ಬಿಸಿ ಬಿಸಿ ಸುದ್ದಿ

ಕರೋನಾ ಪ್ರವಾಹ ಚುನಾವಣೆ : ಸಮಗ್ರ ನೋಟ 2021 ; ಕರ್ನಾಟಕ ರಾಜಕೀಯ ನೋಟ

  • ಕುಶಲ

ರಾಜ್ಯದ ಪಾಲಿಗೆ 2021 ಹರ್ಷದಾಯಕ ವರ್ಷವೇನೂ ಆಗಿರಲಿಲ್ಲ. ಸಂಕಷ್ಟಗಳ ಸರಮಾಲೆಯೇ ಎದುರಾಯಿತು. ಮುಂದುವರಿದ ಕರೊನಾ ಬಾಧೆ, ಪ್ರವಾಹ ಹಾಗೂ ವ್ಯಾಪಕ ಹಾನಿ ಜನರನ್ನು ಕಂಗೆಡಿಸಿದವು. ಮತ್ತೊಂದೆಡೆ ಸಾಲು ಸಾಲು ಚುನಾವಣೆಗಳು ಬಂದವು.

ಸಂಕಷ್ಟ ಪ್ರವಾಹದಿಂದ ಅಪಾರ ಹಾನಿ :

ಈ ವರ್ಷ ಭರ್ಜರಿ ಮಳೆಯಿಂದ ಕೆರೆಕಟ್ಟೆಗಳು ತುಂಬಿ, ಅಂತರ್ಜಲ ವೃದ್ಧಿಯಾಗಿದೆ. ಆದರೆ ಹಾನಿಯೂ ಅಪಾರವಾಗಿದೆ. ಜುಲೈನಿಂದ ಸೆಪ್ಟಂಬರ್ ತನಕ ಹಾಗೂ ಅಕ್ಟೋಬರ್ ಹಾಗೂ ಡಿಸೆಂಬರ್​ನಲ್ಲಿ 12 ಲಕ್ಷ ಹೆಕ್ಟೇರ್​ಗೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ಸಾವಿರಾರು ಮನೆಗಳು ಬಿದ್ದಿವೆ. ಎರಡು ಅವಧಿಯ ಪ್ರವಾಹದಿಂದಾಗಿ ಸುಮಾರು 20 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ನಷ್ಟವಾಗಿದೆ. ರಾಜ್ಯ ಸರ್ಕಾರವೇ ಇನ್​ಪುಟ್ ಸಬ್ಸಿಡಿಯನ್ನು ರೈತರಿಗೆ ನೀಡುತ್ತಿದ್ದು, ಸುಮಾರು 1200 ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತ ನೀಡಿದೆ. ಕೇಂದ್ರದಿಂದ ಎರಡು ಬಾರಿ ಅಧ್ಯಯನ ತಂಡ ಬಂದಿದ್ದರೂ ಹೆಚ್ಚಿನ ಉಪಯೋಗ ಆಗಿಲ್ಲ.

ಕಾಡಿದ ಕರೊನಾ :

ಕರೊನಾದ ಎರಡನೇ ಅಲೆ 2021ರ ಆರಂಭದಲ್ಲಿಯೇ ಕಾಡಲಾರಂಭಿಸಿತು. ರಾಜ್ಯದಲ್ಲಿ ಈ ವರ್ಷ 20.85 ಲಕ್ಷ ಜನರಿಗೆ ಸೋಂಕು ತಗುಲಿದರೆ, 26,222 ಜನ ಮೃತರಾಗಿದ್ದಾರೆ. ಬೆಂಗಳೂರಿನಂತಹ ಮಹಾನಗರದಲ್ಲಿ ಶವದಹನಕ್ಕೆ ಪ್ರತ್ಯೇಕವಾದ ಬಯಲು ಚಿತಾಗಾರವನ್ನೇ ಸರ್ಕಾರ ನಿರ್ಮಾಣ ಮಾಡುವ ಸ್ಥಿತಿ ಉಂಟಾಗಿತ್ತು. ಬಹುತೇಕ ಎಲ್ಲ ಕಡೆ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಸಿಗದೆ ಪರದಾಟ ಪರಿಸ್ಥಿತಿ ನಿರ್ವಣವಾಗಿತ್ತು. ಆರೋಗ್ಯ ಕ್ಷೇತ್ರದ ಮೂಲಸೌಕರ್ಯ ಇನ್ನೂ ಹೆಚ್ಚಬೇಕಾದ ಅಗತ್ಯವನ್ನು ಇದು ಸಾರಿತು.

ಸರ್ಕಾರಕ್ಕೆ ಆರ್ಥಿಕ ಸಂಕಷ್ಟ :

ಕರೊನಾ ಹಾಗೂ ಪ್ರವಾಹದಿಂದಾಗಿ ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟಕ್ಕೆ ತುತ್ತಾಗುತ್ತಿದೆ. ರಾಜ್ಯದಲ್ಲಿ ಲಾಕ್​ಡೌನ್ ಸಡಿಲವಾದ ನಂತರ ಉದ್ದಿಮೆಗಳು ಚೇತರಿಸಿಕೊಂಡಿದ್ದರೂ ಮೊದಲಿನ ಸ್ಥಿತಿಗೆ ಬಂದಿಲ್ಲ. ಇದರ ಜತೆಗೆ ಕೇಂದ್ರದಿಂದ ತೆರಿಗೆ ಪಾಲು ಹಾಗೂ ಸಹಾಯಧನಗಳು ಕಡಿಮೆ ಆಗಿದ್ದು, ಮತ್ತೊಂದೆಡೆ ಸರ್ಕಾರದ ವೆಚ್ಚ ಹೆಚ್ಚಾಗಿದೆ. ಈ ಸಾಲಿನಲ್ಲಿ 15,134 ಕೋಟಿ ರೂ.ಗಳ ರಾಜಸ್ವ ಕೊರತೆ, 59,240 ಕೋಟಿ ರೂ. ವಿತ್ತೀಯ ಕೊರತೆಯ ಜತೆಗೆ ಸಾಲ ಹೆಚ್ಚಳದಿಂದ ಬಡ್ಡಿಯ ಪಾವತಿ ಎರಡೇ ವರ್ಷದಲ್ಲಿ ಸುಮಾರು 10 ಸಾವಿರ ಕೋಟಿ ರೂ. ಹೆಚ್ಚಾಗಿದೆ. ಸರ್ಕಾರ ಈ ವರ್ಷ ಇದುವರೆಗೆ ಮುಕ್ತ ಮಾರುಕಟ್ಟೆಯಲ್ಲಿ 67,100 ಕೋಟಿ ರೂ. ಸಾಲ ಮಾಡಿದೆ.

ಬಿಸಿಯೇರಿಸಿದ ಕಾಯ್ದೆಗಳು :

ಎರಡು ಕಾಯ್ದೆಗಳು ಚರ್ಚೆಗೆ ಒಳಪಟ್ಟವು. ಗೋಹತ್ಯೆ ನಿಷೇಧ ಕಾಯ್ದೆ ವಿಚಾರವಾಗಿ ಪರ ವಿರೋಧ ಚರ್ಚೆಯಾಗಿ ಅನುಷ್ಠಾನಗೊಂಡಿತು. ವರ್ಷದ ಕೊನೆಗೆ ಮತಾಂತರ ನಿಷೇಧ ಕಾಯ್ದೆ ವಿಧಾನಸಭೆಯಲ್ಲಿ ಅಂಗೀಕಾರವಾಗಿದೆ. ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಭೂ ಸುಧಾರಣಾ ಕಾಯ್ದೆ ಹಾಗೂ ಎಪಿಎಂಸಿ ಕಾಯ್ದೆ ತಿದ್ದುಪಡಿ ಒತ್ತಾಯಕ್ಕೆ ರಾಜ್ಯ ಸರ್ಕಾರ ಸೊಪುಪ ಹಾಕಿಲ್ಲ.

ಆಡಳಿತಾಧಿಕಾರಿಗಳ ನೇಮಕ :

ಜಿಲ್ಲಾ ಹಾಗೂ ತಾಲೂಕ ಪಂಚಾಯಿತಿಗಳ ಅವಧಿ ಮುಗಿದಿದೆ. 6 ತಿಂಗಳೊಳಗೆ ಚುನಾವಣೆ ನಡೆಸಬೇಕೆಂದು ಕಾನೂನಿದೆ. ಆದರೆ ಸರ್ಕಾರ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿ ಅವರ ಅವಧಿ ವಿಸ್ತರಣೆ ಮಾಡಿದೆ. ಚುನಾವಣೆ ಮುಂದೂಡುವ ಉದ್ದೇಶದಿಂದಲೇ ನಿವೃತ್ತ ಅಧಿಕಾರಿ ಎಂ. ಲಕ್ಷ್ಮೀನಾರಾಯಣ ಅಧ್ಯಕ್ಷತೆಯಲ್ಲಿ ಕ್ಷೇತ್ರ ಮರು ವಿಂಗಡಣಾ ಆಯೋಗವನ್ನು ರಚಿಸಿದೆ.

ಸಿಡಿ ರಗಳೆ :

ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಅವರದ್ದೆನ್ನಲಾದ ಸಿಡಿ ಮಾರ್ಚ್ 2ಕ್ಕೆ ಹೊರಬಂದು ಸದ್ದು ಮಾಡಿತು. ಅವರು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಅದರ ಬೆನ್ನ ಹಿಂದೆಯೇ ಸಂಪುಟದ 19 ಜನ ಸಚಿವರ ಸಿಡಿಗಳಿವೆ ಎಂಬ ಮಾತು ಕೇಳಿ ಬಂದಿದ್ದವು. 8 ಜನ ಸಚಿವರು ತರಾತುರಿಯಲ್ಲಿ ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದುಕೊಂಡು ಚರ್ಚೆಗೆ ಕಾರಣವಾದರು.

ರೈತರ ಹೋರಾಟ: ಕೇಂದ್ರ ಸರ್ಕಾರ ತಂದಿದ್ದ ಕೃಷಿ ಕಾಯ್ದೆ ಗಳನ್ನು ವಿರೋಧಿಸಿ ದೆಹಲಿಯಲ್ಲಿ ಒಂದೂವರೆ ವರ್ಷ ರೈತರು ಪ್ರತಿಭಟನೆ ನಡೆಸಿದರು. ರಾಜ್ಯದಿಂದಲೂ ಅನೇಕರು ಭಾಗವಹಿಸಿದ್ದರು. ರಾಜ್ಯದಲ್ಲೂ ದೆಹಲಿಯ ಚಳವಳಿಯನ್ನು ಬೆಂಬಲಿಸಿ ಸಾಕಷ್ಟು ಪ್ರತಿಭಟನೆ ನಡೆದವು. ಕೆಲವು ರಾಜಕೀಯ ಪಕ್ಷಗಳು ಬೆಂಬಲ ನೀಡಿದವು.

ಸಾಲು ಸಾಲು ಚುನಾವಣೆ :

2021ರಲ್ಲಿ ಸಾಲು ಸಾಲು ಚುನಾವಣೆಗಳು ನಡೆದವು. ವರ್ಷದ ಆರಂಭದಲ್ಲಿಯೇ ಬೆಳಗಾವಿ ಲೋಕಸಭೆ, ಬಸವಕಲ್ಯಾಣ ಹಾಗೂ ಮಸ್ಕಿ ಕ್ಷೇತ್ರಗಳ ಉಪ ಚುನಾವಣೆ ನಡೆಯಿತು. ಬೆಳಗಾವಿಯಲ್ಲಿ ಬಿಜೆಪಿ ಪ್ರಯಾಸದಿಂದ ಗೆದ್ದರೆ, ಬಸವಕಲ್ಯಾಣದಲ್ಲಿ ಉತ್ತಮ ಸಾಧನೆ ಮಾಡಿತು. ಮಸ್ಕಿಯಲ್ಲಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಸ್ಥಾನ ಉಳಿಸಿಕೊಂಡಿತು. ಬೆಳಗಾವಿ, ಕಲಬುರಗಿ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಕೆಲ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಿತು. ಬೆಳಗಾವಿಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಬಂದರೆ, ಕಲಬುರಗಿಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗಳಿಸಿತು. ಹುಬ್ಬಳಿಯಲ್ಲಿ ಬಿಜೆಪಿ ಕಳೆದುಕೊಂಡಿದ್ದೆ ಹೆಚ್ಚು.

ಇದರ ಬೆನ್ನ ಹಿಂದೆಯೇ ಸಿಂಧಗಿ ಹಾಗೂ ಹಾನಗಲ್ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆಯ ಹಾನಗಲ್​ನಲ್ಲಿ ಬಿಜೆಪಿ ಸೋತು ಕಾಂಗ್ರೆಸ್ ಗೆದ್ದರೆ, ಸಿಂಧಗಿಯಲ್ಲಿ ಬಿಜೆಪಿ ಗೆಲುವು ಸಾಧಿಸಿತು. ವಿಧಾನ ಪರಿಷತ್​ಗೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ 25 ಸ್ಥಾನಗಳಿಗೆ ಚುನಾವಣೆ ನಡೆಯಿತು. ಬಿಜೆಪಿ ಹಾಗೂ ಕಾಂಗ್ರೆಸ್ ತಲಾ 11, ಜೆಡಿಎಸ್ 2ರಲ್ಲಿ ಗೆದ್ದವು. ಬಿಜೆಪಿಯ ಅಧಿಕೃತ ಅಭ್ಯರ್ಥಿ ಎದುರು ಪಕ್ಷೇತರ ಲಖನ್ ಜಾರಕಿಹೊಳಿ ಗೆಲುವು ಸಾಧಿಸಿದ್ದು ಪಕ್ಷಕ್ಕೆ ಮುಜುಗರವನ್ನುಂಟು ಮಾಡಿತು. ವರ್ಷದ ಕೊನೆಗೆ ಕೆಲವು ಜಿಲ್ಲೆಗಳಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಉಪ ಚುನಾವಣೆ ನಡೆಯಿತು.

ಬಿಜೆಪಿಗೆ ಏಳುಬೀಳು :

ಕೇಂದ್ರ ಸಚಿವರಾಗಿದ್ದ ಸದಾನಂದಗೌಡ ಅವರಿಗೆ ಕೊಕ್ ನೀಡಲಾಯಿತು. ಶೋಭಾ ಕರಂದ್ಲಾಜೆ, ಎ. ನಾರಾಯಣಸ್ವಾಮಿ, ಭಗವಂತ ಖೂಬಾ ಹಾಗೂ ರಾಜೀವ್ ಚಂದ್ರಶೇಖರ್ ಅವರಿಗೆ ಅವಕಾಶ ಸಿಕ್ಕಿದೆ. ಬಿಜೆಪಿಗೆ ಚುನಾವಣೆಗಳಲ್ಲಿ ಸಿಹಿ-ಕಹಿಯ ಅನುಭವವಾಗಿದೆ. ರಾಜ್ಯದಲ್ಲಿ ಖಾಲಿ ಇರುವ ನಾಲ್ಕು ಸಚಿವ ಸ್ಥಾನಗಳ ಭರ್ತಿ ಸಾಧ್ಯವಾಗಿಲ್ಲ. ಜಗದೀಶ ಶೆಟ್ಟರ್, ಲಕ್ಷ್ಮಣ ಸವದಿ, ಯೋಗೇಶ್ವರ್, ಅರವಿಂದ ಲಿಂಬಾವಳಿ, ಶ್ರೀಮಂತ ಪಾಟೀಲ್, ಆರ್. ಶಂಕರ್, ಸುರೇಶ್​ಕುಮಾರ್ ಅವರನ್ನು ಸಂಪುಟದಿಂದ ಹೊರಗಿಟ್ಟು ಆರಗ ಜ್ಞಾನೇಂದ್ರ, ಸುನೀಲ್​ಕುಮಾರ್, ಹಾಲಪ್ಪ ಆಚಾರ್, ಬಿ.ಸಿ. ನಾಗೇಶ್, ಶಂಕರಪಾಟೀಲ್ ಮುನೇನಕೊಪ್ಪ ಅವರಿಗೆ ಅವಕಾಶ ನೀಡಲಾಗಿದೆ. ವಿಧಾನಸಭಾ ಚುನಾವಣೆಗೆ ಒಂದೂವರೆ ವರ್ಷವೂ ಉಳಿದಿಲ್ಲ. ಹೀಗಾಗಿ ಸಂಘಟನೆಯ ದೊಡ್ಡ ಸವಾಲಿದೆ.

ಕೈಯಲ್ಲಿ ಹೊಯ್ದಾಟ :

ಮುಂದಿನ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್ ಉತ್ಸಾಹದಲ್ಲಿ ಸಿದ್ಧವಾಗುತ್ತಿದ್ದರೂ, ಸಂಘಟನೆ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ಪದಾಧಿಕಾರಿಗಳ ನೇಮಕ ಮಾಡಲು ಸಾಧ್ಯವಾಗುತ್ತಿಲ್ಲ. ಚುನಾವಣೆಯಲ್ಲಿ ಒಂದಷ್ಟು ಸ್ಥಾನ ಗೆದ್ದಿದೆ. ಆದರೆ ಪಕ್ಷದಲ್ಲಿ ನಾಯಕರ ನಡುವೆ ಮುಸುಕಿನ ಗುದ್ದಾಟ ನಿಂತಿಲ್ಲ. ಬೇರೆ ಪಕ್ಷದಿಂದ ಅದರಲ್ಲೂ ಜೆಡಿಎಸ್​ನಿಂದ ಸೆಳೆಯುವ ಕಡೆ ಇರುವಷ್ಟು ಆಸಕ್ತಿ ಪಕ್ಷದ ಎರಡನೇ ಹಂತದ ನಾಯಕರನ್ನು ಬೆಳೆಸುವಲ್ಲಿ ಕಂಡುಬರುತ್ತಿಲ್ಲ.

ಬಿಎಸ್​ವೈ ರಾಜೀನಾಮೆ :

ಮುಖ್ಯಮಂತ್ರಿ ಹುದ್ದೆಯಿಂದ ಬಿ.ಎಸ್. ಯಡಿಯೂರಪ್ಪ ಅವರನ್ನು ಕೆಳಗಿಳಿಸಿದ್ದು ಪ್ರಮುಖ ಬೆಳವಣಿಗೆ. 2021ರ ಆರಂಭದಿಂದಲೂ ಮುಖ್ಯಮಂತ್ರಿ ಬದಲಾವಣೆ ಸುದ್ದಿ ಸದ್ದು ಮಾಡಿತ್ತು. ಬಿಎಸ್​ವೈ ಅಧಿಕಾರದ ಎರಡು ವರ್ಷ ತುಂಬುವ ಜುಲೈ 26 ರಂದು ಕಣ್ಣೀರು ಹಾಕುವ ಮೂಲಕ ರಾಜೀನಾಮೆ ಘೋಷಣೆ ಮಾಡಿದ್ದು ನಾನಾ ಅರ್ಥಗಳನ್ನು ಕಲ್ಪಿಸಿತು. ಯಡಿಯೂರಪ್ಪ ಅವರ ಉತ್ತರಾಧಿಕಾರಿಯಾಗಿ ಬಸವರಾಜ ಬೊಮ್ಮಾಯಿ ಜುಲೈ 29 ರಂದು ಅಧಿಕಾರ ಸ್ವೀಕರಿಸಿದರು. ತಮ್ಮೊಂದಿಗೆ 29 ಜನರನ್ನು ಸಂಪುಟಕ್ಕೆ ತೆಗೆದುಕೊಂಡರು.

ಸೊರಗುತ್ತಿರುವ ಜೆಡಿಎಸ್ :

ಜೆಡಿಎಸ್ ಸೊರಗುತ್ತಲೇ ಇದೆ. ಉಪ ಚುನಾವಣೆಯಲ್ಲಿನ ಸೋಲು ಪಕ್ಷದ ಕಾರ್ಯಕರ್ತರನ್ನು ಹೈರಾಣು ಮಾಡಿದೆ. ನಾಯಕತ್ವ ತೆಗೆದುಕೊಳ್ಳುವ ಕೆಲ ನಿರ್ಧಾರಗಳು ಪಕ್ಷಕ್ಕೆ ಲಾಭಕ್ಕಿಂತ ನಷ್ಟಕ್ಕೆ ಕಾರಣವಾಗಿವೆ. ಕುಮಾರಸ್ವಾಮಿ ಅವರ ತೋಟದಲ್ಲಿ ಕಾರ್ಯಾಗಾರ ನಡೆಸಲಾಗಿದೆ. ಅದರ ಪರಿಣಾಮವನ್ನು ಕಾದುನೋಡಬೇಕಿದೆ.

ಜನಸಾಮಾನ್ಯರ ಸಿಎಂ :

ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕರಿಸಿದ ಆರಂಭದಲ್ಲಿ ಕೈಗೊಂಡ ಕೆಲವು ನಿರ್ಧಾರಗಳು ಅವರನ್ನು ಜನಸಾಮಾನ್ಯರ ಮುಖ್ಯಮಂತ್ರಿ ಎಂದು ಬಿಂಬಿಸಿದವು. ಗಾರ್ಡ್ ಆಫ್ ಆನರ್​ಗೆ ನಿಯಂತ್ರಣ, ಪುಸ್ತಕ ಕೊಡುಗೆ, ಜಿರೋ ಟ್ರಾಫಿಕ್ ನಿರಾಕರಣೆ, ರೈತ ಮಕ್ಕಳ ವಿದ್ಯಾನಿಧಿಯಂತಹ ಕಾರ್ಯಕ್ರಮಗಳು ಅವರ ಬಗ್ಗೆ ವಿಶ್ವಾಸ ಮೂಡಿಸಿದ್ದವು. ಆದರೆ ಪಕ್ಷದಲ್ಲಿಯೇ ಅವರ ಕಾಲೆಳೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂಬ ಮಾತೂ ಇದೆ. ಬೊಮ್ಮಾಯಿ ಅಧಿಕಾರ ಸ್ವೀಕರಿಸಿದ ದಿನದಿಂದಲೂ ಬದಲಾವಣೆಯ ಸುದ್ದಿ ಹರಿದಾಡುತ್ತಲೇ ಇದೆ. ಅದು ಆಡಳಿತ ಯಂತ್ರದ ಮೇಲೆ ಪರಿಣಾಮ ಬೀರಿದೆ. ಸರ್ಕಾರದಲ್ಲಿ ಸುಮಾರು 1.70 ಲಕ್ಷ ಕಡತಗಳು ವಿಲೇವಾರಿ ಆಗದೇ ಬಾಕಿ ಉಳಿದಿವೆ. ಜಿಲ್ಲಾ ಉಸ್ತುವಾರಿ ಸಚಿವರ ನೇಮಕವಾಗದೇ ತಳಮಟ್ಟದಲ್ಲಿ ಆಡಳಿತ ನಿಯಂತ್ರಣಕ್ಕೆ ಬರುತ್ತಿಲ್ಲ.

ಇತ್ಯಾದಿ :

  • ಕರ್ನಾಟಕ ಮೂಲದ ದತ್ತಾತ್ರೇಯ ಹೊಸಬಾಳೆ ಆರ್​ಎಸ್​ಎಸ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾದರು.
  • ಬಿಟ್ ಕಾಯಿನ್ ಮತ್ತು ಶೇ.40 ಪರ್ಸೆಂಟೇಜ್ ವಿಚಾರಗಳು ಕಾಡಿದವು. ಪ್ರಧಾನಿ ಅಂಗಳಕ್ಕೆ ದೂರು ಹೋದರೂ ವಿಧಾನಸಭೆಯಲ್ಲಿ ಚರ್ಚೆಯಾಗಲಿಲ್ಲ.
  • ಮೈಸೂರು ಗ್ಯಾಂಗ್ ರೇಪ್ ಪ್ರಕರಣ ಸರ್ಕಾರಕ್ಕೆ ಮುಜುಗರ ತಂದಿತು
  • ಕರೊನಾ ಖರೀದಿ, ಸಾರ್ವಜನಿಕ ಲೆಕ್ಕಪತ್ರ ಸಮಿತಿ ಆಕ್ಷೇಪಣೆಗಳು ಆರೋಗ್ಯ ಇಲಾಖೆ ಕಾರ್ಯವೈಖರಿಗೆ ಸಾಕ್ಷಿಯಾದವು
  • ಯಡಿಯೂರಪ್ಪ ಅವರಿಗೆ ಉತ್ತಮ ಶಾಸಕ ಪ್ರಶಸ್ತಿ ನೀಡಲಾಯಿತು.
  • ಗಡಿ ವಿವಾದ ಮತ್ತೆ ಮುನ್ನೆಲೆಗೆ ಬಂತು.
  • ಅಗಲಿದವರು : ಮಾಜಿ ಸಚಿವರಾದ ಸಿ.ಎಂ. ಉದಾಸಿ, ಎಂ.ಸಿ. ಮನಗೂ
emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

7 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

17 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

17 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

17 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago