ಕಲಬುರಗಿ: ಹಿಂದಿನ ಹೈದ್ರಾಬಾದ್ ಕರ್ನಾಟಕ ಮತ್ತು ಇಂದಿನ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಗತ್ಯವಾದ ಪ್ರಮಾಣದಲ್ಲಿ ಕಾರ್ಖಾನೆಗಳು ಸ್ಥಾಪನೆಯಾಗದೆ ಇರುವುದರಿಂದ ಈ ಭಾಗದ ಕಾರ್ಮಿಕರು ಮುಂಬೈ, ಹೈದ್ರಾಬಾದ್, ಗುಜರಾತ ಮತ್ತಿತರ ದೊಡ್ಡ ನಗರಗಳಿಗೆ ವಲಸೆ ಹೋಗಿ ಜೀವನ ಸಾಗಿಸುತ್ತಿದ್ದಾರೆ ಎಂದು ಯುವ ಜಿಲ್ಲಾ ಕಾರ್ಮಿಕ ಮುಖಂಡ ಸುನಿಲ ಮಾನ್ಪಡೆ ಹೇಳಿದರು.
ಜಿಲ್ಲೆಯ ಕಮಲಾಪುರ ತಾಲೂಕಿನ ಮಹಾಗಾಂವ ಕ್ರಾಸ್ ನಲ್ಲಿ ತಾಲೂಕು ಅಸಂಘಟಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ವತಿಯಿಂದ ಹಮ್ಮಿಕೊಂಡ ಕಾರ್ಮಿಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಒಂದು ವೇಳೆ ನಮ್ಮ ಭಾಗದಲ್ಲಿ ಕಾರ್ಖಾನೆಗಳು ಸ್ಥಾಪನೆಯಾದಲ್ಲಿ ಕಾರ್ಮಿಕರಿಗೆ ಸ್ಥಳೀಯವಾಗಿ ಕೆಲಸ ದೊರಕುತ್ತದೆ, ಸ್ವಗ್ರಾಮದಲ್ಲಿದ್ದು ಜೀವನ ಸಾಗಿಸಬಹುದು, ಕಾರ್ಮಿಕರ ಕೆಲಸದ ಅವಧಿಯ ಪ್ರಮಾಣ ತಗ್ಗಿಸಲು ಸರಕಾರ ಕ್ರಮ ಕೈಗೊಳ್ಳಬೇಕು, ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿನ ದಿನಗೂಲಿ ಹೆಚ್ಚಿಸಬೇಕು ಎಂದರು.
ತದ ನಂತರ ಕಾರ್ಮಿಕರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ತಾಲೂಕು ಅಸಂಘಟಿತ ಹಾಗೂ ಇತರೆ ಕಟ್ಟಡ ನಿರ್ಮಾಣ ಸಂಘದ ತಾಲೂಕು ಅಧ್ಯಕ್ಷ ಪ್ರಕಾಶ ದರ್ಗನ, ಅರ್ಜುನ ದಂಡಗುಲಕರ, ಮಲ್ಲಿಕಾರ್ಜುನ ಮೈತ್ರಿ, ಶರಣು ಸೈಯದ ಚಿಂಚೋಳಿ, ನ್ಯಾಯವಾದಿ ತೇನಸಿಂಗ್, ಶೋಭಾ ದಶರಥ, ಶ್ರೀವಂತ ಚಂದ್ರನಗರ, ಲಕ್ಷ್ಮಣ ಸೊಂತ, ಚಂದ್ರಕಾಂತ ಮರಗುತ್ತಿ, ತಯ್ಯಬ ಪಾಶಾ ಇತರರು ಇದ್ದರು.