ಶಹಾಪೂರ: ಯಾದಗೂರಿ ಜಿಲ್ಲೆಯಲ್ಲಿ ಮುಂಗಾರು ಮಳೆ ವೈಫಲ್ಯದಿಂದ ಬೆಳೆ ಬಾರದೆ ರೈತರು ತೊಂದರೆ ಅನುಭವಿಸುವಂತಾಗಿದೆ. ಬರ ಘೋಷಣೆಯಾದರೂ ರಾಜ್ಯ ಸರ್ಕಾರ ರೈತರಿಗೆ ಪರಿಹಾರ ನೀಡಲು ಮುಂದೆ ಬರುತ್ತಿಲ್ಲ.ಇದು ರೈತ ವಿರೋಧಿ ಸರ್ಕಾರ ಎಂದು ಬಿಜೆಪಿ ಮುಖಂಡ ಕರಣ ಸುಬೇದಾರ ಅವರು ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ರಾಜ್ಯದ 195 ಬರಗಾಲ ಪೀಡಿತ ತಾಲ್ಲೂಕುಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿ ಒಂದು ತಿಂಗಳು ಕಳೆದಿದೆ. ಆದಕಾರಣ ತಕ್ಷಣ ರಾಜ್ಯ ಸರ್ಕಾರ ಈಗಾಗಲೇ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರೈತರಿಗೆ ಪರಿಹಾರ ನೀಡಬೇಕು. ಇಗಾಗಲೇ ಸರ್ಕಾರ ಜಿಲ್ಲಾಧಿಕಾರಿಗಳಿಂದ ವರದಿ ತರಿಸಿಕೊಂಡಿದು ಕೃಷಿ ಸಚಿವರು ಕೂಡ ಕಲಬುರಗಿಯಲ್ಲಿ ಜಿಲ್ಲೆಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಯಾದಗೀರಿ ಜಿಲ್ಲೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ಹತ್ತಿ, ತೊಗರಿ, ಮೆಣಸಿನಕಾಯಿ, ಮುಂತಾದ ಮುಂಗಾರು ಬೆಳೆಗಳು ಮಳೆ ಬಾರದೆ ಹಾಳಾಗಿದೆ.ರೈತರು ಇಲ್ಲಿಯವರೆಗೆ ಬೆಳೆಯಿಂದ ಒಂದು ರೂಪಾಯಿ ಕೂಡ ಕಂಡಿಲ್ಲ.ಸಾಲ ಮಾಡಿ ಬಿತ್ತನೆ ಬೀಜ ಮತ್ತು ಗೊಬ್ಬರ ಖರೀದಿಸಿದ್ದಾರೆ.ಸಾಲ ಮರು ಪಾವತಿಗೆ ಹಣ ಇಲ್ಲ.ಮಳೆ ಬಂದಿದ್ದರೆ ಈಗಾಗಲೇ ರೈತರ ಕೈಗೆ ಹಣ ಬರುತ್ತಿತ್ತು.ಪರಿಸ್ಥಿತಿ ಹೀಗಿರುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಚಿತ ಗ್ಯಾರಂಟಿ ಯೋಜನೆಗಳಿಗಾಗಿ ಸರ್ಕಾರದ ಖಜಾನೆ ಖಾಲಿ ಮಾಡುತ್ತಿದ್ದಾರೆ.ಆದರೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ತೋರುತ್ತಿಲ್ಲ ಎಂದು ಸರ್ಕಾರದ ವಿರುದ್ದ ಆಕ್ರೊಶ ವ್ಯಕ್ತಪಡಿಸಿದ್ದರು.
ತೊಗರಿ ಬೆಳೆಗೆ ಈ ಬಾರಿ ಕೀಟಭಾದೆ ಆವರಿಸಿದೆ.ಕೀಟನಾಶಕ ಎಣ್ಣೆ ಖರೀದಿಸಲು ಸರ್ಕಾರ ರೈತರ ಖಾತೆಗೆ ಕೂಡಲೇ ಹಣ ಜಮಾ ಮಾಡಬೇಕು.ಪ್ರಸಕ್ತ ಸಾಲಿನ ಎಲ್ಲಾ ರೈತರ ಬೆಳೆ ಸಾಲ ಬಡ್ಡಿ ಸಮೇತ ಸಂಪೂರ್ಣ ಮನ್ನಾ ಮಾಡಬೇಕು.ಜೋಳ ಹಾಗೂ ಹತ್ತಿ ಬಿತ್ತನೆ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ಉಚಿತವಾಗಿ ನೀಡಬೇಕು ಎಂದು ಸುಬೇದಾರ ಆಗ್ರಹಿಸಿದರು.