ಕಲಬುರಗಿ: ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಒಂದು ತಿಂಗಳ ಅವಧಿಯಲ್ಲಿ ತಾವು ಕೈಗೊಂಡ ಕಾರ್ಯಗಳ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ ಬಿಟಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಅವರು ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು ತಾವು ಜವಾಬ್ದಾರಿ ವಹಿಸಿಕೊಂಡ ನಂತರದಿಂದ ಮಾಡಿರುವ ಎಲ್ಲಾ ಸಭೆ ಹಾಗೂ ಕೆಲಸಗಳ ಪಟ್ಟಿ ಮಾಡಿದ್ದಾರೆ.
” ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯಂತಹ ಬೃಹತ್ ಇಲಾಖೆ ಜೊತೆಗೆ ಐಟಿಬಿಟಿ ಇಲಾಖೆಯನ್ನು ಸಮರ್ಥವಾಗಿ ಮುನ್ನಡೆಸಬೇಕಿರುವ ದೊಡ್ಡ ಜವಾಬ್ದಾರಿಯೂ ನನ್ನ ಮೇಲಿದೆ, ಈ ಹಿನ್ನಲೆಯಲ್ಲಿ ನಮ್ಮ ಇಲಾಖೆಯನ್ನು ಜನಸ್ನೇಹಿಯಾಗಿಸಲು, ಸರಳೀಕರಣಗೊಳಿಸಲು ಹಾಗೂ ಸಬಲೀಕರಣಗೊಳಿಸಲು
ಸಮಗ್ರ ಕಾರ್ಯನಿರ್ವಹಣೆಯನ್ನು ಕೇಂದ್ರೀಕರಿಸಲಾಗಿದೆ”
” ಇಲಾಖೆಯ ಪ್ರತಿಯೊಂದು ಕಾರ್ಯದಲ್ಲಿಯೂ ಪಾರದರ್ಶಕತೆ ತರುವ ನಿಟ್ಟಿನಲ್ಲಿ, ನಾನು ಈ ಮೊದಲ ತಿಂಗಳ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡುತ್ತಿದ್ದೇನೆ. ಇದನ್ನು ಪ್ರತಿ ತಿಂಗಳು ಮುಂದುವರೆಸಿಕೊಂಡು ಹೋಗಲು ಪ್ರಾಮಾಣಿಕ ಪ್ರಯತ್ನ ಮಾಡಲಿದ್ದೇನೆ”.
ಈ ರಿಪೋರ್ಟ್ ಕಾರ್ಡ್ ನಲ್ಲಿ ನಾನು ಸರ್ಕಾರದ ಮಟ್ಟದಲ್ಲಿ ನಡೆಸಿದ ಸಭೆಗಳು ಹಾಗೂ ಕೈಗೊಂಡ ಪ್ರಮುಖ ನಿರ್ಧಾರಗಳ ಮಾಹಿತಿಯನ್ನು ಒಳಗೊಂಡಿವೆ.
ಈ ನಿಟ್ಟಿನಲ್ಲಿ ಈ ಎರಡೂ ಇಲಾಖೆಯನ್ನು ಜನರ ಬಳಿಗೆ ಕರೆದೊಯ್ಯಲು ನಿಮ್ಮೆಲ್ಲರ ಸಹನೆ, ಸಹಕಾರ ಹಾಗೂ ಬಹುಮುಖ್ಯವಾಗಿ ಸಲಹೆಗಳು ಅತ್ಯಗತ್ಯ ಎಂದೂ ಈ ಮೂಲಕ ಕೋರಿಕೊಳ್ಳುತ್ತೇನೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.