ಕಲಬುರಗಿ: ಮಾನಸಿಕ ರೋಗಿಗಳಿಗೆ ಔಷದೋಪಚಾರಕ್ಕಿಂತ ಆಪ್ತ ಸಮಾಲೋಚನೆ ಬಹುಮುಖ್ಯವಾಗಿದೆ ಎಂದು ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕಿ ಡಾ.ಕವಿತಾ ಪಾಟೀಲ ಹೇಳಿದರು.
ಕಲಬುರಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಲ್ಯಾಣ ಕರ್ನಾಟಕ ಸೈಕಿಯಾಟ್ರಿಕ್ ಗಿಲ್ಡ್, ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಸೋಮವಾರ ಇಲ್ಲಿನ ಜಿಮ್ಸ್ ಕಾಲೇಜಿನಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ “ಎಲ್ಲರಿಗೂ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮ ಜಾಗತೀಕ ಆದ್ಯತೆ” ಎಂಬ ಘೋಷವಾಕ್ಯದ ಅರಿವಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಯಾಂತ್ರಿಕ ಜೀವನದಲ್ಲಿ ಮಕ್ಕಳು, ವಿದ್ಯಾರ್ಥಿಗಳು, ವಯಸ್ಕರು ಹೀಗೆ ಪ್ರತಿಯೊಬ್ಬರು ಮಾನಸಿಕತೆಯಿಂದ ಬಳಲುತ್ತಿದ್ದಾರೆ. ಪಾಶ್ಚಿಮಾತ್ಯ ದೇಶದಲ್ಲಿ ಆಪ್ತ ಸಮಾಲೋಚನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದ ಅವರು ಜಿಮ್ಸ್ ಕಾಲೇಜಿನಲ್ಲಿಯೂ ಸಹ ಮಾನಸಿಕ ವಿಭಾಗವನ್ನು ಬಲಪಡಿಸಿ ಆಪ್ತ ಸಮಾಲೋಚನೆಗೆ ಹೆಚ್ಚಿನ ಒತ್ತು ನೀಡತ್ತಿದ್ದೇವೆ. ಮನೆ ಅಕ್ಕಪಕ್ಕದಲ್ಲಿ, ಸಂಬಂಧಿಕರಲ್ಲಿ, ಗೆಳೆಯರಲ್ಲಿ ಯಾರಾದರು ಮಾನಸಿಕತೆಯಿಂದ ಬಳಲುತ್ತಿದ್ದಲ್ಲಿ ಅವರನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ಕರೆತಂದು ಆಪ್ತ ಸಮಾಲೋಚನೆ ಮತ್ತು ಅಗತ್ಯವಿದ್ದರೆ ಚಿಕತ್ಸೆ ಕೊಡಿಸಬೇಕೆಂದು ವೈದ್ಯಕೀಯ ವಿದ್ಯಾರ್ಥಿಗಳಿಗೆ ಕರೆ ನೀಡಿದ ಅವರು ಆರೋಗ್ಯವಂತ ದೇಹದ ಜೊತೆಗೆ ಆರೋಗ್ಯ ಜೀವನ ಎಲ್ಲರದಾಗಲಿ ಎಂದು ಶುಭ ಕೋರಿದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ. ರಾಜಕುಮಾರ ಕುಲಕರ್ಣಿ ಮಾತನಾಡಿ, 2015-16ರ ಸಮೀಕ್ಷೆ ಪ್ರಕಾರ ಶೇ.10ರಷ್ಟು ಜನ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು, ಇವರಲ್ಲಿ ಶೇ.15ರಷ್ಟು ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಮೂಢನಂಬಿಕೆ, ಅರಿವಿನ ಕೊರತೆ, ಸಾಮಾಜಿಕ ಕಳಂಕದಿಂದ ಚಿಕಿತ್ಸೆಯಿಂದ ದೂರ ಉಳಿದಿದ್ದಾರೆ. ಮಾನಸಿಕ ರೋಗ ನಿವಾರಣೆಗೆ ಇಲಾಖೆಯು ಪ್ರತಿ ಮಾಹೆಯ ಮಂಗಳವಾರದಂದು ಮನೋಚೈತನ್ಯ ಕಾರ್ಯಕ್ರಮದಡಿ ತಾಲೂಕಾ ಆಸ್ಪತ್ರೆಗಳಲ್ಲಿ ವಿಶೇಷ ಶಿಬಿರ ನಡೆಸಿ ಮಾನಸಿಕ ರೋಗಿಗಳಿಗೆ ತಪಾಸಣೆ, ಆಪ್ತ ಸಮಾಲೋಚನೆ ಔಷಧಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಪ್ರತಿ ಪಿ.ಎಚ್.ಸಿ., ಚಿ.ಎಚ್.ಸಿ.ಯಲ್ಲಿಯೂ ಈ ಸೇವೆ ಲಭ್ಯವಿದ್ದು, ಪ್ರತಿ ವರ್ಷ 700-800 ರೋಗಿಗಳು ಗುಣಮುಖರಾಗುತ್ತಿದ್ದಾರೆ ಎಂದರು.
ಕಲ್ಯಾಣ ಕರ್ನಾಟಕ ಸೈಕಿಯಾಟ್ರಿಕ್ ಗಿಲ್ಡ್ ಸಂಸ್ಥೆಯ ಕಲಬುರಗಿ ಘಟಕದ ಕಾರ್ಯದರ್ಶಿ ಡಾ. ರಾಹುಲ ಮಂದಕನಳ್ಳಿ ಮಾತನಾಡಿ, ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಾನಸಿಕ ಆರೋಗ್ಯ ಸುಧಾರಣೆಗೆಂದೆ 2016ರಲ್ಲಿ ಹುಟ್ಟಿಕೊಂಡಿರುವ ಕೆ.ಕೆ.ಪಿ.ಜಿ. ಸಂಸ್ಥೆ ರಾಯಚೂರು, ಬೀದರ, ಕಲಬುರಗಿ, ಯಾದಗಿರಿಯಲ್ಲಿ ಸರ್ಕಾರದ ಸಂಸ್ಥೆಗಳೊಂದಿಗೆ ಸೇರಿ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸುತ್ತಾ ಬಂದಿದೆ. ರಾಜ್ಯದಲ್ಲಿ ಮಾನಸಿಕ ಆರೋಗ್ಯ ಕಾರ್ಯಕ್ರಮ ತುಂಬಾ ಯಶಸ್ವಿಯಾಗಿ ಜರುಗುತ್ತಿದ್ದು, ಮುಂದಿನ 10 ವರ್ಷದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ಕಾಣಬಹುದಾಗಿದೆ ಎಂದರು.
3,200 ಮಾನಸಿಕ ರೋಗಿಗಳು: ಡಿ.ಹೆಚ್.ಓ ಡಾ.ರಾಜಶೇಖರ ಮಾಲಿ ಅವರು ಮಾತನಾಡಿ, ಜಿಲ್ಲೆಯಲ್ಲಿ 3,200 ಮಾನಸಿಕ ರೋಗಿಗಳನ್ನು ಗುರುತಿಸಿ ಇವರಿಗೆ ಆಪ್ತ ಸಮಾಲೋಚನೆ, ಔಷದೋಪಚಾರ ನೀಡಲಾಗುತ್ತಿದೆ. ಇದಕ್ಕೂ ಮೀರಿ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳಿದ್ದು, ಚಿಕಿತ್ಸೆ ಪಡೆಯಲು ಮುಂದೆ ಬರುತ್ತಿಲ್ಲ. ಆಸ್ಪತ್ರೆಗೆ ಬರುವ ಮಾನಸಿಕ ರೋಗಿಗೆ ವೈದ್ಯರಾದವರು ಆತ್ಮೀಯತೆಯಿಂದ ಮಾತನಾಡಿಸಿ, ಅವರ ಮತ್ತು ಅವರ ಕುಟುಂಬದ ಕುರಿತು ಯೋಗಕ್ಷೇಮ ವಿಚಾರಿಸಿದಲ್ಲಿ ಬಹುತೇಕ ರೋಗಿ ಇಲ್ಲಿಯೆ ಗುಣಮುಖನಾಗುತ್ತಾನೆ. ಇಲ್ಲಿ ಔಷಧಿಗಿಂತ ಆತ್ಮೀಯತೆಯ ಸಮಾಲೋಚಣೆ ತುಂಬಾ ಮುಖ್ಯ ಎಂದು ವೈದ್ಯ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಲಬುರಗಿ ನಗರದ ಘನಾತೆ ಮಾನಸಿಕ ಆಸ್ಪತ್ರೆಯ ಖಾತ್ಯ ವೈದ್ಯ ಡಾ.ಎನ್.ಜಿ.ಘನಾತೆ ಮತ್ತು ಜಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಶಫಿಯೂದ್ದಿನ್ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ನಗದು ಬಹುಮಾನ: ಕಾರ್ಯಕ್ರಮದ ಅಂಗವಾಗಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳ ತಂಡಗಳಿಗೆ ಮಾನಸಿಕ ಆರೋಗ್ಯ ಕುರಿತು ಆಯೋಜಿಸಿದ ರಸಪ್ರಶ್ನೆ ಸ್ಪರ್ಧೆಯಲ್ಲಿ ಮೊದಲನೇ ಸ್ಥಾನ ಪಡೆದ ಜಿಮ್ಸ್ ಕಾಲೇಜಿನ ಡಾ.ಮನೋಜ ಅಗರವಾಲ್ ಮತ್ತು ಡಾ. ಓಂಕಾರ ಬಾಬುಶೆಟ್ಟಿ, ದ್ವಿತೀಯ ಸ್ಥಾನ ಪಡೆದ ಎಂ.ಆರ್.ಎಂ.ಸಿ. ಕಾಲೇಜಿನ ಡಾ. ಜ್ಯೋತಿ ಪ್ರಕಾಶ ಮತ್ತು ಡಾ. ದೊಂಬಳೆ ಶುಭಂ, ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟ ಇ.ಎಸ್.ಐ.ಸಿ. ಕಾಲೇಜಿನ ಡಾ.ಚಂದ್ರು ಗಂಜಿ ಮತ್ತು ಡಾ. ಪೃಥ್ವಿರಾಜ ಬಿ. ಅವರಿಗೆ ಗಣ್ಯರು ನಗದು ಬಹುಮಾನ ಮತ್ತು ಪ್ರಮಾಣ ಪತ್ರ ನೀಡಿದರು. ನಾಲ್ಕನೇ ಸ್ಥಾನ ಪಡೆದ ಕೆ.ಬಿ.ಎನ್. ಕಾಲೇಜಿನ ಡಾ. ಮಲಿಯಾ ಕಾವಲ್ ಮತ್ತು ಡಾ.ಆಯೆಶಾ ನಜ್ಮೀನ್ ಅವರಿಗೆ ಪ್ರಮಾಣ ಪತ್ರ ನೀಡಲಾಯಿತು.
ಕಾರ್ಯಕ್ರಮದಲ್ಲಿ ಆರ್.ಸಿ.ಹೆಚ್.ಓ ಪ್ರಭುಲಿಂಗ ಮಾನಕರ್, ಡಾ.ಅಜಯ ಧಾಗೆ, ಡಾ.ಚಂದ್ರಶೇಖರ ಹುಡೆ, ಡಾ.ರೇಣುಕಾ ಬಗಾಲೆ, ಡಾ.ಪ್ರಫುಲ್ಲವಾಲಿ ಸೇರಿದಂತೆ ಅನೇಕ ಮನೋವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಇದಕ್ಕೂ ಮುನ್ನ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಜಿಮ್ಸ್ ಆವರಣದಿಂದ ಆರಂಭವಾದ ಜಾಗೃತಿ ಜಾಥಾಗೆ ಕಲಬುರಗಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಕೃಷ್ಣಾಜೀ ಬಾಬುರಾವ ಪಾಟೀಲ ಅವರು ಚಾಲನೆ ನೀಡಿದರು. ಜಾಥಾವು ಜಿಮ್ಸ್ ಆಸ್ಪತ್ರೆಯಿಂದ ಹೊರಟು ಎಸ್.ಟಿ.ಬಿ.ಟಿ. ಕ್ರಾಸ್, ಜಗತ್ ವೃತ್ತ, ಅನ್ನಪೂರ್ಣ ಕ್ರಾಸ್ ಮಾರ್ಗವಾಗಿ ಮರಳಿ ಜಿಮ್ಸ್ ಆಸ್ಪತ್ರೆಗೆ ಬಂದು ಕೊನೆಗೊಂಡಿತು. ನೂರಾರು ಸಂಖ್ಯೆಯಲ್ಲಿ ಜಾಥಾದಲ್ಲಿ ಭಾಗವಹಿಸಿದ ವೈದ್ಯಕೀಯ ವಿದ್ಯಾರ್ಥಿಗಳು ಕೈಯಲ್ಲಿ ಭಿತ್ತಿಪತ್ರ, ಪೋಸ್ಟರ್ ಹಿಡಿದು ಸಾರ್ವಜನಿಕರಲ್ಲಿ ಮಾನಸಿಕ ಆರೋಗ್ಯ ಕುರಿತು ಅರಿವು ಮೂಡಿಸಿದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…