ಕಲಬುರಗಿ: ಕಲ್ಯಾಣ ಕರ್ನಾಟಕದ 75ನೇ ಅಮೃತ ಮಹೋತ್ಸವದ ನಿಮಿತ್ಯ ಮತ್ತು ಸಂವಿಧಾನದ 371ನೇ ಜೇ ಕಲಂ ಜಾರಿಯಾಗಿ ದಶಮಾನೋತ್ಸವದ ಅಂಗವಾಗಿ ಹಿಂದುಳಿದ ಮತ್ತು ಸಂವಿಧಾನದ ವಿಶೇಷ ಸ್ಥಾನಮಾನ ಪಡೆದಿರುವ ಕಲ್ಯಾಣ ಕರ್ನಾಟಕದ ರಚನಾತ್ಮಕ ಸರ್ವಾಂಗೀಣ ಅಭಿವೃದ್ಧಿಯ ವಿಷಯಗಳಿಗಳಿಗೆ ಸಂಬಂಧಿಸಿ, ಪ್ರಾದೇಶಿಕ ಅಸಮತೋಲನೆ ನಿವಾರಣೆಗೆ ಭವಿಷ್ಯದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ, ಸಂವಿಧಾನದ 371ನೇ ಜೇ ಕಲಂ ಪರಿಣಾಮಕಾರಿ ಅನುಷ್ಠಾನ ಸೇರಿದಂತೆ ಕಲ್ಯಾಣದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಿ ಕಾಲಮಿತಿಯ ಅಭಿವೃದ್ಧಿಗೆ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲು ಕಲ್ಯಾಣ ಕರ್ನಾಟಕದ ವಿಭಾಗೀಯ ಕೇಂದ್ರ ಕಲಬುರಗಿಯಲ್ಲಿ ಪ್ರಸ್ತುತ ಅಮೃತ ಮಹೋತ್ಸವದ ಸಾಲಿನಲ್ಲಿ ಕನಿಷ್ಠ ಒಂದು ವಾರದ ವಿಧಾನ ಮಂಡಲ ಅಧಿವೇಶನ ನಡೆಸಲು ಕಲ್ಯಾಣ ಕರ್ನಾಟಕದ ಜನಮಾನಸದ ವತಿಯಿಂದ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಸರ್ಕಾರಕ್ಕೆ ವಿಶೇಷ ಮನವಿ ಮೂಲಕ ಒತ್ತಾಯಿಸುತ್ತದೆ.
ಕಲ್ಯಾಣ ಕರ್ನಾಟಕ ಪ್ರದೇಶ ಜಗತ್ತಿಗೆ ಬಸವಾದಿ ಶರಣರ ನೇತೃತ್ವದಲ್ಲಿ ಪಾರ್ಲಿಮೆಂಟ್ ನೀಡಿದೆ. ಕನ್ನಡ ಲೋಕಕ್ಕೆ ಕವಿರಾಜಮಾರ್ಗ ಮಹಾ ಗ್ರಂಥ ನೀಡಿದ್ದು,ಹಿಂದು ಜಗತ್ತಿಗೆ ಹಿಂದೂ ಶಾಸನ ನೀಡಿದ ನಮ್ಮ ಪ್ರದೇಶ ವಿಶ್ವಕ್ಕೆ ವಚನ ಸಾಹಿತ್ಯ, ದಾಸ ಸಾಹಿತ್ಯ, ಸೋಫಿ ಸಾಹಿತ್ಯ ನೀಡಿದ ಕಲ್ಯಾಣ ಕರ್ನಾಟಕ ಶ್ರೀಮಂತ ಬೌದ್ಧ, ಜೈನ್,ಶಿಖ ಪರಂಪರೆಯಿಂದ ಮೆರೆದ ನಾಡಾಗಿದೆ.
ನಮ್ಮ ಸ್ವತಂತ್ರ ಹೋರಾಟಗಾರರ ತ್ಯಾಗ ಬಲಿದಾನದಿಂದ ಮತ್ತು ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲರ ದಿಟ್ಟತನದ ನಿರ್ಧಾರದಿಂದ 1948 ಸೆಪ್ಟೆಂಬರ್ 17 ರಂದು ರಾಜ್ಯ ಶಾಹಿ ವ್ಯವಸ್ಥೆಯಿಂದ ಅಖಂಡ ಭಾರತದ ಪ್ರಜಾಶಾಹಿ ವ್ಯವಸ್ಥೆಯಲ್ಲಿ ಸೇರಿ 75ನೇ ವರ್ಷಕ್ಕೆ ಕಾಲಿಟ್ಟಿದ್ದೇವೆ. ಅದರಂತೆ 371ನೇ(ಜೆ) ಕಲಂ ಜಾರಿಯಾಗಿ 10 ವರ್ಷ ಗತಿಸಿರುವ ಈ ಅವಧಿಯಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಕೃಷ್ಣಾ, ಗೋದಾವರಿ ಜಲಾನಯನ ಪ್ರದೆಶದ ನೀರಾವರಿ ಯೋಜನೆಗಳ ಸ್ಥಿತಿಗತಿ, ಕೈಗಾರಿಕೆ, ರಸ್ತೆ, ಸಾರಿಗೆ, ಶಿಕ್ಷಣ, ವಾಣಿಜ್ಯ ,ವ್ಯಾಪಾರ, ಉದ್ಯೋಗ, ಕ್ರೀಡೆ ಸಾಹಿತ್ಯ ಹೀಗೆ ಎಲ್ಲಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯ ಬಗ್ಗೆ ಈ ಐತಿಹಾಸಿಕ ಕಲ್ಯಾಣ ಕರ್ನಾಟಕದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಸರ್ಕಾರ ಕಲಬುರಗಿಯಲ್ಲಿ ವಿಧಾನ ಮಂಡಲ ಅಧಿವೇಶನ ನಡೆಸಲು ಮತ್ತು ಸಂಪುಟ ಸಭೆಗಳು ನಡೆಸಿ ನಮ್ಮ ಪ್ರದೇಶದ ಅಸ್ಮಿತೆಗೆ ಸ್ಪಂದಿಸುವುದು ಅತಿ ಅವಶ್ಯವಾಗಿದೆ.
ಈ ವಿಷಯಕ್ಕೆ ಸಂಬಂಧಿಸಿ, ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆಯವರು ಸೇರಿದಂತೆ, ಕಲ್ಯಾಣದ ಏಳು ಜಿಲ್ಲೆಗಳ ಕಲ್ಯಾಣದ ಸಚಿವರುಗಳು ರಾಜಕೀಯ ಇಚ್ಛಾಶಕ್ತಿ ವ್ಯಕ್ತಪಡಿಸಿ ನಮ್ಮ ಭಾಗದ ಜ್ವಲಂತ ಸಮಸ್ಯೆಗಳ ನಿವಾರಣೆ ಬಗ್ಗೆ, ಪ್ರಾದೇಶಿಕ ಅಸಮತೋಲನೆ ನಿವಾರಿಸಲು ಅದರಂತೆ ರಚನಾತ್ಮಕ ಕಾಲಮಿತಿಯ ಪ್ರಗತಿಗೆ ಅಮೃತ ಮಹೋತ್ಸವ ನಿಮಿತ್ಯ ಒಂದು ವಾರದ ವಿಧಾನ ಮಂಡಲ ಅಧಿವೇಶನ ಮತ್ತು ಪ್ರತಿ ವರ್ಷ ಎರಡು ಸಂಪುಟ ಸಭೆಗಳನ್ನು(ವರ್ಷದ ಆರಂಭ ಫೆಬ್ರವರಿ ತಿಂಗಳಲ್ಲಿ ಮತ್ತು ವರ್ಷದ ಅಂತ್ಯ ಸೆಪ್ಟೆಂಬರ್ ತಿಂಗಳಲ್ಲಿ)ಕಲಬುರಗಿಯಲ್ಲಿ ನಡೆಸಲು ವಿಶೇಷ ಮುತುವರ್ಜಿ ವಹಿಸಿ ಸಂಘಟಿತ ರಾಜಕಿಯ ಇಚ್ಛಾಶಕ್ತಿ ವ್ಯಕ್ತಪಡಿಸಲು ಕಲ್ಯಾಣ ಕರ್ನಾಟಕದ ಜನಮಾನಸದ ವತಿಯಿಂದ ಸಮಿತಿ ಆಗ್ರಹಿಸಿದೆ .
ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆಯವರು ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವದ ನಿಮಿತ್ಯ ಮುಖ್ಯಮಂತ್ರಿಗಳಿಗೆ ಆಹ್ವಾನಿಸಿ ಕಾರ್ಯಕ್ರಮ ರೂಪುರೇಷೆಗಳನ್ನು ಹಮ್ಮಿಕೊಂಡಿರುವುದಕ್ಕೆ ಸಮಿತಿ ಸ್ವಾಗತಿಸುತ್ತದೆ.ಅದರಂತೆ ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷರಾದ ಅಜಯಸಿಂಗ್ ರವರು ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ನಿಮಿತ್ಯ ಒಂದು ವರ್ಷಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿರುವುದು ಸಂತಸದ ಸಂಗತಿಯಾಗಿದೆ.
ಮಲ್ಲಿಕಾರ್ಜುನ ಖರ್ಗೆ ಮತ್ತು ಧರ್ಮಸಿಂಗ್ ರವರ ಮುತುವರ್ಜಿಯಿಂದ ಹಾಗು ಗುಂಡುರಾವ್ ಸರಕಾರದ ರಾಜಕೀಯ ಇಚ್ಛಾಶಕ್ತಿಯಿಂದ 1982 ರಲ್ಲಿ ಹಿಂದುಳಿದ ಕಲ್ಯಾಣ ಕರ್ನಾಟಕದ ಪ್ರಾದೇಶಿಕ ಅಸಮತೋಲನೆ ನಿವಾರಣೆಗೆ ಮೊಟ್ಟ ಮೊದಲು ಸಂಪುಟ ಸಭೆ ಕಲಬುರಗಿಯಲ್ಲಿ ನಡೆಸಿ, ಧರ್ಮಸಿಂಗ್ ಸಮಿತಿಯ ವರದಿಯಂತೆ ವಿಶೇಷ ಅಭಿವೃದ್ಧಿಗೆ ಹೈದ್ರಾಬಾದ ಕರ್ನಾಟಕ ಅಭಿವೃದ್ಧಿ ಮಂಡಳಿ ರಚನೆಗೆ ನಿರ್ಧಾರ ಕೈಗೊಳ್ಳಲಾಗಿತ್ತು. ಅದರಂತೆ ನಂತರದ ದಿನಗಳಲ್ಲಿ 2009,2010 ರಲ್ಲಿ ಯಡಿಯೂರಪ್ಪ ಸರ್ಕಾರ ತರುವಾಯ ಜಗದೀಶ್ ಶೆಟ್ಟರ್, ಸಿದ್ರಾಮಯ್ಯ ನೇತೃತ್ವದ ಸರ್ಕಾರ ಕಲಬುರಗಿಯಲ್ಲಿ ಸಂಪುಟ ಸಭೆ ನಡೆಸಿ ಕಲ್ಯಾಣದ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸಿರುವದು ಕಲ್ಯಾಣ ಕರ್ನಾಟಕ ಜನಮಾನಸ ಮರೆಯುವಂತಿಲ್ಲ. ಇದಕ್ಕೆ ಪೂರಕವಾಗಿ ಪ್ರಸ್ತುತ ಸರಕಾರ ಈ ಅಭಿವೃದ್ಧಿಪರ ಸಂಪ್ರದಾಯ ಮುಂದುವರೆಸಲು ಸಮಿತಿ ಒತ್ತಾಯಿಸುತ್ತದೆ.