ಕಲಬುರಗಿ: ಕಲ್ಯಾಣ ಕರ್ನಾಟಕ ಪತ್ರಿಕೋದ್ಯಮದ ಪಿತಾಮಹರೆಂದೇ ಗುರುತಿಸಿಕೊಂಡಿರುವ ದಿ. ವೆಂಕಟರಾವ ನಾರಾಯಣರಾವ ಕಾಗಲಕರ ಅವರು ೧೯೫೪ ರಿಂದ ೧೯೯೭ರ ವರೆಗೆ ಸತತ ೪೩ ವರ್ಷಗಳ ಕಾಲ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ ಮಹಾನುಭಾವರು.
ಪಿ.ಟಿ.ಐ, ಸಂಯುಕ್ತ ಕರ್ನಾಟಕ, ದ ಹಿಂದು ಪತ್ರಿಕೆಗಳಲ್ಲಿ ಕಲಬುರಗಿ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸಿ ಈ ಭಾಗದ ಕಲೆ, ಸಾಹಿತ್ಯ, ಸಂಸ್ಕೃತಿ, ಐತಿಹಾಸಿಕ, ಆಧ್ಯಾತ್ಮಿಕ, ಶೈಕ್ಷಣಿಕ ಹಾಗೂ ಅಭಿವೃದ್ಧಿ ಪರ ಲೇಖನಗಳನ್ನು ಬರೆದು ಸರ್ಕಾರದ ಗಮನ ಸೆಳೆದಿದ್ದಾರೆ.
ವಿ.ಎನ್. ಕಾಗಲಕರ ಅವರು ಕರ್ನಾಟಕ ರಾಜ್ಯೋತ್ಸವ ಹಾಗೂ ಕರ್ನಾಟಕ ಪತ್ರಿಕಾ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರ ಕುರಿತು ಕನ್ನಡ ಪುಸ್ತಕ ಪ್ರಾಧಿಕಾರ “ಮರೆಯಲ್ಲಿರುವ ಮಹಾನುಭಾವರು” ಗ್ರಂಥಮಾಲೆಯಲ್ಲಿ ಪತ್ರಕರ್ತ ಶ್ರೀನಿವಾಸ ಸಿರನೂರಕರ ಬರೆದ “ವಿ.ಎನ್. ಕಾಗಲಕರ” ಕೃತಿ ಪ್ರಕಟಿಸಿದೆ. ಇದು ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಸಂಗ್ರಹಯೋಗ್ಯವಾಗಿದೆ. ಏಳು ಅಧ್ಯಾಯಗಳಲ್ಲಿ ಪ್ರಕಟಗೊಂಡ ಈ ಕೃತಿ ವಿ.ಎನ್. ಕಾಗಲಕರ ಅವರ ಬಹುಮುಖ ಪ್ರತಿಭೆಯನ್ನು ಅನಾವರಣಗೊಳಿಸಿದೆ.
ಕಲ್ಯಾಣ ಕರ್ನಾಟಕ ಭಾಗದ ನೀರಾವರಿ ಯೋಜನೆಗಳ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ದಿ.ಕಾಗಲಕರ ಅವರು, ಲೇಖನಗಳ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಿ ಸಮರ್ಪಕವಾಗಿ ಜಾರಿಯಾಗಲು ಶ್ರಮಿಸಿದ್ದಾರೆ.
ಯಾದಗಿರಿ ಜಿಲ್ಲೆಯ ರಾಮಸಮುದ್ರ ಗ್ರಾಮದ ದಲಿತನೊಬ್ಬನ ಕಣ್ಣು ಕೀಳಿಸಿದ ವರದಿ ಪ್ರಕಟಿಸಿ ರಾಷ್ಟ್ರದ ಗಮನ ಸೆಳೆಯುವಂತೆ ಮಾಡಿದವರು ವಿ.ಎನ್. ಕಾಗಲಕರ. ಇಡೀ ರಾಜ್ಯ ಸರ್ಕಾರ ಇದರಿಂದ ತಲ್ಲಣಗೊಂಡಿತು. ಕಲ್ಯಾಣ ಕರ್ನಾಟಕ ಭಾಗದಲ್ಲಿನ ದಲಿತರ ಮೇಲಿನ ದೌರ್ಜನ್ಯ ಜಗಜ್ಜಾಹೀರಾಯಿತು. ಸಂಯುಕ್ತ ಕರ್ನಾಟಕದಲ್ಲಿ ಪ್ರಕಟಗೊಂಡ ಈ ವರದಿ ರಾಮಸಮುದ್ರ ಗ್ರಾಮಸ್ಥರಿಗೆ ನ್ಯಾಯ ದೊರಕಿಸಿಕೊಟ್ಟಿತು.
ವಿ.ಎನ್.ಕಾಗಲಕರ ಸಾಂಸ್ಕೃತಿಕ ಸಂಪನ್ನ ವ್ಯಕ್ತಿಯಾಗಿದ್ದರು. ದಾಸ ಸಾಹಿತ್ಯದ ಆಳವಾದ ಅಧ್ಯಯನ ಮಾಡಿ ಆಸಕ್ತರೊಂದಿಗೆ ಮತ್ತು ಪರಿಣಿತರೊಂದಿಗೆ ದಾಸ ಸಾಹಿತ್ಯದ ಬಗ್ಗೆ ಚರ್ಚೆ ಜಿಜ್ಞಾಸೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ದಾಸ ಸಾಹಿತ್ಯದ ಬಗ್ಗೆ ಅಪಾರ ಪಾಂಡಿತ್ಯ ಹೊಂದಿದ್ದ ದಿ.ಕಾಗಲಕರ ಅವರು, ಹರಿದಾಸರ ಪದಗಳನ್ನು ಸ್ವತಃ ಹಾಡಿ ಪ್ರಚುರಪಡಿಸಿದರು.
ಕಾಗಲಕರ ಅವರು ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಹರಿದಾಸ ಸಾಹಿತ್ಯ ಅಧ್ಯಯನ ಪೀಠದ ಸ್ಥಾಪನೆಯ ಕನಸನ್ನು ಕಂಡಿದ್ದರು. ಇದನ್ನು ಸಾಕಾರಗೊಳಿಸಲು ಹಲವಾರು ಲೇಖನಗಳ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ೨೦೦೬ ನಲ್ಲಿ ಪೀಠ ರಾಯಚೂರಿನ ಸ್ನಾತಕೋತ್ತರ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ಆದರೆ ಅದನ್ನು ನೋಡಲು ಕಾಗಲಕರ ಅವರೇ ಇರಲಿಲ್ಲ.
ವಿ.ಎನ್. ಕಾಗಲಕರ ಅವರು ವಿದ್ಯಾರ್ಥಿ ದಿಸೆಯಲ್ಲಿ ಹೈದ್ರಾಬಾದನ ನೃಪತುಂಗ ಶಾಲೆಯಲ್ಲಿ ಹೈಸ್ಕೂಲ್ ಓದುತ್ತಿದ್ದಾಗ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿ ತದನಂತರ ಹೈದ್ರಾಬಾದ್ ವಿಮೋಚನಾ ಚಳುವಳಿಯಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದರು. ಚಳುವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಅಭಿನಂದಿಸಿ ಅಂದಿನ ಮೈಸೂರು ರಾಜ್ಯ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಹ್ಮದ ಅಲಿ ಅವರು ಪ್ರಮಾಣ ಪತ್ರ ನೀಡಿದ್ದಾರೆ.
೧೯೫೪ ರಲ್ಲಿ ಪಿ.ಟಿ.ಐ. ಸುದ್ದಿ ಸಂಸ್ಥೆ ವರದಿಗಾರರಾಗಿ ಪತ್ರಿಕೋದ್ಯಮ ವೃತ್ತಿ ಜೀವನ ಆರಂಭಿಸಿದ ದಿ. ವಿ.ಎನ್. ಕಾಗಲಕರ ಅವರು, ಮರುವರ್ಷವೇ ೧೯೫೫ರಲ್ಲಿ ಸಂಯುಕ್ತ ಕರ್ನಾಟಕಕ್ಕೆ ಪಾದಾರ್ಪಣೆ ಮಾಡಿ ೧೯೭೫ ರ ವರೆಗೆ ಏರಡು ದಶಕಗಳ ಕಾಲ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸಿದರು.
೧೯೭೬ ರಲ್ಲಿ ದ ಹಿಂದು ಆಂಗ್ಲ ಪತ್ರಿಕೆಯ ಜಿಲ್ಲಾ ವರದಿಗಾರರಾಗಿ ೨೧ ವರ್ಷಗಳ ಕಾಲ ತಮ್ಮ ಜೀವಿತಾವಧಿ ಕೊನೆಯವರೆಗೂ ಅಂದರೆ ಆಗಸ್ಟ್ ೧೯, ೧೯೯೭ರ ವರೆಗೆ ಕಾರ್ಯ ನಿರ್ವಹಿಸಿದರು. ಕಲಬುರಗಿಯ ಕೇಂದ್ರ ಬಸ್ ನಿಲ್ದಾಣದಿಂದ ಶಾಂತಿ ನಗರ ಹೋಗುವ ರಸ್ತೆಗೆ ಕಲಬುರಗಿ ಮಹಾನಗರ ಪಾಲಿಕೆ “ವೆಂಕಟರಾವ ಕಾಗಲಕರ ಮಾರ್ಗ” ಎಂದು ನಾಮಕರಣ ಮಾಡಿ ಗೌರವ ಸಮರ್ಪಿಸಿದೆ. ಕಾಗಲಕರ ಅವರ ಅನುಪಮ ಸೇವೆ ಸದಾಕಾಲ ಸ್ಮರಿಸುವಂತೆ ಮಾಡಿದೆ. ಇತ್ತೀಚೆಗೆ ಕಲಬುರ್ಗಿಯಲ್ಲಿ ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ೩೬ನೇ ರಾಜ್ಯ ಸಮ್ಮೇಳನದ ಮುಖ್ಯ ವೇದಿಕೆಗೆ ವಿ.ಎನ್. ಕಾಗಲಕರ ಹೆಸರಿಟ್ಟದ್ದನ್ನು ಇಲ್ಲಿ ಸ್ಮರಿಸಬಹುದು.
ಅನುಭವಿ ಪತ್ರಕರ್ತರನ್ನು ಪ್ರತಿವರ್ಷ ಪತ್ರಿಕಾ ದಿನಾಚರಣೆಯಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕಲಬುರಗಿ ಘಟಕದ ವತಿಯಿಂದ ಜೀವಮಾನ ಸಾಧನೆಗಾಗಿ”ವಿ.ಎನ್. ಕಾಗಲಕರ” ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಧಾರವಾಡದ ನಮ್ಮ ಮೀಡಿಯಾ ಸ್ಕ್ವೇರ್ ಪಬ್ಲಿಕೇಶನ್ ದವರು “ಕಾಗಲಕರ್ಸ್ ಡೈರಿ ಆನ್ ಕಲಬುರಗಿ” ಶಿರೋನಾಮೆಯಡಿ ವಿ.ಎನ್. ಕಾಗಲಕರ ಅವರ ೪೪ ಲೇಖನಗಳನ್ನು ನಾಲ್ಕು ಅಧ್ಯಾಯಗಳಲ್ಲಿ ಪುಸ್ತಕ ರೂಪದಲ್ಲಿ ಪ್ರಕಟಿಸಿದೆ.
೭೦ ವರ್ಷಗಳ ಕಾಲ ಬದುಕಿ, ಅದರಲ್ಲಿ ೪೫ ವರ್ಷಗಳ ಕಾಲ ನಿಸ್ವಾರ್ಥವಾಗಿ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ ದಿ. ವಿ.ಎನ್. ಕಾಗಲಕರ ಹೆಸರಿನಲ್ಲಿ ರಾಜ್ಯ ಸರ್ಕಾರ ಪ್ರಶಸ್ತಿ ಪ್ರತಿಷ್ಠಾಪಿಸಬೇಕೆಂದು ಕಾರ್ಯನಿರತ ಪತ್ರಕರ್ತರ ಸಂಘ ಕಲಬುರಗಿ ಘಟಕದ ಬಹುದಿನದ ಬೇಡಿಕೆಯಾಗಿದೆ. ಈ ಮನವಿಗೆ ಆಗಿನ ಮುಖ್ಯಮಂತ್ರಿ ಧರ್ಮಸಿಂಗ್ ಸ್ಪಂದಿಸಿ, ಪ್ರಶಸ್ತಿ ಪ್ರತಿಷ್ಠಾಪಿಸಲು ಉತ್ಸುಕರಾಗಿರುವುದಾಗಿ ಹೇಳಿದ್ದರು. ಎಸ್.ಎಂ.ಕೃಷ್ಣ ಸಂಪುಟದಲ್ಲಿ ವಾರ್ತಾ ಸಚಿವರಾಗಿದ್ದ ಅಲ್ಲಂ ವೀರಭದ್ರಪ್ಪನವರು ಪ್ರಶಸ್ತಿ ಪ್ರತಿಷ್ಠಾಪಿಸುವ ಬಗ್ಗೆ ಭರವಸೆ ನೀಡಿದ್ದರು. ಭರವಸೆ ಭರವಸೆಯಾಗಿಯೇ ಉಳಿದಿದೆ. ರಾಜ್ಯ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.
ಲಕ್ಷ್ಮಿಬಾಯಿ ಹಾಗೂ ನಾರಾಯಣರಾವ ಕಾಗಲಕರ ದಂಪತಿಯ ಜೇಷ್ಠ ಪುತ್ರರಾಗಿ ದಿ. ೨೫.೯.೧೯೨೭ ರಲ್ಲಿ ಗಜೇಂದ್ರಗಡದಲ್ಲಿ ಜನಿಸಿದ ವಿ.ಎನ್. ಕಾಗಲಕರ ಅವರು, ೭೦ ವಸಂತಗಳನ್ನು ಪೂರೈಸಿ ದಿ. ೧೯.೮.೧೯೯೭ ರಂದು ಕಲಬುರ್ಗಿಯಲ್ಲಿ ನಿಧನರಾದರು. ತಮ್ಮ ಕೊನೆಯುಸಿರಿರುವವರೆಗೂ ಪತ್ರಕರ್ತರಾಗಿದ್ದರು ಎಂಬುದು ಹೆಮ್ಮೆಯ ವಿಷಯ.
ವಿ.ಎನ್. ಕಾಗಲಕರ ಅವರಿಗೆ ಮೂವರು ಪುತ್ರರು ಹಾಗೂ ಐವರು ಪುತ್ರಿಯರು. ಹಿರಿಯ ಮಗ ದಿ. ಜಯತೀರ್ಥ ಕಾಗಲಕರ ಅವರು ಮೂರು ದಶಕಗಳ ಕಾಲ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದವರು. ಸಂಯುಕ್ತ ಕರ್ನಾಟಕ ಪತ್ರಿಕೆಯ ಸ್ಥಾನಿಕ ಸಂಪಾದಕರೆಂದು ಸೇವೆ ನಿರ್ವಹಿಸುತ್ತಿರುವಾಗಲೇ ಕಳೆದ ವರ್ಷ ಕೋವಿಡ್-೧೯ ಸೊಂಕಿನಿಂದ ಮೃತಪಟ್ಟರು. ಪತ್ನಿ ಹಾಗೂ ಇಬ್ಬರು ಚಿಕ್ಕ ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ವಿ.ಎನ್. ಕಾಗಲಕರ ಅವರ ಬೆಳವಣಿಗೆಗೆ ಅವರು ಪತ್ನಿ ಶ್ರೀಮತಿ ಪದ್ಮಾವತಿಬಾಯಿಯ ಅವರ ಕೊಡುಗೆ ಅಪಾರ. ಏಂಟು ಜನ ಮಕ್ಕಳೊಂದಿಗೆ ಸಂಸಾರ ಸರಿದೂಗಿಸಿಕೊಂಡು ಪತಿಗೆ ಬೆನ್ನೆಲುಬಾಗಿ ನಿಂತು ಯಶಸ್ವಿ ಗೃಹಿಣಿಯಾಗಿ ಸೈ ಎನಿಸಿಕೊಂಡವರು. ಪತ್ರಿಕೋದ್ಯಮಕ್ಕೂ ಕಾಗಲಕರ ಮನೆತನಕ್ಕೂ ಅವಿನಾಭಾವ ಸಂಬಂಧ. ಪತ್ರಿಕೋದ್ಯಮದಲ್ಲಿ ಕಾಗಲಕರ ಮನೆತನದ ಏಳು ದಶಕಗಳ ಸೇವೆ ಅವಿಸ್ಮರಣೀಯ. ವಿ.ಎನ್. ಕಾಗಲಕರ ಅವರು ೪೩ ವರ್ಷಗಳ ಕಾಲ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದರೆ, ಅವರ ಹಿರಿಯ ಮಗ ದಿ. ಜಯತೀರ್ಥ ಕಾಗಲಕರ ೩೨ ವರ್ಷಗಳ ಕಾಲ ಸಂಯುಕ್ತ ಕರ್ನಾಟಕದಲ್ಲಿ ಸೇವೆ ಸಲ್ಲಿಸಿದ್ದಾರೆ.
ವಿ.ಎನ್. ಕಾಗಲಕರ ಅವರ ದ್ವಿತೀಯ ಸುಪುತ್ರ ರಾಘವೇಂದ್ರ ಕಾಗಲಕರ ಸಂಯುಕ್ತ ಕರ್ನಾಟಕದ ಮುದ್ರಣ ವಿಭಾಗದಲ್ಲಿ ಒಂದು ದಶಕ ಸೇವೆ ಸಲ್ಲಿಸಿದರೆ, ಅವರ ತೃತೀಯ ಪುತ್ರ ಸತ್ಯಬೋಧ ಕಾಗಲಕರ ಶ್ರೀನಿಕೇತನ ಕನ್ನಡ ದಿನಪತ್ರಿಕೆ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ವಿ.ಎನ್. ಕಾಗಲಕರ ಅವರ ಚಿಕ್ಕಪ್ಪನ ಮೊಮ್ಮಗ ಡಾ. ಸಮೀರ ಕಾಗಲಕರ ಅವರು ಪ್ರಸ್ತುತ “ಇಛಿoಟಿomiಛಿ ಓeತಿsಠಿಚಿಠಿeಡಿ” ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ನಿಷ್ಠೆ, ಹಿರಿಮೆ, ಗರಿಮೆ, ಪ್ರಾಮಾಣಿಕತೆ ವಿ.ಎನ್. ಕಾಗಲಕರ ಅವರ ಹೆಗ್ಗುರುತಾಗಿತ್ತು. ಪತ್ರಿಕಾ ವೃತ್ತಿಯ ಘನತೆ ಗೌರವಕ್ಕೆ ಅವರು ಎಂದಿಗೂ ಚ್ಯುತಿ ತಂದವರಲ್ಲ. ನಾಲ್ಕು ದಶಕಗಳ ಕಾಲ ಪ್ರಾಮಾಣಿಕವಾಗಿ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ ದಿ. ವಿ.ಎನ್. ಕಾಗಲಕರ ಅವರು, ಕಲ್ಯಾಣ ಕರ್ನಾಟಕ ಭಾಗಕ್ಕೆ ತಮ್ಮದೆಯಾದ ಕೊಡುಗೆ ನೀಡಿದ್ದಾರೆ. ವಿ.ಎನ್. ಕಾಗಲಕರ ಅವರು ಕಣ್ಮರೆಯಾಗಿ ೨೫ ವರ್ಷ ಗತಿಸಿದರೂ, ಇವರ ನೆನೆಪು ಮಾತ್ರ ಕಲಬುರಗಿಯ ಜನಸಾಮಾನ್ಯರಲ್ಲಿ ಇಂದಿಗೂ ಮಾಸಿಲ್ಲ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…