ಕಲಬುರಗಿ: ಗುರುಗಳನ್ನು ದೇವರನ್ನಾಗಿ ಮಾಡಿದರೆ ಅವರು ಕಲ್ಲಾಗುತ್ತಾರೆ. ನೀವು ಕಲ್ಲಾಗುತ್ತೀರಿ. ಗುರುಗಳನ್ನು ಕಲ್ಲಾಗಿಸದೆ, ನೀವೂ ಕಲ್ಲಾಗದೆ ಪ್ರಶ್ನಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎನ್ನುವ ಹೊಸ ಸಂದೇಶ ಈ ಮೂರು ಕೃತಿಗಳಲ್ಲಿದೆ ಎಂದು ಹಿರಿಯ ಸಾಹಿತಿ ಡಾ. ಅರವಿಂದ ಮಾಲಗತ್ತಿ ಹೇಳಿದರು.
ಪ್ರೊ. ಮಲ್ಲೇಪುರಂ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಕುಟುಂಬ ಪ್ರಕಾಶನ ಇವುಗಳ ಸಹಯೋಗದಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಪ್ರೊ. ಎಚ್.ಟಿ. ಪೋತೆಯವರ ಬಿ. ಶ್ಯಾಮಸುಂದರ ಜೀವನ ಕಥನ, ದಲಿತ ಅಸ್ಮಿತೆ ಹಾಗೂ ಕನ್ನಡ ಜಾನಪದ ಶಾಸ್ತ್ರ ಗ್ರಂಥಗಳ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಸಮಾಜವನ್ನು, ನಾಡನ್ನು ಪುನರ್ ರಚಿಸುವ ದಿಕ್ಕಿನೆಡೆಗೆ ಹೋಗಬೇಕು, ನಮ್ಮ ಚಿಂತನೆಗಳು ಹರಿವ ನೀರಾಗಬೇಕು ಎಂಬುದನ್ನು ಈ ಮೂರೂ ಕೃತಿಗಳು ಹೇಳುತ್ತವೆ ಎಂದರು.
ಹೊಸ ಶಿಕ್ಷಣ ನೀತಿಯ ಬಗೆಗಿನ ಇವರ ಲೇಖನವು ಅಂಬೇಡ್ಕರ್ ಅವರ ಶೈಕ್ಷಣಿಕ ನೀತಿಗಳ ಕಡೆ ಬೆರಳು ಮಾಡಿ ತೋರಿಸುವಂತಿದೆ. ಜಡತ್ವದ ಪ್ರಜ್ಞೆಗಿಂತ ಹಿಡಿದಿಡುವ ಪ್ರಜ್ಞೆ ಅಗಾಧವಾದದು. ದಲಿತ ಅಸ್ಮಿತೆಯ ಜೊತೆಗೆ ಅಂಬೇಡ್ಕರ್ ವಿಚಾರಧಾರೆಯನ್ನು ಸಮಾಜದಲ್ಲಿ ಮತ್ತೊಮ್ಮೆ ಬಿತ್ತಿದ ದಿಟ್ಟ ಹೋರಾಟಗಾರ ಬಿ. ಶ್ಯಾಮಸುಂದರ ಅವರ ಜೀವನ ಕಥನ ಇಂದಿನ ಹೋರಾಟಗಾರಿಗೆ ಸ್ಫೂರ್ತಿಯಾಗಿದೆ. “ಜ್ಞಾನದ ಮೂಲ ಸೆಲೆ ಜ್ಞಾನ; ಜ್ಞಾನದ ಮೂಲಧಾತು ಜ್ಞಾನ” ಎನ್ನುವ ನುಡಿಗಟ್ಟಿನ ರೀತಿಯ ಬರಹ ಕನ್ನಡ ಜಾನಪದ ಶಾಸ್ತ್ರ ಕೃತಿಯಲ್ಲಿದ್ದು, ಪ್ರೊ. ಪೋತೆ ಅವರು ಬಹುಶ್ರುತ ಚಿಂತನೆ ಹೊಂದಿದ ಲೇಖಕ. ಅವರ ಎಲ್ಲ ಬರಹಗಳಲ್ಲಿ ಅಂಬೇಡ್ಕರ್ ಧಾರೆಯನ್ನು ಗುರುತಿಸಬಹುದಾಗಿದೆ ಎಂದು ವಿವರಿಸಿದರು.
ಕೃತಿಗಳ ಕುರಿತು ಮಾತನಾಡಿದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಡಾ. ಕಿರಣ ಗಾಜನೂರ, ಈ ಮೂರು ಕೃತಿಗೆ ಅಸ್ಮಿತೆ, ಶಿಸ್ತು, ವ್ಯಕ್ತಿತ್ವ ಹೀಗೆ ಒಂದಕ್ಕೊಂದು ಅಂತರ್‌ಸಂಬಂಧವಿದೆ. ದಲಿತ ಅಸ್ಮಿತೆ ಕೃತಿಯು “ನಾವು ಅಂಬೇಡ್ಕರ್ ಅವರ ಅಮಲಿನಲ್ಲಿದ್ದೇವೆ. ಆದರೆ ಅಂಬೇಡ್ಕರ್ ಅವರ ಅರಿವಿಗೆ ಬರಬೇಕು” ಎನ್ನುವ ಸಂದೇಶ ಸಾರುವಂತಿದೆ. “ವರ್ತಮಾನದ ದಲಿತರ ಸಮಸ್ಯೆ ಹಸಿನಿಂದಷ್ಟೇ ಅಲ್ಲ, ಅಪಮಾನದ ಪ್ರಶ್ನೆಯಾಗಿದೆ ಎಂಬ ಗೋಪಾಲಗುರವಿನ ಮಾತನ್ನು ಬಿ. ಶ್ಯಾಮಸುಂದರ ಜೀವನ ಕಥನ ಕೃತಿಯಲ್ಲಿ ಕಾಣಬಹುದು. ಜಾನಪದ ಶಾಸ್ತ್ರ ಕೃತಿಯಲ್ಲಿ ಲೋಕದೃಷ್ಟಿಯನ್ನು ಕಾಣಬಹುದು ಎಂದು ವಿಶ್ಲೇಷಿಸಿದರು. ಕೃತಿಗಳ ಲೇಖಕರಾದ ಪ್ರೊ. ಎಚ್.ಟಿ. ಪೋತೆ ಮಾತನಾಡಿ, ಬದುಕಿನಲ್ಲಿ ಅನುಭವಿಸಿದ ಕಷ್ಟ, ಅಪಮಾನಗಳೇ ನನಗೆ ಈ ಮಟ್ಟಿಗೆ ಬರೆಯಲು, ಬೆಳೆಯಲು ಕಾರಣವಾಗಿವೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಪ್ರಾಧ್ಯಾಪಕ ಡಾ. ಬಸವರಾಜ ಸಬರದ, ದಲಿತ, ಜನಪದ ಹಾಗೂ ಹೋರಾಟ ಈ ಮೂರು ಲೋಕಗಳು ಒಂದಂಕ್ಕೊಂದು ಪೂರಕ ಹಾಗೂ ಪ್ರೇರಕವಾಗಿದ್ದು, ಈ ಮೂರಕ್ಕೂ ಬುದ್ಧ, ಬಸವ, ಅಂಬೇಡ್ಕರ್ ಮುಂತಾದವರ ವಿಚಾರಗಳೇ ಕೊಂಡಿಯಾಗಿವೆ ಎಂದು ತಿಳಿಸಿದರು. ಪ್ರೊ. ಮಲ್ಲೇಪುರಂ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಡಾ. ಶ್ರೀಶೈಲ ನಾಗರಾಳ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಪ್ರತಿಷ್ಠಾನದ ಕಾರ್ಯದರ್ಶಿ, ಡಾ. ಎಂ. ಬಿ. ಕಟ್ಟಿ, ಕುಟುಂಬ ಪ್ರಕಾಶನದ ಡಾ. ರಮೇಶ ಪೋತೆ ವೇದಿಕೆಯಲ್ಲಿದ್ದರು. ಡಾ. ಸಂತೋಷ ಕಂಬಾರ ನಿರೂಪಿಸಿದರು. ಡಾ. ಸಿದ್ಧಲಿಂಗ ದಬ್ಬಾ ವಂದಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…