ರಾಯಚೂರು: ಕಾರ್ಪೊರೇಟ್ ಬಂಡವಾಳವಾದಿ ವ್ಯವಸ್ಥೆಯಲ್ಲಿ ಆಳುವ ವರ್ಗ ಸರ್ವಾಧಿಕಾರಿಯಾಗಿ ರೂಪಾಂತರಗೊಂಡು ಕಾರ್ಮಿಕರೊಳಗೊಂಡು ಜನತೆಯ ಎಲ್ಲಾ ಹಕ್ಕುಗಳನ್ನು ಧಮನಗೊಳಿಸುತ್ತಲಿದೆ ಇದರ ವಿರುದ್ಧ ಪ್ರಭಲವಾದ ದುಡಿವ ವರ್ಗದ ಕ್ರಾಂತಿಕಾರಿ ಸಂಘರ್ಷ ತೀವ್ರಗೊಳಿಸದೇ ಹೋದರೇ ದೇಶದ ಭವಿಷ್ಯಕ್ಕೆ ಉಳಿಗಾಲವಿಲ್ಲಾ ಎಂದು ಸಿಪಿಐ ಎಂಎಲ್ ರೆಡ್ ಸ್ಟಾರ್ ರಾಜ್ಯ ಕಾರ್ಯದರ್ಶಿ ಬಿ. ರುದ್ರಯ್ಯ ಕರೆನೀಡಿದರು, ಅವರಿಂದು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಜರುಗಿದ ಟಿಯುಸಿಐ ನ 9ನೇ ರಾಜ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಬೆಂಗಳೂರಿನ ಪ್ರಖ್ಯಾತ ನ್ಯಾಯವಾದಿಗಳು ಕಾರ್ಮಿಕ ಮುಖಂಡರೂ ಆದ ಎಸ್. ಬಾಲನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ ಮೋದಿಯವರು ಬರೀ ಮಾತಿನಲ್ಲೇ ಮನೆಕಟ್ಟುತ್ತಿದ್ದಾರೆ, ಸುಳ್ಳುಗಳಿಂದ ಕೂಡಿದ ಸರಮಾಲೆಯನ್ನು ಅವರು ಪೋಣಿಸುತ್ತಾ ಸಾಗಿದ್ದಾರೆ, ಅವರೊಬ್ಬ ಕಾರ್ಪೊರೇಟ್ ಬಂಡವಾಳಗಾರರ ಅಸಲಿ ಏಜೆಂಟ್ ಗಿರಿಯನ್ನು ಪ್ರಾಮಾಣಿಕವಾಗಿ ನೆರವೇರಿಸುತ್ತಾ ದೇಶದ ಸಂಪನ್ಮೂಲಗಳನ್ನು ಅವರ ಪಾದದ ಅಡಿಯಲ್ಲಿ ತಂದಿಟ್ಟಿದ್ದಾರೆ, ಚೌಕಿದಾರ ಎಂಬುದು ಅವರ ನಕಲಿ ಹೆಸರಾಗಿದೆ ಎಂದರು.
ಕರ್ನಾಟಕ ಶ್ರಮಿಕ ಶಕ್ತಿಯ ಪ್ರಮುಖರಾದ ವರದರಾಜೇಂದ್ರ ಮಾತನಾಡಿ ಕಾರ್ಮಿಕ ವರ್ಗದ ಮುಂದಿರುವ ಸವಾಲು ಐಕ್ಯತಾ ಕಾರ್ಯಭಾರದೊಂದಿಗೆ ತನ್ನೆಲ್ಲಾ ಹಕ್ಕು ಮತ್ತು ಕಾಯ್ದೆಗಳನ್ನು ರಕ್ಷಿಸಿಕೊಳ್ಳುವುದಾಗಿದೆ ಎಂದರು.
ಟಿಯುಸಿಐ ರಾಜ್ಯಾಧ್ಯಕ್ಷರಾದ ಆರ್. ಮಾನಸಯ್ಯ ಬಹಿರಂಗ ಅಧಿವೇಶನದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಧರ್ಮ ಜಾತಿ ಹೆಸರಲ್ಲಿ ಭಾರತ ಜತೆಯನ್ನು ವಿಭಜಿಸುತ್ತಿರುವ ಹಿಂದುತ್ವ ಫ್ಯಾಶಿಸಂ ವಿರುದ್ಧ ಸಿಡಿದೇಳುವ ಪ್ರಕ್ರಿಯೆಗಳಲ್ಲಿ ಕಾರ್ಮಿಕ ವರ್ಗ ನಿರತಗೊಂಡು ಸೋಲುಣಿಸುವ ಕಾರ್ಯಕ್ಕೆ ಹೆಗಲೊಡ್ಡಬೇಕಿದೆ ಎಂದು ಕರೆ ನೀಡಿದರು.
ಕೇಂದ್ರ ಸಮಿತಿಯ ಎಂ. ಡಿ. ಅಮಿರ ಅಲಿ, ಎಐಕೆಕೆಎಸ್ ರಾಜ್ಯಾಧ್ಯಕ್ಷಾರ ಕಂದೇಗಾಲ ಶ್ರೀನಿವಾಸ, ಅಖಿಲ ಭಾರತ ಕ್ರಾಂತಿಕಾರಿ ಮಹಿಳಾ ಸಂಘಟನೆಯ ರುಕ್ಮಣಿ, ಎಐಆರ್ ಎಸ್ಓ ನ ಬಿಆರ್ ಸಂದೀಪ್, ಜಿಲ್ಲಾದ್ಯಕ್ಷರಾದ ಜಿ ಅಮರೇಶ ಮುಂತಾದವರು ಮಾತನಾಡಿದರು, ರಾಜ್ಯ ಕಾರ್ಯದರ್ಶಿ ಚಿನ್ನಪ್ಪ ಕೊಟ್ರಿಕಿ ಬಹಿರಂಗ ಅಧಿವೇಶನ ನಿರ್ವಹಿಸಿದರು, ಜಿಲ್ಲಾ ಕಾರ್ಯದರ್ಶಿ ಡಿಕೆ ಲಿಂಗಸಗೂರು ವಂದಿಸಿದರು.
ಕೊಡಗು, ಮೈಸೂರು, ಹಾಸನ, ಚಿಕ್ಕಮಗಳೂರು, ಬೆಂಗಳೂರು, ಶಿವಮೊಗ್ಗ, ಬಳ್ಳಾರಿ, ಸಿಂಧನೂರು, ಮಸ್ಕಿ, ಲಿಂಗಸಗೂರು, ದೇವದುರ್ಗ, ಮಾನವಿ, ರಾಯಚೂರು ಒಳಗೊಂಡು ಸಾವಿರಾರು ಕಾರ್ಮಿಕರು, ಕಾರ್ಮಿಕ ಪ್ರತಿನಿಧಿಗಳು ಬಹಿರಂಗ ಅಧಿವೇಶನದಲ್ಲಿ ಪಾಲ್ಗೊಂಡು ಯಶಸ್ವಿಯಾಗಿ ನೆರವೇರಿಸಿದರು.
ಆರಂಭದಲ್ಲಿ ಡಾ: ಬಿ ಆರ್. ಅಂಬೇಡ್ಕರ್ ಸರ್ಕಲ್ನಿಂದ ಸಮ್ಮೇಳನ ರ್ಯಾಲಿಯಲ್ಲಿ ಪಾಲ್ಗೊಂಡು ಘೋಷಣೆಗಳನ್ನು ಮೊಳಗಿಸಿದರು, ತೀನ್ ಕಂದೀಲ್, ಮಹಾವೀರ, ಚಂದ್ರಮೌಳೇಶ್ವರ ಸರ್ಕಲ್ಗಳ ಮೂಲಕ ಸಾಗಿ ವೀರಶೈವ ಕಲ್ಯಾಣ ಮಂಟಪದಲ್ಲಿ ಸಮಾವೇಶಗೊಂಡರು.