ಅಂಕಣ ಬರಹ

ಶರಣ ಮಹಾನುಭಾವಿ ಆದಯ್ಯ

ಕನ್ನಡನಾಡು ಬಸವಭೂಮಿ. ಕಲ್ಯಾಣಕರ್ನಾಟಕ ಬಸವಕಲ್ಯಾಣ. ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಕಲಬುರಗಿ.
ಇಲ್ಲಿ ಶರಣಬಸವರು ಮಹಾದಾಸೋಹಿಯಾಗಿ ನೆಲೆ ನಿಂತಿದ್ದಾರೆ. ಕಲ್ಯಾಣ ನೆಲದ, ಮಣ್ಣಿನ ಸ್ಪರ್ಶಕ್ಕೆ ಒಳಗಾದವರೆಲ್ಲ ಶರಣರಾಗಿದ್ದಾರೆ. ಉಡುತಡಿಯಿಂದ ಅಕ್ಕ ಮಹಾದೇವಿ, ಕಂದಹಾರದಿಂದ ಉರಿಲಿಂಗಪೆದ್ದಿ, ಪುಣ್ಯಸ್ತ್ರೀ ಕಾಳವ್ವೆ, ಬಳ್ಳಿಗಾವಿಯಿಂದ ಅಲ್ಲಮಪ್ರಭು, ಅಫಘಾನಿಸ್ಥಾನದಿಂದ ಮರುಳಶಂಕರದೇವರು, ಕಾಶ್ಮೀರದಿಂದ ಮೋಳಿಗೆ ಮಾರಯ್ಯ ದಂಪತಿ ಮುಂತಾದವರು ಬಸವಣ್ಣನವರ ದಿವ್ಯ ದರ್ಶನಕ್ಕಾಗಿ ಕಲ್ಯಾಣದ ಬಸವಣ್ಣನವರ ಅನುಭವ ಮಂಟಪದ ಅಂಗಳಕ್ಕೆ ಕಾಲಿಟ್ಟರು.

ಜನಮನದ ಕಾಳಿಕೆ ಕಳೆಯಲೆಂದೆ ಏಕಕಾಲಕ್ಕೆ ಸಮೂಹ ಸೃಷ್ಟಿಯಾಗಿ ಮೂಡಿಬಂದ ಮುಕ್ತಕಗಳಂತಿವೆ ಅವರು ರಚಿಸಿದ ಮೌಲಿಕವಾದ ವಚನ ಸಾಹಿತ್ಯ. ಅವರಿಗೆ ದೊಡ್ಡ ದೊಡ್ಡ ಮನೆಗಳಿರಲಿಲ್ಲ. ದೊಡ್ಡ ಮನಸ್ಸುಗಳಿದ್ದವು. ಬಸವಣ್ಣ ಅವುಗಳಿಗೆ ಆಕೃತಿ ಕೊಟ್ಟರು. ಅವುಗಳೇ ವಚನಾಕೃತಿಗಳಾದವು. ವಚನಗಳು ಕನ್ನಡದ ಉಪನಿಷತ್ತುಗಳು, ಕನ್ನಡ ಬಾಷೆಯ ಹಿರಿಮೆ-ಗರಿಮೆಯನ್ನು ಆಡು ಬಾಷೆಯಲ್ಲಿ ತಂದವರು ನಮ್ಮ ಶರಣರು. ಅವರಿಂದ ಕನ್ನಡ ಭಾಷೆಯ ಸೌಂದರ್ಯ ಹೆಚ್ಚಾಯಿತು. ಅಚ್ಚ ಕನ್ನಡದ ಬೇಸಾಯಗಾರರು ನಮ್ಮ ಶರಣರು.

ಇಂತಹ ಕಲ್ಯಾಣಕ್ಕೆ ಕಾಲಿಟ್ಟವರಲ್ಲಿ ಸೌರಾಷ್ಟ್ರದಿಂದ ಆಗಮಿಸಿದ ಆದಯ್ಯ ಶರಣರು ಒಬ್ಬರು. ಸರಕುಗಳನ್ನು ಬಂಡಿಯಲ್ಲಿ ಹಾಕಿಕೊಂಡು ಸರಕಿನ ಜೊತೆ ಒಂದಿಷ್ಟು ಜನರನ್ನು ಕರೆದುಕೊಂಡು ವ್ಯಾಪಾರಕ್ಕಾಗಿ ಬಂದಿದ್ದರು. ಬಹಿರಂಗದ ವ್ಯಾಪಾರದ ಮೂಲಕ ಅಂತರಂಗದ ವ್ಯಾಪಾರ ಮಾಡಿಕೊಂಡ ಬಹು ಅಪರೂಪದ ಶರಣರು ಅವರು.ಶರಣರು ತುಂಬ ಬ್ಯಾಲೆನ್ಸಿಂಗ್ ಆದ ಲೋಕ ವ್ಯವಹಾರ ಮಾಡಿದವರು. ಒಮ್ಮನವಾದರೆ ನುಡಿವ, ಇಮ್ಮನವಾದರೆ ನುಡಿಯ ಎನ್ನುವಂತಿದ್ದರು ನಮ್ಮ ಶರಣರು.

ಸೌರಾಷ್ಟ್ರದಿಂದ ಪುಲಿಗೆರೆ ಈಗಿನ ಲಕ್ಷ್ಮೇಶ್ವರಕ್ಕೆ ಆದಯ್ಯ ಶರಣರು ಬಂದರು. ಅಲ್ಲಿ ಜೈನ ಬಸದಿಗಳಿದ್ದವು. ಹೀಗೆ ವ್ಯಾಪಾರ ಮಾಡಲು ಸುತ್ತು ಹಾಕುತ್ತಿರಲು ಮನೆಯ ಎರಡಂತಸ್ತಿನ ಮೇಲೆ ನಿಂತಿದ್ದ “ಪದ್ಮಾವತಿ” ಎಂಬ ಚಲುವೆಯನ್ನು ಕಂಡ. ವ್ಯಾಪಾರಕ್ಕಾಗಿ ಬಂದಿರುವುದನ್ನು ಮರೆತ. ಇಬ್ಬರೂ ಮದವೆಯಾಗಲು ನಿಶ್ಚಯಿಸಿದರು. ಜೈನಳಾಗಿದ್ದ ಆಕೆಯನ್ನು ಲಿಂಗವಂತ ಧರ್ಮ ಸೇರಲು ಕೇಳುತ್ತಾನೆ. ಇದನ್ನು ಅವಳ ತಂದೆ-ತಾಯಿ ಒಪ್ಪಲಿಲ್ಲ. ಒಲಿದು ಒಂದಾದ ಎರಡು ಜೀವಿಗಳಿಗೆ ಸಮಾಜ ಕೊಡುವ ಒಪ್ಪಿಗೆಯೇ ಮದುವೆ ಎನ್ನುವಂತೆ ತಮ್ಮ ಮನಸ್ಸಿನ ಮಾತು ಕೇಳಿ ಇಬ್ಬರೂ ಮದುವೆಯಾದರು.

ಹೀಗೆ ಮಾವನ ಮನೆಯಲ್ಲಿ ಜೀವಿಸುತ್ತಿರಲು, ಕಲ್ಯಾಣದಿಂದ ಹತ್ತಿಪ್ಪತ್ತು ಶರಣರು ಬರುತ್ತಿದ್ದಾರೆ. ಅವರಿಗೆ ಪ್ರಸಾದ ಸಿದ್ಧಪಡಿಸು ಎಂದು ಹೊರ ಹೋದಾಗ, ಪದ್ಮಾವತಿಯ ತಂದೆ ಜೈನರನ್ನು ಮನೆಗೆ ಕರೆ ತಂದು ಊಣಬಡಿಸಿದ್ದ. ನಂತರ ಬಂದ ಕಲ್ಯಾಣದ ಶರಣರಿಗೆ ಪ್ರಸಾದ ಸಿಗಲಿಲ್ಲ. ಕೊನೆಗೆ ಹಣ್ಣು-ಹಂಪಲು ನೀಡಿ ಕಳಿಸಿದ. ಇಲ್ಲಿವರೆಗೆ ಬಂದ ಶರಣರಿಗೆ ನಮ್ಮಿಂದ ಪ್ರಸಾದ ಮಾಡಿಸುವುದು ಆಗಲಿಲ್ಲ ಎಂಬ ಕೊರಗಿನಿಂದ ಊಟ ಬಿಟ್ಟರು. ಇದನ್ನು ಗಮನಿಸಿದ ಇವರ ಮಾವನವರು, “ಬಸದಿಯಲ್ಲಿ ಸೋಮೇಶ್ವರ ಲಿಂಗ ಸ್ಥಾಪಿಸಿದ ಬಳಿಕ ಊಟ ಮಾಡುವಿರೇನು?” ಎಂದು ಕೇಳಿದ. ಹೆಂಡತಿ “ಆ ಲಿಂಗವನ್ನು ಇಲ್ಲಿ ತಂದು ಸ್ಥಾಪಿಸು” ಎಂದು ಧೈರ್ಯ ಕೊಟ್ಟಳು. ಹೀಗಾಗಿ ಆದಯ್ಯ ಅಲ್ಲಿಗೆ ಹೋದ. ಪಾಲ್ಗುಣ ಮಾಸದ ದಿನ ಬಸದಿಯ ಬಾಗಿಲು ತೆಗೆಯಲಿಲ್ಲ. ಆಗ ನಾನಿದ್ದೇನೆ ಎಂದು ಭಾವಿಸಿಕೋ ಎಂದು ಹೆಂಡತಿಗೆ ಹೇಳಿ ಹೋಗಿದ್ದ.

ವೀರ, ಧೀರ, ಶೂರನಾಗಿದ್ದ. ಆದಯ್ಯನ ಸಿಂಹ ಘರ್ಜನೆಯಿಂದ ಬಾಗಿಲು ತೆಗೆಯಿತು ಎಂಬ ಕಥೆ ಇವರಿಗೆ ಸಂಬಂಧಿಸಿದಂತೆ ಬರುತ್ತದೆ. ಕೊನೆಗೆ ಇಲ್ಲಿರುವುದು ಬೇಡ, ಭೂ ಕೈಲಾಸ ನೋಡಿ ಬರೋಣ ಎಂದು ತಮ್ಮ ಹೃದಯ ಕಮಲದಲ್ಲಿ ಸೋಮೇಶ್ವರನನ್ನು ನೆಲೆಸಿಕೊಂಡು ಕಲ್ಯಾಣಕ್ಕೆ ಬಂದು ನೆಲೆಸಿ ವ್ಯಾಪಾರ ಮಾಡುತ್ತಿದ್ದರು. ಸೌರಾಷ್ಟ್ರ ಸೋಮೇಶ್ವರ ವಚನಾಂಕಿತದ ಇವರ ೪೦೩ ವಚನಗಳು ದೊರೆತಿವೆ.

ತನುವಿನಲ್ಲಿ ನಿರ್ಮೋಹ, ಮನದಲ್ಲಿ ನಿರಹಂಕಾರ
ವಿಷಯಗಳಲ್ಲಿ ಉದಾಸೀನ, ಪ್ರಾಣದಲ್ಲಿ ನಿರ್ಭಯ
ಚಿತ್ತದೊಳಗೆ ನಿರಪೇಕ್ಷತೆ, ಭಾವದಲ್ಲಿ ದಿಗಂಬರ
ಜ್ಞಾನದಲ್ಲಿ ಪರಮಾನಂದವೆಡಗೊಂಡ ಬಳಿಕ
ಸೌರಾಷ್ಟ್ರ ಸೋಮೇಶ್ವರಲಿಂಗ ಬೇಕಿಲ್ಲ ಕಾಣಿರೋ

ನಿರ್ಮೋಹ, ನಿರಹಂಕಾರ, ಉದಾಸೀನ, ನಿರ್ಭಯ, ನಿರಪೇಕ್ಷತೆ, ಭಾವ ದಿಗಂಬರ ಮುಂತಾದವುಗಳನ್ನು ಯಾವುದರಲ್ಲಿ ಇಟ್ಟುಕೊಳ್ಳಬೇಕು ಎಂದು ಹೇಳುವುದರ ಜೊತೆಗೆ ಜ್ಞಾನದಲ್ಲಿ ಪರಮಾನಂದವಾದ ಬಳಿಕ ಸೌರಾಷ್ಟ್ರದ ಸೋಮೇಶ್ವರನ ಅವಶ್ಯಕತೆಯೂ ಇಲ್ಲ ಎಂಬ ದೇವಭಾವವನ್ನು ತಿಳಿಸುತ್ತಾರೆ.

ಆದಯ್ಯನವರ ವಚನಗಳಲ್ಲಿ ಸಂಸಾರ-ಸಹಿತ್ಯಕ ಅಂಶಗಳಿಗಿಂತ ಶರಣ ಧರ್ಮದ ತಾತ್ವಿಕ ಚಿಂತನೆಗೆ ಹೆಚ್ಚಿನ ಮಹತ್ವ ನೀಡಿದ್ದು ಕಂಡು ಬರುತ್ತದೆ. ವೇದಾಗಮಶಾಸ್ತ್ರಗಳನ್ನು ವಿರೋಧಿಸಿದ ಆದಯ್ಯನವರು, “ವೇದಂಗಳ ಹಿಂದೆ ಹರಿಯದಿರು, ಹರಿಯದಿರು” ಎಂದು ಹೇಳುವ ಮೂಲಕ ವೈದಿಕ ಕರ್ಮಾಚರಣೆಗಳ ಬೆನ್ನು ಹತ್ತಿದವರ ಕಂಡು “ಅಮಂಗಳ ಹಿಂದೆ ತೊಳಲದಿರು, ತೊಳಲದಿರು. ಶಬ್ದಜಾಲಂಗಳಿಗೆ ಬಳಲದಿರು, ಬಳಲದಿರು” ಎಂದು ಮಮ್ಮಲ ಮರುಗಿರುವುದನ್ನು ಕಾಣಬಹುದಾಗಿದೆ.

(ಸ್ಥಳ: ಬಸವ ಸಮಿತಿಯ ಅನುಭವ ಮಂಟಪ, ಜಯನಗರ, ಕಲಬುರಗಿ)

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

4 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

4 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

4 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

20 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

23 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago