ಕಲಬುರಗಿ: ‘ಸಾಧನಾ ಪಥದಲ್ಲಿ ಸಾಗಿ, ಇವತ್ತು ತಿರುಗಿ ನೋಡುವಾಗ ಹೆಜ್ಜೆಗುರುತು ಮೂಡಿದ್ದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಲಲಿತಕಲೆಗಳಲ್ಲಿ ಕ್ರಿಯಾಶೀಲವೆನಿಸಿರುವ ರಂಗಭೂಮಿಯ ನಂಟಿನಿಂದಾಗಿ ಬದುಕಿನಲ್ಲಿ ಲವಲವಿಕೆಯಿದೆ.’
ವಿದ್ಯಾರ್ಥಿ ದೆಸೆಯಿಂದಲೇ ನಾಟಕದ ಗೀಳು ಹಚ್ಚಿಕೊಂಡು ಈಗಲೂ ರಂಗಭೂಮಿಯ ನಂಟು ಇಟ್ಟುಕೊಂಡಿರುವ ೭೩ ವಯಸ್ಸಿನ ಹಿರಿಯ ರಂಗಚೇತನ, ಲೇಖಕರೂ ಆಗಿರುವ ಖ್ಯಾತ ವೈದ್ಯ ಸೇಡಂನ ಡಾ.ಎಂ.ಜಿ.ದೇಶಪಾಂಡೆ ಅವರ ಮಾತುಗಳಿವು.
ಕಲಬುರಗಿ ರಂಗಾಯಣದ ವತಿಯಿಂದ ‘ನಟರಂಗ’ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ‘ರಂಗಾಂತರಾಳ’ ಎಂಬ ಕಾರ್ಯಕ್ರಮದಲ್ಲಿ ೫೦ ವರ್ಷದ ರಂಗಭೂಮಿ ಕುರಿತ ಅಂತರಾಳದ ಮಾತುಗಳನ್ನು ಬಿಚ್ಚಿಟ್ಟಿರುವ ಅವರು, ಲಲಿತಕಲೆಗಳ ಸಂಪರ್ಕ ಬಂದ ಮೇಲೆ, ವೈದ್ಯಕೀಯ ವೃತ್ತಿಯ ಜೊತೆಗೆ ರಂಗನಂಟಿನ ಆಸಕ್ತಿಯೇ ಹೆಚ್ಚಾಯಿತು. ಹವ್ಯಾಸಿ ಕಲಾವಿದರಾಗಿ ಸುಮಾರು ೨೫ ಕ್ಕೂ ಹೆಚ್ಚು ನಾಟಕಗಳಲ್ಲಿ ಪಾತ್ರ ಮಾಡಿ, ಜನಾಕರ್ಷಣೆಗೆ ಒಳಗಾದ ನಟನೆಯು ತೃಪ್ತಿ ತಂದಿದೆ ಎಂದು ಹೇಳಿದರು.
‘ಸೇಡಂ ತಾಲೂಕಿನ ಆಡಕಿ ಎಂಬೋ ಹಳ್ಳಿಯಲ್ಲಿ ಸಹೋದರನ ನಿರ್ದೇಶನದಲ್ಲಿಯೇ ಮೊದಲ ಬಾರಿಗೆ ಬಣ್ಣ ಹಚ್ಚಿದ್ದು ನಾಲ್ಕನೇ ತರಗತಿಯಲ್ಲಿ. ‘ಬಿರುಗಾಳಿ’ ಎಂಬ ನಾಟಕದಲ್ಲಿ ಪಾತ್ರ ಮಾಡಿದ ನಂತರ, ಪ್ರೇಕ್ಷಕರಿಂದ ಬಂದಿರುವ ಚಪ್ಪಾಳೆ, ಹೊಗಳಿಕೆಯ ನುಡಿಗಳಿಂದಾಗಿ ಈ ವಯಸ್ಸಿನಲ್ಲೂ ನಾಟಕ ಮಾಡುವ ಹುಮ್ಮಸ್ಸು ನೀಡಿದೆ. ಕಲಬುರಗಿ ಮತ್ತು ಬಳ್ಳಾರಿಯಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುವಾಗಲೂ ಕಾಲೇಜಿನಲ್ಲಿ ನಾಟಕಗಳನ್ನು ಆಡಿದ್ದು, ಚಿರೋಟಿ ಎಂಬ ಪಾತ್ರ ಮಾಡಿದ್ದಕ್ಕಾಗಿ ವಿದ್ಯಾರ್ಥಿ ಜೀವನ ಮುಗಿಯುವರೆಗೂ ಎಲ್ಲರಿಂದಲೂ ‘ಚಿರೋಟಿ’ ಎಂದು ಅಭಿದಾನವನ್ನು ಪಡೆದಿದ್ದು ವೈಯಕ್ತಿಕವಾಗಿ ಸಂತಸ ತಂದಿದೆ ಎಂದರು.
ವೈದ್ಯ ಪದವಿ ಪಡೆದು ಸೇಡಂನಲ್ಲಿ ಆಸ್ಪತ್ರೆ ಶುರುಮಾಡಿದ ನಂತರವೂ ನಾಟಕದ ಬಗ್ಗೆ ಆಸಕ್ತಿಯಿತ್ತು. ಅದು ೧೯೮೬ ರ ಹೊತ್ತಿಗೆ ನೀನಾಸಂ ಹೆಗ್ಗೋಡಿನಿಂದ ತರಬೇತಿ ಪಡೆದು ಬಂದಿದ್ದ ಪ್ರಭಾಕರ ಜೋಶಿ ಅವರ ನಿರ್ದೇಶನದಲ್ಲಿ ನಾಟಕಗಳಲ್ಲಿ ಅಭಿನಯಿಸಿದೆ. ಹೀಂಗೋಂದೂರಾಗ, ಅನ್ಯಥಾ ಶರಣಂ ನಾಸ್ತಿ, ನಾಯೀಕತೆ, ಕಫನ್, ಮಲ್ಲಾಪುರದ ಡಿಗ್ರಿ ಕಾಲೇಜು ಹೀಗೆ ಅನೇಕ ನಾಟಕಗಳಲ್ಲಿ ಪಾತ್ರ ಮಾಡಿದೆ. ಕೇವಲ ಹವ್ಯಾಸಿಯಲ್ಲದೇ, ಸಾಮಾಜಿಕ ನಾಟಕಗಳಲ್ಲೂ ಅಭಿನಯಿಸಿದ್ದನ್ನು ನೆನಪು ಮಾಡಿಕೊಂಡ ಅವರು, ಶಿವಯ್ಯ ಸ್ವಾಮಿ ಬಿಬ್ಬಳ್ಳಿ ನಿರ್ದೇಶನದಲ್ಲಿ ನಮ್ಮೂರ ನ್ಯಾಯ ದೇವರು ಮತ್ತು ಸದ್ಭಾವನಾ ಮೂರ್ತಿ ಸಪ್ಪಣ್ಣಾರ್ಯ ನಾಟಕದಲ್ಲಿ ಮಾಡಿದ ಅಭಿನಯ ಜನಮಾನಸವನ್ನು ಸೆಳೆಯಿತು. ಟೆಂಗಳಿ ಮತ್ತು ಕೊಂತನಪಲ್ಲಿ ಗ್ರಾಮದಲ್ಲಿ ನಡೆದ ನಾಟಕಗಳಲ್ಲಿನ ಕೆಲವು ಹಾಸ್ಯಪ್ರಸಂಗಗಳನ್ನು ನೆನಪಿಸಿಕೊಂಡರು.
ನೃಪತುಂಗ ಮತ್ತು ಶಯನಗೃಹದ ಶನಿ ಎಂಬ ರೇಡಿಯೋ ನಾಟಕಗಳಲ್ಲಿಯೂ ಅಭಿನಯಿಸಿದ್ದನ್ನು ಹೇಳಿದ ಅವರು, ತಮ್ಮ ಮನೆಯ ಸಹೋದರರು, ಪತ್ನಿ ಮತ್ತು ಪ್ರಭಾಕರ ಜೋಶಿ, ಸಿದ್ದಪ್ಪ ತಳ್ಳಳ್ಳಿ, ಮಹಿಪಾಲರೆಡ್ಡಿ, ಸುನೀಲ ನಿರ್ಣಿ ಸೇರಿದಂತೆ ಅನೇಕರು ಈ ರಂಗಪಯಣದಲ್ಲಿ ಸಹಕಾರ ನೀಡಿದ್ದಾರೆ ಎಂದು ಸ್ಮರಿಸಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಅವರು ಮಾತನಾಡಿ, ವೃತ್ತಿಯಲ್ಲಿ ವೈದ್ಯರಾದರೂ ಪ್ರವೃತ್ತಿಯಲ್ಲಿ ರಂಗಭೂಮಿ ನಂಟು ಹೊಂದಿರುವ ಡಾ.ದೇಶಪಾಂಡೆ ಅವರ ರಂಗ ಪಯಣದ ಜೊತೆಗೆ ನಾವೆಲ್ಲ ಜೊತೆಗಿದ್ದೇವೆ ಎಂಬುದೇ ಸಂಭ್ರಮ ಪಡಬೇಕಾದ ಸಂಗತಿ ಎಂದರು.
ರಂಗಾಯಣ ಆಡಳಿತಾಧಿಕಾರಿ ದತ್ತಪ್ಪ ಸಾಗನೂರ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ರಂಗಾಯಣ ಪರವಾಗಿ ಡಾ.ದೇಶಪಾಂಡೆ ಅವರನ್ನು ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಸತ್ಕರಿಸಿದರು. ಹಿರಿಯರಾದ ವೆಂಕಟರಾವ ದೇಶಪಾಂಡೆ, ಭೀಮಸೇನ, ದಾಮೋದರ ಮತ್ತು ರಾಧಾ ಎಂ.ದೇಶಪಾಂಡೆ, ಡಾ.ವಾಸುದೇವ ಅಗ್ನಿಹೋತ್ರಿ, ಡಾ.ಚಂದ್ರಕಲಾ ಬಿದರಿ, ಡಾ.ಆರ್.ರಾಮದುರ್ಗ, ಹಿರಿಯ ರಂಗಕರ್ಮಿ ಎಚ್.ಎಸ್.ಬಸವಪ್ರಭು, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್, ಕೆರಳ್ಳಿ ಗುರುನಾಥರೆಡ್ಡಿ ಪ್ರತಿಷ್ಠಾನ ಅಧ್ಯಕ್ಷ ಸಿದ್ದಪ್ಪ ತಳ್ಳಳ್ಳಿ, ರಾಜ್ಯೋತ್ಸವ ಪುರಸ್ಕೃತ ಸಂಗೀತ ಕಲಾವಿದ ಬಾಬುರಾವ ಕೋಬಾಳ, ಲೇಖಕ ಸಂತೋಷ ತೊಟ್ನಳ್ಳಿ, ನಾಟಕ ಅಕಾಡೆಮಿ ಮಾಜಿ ಸದಸ್ಯ ಸಂದೀಪ, ಹಿರಿಯ ಸಾಹಿತಿ ನರಸಿಂಗರಾವ ಹೇಮನೂರು, ಸೇಡಂ ಕಸಾಪ ಅಧ್ಯಕ್ಷ ಅನಿಲ ಸಕ್ರಿ, ವಿಜಯಭಾಸ್ಕರರೆಡ್ಡಿ ಇದ್ದರು. ಅಕ್ಷತಾ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು. ಮರಿಯಮ್ಮ ಮತ್ತು ಭಾಗ್ಯ ರಂಗಗೀತೆ ಹಾಡಿದರು. ರಂಗಾಯಣ ಕಲಾವಿದರು ಸೇರಿದಂತೆ ಇತರರು ಭಾಗವಹಿಸಿದ್ದರು.
ಅದು ೧೯೮೭ ರ ಸಂದರ್ಭ. ಪ್ರಭಾಕರ ಜೋಶಿ ಅವರು ಬರೆದು ನಿರ್ದೇಶಿಸಿದ ನಾಟಕ ‘ಅನ್ಯಥಾ ಶರಣಂ ನಾಸ್ತಿ’. ಅದನ್ನು ಸೇಡಂನಲ್ಲಿ ಪ್ರಯೋಗಿಸಲಾಗಿತ್ತು. ಅದೇ ನಾಟಕವನ್ನು ಕಲಬುರಗಿಯ ಶ್ರೀ ಶರಣಬಸವೇಶ್ವರರ (ಅಪ್ಪನ) ಜಾತ್ರೆಯಲ್ಲಿ ಪ್ರದರ್ಶನಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅವಕಾಶ ಸಿಕ್ಕಿತ್ತು. ಅಪ್ಪನ ಗುಡಿಯ ಆವರಣದಲ್ಲಿಯೇ ಈ ನಾಟಕದಲ್ಲಿ ಜಗದ್ಗುರು ಪಾತ್ರ ತಮ್ಮದಾಗಿತ್ತು ಎಂದು ಹೇಳಿದ ಡಾ.ದೇಶಪಾಂಡೆ, ತಮ್ಮ ಪಾತ್ರವನ್ನು ಗಮನಿಸಿದ ಅನೇಕರು, ಟೆಂಗು, ಊದುಬತ್ತಿ ಹಿಡಿದು ತಮ್ಮ ಮುಂದೆ ತಂದಿಟ್ಟರು.
ದೀರ್ಘದಂಡ ನಮಸ್ಕಾರ ಹಾಕಿದ್ದರು. ಇದೆಲ್ಲವನ್ನೂ ಗಮನಿಸಿ, ನಿರ್ದೇಶಕ ಜೋಶಿಯವರ ಕಡೆ ನೋಡಿದೆ. ಅವರು ಸುಮ್ಮನಿರಿ ಎಂದು ಸನ್ನೆ ಮಾಡಿದರು. ಜರತಾರಿ ಜಗದ್ಗುರುವಿನ ಪಾತ್ರದಲ್ಲಿ ನೋಡಿದ ತಮ್ಮನ್ನು ನಿಜವಾದ ಜಗದ್ಗುರುಗಳೆಂದು ಭಾವಿಸಿದ್ದರು. ಇದು ತಮ್ಮ ಪಾತ್ರ, ನಟನೆ ಮತ್ತು ವೇಷಭೂಷಣಕ್ಕೆ ಸಿಕ್ಕಿದ್ದು ಎಂದು ಮನದಿಂಗಿತವನ್ನು ಬಿಚ್ಚಿಟ್ಟರು.
ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…
ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…
ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…
ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…
ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…