಜಿಯಿದೆ. ಕುವೆಂಪು ಅವರ ಬಗ್ಗೆ ನನಗೂ ಸೇರಿದಂತೆ ಸಮಸ್ತ ಕನ್ನಡಿಗರಿಗೆ ಅಪಾರ ಗೌರವ, ಹೆಮ್ಮೆಯಿದೆ. ಅವರ ಸಾಹಿತ್ಯ ಸೇವೆ ನಿಜಕ್ಕೂ ಅವಿಸ್ಮರಣೀಯ. ಆದರೆ ಪಾಪು ಅವರ ಮಾತಿನ ದಾಟಿ, ಅದರ ಹಿನ್ನೆಲೆ ಅರ್ಥ ಮಾಡಿಕೊಳ್ಳಬೇಕಿದೆ ಎಂಬುದು ನನ್ನ ಇಲ್ಲಿನ ಅಭಿಮತವಾಗಿದೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…