ಬಿಸಿ ಬಿಸಿ ಸುದ್ದಿ

ಶಾಸಕನ ಪತ್ನಿಯಾಗಿ ಬಡತನದಲ್ಲೇ ಬದುಕಿದ ಏಕೈಕ ಜೀವ ಶಾಂತವೇರಿ ಗೋಪಾಲಗೌಡರ ಪತ್ನಿ ಸೋನಕ್ಕ

  • ಕೆ.ಶಿವು.ಲಕ್ಕಣ್ಣವರ

ಗೋಪಾಲಗೌಡರ ನಿಧನಾನಂತರ 48 ವರ್ಷ ಬದುಕಿದ್ದ ಸೋನಕ್ಕ ತಮ್ಮ ತಂದೆಯವರ ಆದರ್ಶಕ್ಕೋಸ್ಕರ ಗೋಪಾಲಗೌಡರನ್ನು ಕೈಹಿಡಿದು ಬಡ ಕಾರ್ಮಿಕ ಮಹಿಳೆಯಂತೆ ಬದುಕಬೇಕಾಯಿತು. ಆದರೂ ಕರ್ನಾಟಕದ ರಾಜಕೀಯಾಗಸದಲ್ಲಿ ನಕ್ಷತ್ರದಂತೆ ಮಿನುಗುತ್ತಿರುವ ಧೀಮಂತ ರಾಜಕಾರಣಿಯೊಬ್ಬರ ಪತ್ನಿಯಾಗಿದ್ದ ಸಾರ್ಥಕಭಾವ ಅವರಲ್ಲಿ ಕಡೆವರೆಗೂ ಇತ್ತು.

ಗೋಪಾಲಗೌಡರ ಪತ್ನಿ ಸೋನಕ್ಕನವರು ನಿಧನರಾದ ನಂತರ ಗೋಪಾಲಗೌಡರ ಕಾಲದ ಇತಿಹಾಸದ ಕೊಂಡಿಯೊಂದು ಕಳಚಿದಂತಾಯಿತು.

ಸೋನಕ್ಕನವರು ಗೌಡರ ನಿಧನಾನಂತರ 48 ವರ್ಷಗಳ ಕಾಲ ಬದುಕಿದ್ದರು. ಗೌಡರು ಬದುಕಿದಷ್ಟು ಕಾಲ, ಅವರ ಪ್ರಾಮಾಣಿಕ ರಾಜಕಾರಣಕ್ಕೆ ತೊಂದರೆಯಾಗದಂತೆ ಹೆಣಗಿದರು. ಶಾಸಕನ ಪತ್ನಿಯಾಗಿ ಬಡತನದಲ್ಲೇ ಬದುಕಿದ ಏಕೈಕ ಜೀವ ಸೋನಕ್ಕ.

ಗಾಂಧೀಜಿಯವರ ಬಗ್ಗೆ ಆಲ್ಬರ್ಟ್ ಐನ್‌ಸ್ಟಿನ್ ಹೇಳಿರುವ ಮಾತು ಜಗದ್ವಿಖ್ಯಾತವಾಗಿದೆ. ಅದೇನೆಂದರೆ, “ಇಂತಹ ಒಂದು ಚೈತನ್ಯ, ದೇಹದಾರಿಯಾಗಿ ಈ ಭೂಮಿಯ ಮೇಲೆ ನಡೆದಾಡಿತ್ತು ಎಂದು ಮುಂದಿನ ಜನಾಂಗ ನಂಬಲಾರದಂತಹ ವ್ಯಕ್ತಿ ಗಾಂಧಿ” ಎಂದು ಉದ್ಘರಿಸಿದ್ದರು. ಅದೇ ಮಾತನ್ನು ನಾವು ಭಾರತದ ರಾಜಕಾರಣದ ಸಂದರ್ಭದಲ್ಲಿ, ಗೋಪಾಲಗೌಡರನ್ನು ಕುರಿತು ಹೆಮ್ಮೆಯಿಂದ ಹೇಳಬಹುದು. ಮೂರು ಬಾರಿ ಶಾಸಕರಾಗಿದ್ದ ಅವರು ತೀರಿಕೊಂಡಾಗ ಸ್ವಂತಕ್ಕೆ ಒಂದು ಮನೆ ಇರಲಿಲ್ಲ. ಇಕ್ಕಿಕೊಂಡ ಜುಬ್ಬವೂ ಯಾರೋ ಕೊಟ್ಟದ್ದು. ಈತರದ ರಾಜಕಾರಣಿಯೊಬ್ಬ ಕರ್ನಾಟಕದ ರಾಜಕಾರಣದಲ್ಲಿದ್ದು ನಿರ್ಗಮಿಸಿದರೆಂಬ ಸಂಗತಿಯನ್ನು ಈಗಿನ ತಲೆಮಾರು ಕೂಡ ನಂಬಲಾರದು.

ಗೋಪಾಲಗೌಡರು ಮದುವೆಯನ್ನೂ ಮರೆತು ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದರು. ಈ ಅವರನ್ನು ನೆನೆಸಿಕೊಳ್ಳುವುದು ಸೂಕ್ತವಾದ ಕಾಲವಿದು ಈಗ. ಕರ್ನಾಟಕ ಏಕೀಕರಣವಾದ ನಂತರದ ಮೊದಲ ರಾಜ್ಯೋತ್ಸವವನ್ನು ಮಾಡಿ ಅಂದಿನ ಮುಖ್ಯಮಂತ್ರಿ ನಿಜಲಿಂಗಪ್ಪನವರನ್ನು ಕರೆದು ಭಾಷಣ ಮಾಡಿಸಿದ್ದರು. ಕನ್ನಡದ ಶ್ರೇಷ್ಠ ಕವಿಗಳನ್ನೆಲ್ಲಾ ಅವರು ಓದಿಕೊಂಡಿದ್ದರು.

ರಾಜಕಾರಣದಲ್ಲಿ ಪೂರ್ಣ ಮುಳುಗಿಹೋಗಿದ್ದ ಅವರು ಮದುವೆ, ಮಕ್ಕಳು, ಸಂಸಾರದ ಚಿಂತನೆಯಿಂದ ದೂರವಿದ್ದರು. ಆ ಸಮಯದಲ್ಲಿ ಕರ್ನಾಟಕದ ಏಕೀಕರಣದ ನಂತರ ಡಾ.ನಾಡಗೌಡರು ಮತ್ತು ಡಿ.ಎಲ್.ಪಾಟೀಲರು ಕಡಿದಾಳು ಮಂಜಪ್ಪನವರಿಗೆ ಗೆಳೆಯರಾದರು. ಈ ಡಿ.ಎಲ್.ಪಾಟೀಲರು ಧಾರವಾಡದಲ್ಲಿ ಪ್ರಸಿದ್ಧ ವಕೀಲರಾಗಿದ್ದರು. ಇಂದಿನ ಹೆಚ್.ಕೆ.ಪಾಟೀಲರ ಸಂಬಂಧಿಗಳಾಗಿದ್ದ ಅವರು ತಮ್ಮ ಮಗಳನ್ನು ಗೋಪಾಲಗೌಡರಿಗೆ ಕೊಟ್ಟು ಮದುವೆ ಮಾಡುವ ಅಪೇಕ್ಷೆ ವ್ಯಕ್ತಪಡಿಸಿದರು. ಈ ವಿಷಯವಾಗಿ ಕಡಿದಾಳರ ಜೊತೆ ಮಾತನಾಡಿ ಎಂದು ನಾಗನಗೌಡರಿಗೆ ಹೇಳಿದರಂತೆ. ಅದರಂತೆ ಗೌಡರು ತಮ್ಮ ಗೆಳೆಯರಾದ ಕಡಿದಾಳು ಮಂಜಪ್ಪನವರನ್ನು ಕೋರಿದರು.

ಆಗ ಮಂಜಪ್ಪನವರು ಕಾಂಗ್ರೆಸ್ ನಾಯಕರು. ಗೋಪಾಲಗೌಡರು ಸೋಷಲಿಸ್ಟ್ ಲೀಡರ್. ಈ ಲೀಡರ್ ಗಳು ಮುಖಾಮುಖಿಯಾಗುತ್ತಿದ್ದುದು ವಿಧಾನಸಭೆಯಲ್ಲಿ ಮಾತ್ರ. ಆದರೂ ಪರಸ್ಪರ ಗೌರವವುಳ್ಳವರಾಗಿದ್ದರು. ಇಷ್ಟಾದರೂ ಕಡಿದಾಳು ಮಂಜಪ್ಪನವರಿಗೆ ಗೋಪಾಲಗೌಡರನ್ನು ಭೇಟಿಮಾಡಿ ಮದುವೆಯಾಗುತ್ತೀರಾ ಎಂದು ಕೇಳುವ ಧೈರ್ಯವಿರಲಿಲ್ಲ.

ಏಕೆಂದರೆ ಗೌಡರು “ನನ್ನ ಮದುವೆ ಕಟಿಕೊಂಡು ನಿನಿಗೇನು” ಎಂದರೆ ಎಂಬ ಅಳುಕು. ಆದ್ದರಿಂದ ಮಂಜಪ್ಪನವರು ಗೋಪಾಲಗೌಡರ ಪ್ರಥಮ ಶಿಷ್ಯ ಕೊಣಂದೂರು ಲಿಂಗಪ್ಪನನ್ನ ಕುರಿತು “ಅವುನೇನು ಮದಿವಾಯ್ತನೋ ಇಲ್ಲವೊ ಕೇಳಯ್ಯ. ನನ್ನ ಗೆಳೆಯರು ಹೆಣ್ಣು ಕೊಡಕ್ಕೆ ಬಂದಿದ್ದಾರೆ” ಎಂದು ಜುಬ್ಬದ ತೋಳನ್ನ ಹಿಂದೆ ಸರಿಸುತ್ತಾ ಹೇಳಿದರು. ಏನೇನು ಇಲ್ಲದ ಆ ರಟ್ಟೆಗಳನ್ನು ಪೈಲ್ವಾನನಂತೆ ಹಿಂದೆ ಸರಿಸುತ್ತ ಮಾತನಾಡುತ್ತಿದ್ದ ಮಂಜಪ್ಪನವರ ಬಗ್ಗೆ ಲಿಂಗಪ್ಪನವರಿಗೆ ಒಳಗೊಳಗೇ ನಗು ಬಂದಿತ್ತಂತೆ. “ಆಯ್ತು ಗೌಡರನ್ನು ಈ ಬಗ್ಗೆ ಕೇಳ್ತಿನಿ” ಎಂದು ಹೇಳಿ ಬಂದರು. ನಂತರ ಗೋಪಾಲಗೌಡರ ಜೊತೆ ಅಳುಕುತ್ತಲೇ “ಕಡಿದಾಳು ಮಂಜಪ್ಪನವರ ಮನೆಗೋಗಿದ್ದೆ” ಎಂದರು.

“ಅದರಲ್ಲೇನು ವಿಶೇಷ ಹೋಗ್ತಾಯಿರ್ತಿ, ಬರ್ತಾಯಿರ್ತಿ”
“ಮಂಜಪ್ಪಾರು ಏನೋ ಒಂದು ವಿಷಯ ಹೇಳಿದ್ರು.”
“ಏನೇಳಿದ್ರು.”
“ನಿಮ್ಮ ಮದುವೆ ವಿಷಯ.”
“ನನ್ನ ಮದುವೆ ವಿಷಯ ಅವುರಿಗ್ಯಾಕೆ. ಸುಮ್ಮನಿರು ಅನ್ನು.”
“ಕೇಳಿಕಂಡು ಬಾ ಅಂದ್ರು.”
“ಕೇಳಿದ್ಯಲ್ಲ ಬುಡು” ಎಂದರು.

ಇದಿಷ್ಟು ವಿಷಯವನ್ನ ಲಿಂಗಪ್ಪನವರು ಮಂಜಪ್ಪವರಿಗೆ ತಲುಪಿಸಬೇಕಿತ್ತು. ಆದರೆ ಲಿಂಗಪ್ಪ ಈ ನಾಯಕರುಗಳು ಆಡಿದ ಮೂದಲಿಕೆ ಮಾತುಗಳನ್ನು ಸ್ಕ್ರೂಟನಿ ಮಾಡಿ ಅಲ್ಲಿಗೆ ಆಪ್ತ ಮಾತುಗಳನ್ನು ಸೇರಿಸಿ ತಲುಪಿಸುತ್ತಿದ್ದರು. ಇದರಿಂದ ರಾಜಕೀಯವಾಗಿ ಎಷ್ಟೇ ಟೀಕಿಸಿದರೂ, ಆಂತರಿಕವಾಗಿ ಪರಸ್ಪರ ಪ್ರೀತಿಯುಳ್ಳವರಾಗಿ ರೂಪುಗೊಂಡಿದ್ದರು.

ಕೆಲದಿನಗಳ ನಂತರ ಮಂಜಪ್ಪನವರು ಲಿಂಗಪ್ಪನನ್ನು ಈ ಬಗ್ಗೆ ಕೇಳಿದರು. ಅದಕ್ಕೆ ಲಿಂಗಪ್ಪ “ಗೌಡರು ಏನೂ ಹೇಳಲಿಲ್ಲ ಸುಮ್ಮನಾದರು” ಎಂದರು.

“ಸುಮ್ಮನಾದ ಅಂದ್ರೆ ಅಂಗೆ ಇದ್ದು ಬಿಡುತಾನ ಕೇಳು: ವಯಸ್ಸಾಯ್ತು, ಇನ್ಯಾವಾಗ ಮದುವೆಯಾಗ್ತನಂತೆ. ನಮ್ಮ ಡಾ.ನಾಗನಗೌಡರ ಫ್ರೆಂಡ್ ಪಾಟೀಲರ ಮಗಳು, ಒಳ್ಳೆ ವಿದ್ಯಾವಂತೆ, ಆಗಕ್ಕೇಳು. ಇವುನಿಂಗಿದ್ರೆ ಮುಂದೆ ಯಾರೂ ಹೆಣ್ಣು ಕೊಡಲ್ಲ. ಒಂದು ಡೇಟ್ ಗೊತ್ತು ಮಾಡಿಕೊಂಡು ಧಾರವಾಡಕ್ಕೋಗಿ ಹೆಣ್ಣು ನೋಡಿಕಂಡು ಬರಾನ. ಹೋಗಿ ಅವನಿಗೆ ಹೇಳು” ಅಂದ್ರು. ಲಿಂಗಪ್ಪ ಹೋಗಿ ಅಷ್ಟನ್ನೂ ಗೌಡರಿಗೆ ಹೇಳಿದರು.

“ಯಾಕಯ್ಯ ನನ್ನ ಮದುವೆ ವಿಷಯದಲ್ಲಿ ಅಷ್ಟು ತಲೆ ಕೆಡಿಸಿಕೊಂಡವುನೆ. ಸುಮ್ಮನಿರು ಅಂತ ಹೇಳ್ಳಿಲ್ಲವೆ” ಎಂದ ಗೌಡರಿಗೆ ಲಿಂಗಪ್ಪ “ಈಗಾಗಲೇ ಧಾರವಾಡಕ್ಕೆ ಹೋಗಿ ಹೆಣ್ಣು ನೋಡುವ ತೀರ್ಮಾನವಾಗಿದೆ. ನೀವು ಬರೋದಕ್ಕೆ ಒಪ್ಪಬೇಕಷ್ಟೇ” ಎಂದರು. ಗೌಡರು ದೀರ್ಘಾಲೋಚನೆಯ ನಂತರ “ಆಯ್ತು ಅಂತ ಹೇಳು” ಅಂದರು.

ಅದರಂತೆ ಧಾರವಾಡಕ್ಕೆ ಹೊರಡುವ ತೀರ್ಮಾನವಾಗಿ ಬೆಂಗಳೂರಲ್ಲಿ ಗೌಡರು ರೈಲು ಏರಿದಾಗ ಜೇಬೊಳಗೆ ಮೂರು ರೂಪಾಯಿಗಳಿದ್ದವು. ಈ ಅಪಾಯವನ್ನರಿತ ಎಲ್.ಸಿ.ಅಶೋಕ್, ಇನ್ನೇನು ಹೊರಡಲಿದ್ದ ರೈಲೊಳಗೆ ನುಗ್ಗಿ ಗೌಡರ ಜೇಬಿಗೆ ಮುನ್ನೂರು ತುರುಕಿ ಬಂದರು. ಹುಬ್ಬಳ್ಳಿಯಲ್ಲಿಳಿದ ಗೌಡರ ಟೀಮು. ಶಿವರಾಮಶೆಟ್ಟಿ ಎಂಬ ಕಂಟ್ರಾಕ್ಟರ್ ಮನೇಲಿ ಇದ್ದು ಬೆಳಿಗ್ಗೆ ಎಲ್ಲರೂ ಧಾರವಾಡಕ್ಕೆ ಹೋದರು.

ಧಾರವಾಡದ ಡಿ.ಎಲ್.ಪಾಟೀಲರ ಮನೆಯಲ್ಲಿ ಹೆಣ್ಣು ನೋಡುವ ಏರ್ಪಾಟಾಗಿತ್ತು. ವಿಧಾನಸಭೆಯನ್ನೇ ನಡುಗಿಸುತ್ತಿದ್ದ ಶಾಸಕನೊಬ್ಬ, ಹೆಣ್ಣು ನೋಡುವಂತಹ ಮೋಜಿನ ಪ್ರಸಂಗವದು. ಎದುರು ಬಂದು ಕುಳಿತ ಸೋನಕ್ಕನವರನ್ನು ನೋಡಿದ ಗೌಡರು ಇತ್ತ ಕೊಣಂದೂರು ಲಿಂಗಪ್ಪನವರ ಕಡೆ ನೋಡಿ ಅಭಿಪ್ರಾಯದ ಕಣ್ಣು ಬಿಟ್ಟರು. ಲಿಂಗಪ್ಪ ಗುರುಗಳ ಒಪ್ಪಿತ ಕಣ್ಣುಗಳತ್ತ ನೋಡಿ ಮಹದಾನಂದ ಪ್ರಕಟಿಸಿದರು.

ಗೌಡರ ಎದುರು ನಡೆದ ಒಂದು ಶಾಸ್ತ್ರಕ್ಕೆ ಸಿಟ್ಟಾಗಿದ್ದರು. ಏಕೆಂದರೆ ಅವರ ತಲೆಯ ಮೇಲೆ ಗಾಂಧಿ ಟೋಪಿಯನ್ನಿಟ್ಟಿದ್ದರು. ಈ ಗಾಂಧಿ ಟೋಪಿ ಕ್ರಮೇಣ ಕಾಂಗ್ರೆಸ್ ಟೋಪಿಯಾಗಿದ್ದರಿಂದ ಗೌಡರಿಗೆ ಸಿಟ್ಟು ನೆತ್ತಿಗೇರಿತ್ತು. ಆದರೆ ಧಾರವಾಡದ ಕಡೆಯ ಸಂಸ್ಕೃತಿಯಲ್ಲಿ ಈ ಟೋಪಿ ಮದುಮಕ್ಕಳ ಸಾಂಪ್ರದಾಯಿಕ ಸಂಕೇತವಾಗಿತ್ತು.

ಗೌಡರು ಸೋನಕ್ಕನವರನ್ನು ನೋಡಿಕೊಂಡು ಬಂದ ಐದಾರು ತಿಂಗಳು ಮದುವೆ ಪ್ರಸ್ತಾಪ ಮಾಡಲಿಲ್ಲ. ಇದರಿಂದ ಕೆಡಾಮಂಡಲವಾದ ಕಡಿದಾಳು ಮಂಜಪ್ಪನವರು ಕೊಣಂದೂರು ಲಿಂಗಪ್ಪನವರನ್ನು ಕರೆದು “ಏನಂತಯ್ಯಾ ಅವನ ಅಭಿಪ್ರಾಯ. ನಾವೇನು ತಮಾಸೆಗೆ ಹೆಣ್ಣು ತೋರಿಸಿದೀವಾ. ಏನು ಹೇಳಲಿಲ್ಲವಲ್ಲ ಇವುನು. ಇವುನೇನು ಮಹಾ ಅಶೋಕ್ ಕುಮಾರ ಅಥವಾ ದಿಲೀಪ್ ಕುಮಾರ ನೋಡು. ನರ್ಗೀಸು, ವೈಜಯಂತಿ ಮಾಲ ಕಾಯ್ತಾಯಿರತರೆ ಇವುನ್ನ ಮದುವೆಯಾಗಕ್ಕೆ” ಎಂದು ಅಂದಿನ ಖ್ಯಾತ ಸಿನಿಮಾ ನಟ ನಟಿಯರ ಹೋಲಿಕೆ ಮಾಡಿ ಮೂದಲಿಸಿದರು.

ಲಿಂಗಪ್ಪನವರು ಯಾವ ಸಮಜಾಯಿಷಿಯನ್ನು ಹೇಳಲಾಗದೇ ಬಂದರು. ಮುಂದೆ ಒಂದೆರಡು ತಿಂಗಳ ನಂತರ ಗೋಪಾಲಗೌಡರ ಒಪ್ಪಿಗೆ ತಲುಪಿತು. ಸೋನಕ್ಕನವರನ್ನು ನೋಡಿದ ನಂತರ ಗೌಡರು ಡಾ. ರಾಮಮನೋಹರ ಲೋಹಿಯಾರವರ ಒಪ್ಪಿಗೆ ಕೇಳಿ ಪತ್ರ ಬರೆದಿದ್ದರು. ಲೋಹಿಯಾ ತಮ್ಮ ಶಿಷ್ಯನ ಮದುವೆ ತೀರ್ಮಾನದ ವಿಷಯದಲ್ಲಿ ಒಪ್ಪಿಗೆ ಕೊಡಲು ತಡಮಾಡಿದ್ದರು. ಅದಕ್ಕೆ ಯಾವ ಕಾರಣವೂ ಇರಲಿಲ್ಲ.

ದಿನಾಂಕ 09.3.1964ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲಿನಲ್ಲಿ ಗೋಪಾಲಗೌಡರು ಮತ್ತು ಸೋನಕ್ಕನವರು ಮದುವೆಯಾದ ಅಭಿನಂದನೆ ಸಮಾರಂಭ ಜರುಗಿತು. ಇದೊಂದು ಐತಿಹಾಸಿಕ ಘಟನೆ. ಮುಂದೆ ಯಾವ ರಾಜಕಾರಣಿಯ ಮದುವೆ ಸಮಾರಂಭವೂ ಈ ರೀತಿ ನಡೆದಿಲ್ಲ. ಇಡೀ ನಾಡೇ ಸೇರಿ ಗೌಡರ ಮದುವೆ ಸಂಭ್ರಮದಲ್ಲಿ ಭಾಗಿಯಾದಂತಿತ್ತು. ವಿಧಾನ ಸಭಾಧ್ಯಕ್ಷರಾದ ವೈಕುಂಠ ಬಾಳಿಗ, ದೇವರಾಜ ಅರಸು, ಕಡಿದಾಳು ಮಂಜಪ್ಪ ವೇದಿಕೆಯಲ್ಲಿದ್ದರು. ಗೌಡರು ಭಾಷಣ ಮಾಡಿ ತನಗೆ ಮದುವೆ ಮಾಡಿಸಿದ ಕಡಿದಾಳರನ್ನು ಅಭಿನಂದಿಸಿದರು. ನಂತರ ಪಿ.ಕಾಳಿಂಗ ರಾಯರಿಂದ ಸಂಗೀತವಿತ್ತು.

ಸೋನಕ್ಕ ಗೌಡರನ್ನು ಮದುವೆಯಾದ ನಂತರ ಶಾಸಕರ ಭವನದ 227ನೇ ಕೊಠಡಿಯಲ್ಲಿ ಸಂಸಾರ ಹೂಡಿದರು. ಈ ರೂಮು ಸೋಷಲಿಸ್ಟರ ಕಚೇರಿಯೂ ಆಗಿತ್ತು. ಲೋಹಿಯಾ ಕೂಡ ಇಲ್ಲಿದ್ದು ಕರ್ನಾಟಕದ ಚುನಾವಣಾ ವಿಷಯ ಚರ್ಚಿಸುತ್ತಿದ್ದರು. ಸೋಷಲಿಸ್ಟರು ಕುಡಿಯದಂತೆ ಉಪದೇಶಿಸುತ್ತಿದ್ದರು. ಆದರೆ ಸೋಷಲಿಸ್ಟರಿಗೆ ಕುಡಿಯದೇ ಮಾಡುವ ರಾಜಕಾರಣವೂ ಒಂದು ರಾಜಕಾರಣವೇ ಎನ್ನಿಸಿತ್ತು. ಆದ್ದರಿಂದ ಹುಯ್ದುಕೊಂಡೇ ವಾಲಾಡುತ್ತಿದ್ದರು.

1967ರವರೆಗೂ ಗೌಡರ ಸಂಸಾರ ಶಾಸಕರ ಕೊಠಡಿಯಲ್ಲೇ ಇತ್ತು. ಅಲ್ಲೇ ಒಬ್ಬ ಮಗಳೂ ಹುಟ್ಟಿದಳು. ಒಂದು ದಿನ ಯು.ಆರ್. ಅನಂತಮೂರ್ತಿ ಕೊಣಂದೂರು ಲಿಂಗಪ್ಪ, ಗೌಡರು ಎಲ್ಲಾ ಸೇರಿ ಮಗುವಿಗೆ ‘ಇಳಾಗೀತ” ಎಂಬ ಹೆಸರಿಟ್ಟರು. ಕೊಠಡಿ ಸಂಖ್ಯೆ 227ರಿಂದ 27ಕ್ಕೆ ಬದಲಾಯಿತು. ಇನ್ನು ಇಲ್ಲೇ ಇರುವುದು ಸೂಕ್ತವಲ್ಲವೆಂದು ಕೊಣಂದೂರು ಲಿಂಗಪ್ಪ ಮತ್ತು ಗೆಳೆಯರು ಶ್ರೀಪುರದಲ್ಲಿ ಪುಟ್ಟದೊಂದು ಬಾಡಿಗೆ ಮನೆಯನ್ನು ಹಿಡಿದು, ಗೌಡರ ಕುಟುಂಬವನ್ನು ಅಲ್ಲಿಗೆ ಸಾಗಿಸಿದರು.

ಅಲ್ಲಿ ಸೋನಕ್ಕನವರು ಒಂಥರದ ಬಡತನದ ಬಾಳನ್ನು ಆರಂಭಿಸಿದರು. ಅಲ್ಲಿ ಮಗ ಹುಟ್ಟಿದ. ಆತನಿಗೆ ರಾಮಮನೋಹರ ಎಂಬ ಹೆಸರಿಡಲಾಯಿತು. ಕೃಷ್ಣ ವರ್ಣವನ್ನು ಇಷ್ಟಪಡುತ್ತಿದ್ದ ಗೌಡರು ತುಂಬ ಬೆಳ್ಳಗೆ ಹುಟ್ಟಿದ ಮಗನನ್ನು ನೋಡಿ ಕೌತುಕದಿಂದ `ಇದೇನು ಇದು ಈತರ ಹುಟ್ಟಿದನಲ್ಲ’ ಎಂಬ ಉದ್ಘಾರ ತೆಗೆದರಂತೆ..!

ಸೋನಕ್ಕನವರು ಬದುಕಿಗಾಗಿ ಗೋಪಾಲಗೌಡರನ್ನು ಅವಲಂಬಿಸದೇ, ಟೀಚರ್ ಕೆಲಸವನ್ನು ಅವಲಂಭಿಸಿದ್ದರು. ಅದರಲ್ಲೇ ಸಂಸಾರ ಸಾಗಿಸಬೇಕಿತ್ತು. ಗೌಡರದು ಹಣಕ್ಕೆ ಹಾತೊರೆಯದ ಪರಿಶುದ್ಧ ರಾಜಕಾರಣ. ಇಂತಹ ಒಂದು ಸ್ಥಿತಿಯಲ್ಲಿ ಅಂದರೆ 1969 ಜನವರಿಯಲ್ಲಿ ಗೌಡರ ಆರೋಗ್ಯ ಹದಗೆಟ್ಟಿತು. ಅಂತಹ ಸಮಯದಲ್ಲಿ ಮುಖ್ಯಮಂತ್ರಿ ವಿರೇಂದ್ರ ಪಾಟೀಲರು ಒಂದು ಸೈಟನ್ನು ಅಲಾಟ್ ಮಾಡಿ ಪತ್ರ ಕಳಿಸಿದ್ದರು. ಆ ಪತ್ರ ಓದಿದ ಗೋಪಾಲಗೌಡರು, ಅಲಾಟ್ ಪತ್ರದ ಮೇಲೆ ಮರು ಟಿಪ್ಪಣಿ ಬರೆದು ಸೈಟಿಲ್ಲದ ಜನರಿಗೆ ಸೈಟುಗಳನ್ನು ಕೊಟ್ಟು, ನಂತರ ಉಳಿದರೆ ನೋಡೋಣ ಎಂದು ಬರೆದುದಲ್ಲದೇ ಇದನ್ನು ಮುಖ್ಯಮಂತ್ರಿಗೇ ತಲುಪಿಸಬೇಕೆಂದು ಲಿಂಗಪ್ಪನವರ ಕೈಗಿತ್ತರು.
ಆದರೆ ಒಂದು ರೀತಿಯಲ್ಲಿ ಬೀದಿಯಲ್ಲೇ ಇದ್ದ ಸೋನಕ್ಕ, ಲಿಂಗಪ್ಪನವರಿಗೆ ಸೈಟಿಗೆ ಬೇಕಾದ ಹಣ ಒದಗಿಸುತ್ತೇನೆ. ಈ ಪತ್ರವನ್ನ ಮುಖ್ಯಮಂತ್ರಿಗೇ ತಲುಪಿಸಬೇಡಿ ಎಂದು ಕೇಳಿಕೊಂಡರು.

ಅದರಂತೆ ಲಿಂಗಪ್ಪ ಆ ಸೈಟಿನ ವಿಷಯವನ್ನು ಎಲ್ಲೂ ಪ್ರಸ್ತಾಪಿಸದೇ ಸುಮ್ಮನಿದ್ದುಬಿಟ್ಟರು. ಲಿಂಗಪ್ಪನವರ ಪ್ರಕಾರ ಅವರು ಗೌಡರಿಂದ ಮುಚ್ಚಿಟ್ಟಿದ್ದು ಇದೊಂದೇ ಸಂಗತಿ. ಇದರಿಂದ ಗೌಡರ ನಿಧನಾನಂತರ ಸೋನಕ್ಕ ಸ್ವಂತ ನೆಲೆ ಕಂಡುಕೊಂಡರು. 1969ರ ನಂತರ ದೈಹಿಕವಾಗಿ ತುಂಬಾ ಕುಸಿದುಹೋದ ಗೌಡರು 1971ರಲ್ಲಿ ನಿಧನರಾದರು. ಗೌಡರ ನಿಧನಾನಂತರ 48 ವರ್ಷ ಬದುಕಿದ್ದ ಸೋನಕ್ಕ ತಮ್ಮ ತಂದೆಯವರ ಆದರ್ಶಕ್ಕೋಸ್ಕರ ಗೋಪಾಲಗೌಡರನ್ನು ಕೈಹಿಡಿದು ಯಾವ ಸುಖ ಉಣ್ಣಲಿಲ್ಲ. ಬಡ ಕಾರ್ಮಿಕ ಮಹಿಳೆಯಂತೆ ಬದುಕಬೇಕಾಯಿತು.

ಈ ನಡುವೆ ಗೌಡರನ್ನು ಕುರಿತು ಕಾದಂಬರಿ ಬರೆದವರು ಮತ್ತು ಸಿನಿಮಾ ತೆಗೆದವರಿಂದ ಒಂಥರದ ಅವಹೇಳನ ಅನುಭವಿಸುವಂತೆ ಆಯಿತು. ಆದರೂ ಕರ್ನಾಟಕದ ರಾಜಕೀಯಾಗಸದಲ್ಲಿ ನಕ್ಷತ್ರದಂತೆ ಮಿನುಗುತ್ತಿರುವ ಧೀಮಂತ ರಾಜಕಾರಣಿಯೊಬ್ಬರ ಪತ್ನಿಯಾಗಿದ್ದ ಸಾರ್ಥಕ ಭಾವ ಅವರಲ್ಲಿ ಕಡೆವರೆಗೂ ಇತ್ತು.

ಇಂತಹ ಆದರ್ಶಮಯ ದಂಪತಿಗಳು ಶಾಂತವೇರಿ ಗೋಪಾಲಗೌಡರು ಮತ್ತು ಸೋನಕ್ಕನವರು. ಇದು ಒಂದು ರೀತಿಯಲ್ಲಿ ಹುಬ್ಬೇರಿಸು ಆದರ್ಶದ ಪ್ರಸಂಗವಂತ ಹೇಳಿಕೊಂಡು ಈ ಟಿಪ್ಪಣಿ ಮುಗಿಸುತ್ತೇನೆ..!

emedialine

Recent Posts

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

7 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

7 hours ago

ಜುಲೈ 8 ರಂದು ಕಾಳಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…

9 hours ago

ವಾಡಿ: “ತಾಯಿ ಹೆಸರಲ್ಲಿ ಒಂದು ಸಸಿ” ಅಭಿಯಾನ

ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹನುಮಾನ ಮಂದಿರದ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ"ತಾಯಿ ಹೆಸರಲ್ಲಿ…

9 hours ago

ವಾಡಿ: ಶ್ಯಾಮ್‌ ಪ್ರಸಾದ್ ಮುಖರ್ಜಿ ಜಯಂತಿ, ಬಾಬು ಜಗಜೀವನ್ ರಾಮ್ ಪುಣ್ಯಸ್ಮರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕರು, ಭಾರತದ ಅಖಂಡತೆ ಹಾಗೂ ಏಕತೆಗಳಿಗಾಗಿ ಶ್ರಮಿಸಿದ ಡಾ. ಶ್ಯಾಮ ಪ್ರಸಾದ್…

9 hours ago

ನಾಳೆ ವಾಡಿಯಲ್ಲಿ ಕವಿಗೋಷ್ಠಿ

ವಾಡಿ: ಸಂಚಲನ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ವತಿಯಿಂದ ಜುಲೈ ಇಂದು ಬೆಳಿಗ್ಗೆ 10:00 ಗಂಟೆಗೆ ಪಟ್ಟಣದ ಡಾ. ಅಂಬೇಡ್ಕರ್…

10 hours ago