ಬಿಸಿ ಬಿಸಿ ಸುದ್ದಿ

ಯುವ ಕ್ರೀಡಾಪಟುಗಳಿಗೆ ವೈಜ್ಞಾನಿಕ ತರಬೇತಿಗೆ ಅಗತ್ಯ ಕ್ರಮ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು:  ರಾಜ್ಯದಲ್ಲಿನ ಒಂದು ಸಾವಿರ ಯುವ ಪ್ರತಿಭಾವಂತ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಅಗತ್ಯವಾದ ವೈಜ್ಞಾನಿಕ ತರಬೇತಿ ಹಾಗೂ ತಲಾ ಒಂದು ಲಕ್ಷ ರೂಗಳನ್ನು ನೀಡಿ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆಲ್ಲುವ ಕ್ರೀಡಾಪಟುಗಳನ್ನಾಗಿ ರೂಪಿಸುವ ಯೋಜನೆಯನ್ನು ಸರ್ಕಾರ ಹಮ್ಮಿಕೊಂಡಿದೆ  ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಇಂದು  ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ  ಗ್ರಾಮೀಣ ಕ್ರೀಡೋತ್ಸವ ಹಾಗೂ ಯೋಗಾಥಾನ್ ಗೆ ಚಾಲನೆ ನೀಡಿ  2020 ನೆ ಸಾಲಿನ  ಏಕಲವ್ಯ, ಜೀವಮಾನ ಸಾಧನೆ , ಕರ್ನಾಟಕ ಕ್ರೀಡಾ ರತ್ನ ಹಾಗೂ 2021- 22ನೇ ಸಾಲಿನ ಕ್ರೀಡಾ ಪೋಷಕ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಮುಖ್ಯಮಂತ್ರಿಗಳು,  ಮುಂದಿನ ಪ್ಯಾರೀಸ್ ಒಲಂಪಿಕ್ಸ್ ನಲ್ಲಿ ಭಾಗವಹಿಸಲು ರಾಜ್ಯದ ಆಯ್ದ 75 ಕ್ರೀಡಾಪಟುಗಳಿಗೆ ವಿಶ್ವಮಟ್ಟದ ತರಬೇತಿ ನೀಡಲಾಗುತ್ತಿದೆ. ಇವರಲ್ಲಿ ಹಲವರು ಒಲಂಪಿಕ್ಸ್ನಲ್ಲಿ ಪದಕಗಳನ್ನು ಗೆಲ್ಲಬೇಕೆಂಬುದು ಸರ್ಕಾರದ ಗುರಿಯಾಗಿದೆ. ಗ್ರಾಮೀಣ ಮಟ್ಟದಲ್ಲಿಯೂ ಕ್ರೀಡಾ ಸಾಧನೆಗಳಾಗಬೇಕು ಹಾಗೂ ಗ್ರಾಮೀಣ ಕ್ರೀಡೆಗಳನ್ನು ಸರ್ಕಾರದ ವತಿಯಿಂದ ವ್ಯವಸ್ಥಿತವಾಗಿ ನಡೆಸುವ ಉದ್ದೇಶದಿಂದ ಗ್ರಾಮೀಣ ಕ್ರೀಡಾಕೂಟವನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.

ಕಬ್ಬಡಿ, ಕೋಕೋ, ಕಂಬಳ, ಎತ್ತಿನಗಾಡಿ ಸ್ಪರ್ಧೇ, ಹೀಗೆ ಹಲವು ಕ್ರೀಡೆಗಳು ಗ್ರಾಮೀಣ ಪ್ರದೇಶದ ಸೊಗಡನ್ನು ಸೂಸುತ್ತದೆ. ಗ್ರಾಮ, ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಕ್ರೀಡೆಗಳು ನಡೆಯುತ್ತವೆ. ಗ್ರಾಮಮಟ್ಟದಲ್ಲಿ ಹಲವಾರು ವಿವಿಧ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. ಅಂತಹ ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗುತ್ತಿದೆ ಎಂದರು.

ಯುವಜನರಸಬಲೀಕರಣಕ್ಕೆ,  ಶಿಕ್ಷಣ, ಉದ್ಯೋಗ ಮತ್ತು ಸಬಲೀಕರಣ ಬಹಳ ಮುಖ್ಯವಾಗಿದ್ದು,   ಸ್ವಾಮಿ ವಿವೇಕಾನಂದ ಯುವಶಕ್ತಿ ಸಂಘ ಯೋಜನೆಯನ್ನು ಜಾರಿ ಮಾಡಿ, ಆಗಸ್ಟ್ 15ಕ್ಕೆ ಈ ಯೋಜನೆಗೆ ಚಾಲನೆ ನೀಡಲಾಗಿದೆ. ಪ್ರತಿ ಗ್ರಾಮದಲ್ಲಿ 30 ಜನರಿರುವ ಒಂದು ಯುವಜನರ ಸಂಘವನ್ನು ಗುರುತಿಸಿ, 7.5 ಲಕ್ಷದಿಂದ 10 ಲಕ್ಷದವರೆಗೆ ಯೋಜನೆಗಳನ್ನು ನೀಡಿ, ಸಂಘಕ್ಕೆ 1.5 ಲಕ್ಷದ ಅನುದಾನವನ್ನು ಸರ್ಕಾರವೇ ಭರಿಸುತ್ತಿದೆ.

ಸ್ವಯಂ ಉದ್ಯೋಗ ಮಾಡಿ ಇತರರಿಗೆ ಉದ್ಯೋಗ ನೀಡುವ ಸ್ವಾಮಿ ವಿವೇಕಾನಂದ ಯುವಶಕ್ತಿ ಸಂಘ ಯೋಜನೆಯಿಂದ ಒಂದು ವರ್ಷಕ್ಕೆ ಸುಮಾರು 5 ಲಕ್ಷ ಯುವಕರಿಗೆ ಉದ್ಯೋಗ ಸೃಷ್ಟಿಸಲಾಗುತ್ತಿದೆ. ಇದು ಒಂದು ವಿನೂತನವಾದ ಯೋಜನೆಯಾಗಿದ್ದು, ಆರ್ಥಿಕವಾಗಿ, ಸಾಮಾಜಿಕವಾಗಿ ಯುವಕರ ಸಾಮಥ್ರ್ಯವನ್ನು ಹೆಚ್ಚಿಸುವಂತಹ ಕೆಲಸವನ್ನು ಸರ್ಕಾರ ನಿರಂತರವಾಗಿ ಮಾಡುತ್ತದೆ ಎಂದರು.

ಕರಾವಳಿಯ ಕಂಬಳ, ಉತ್ತರ ಕರ್ನಾಟಕದ ಚಕ್ಕಡಿ ಹೊಡೆಯುವ ಸ್ಪರ್ಧೆ, ಕುಸ್ತಿ, ಸೈಕಲ್, ಮೋಟರ್ ಸೈಕಲ್, ಕಾರ್ ರ್ಯಾಲಿಗಳು, ಗಾಲ್ಫ್, ವಾಲಿಬಾಲ್ ಕ್ರೀಡೆಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. ಕನ್ನಡದ ಯುವಕರು ಯಶಸ್ಸಿನ ಉತ್ತುಂಗಕ್ಕೆ ಏರಬೇಕು. ಸೀನಿಯರ್ ಒಲಂಪಿಕ್ಸ್ ಏರ್ಪಡಿಸಲು ರಾಜ್ಯ ಸರ್ಕಾರ 8 ಕೋಟಿ ರೂಗಳನ್ನು ನೀಡಿದೆ. ಕರ್ನಾಟಕವನ್ನು ಕ್ರೀಡಾ ಕರ್ನಾಟಕವನ್ನಾಗಿ ರೂಪಿಸುವ ಗುರಿ ರಾಜ್ಯ ಸರ್ಕಾರ ಹೊಂದಿದ್ದು,  ಕ್ರೀಡೆಯ ತರಬೇತುದಾರರಿಗೆ ಎಲ್ಲ ಸಹಕಾರವನ್ನು ನೀಡಲಾಗುವುದು ಎಂದು ತಿಳಿಸಿದರು.

ಧ್ಯಾನ್ಚಂದ್ ಅವರು ಒಲಂಪಿಕ್ಸ್ ನಲ್ಲಿ ಮೂರು ಬಾರಿ  ಚಿನ್ನದ ಪದಕ ಗೆದ್ದು, ಭಾರತಕ್ಕೆ ಕೀರ್ತಿ ತಂದವರು. ಹಾಕಿಯ ಜಾದೂಗಾರರಾಗಿದ್ದ ಅವರು ಹಾಕಿಯನ್ನು ಅಗ್ರಮಾನ್ಯ ಸ್ಥಾನಕ್ಕೆ ತಂದವರು. ಧ್ಯಾನ್ ಚಂದ್ ಅವರ ಹೆಸರಿನಲ್ಲಿ ಖೇಲ್ ರತ್ನ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಕರ್ನಾಟಕದಲ್ಲಿ, ಏಕಲವ್ಯ ಪ್ರಶಸ್ತಿ , ಕ್ರೀಡಾರತ್ನ ಪ್ರಶಸ್ತಿ, ನಗದು ಪ್ರಶಸ್ತಿ ನೀಡಲಾಗುತ್ತಿದೆ. ಕ್ರೀಡಾಕ್ಷೇತ್ರದಲ್ಲಿನ ತಮ್ಮ ಶ್ರಮ, ಸಾಧನೆಯನ್ನು ಗುರುತಿಸಿ ರಾಜ್ಯ ಸರ್ಕಾರ ಕ್ರೀಡಾಪಟುಗಳ  ಬೆನ್ನುತಟ್ಟಿ ಪ್ರೋತ್ಸಾಹಿಸುವ ಕೆಲಸವನ್ನು ಮಾಡುತ್ತಿದೆ. ಭಾರತದಲ್ಲಿ ಶೇ. 46 ರಷ್ಟು ಜನಸಂಖ್ಯೆ ಯುವಜನರಿದ್ದಾರೆ. ಮುಂದಿನ 25 ವರ್ಷಗಳು ಭಾರತದ ಭವಿಷ್ಯ ಈ ಯುವಜನತೆಯ ಮೇಲಿದೆ ಎಂದು ತಿಳಿಸಿದರು.

ಯುವಕರಲ್ಲಿ ಶಿಸ್ತು, ವ್ಯಕ್ತಿತ್ವದಿಂದ ಯಶಸ್ಸು ಬರುತ್ತದೆ. ಕಠಿಣ ಪರಿಶ್ರಮಗಳಿಂದ ಹೆಚ್ಚಿನ ಗುರಿಗಳನ್ನು ಸಾಧಿಸುತ್ತಿರಬೇಕು. ಗೆಲ್ಲಬೇಕೆಂದು ಆಡಬೇಕೇ ಹೊರತು ಸೋಲಬಾರದು ಎಂದು ಆಟವಾಡಬಾರದು. ಗೆಲ್ಲಬೇಕೆಂಬ ಹುರುಪಿನಿಂದ ಸಕಾರಾತ್ಮಕವಾಗಿ ಆಡಬೇಕು ಆತ್ಮವಿಶ್ವಾಸದಿಂದ ನಿಮ್ಮ ಮೇಲೆ ನಂಬಿಕೆಯಿರಿಸಿ. ಯುವಕರು ಸಾಧನೆಗಳನ್ನು ಮಾಡುವಂತೆ ಹುರಿದುಂಬಿಸಿದರೆ, ಇನ್ನಷ್ಟು ಸಾಧನೆಗಳಿಗೆ ಪ್ರೋತ್ಸಾಹಿಸಿದಂತಾಗುತ್ತದೆ. ಜಗತ್ತಿನ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್, ಹಿಮಾಲಯದ ತಪ್ಪಲಿನಲ್ಲಿ ಕುರಿ ಕಾಯುವವರ ಜನಾಂಗದಲ್ಲಿ ಕುರಿ ಕಾಯುತ್ತಿದ್ದ  ಸಣ್ಣ ಹುಡುಗ ತೇನ್ ಸಿಂಗ್, ತನ್ನ 42ನೇ ವಯಸ್ಸಿನಲ್ಲಿ ಮೌಂಟ್ ಎವರೆಸ್ಟ್ ನ್ನು ಹತ್ತಿ ಭಾರತದ ಧ್ವಜವನ್ನು ನೆಟ್ಟ ಕೀರ್ತಿ ಅವರದು. ಅತಿ ಚಿಕ್ಕ ವಯಸ್ಸಿನಲ್ಲಿ ಅವರು ಮಾಡಿದ ಸಂಕಲ್ಪವನ್ನು ಯಶಸ್ವಿಯಾಗಿ ಸಾಕಾರಗೊಳಿಸಿದ್ದರು.  ಕ್ರೀಡಾ ಕ್ಷೇತ್ರದಲ್ಲಿ ಯಶ ಸಾಧಿಸಲು ಮೊದಲು ಧೃಡ ನಿಶ್ಚಯ, ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಮುಖ್ಯಮಂತ್ರಿಗಳು ಯುವಕರಿಗೆ ಕಿವಿಮಾತು ಹೇಳಿದರು.

ಇದೇ ಸಂದರ್ಭದಲ್ಲಿ 2020ನೇ ಸಾಲಿನ 15 ಏಕಲವ್ಯ ಪ್ರಶಸ್ತಿ 5 ಜೀವಮಾನ ಸಾಧನಾ ಪ್ರಶಸ್ತಿ, 14 ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ, 2021 ಮತ್ತು 22ನೇ ಸಾಲಿನ 10 ಕ್ರೀಡಾ ಪೋಷಕ ಪ್ರಶಸ್ತಿ ಪ್ರದಾನ ಮಾಡಿದರು ಹಾಗೂ ಸಹಸ್ರ ಪ್ರತಿಭಾ ಯೋಜನೆಯಡಿ ಕ್ರೀಡಾ ಪಟುಗಳಿಗೆ ನಗದು ಪುರಸ್ಕಾರ ನೀಡಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ರೇಷ್ಮೆ ಇಲಾಖೆ ಸಚಿವರಾದ ಡಾ. ಕೆ.ಸಿ. ನಾರಾಯಣಗೌಡ ಅವರು ಸಾಧಾನ ಸಂಚಿಕೆ ಬಿಡುಗಡೆ ಮಾಡಿ ನಮ್ಮ ರಾಜ್ಯದ ಕ್ರೀಡಾ ಪಟುಗಳಿಗೆ ಮುಖ್ಯಮಂತ್ರಿಗಳು ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ. ಗ್ರಾಮೀಣ ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ ಗ್ರಾಮೀಣ ಕ್ರೀಡೋತ್ಸವವನ್ನು ಪ್ರಾರಂಭಿಸಲಾಗಿದೆ.

ಕ್ರೀಡೆ ಅಭ್ಯಾಸ ಮಾಡಲು 504 ಕೋಟಿ ರೂ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಜಕ್ಕೂರು ಏರ್ ಪೋರ್ಟ್ ನಲ್ಲಿ ಕಡು ಬಡತನದ 31 ಕಾರ್ಮಿಕರ ಮಕ್ಕಳಿಗೆ ಪೈಲೆಟ್ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಕರ್ನಾಟಕವನ್ನು ಭಾರತದ ಪ್ರಥಮ ಯೋಗ ಸಾಕ್ಷರತಾ ರಾಜ್ಯವನ್ನಾಗಿ ಮಾಡಬೇಕೆಂಬ ಉದ್ದೇಶದಿಂದ ಸೆಪ್ಟೆಂಬರ್ 17ರಂದು ರಾಜ್ಯದ  ಆಯ್ದ 21 ಜಿಲ್ಲೆಗಳಲ್ಲಿ ಏಕ ಕಾಲದಲ್ಲಿ 5 ಲಕ್ಷಕ್ಕೂ ಹೆಚ್ಚು ಯೋಗಪಟುಗಳಿಂದ ಗಿನ್ನಿಸ್ ವಿಶ್ವ ದಾಖಲೆಯನ್ನು ನಿರ್ಮಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಸಮಾರಂಭದಲ್ಲಿ ವಿಧಾನ ಪರಿಷತ್ತಿನ ಮುಖ್ಯ ಸಚೇತಕರಾದ ಡಾ. ವೈ.ಎ. ನಾರಾಯಣಸ್ವಾಮಿ, ಮಾನ್ಯ ಶಾಸಕರು, ವಿಧಾನ ಪರಿಷತ್ ಹಾಗೂ, ಕರ್ನಾಟಕ ಒಲಂಪಿಕ್ ಸಂಸ್ಥೆಯ ಅಧ್ಯಕ್ಷರಾದ ಡಾ. ಕೆ. ಗೋವಿಂದರಾಜು,  ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಯೋಜನಾ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರಾದ ಡಾ. ಹೆಚ್. ಎನ್. ಗೋಪಾಲಕೃಷ್ಣ ಹಾಗೂ ಹಿರಿಯ ಅಧಿಕಾರಿಗಳು ಕ್ರೀಡಾ ಪಟುಗಳು, ಪ್ರಸಸ್ತಿ ಪುರಸ್ಕೃತರು ಉಪಸ್ಥಿತರಿದ್ದರು.

emedialine

Recent Posts

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

7 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

7 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

9 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

9 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

9 hours ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

9 hours ago