ಕಲಬುರಗಿ; ಭಾರತ ದೇಶ ನಡೆಯುತ್ತಿರುವುದು ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಪವಿತ್ರ ಸಂವಿಧಾನದಿಂದ ಹೊರತು, ಯಾವುದೇ ಧರ್ಮ ಗ್ರಂಥಗಳಿಂದಲ್ಲ ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಸೋಮವಾರ ಚಿತ್ತಾಪೂರ ತಾಲೂಕಿನ ವಾಡಿ ಪಟ್ಟಣದ ಎ.ಸಿ.ಸಿ. ಕಂಪನಿ ಗೇಟ್ ಆವರಣದಲ್ಲಿ ಆಯೋಜಿಸಿದ ಕಲಬುರಗಿ ಜಿಲ್ಲಾ ಮಟ್ಟದ ಸಂವಿಧಾನ ಜಾಗೃತಿ ಜಾಥಾದ ಸಮಾರೋಪ ಸಮಾರಂಭ, ವಿವಿಧ ಅಭಿವೃದ್ಧಿ ಕಾಮಗಾರಿಗಳ ಚಾಲನೆ ಹಾಗೂ ಪಂಚ ಗ್ಯಾರಂಟಿ ಯೋಜನೆಗಳ ಸಮಾವೇಶ ಹಾಗೂ ಸಾಂಸ್ಕೃತಿಕ ನಾಯಕ ಬಸವಣ್ಣನವರ ಭಾವಚಿತ್ರ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಪುರುಷ-ಮಹಿಳೆ, ಜಾತಿ-ವರ್ಣ, ಧರ್ಮ-ಪಂತ ಎಂಬ ಬೇಧವಿಲ್ಲದೆ ಸರ್ವರಿಗೆ ಸಮಾನ ಅವಕಾಶ ನೀಡಿರುವುದು ಸಂವಿಧಾನ. ದೇಶದಲ್ಲಿ 25 ಸಾವಿರ ಜಾತಿ-ಉಪ ಜಾತಿಗಳಿವೆ. ದೇಶದ ಪ್ರತಿ ಪ್ರಾಂತ್ಯ ನೋಡಿದಾಗ ರೀತಿ-ನೀತಿ, ಉಡುಗೆ-ತೊಡುಗೆ, ಧರ್ಮ ವಿಭಿನ್ನವಾಗಿದೆ. ಅಚಾರ ವಿಚಾರಗಳು ಬೇರೆ. ಇದರ ಹೊರತಾಗಿ ನಾವೆಲ್ಲರು ಭಾರತೀಯರು ಎಂದು ನಮ್ಮೆಲ್ಲರನ್ನು ಒಂದು ಗೂಡಿಸುತ್ತಿರುವುದು ನಮ್ಮ ಹೆಮ್ಮೆಯ ಸಂವಿಧಾನ ಎಂದರು.
ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವಗಳನ್ನು ಸರ್ಕಾರ ಅಕ್ಷರಸ ಪಾಲಿಸುತ್ತಿದೆ. ಸರ್ವರಿಗೆ ಸಮಬಾಲು, ಸರ್ವರಿಗೆ ಸಮಪಾಲು ಎಂಬ ಧ್ಯೇಯ ಇಟ್ಟುಕೊಂಡು ನಾಡಿನ ಜನರ ಒಳಿತಿಗೆ ನಮ್ಮ ಸರ್ಕಾರ ಶ್ರಮಿಸುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಒತ್ತಿ ಹೇಳಿದರು.
ಕೇಂದ್ರ ಸರ್ಕಾರದ ಕೆಟ್ಟ ಆರ್ಥಿಕ ನೀತಿ ಕಾರಣ ಪಂಚ ಗ್ಯಾರಂಟಿ ಯೋಜನೆಗಳು ಜಾರಿಗೆ ತರಲು ಮೂಲ ಕಾರಣವಾಗಿದೆ. ಮಹಿಳೆಯರಿಗೆ ಮನೆ ನಡೆಸಲು ತುಂಬಾ ಕಷ್ಟವಾಗಿತ್ತು. ಕೊರೋನಾ ಬಂದ ನಂತರವಂತೂ ಕಷ್ಟ ಹೇಳತೀರದು. ಇದನ್ನರಿತೇ ನಮ್ಮ ಸರ್ಕಾರ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಇದರಿಂದ ನಾಡಿನ ಪ್ರತಿ ಕುಟುಂಬ ಸ್ವಾಭಿಮಾನದಿಂದ ಬದುಕುತ್ತಿದ್ದಾರೆ. ನಾಡಿನ ಜನರ ಆರ್ಥಿಕ ಸ್ಥಿರತೆ ಕಾಪಾಡುವುದೇ ನಮ್ಮ ಸರ್ಕಾರದ ಮೂಲ ಉದ್ದೇಶವಾಗಿದೆ ಎಂದರು.
ಇಂದು ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಂಖ್ಯೆ 4.60 ಕೋಟಿಗೂ ಹೆಚ್ಚು. ಜಿಲ್ಲೆಯಲ್ಲಿ 5.25 ಲಕ್ಷ ಜನ ಗೃಹ ಲಕ್ಷ್ಮೀ, 5.50 ಲಕ್ಷ ಕುಟುಂಬಗಳು ಗೃಹ ಜ್ಯೋತಿ, 18 ಲಕ್ಷ ಜನ ಅನ್ನಭಾಗ್ಯ ಸವಲತ್ತು ಪಡೆಯುತ್ತಿದ್ದಾರೆ. ರಾಜ್ಯದಾದ್ಯಂತ 65 ಲಕ್ಷ ಜನ ಪ್ರತಿ ದಿನ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ ಮಾಡುತ್ತಿದ್ದಾರೆ ಎಂದು ಗ್ಯಾರಂಟಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಚಿತ್ತಾಪೂರ ಕ್ಷೇತ್ರದ ಅಭಿವೃದ್ಧಿಗೆ ಬದ್ಧ: ಚಿತ್ತಾಪುರ ಕ್ಷೇತ್ರದ ಜನತೆ ಕಳೆದ ಬಾರಿ ಚುನಾವಣೆಯಲ್ಲಿ ನನ್ನನ್ನು ಅಭೂತ ಪೂರ್ವ ಜಯಶಾಲಿಯನ್ನಾಗಿಸಿದ್ದು ನಾನು ಎಂದಿಗೂ ಮರೆಯಲ್ಲ. ಇದಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಚಿತ್ತಾಪೂರ ಅಭಿವೃದ್ಧಿ ಪಡಿಸುವೆ. ಹಿಂದಿನ ಸರ್ಕಾರ ಕ್ಷೇತ್ರದ 300 ಕೋಟಿ ರೂ. ಹಣ ವಾಪಸ್ ಪಡೆದಿತ್ತು. ಇಂದು ಆ ಅನುದಾನ ಬಡ್ಡಿಯೊಂದಿಗೆ 415 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಇಂದಿಲ್ಲಿ ಚಾಲನೆ ನೀಡಿದ್ದೇನೆ. ಮುಂದೆ ಬರುವಂತ ದಿನದಲ್ಲಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತರಲಾಗುವುದು. ಸಂಯಮ ಮತ್ತು ಸಹಕಾರ ನೀಡಿ ಎಂದು ಕ್ಷೇತ್ರದ ಜನರಲ್ಲಿ ಮನವಿ ಮಾಡಿದರು.
ಕಲ್ಯಾಣ ಕರ್ನಾಟಕ ಪ್ರಗತಿ ಪಥ ಯೋಜನೆಯಡಿ ಈ ವರ್ಷ 1,000 ಕೋಟಿ ರೂ. ಮತ್ತು ಮುಂದಿನ ವರ್ಷ ಸಹ 1,000 ಕೋಟಿ ರೂ. ಮೊತ್ತದಲ್ಲಿ ಗ್ರಾಮೀಣ ಭಾಗದಲ್ಲಿ ರಸ್ತೆ ದುರಸ್ತಿ ಮಾಡಲಾಗುತ್ತಿದೆ. ನರೇಗಾ ಕೂಲಿ ಕಾರ್ಮಿಕರ ಮಕ್ಕಳಿಗೆ ಕೂಸಿನ ಮನೆ ಆರಂಭಿಸಿದ್ದೇವೆ. 371ಜೆ ಕಲಂ ನಡಿ ಉದ್ಯೋಗ ಭರ್ತಿಗೆ ಸರ್ಕಾರ ಮುಂದಾಗಿದೆ. ಪ್ರತಿ ಹಳ್ಳಿಯಲ್ಲಿ 30 ಲಕ್ಷ ರೂ. ವೆಚ್ಚದಲ್ಲಿ ಸಮುದಾಯ ಶೌಚಾಲಯ ನಿರ್ಮಾಣ ಮಾಡಲಾಗುತ್ತಿದೆ. ಬಸವಣ್ಣನವರ ಅರಿವೇ-ಗುರು ಎಂಬ ಮಾತಿನಂತೆ ಗ್ರಾಮೀಣ ಭಾಗದಲ್ಲಿ ಅರಿವು ಕೇಂದ್ರ ಸ್ಥಾಪಿಸಲಾಗುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಕ್ಣೇತ್ರಕ್ಕೆ ತರಲಾಗುತ್ತಿರುವ ಯೋಜನೆಗಳ ಬಗ್ಗೆ ಹೇಳಿಕೊಂಡರು.
ಸಂವಿಧಾನ ಜಾಗೃತಿ ಮುಖ್ಯ: ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗು ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ರಾಜ್ಯದ ಸಂಸದರೊಬ್ಬರು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ದೇಶ ಒಪ್ಪುವ ಸಂವಿಧಾನ ತಿದ್ದುಮಾಡಿ ಮಾಡುವುದಾಗಿ ಘಂಟಾಘೋಷವಾಗಿ ಹೇಳುತ್ತಿದ್ದು, ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಸಂವಿಧಾನ ರಕ್ಷಣೆಗೆ ಹಿಂದಿಗ್ಗಿಂತ ಹೆಚ್ಚು ನಾವೆಲ್ಲರು ಇದೀಗ ಮುಂದಾಗಬೇಕಿದೆ ಎಂದರು.
ನಮ್ಮ ಸರ್ಕಾರ ನುಡಿದಂತೆ ನಡೆಯುವ ಸರ್ಕಾರ. ಚುನಾವಣಾ ಪೂರ್ವ ಘೋಷಣೆಯಂತೆ 5 ಗ್ಯಾರಂಟಿ ಯೋಜನೆಗಳನ್ನು ಸಮಪರ್ಕವಾಗಿ ಜಾರಿಗೊಳಿಸಿದ್ದೇವೆ. ನಾಡಿನ ಯುವ ಜನರು, ಮಹಿಳೆಯರ ಏಳಿಗೆಗೆ ಬದ್ಧವಾಗಿದ್ದೇವೆ. ಇದಕ್ಕಾಗಿ ಜನರ ದುಡ್ಡನ್ನು ಜನರ ಬಾಗಿಲಿಗೆ ನೀಡುತ್ತಿದ್ದೇವೆ ಎಂದರು. ಶಾಸಕರಾದ ಅಲ್ಲಮಪ್ರಭು ಪಾಟೀಲ, ತಿಪ್ಪಣ್ಣಪ್ಪ ಕಮಕನೂರ ಅವರು ಸಹ ಮಾತನಾಡಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಸಚಿವರಾದ ಪ್ರಿಯಾಂಕ್ ಖರ್ಗೆ, ಡಾ.ಶರಣಪ್ರಕಾಶ ಪಾಟೀಲ, ಸಿ.ಎಂ.ಸಲಹೆಗಾರ ಬಿ.ಆರ್.ಪಾಟೀಲ ಸೇರಿದಂತೆ ಶಾಸಕರು, ಚುನಾಯಿತ ಜನಪ್ರತಿನಿಧಿಗಳು ಪಟ್ಟಣದಲ್ಲಿರುವ ನಾಡಿನ ಸಾಂಸ್ಕೃತಿಕ ನಾಯಕ ಬಸವಣ್ಣ ಮತ್ತು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ವಚನ ವಿವೇಕ ಕಿರುಹೊತ್ತಿಗೆ ಬಿಡುಗಡೆ: ಕಾರ್ಯಕ್ರಮದಲ್ಲಿ ವಿವಿಧ ವಚನಕಾರರ ಆಯ್ದ ವಚನಗಳ ಹೊತ್ತಿಗೆ “ವಚನ ವಿವೇಕ” ಕಿರು ಹೊತ್ತಿಗೆಯನ್ನು ಸಚಿವ ಪ್ರಿಯಾಂಕ್ ಖರ್ಗೆ, ಡಾ.ಶರಣಪ್ರಕಾಶ ಪಾಟೀಲ ಆದಿಯಾಗಿ ಗಣ್ಯರು ಬಿಡುಗಡೆ ಮಾಡಿದರು. ಸ್ಥಳೀಯ ಮುಖಂಡ ಟೋಪಣ್ಣ ಕೋಮಟೆ ಅವರು 10 ಸಾವಿರ ಸಂವಿಧಾನ ಪ್ರಸ್ತಾವನೆ ಉಚಿತ ವಿತರಣೆಗೆ ಚಾಲನೆ ನೀಡಿದರು.
ಸಂವಿಧಾನ ಪ್ರಸ್ತಾವನೆ ಬೋಧನೆ: ಕಾರ್ಯಕ್ರಮದಲ್ಲಿ ಕು. ಮನ್ವಿತಾ ಮತ್ತು ಕೃಷಿಕಾ ಅವರು ಸಂವಿಧಾನ ಪ್ರಸ್ತಾವನೆ ನಿರರ್ಗಳವಾಗಿ ಓದಿ ಗಮನ ಸೆಳೆದರು. ನಂತರ ಸಾರ್ವಜನಿಕರಿಗೆ ಸಾಮೂಹಿಕವಾಗಿ ಪ್ರಸ್ತಾವನೆ ಬೋಧಿಸಲಾಯಿತು.
ಭವ್ಯ ಮೆರವಣಿಗೆ: ಸಂವಿಧಾನ ಜಾಗೃತಿ ಜಾಥಾ ಸಮಾರೋಪ ಸಮಾರಂಭ ಅಂಗವಾಗಿ ವಾಡಿ ಪಟ್ಟಣದ ಬಲರಾಮ್ ಚೌಕಿನಿಂದ ಆರಂಭಗೊಂಡು ಅಂಬೇಡ್ಕರ್ ವೃತ್ತಕ್ಕೆ ಸಂಪನ್ನಗೊಂಡ ಭವ್ಯ ಮತ್ತು ವರ್ಣರಂಜಿತ ಮೆರವಣಿಗೆಗೆ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಅವರು ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ಕಲಾ ತಂಡಗಳು ಸಾಮೂಹಿಕ ನೃತ್ಯದ ಮೂಲಕ ಗಮನ ಸೆಳೆದವು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಮೆರವಣಿಗೆಯ ಉಸ್ತುವಾರಿ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಸಲಹೆಗಾರರು ಮತ್ತು ಆಳಂದ ಶಾಸಕ ಬಿ.ಆರ್.ಪಾಟೀಲ, ಕರ್ನಾಟಕ ರೇಷ್ಮೆ ಉದ್ಯಮಗಳ ನಿಯಮಿತದ ಅಧ್ಯಕ್ಷರು ಹಾಗೂ ಕಲಬುರಗಿ ಉತ್ತರ ಶಾಸಕಿ ಕನೀಜ್ ಫಾತೀಮಾ, ಎಂ.ವೈ.ಪಾಟೀಲ, ಕಾಡಾ ಅಧ್ಯಕ್ಷ ಡಾ.ಎಂ.ಎ.ರಶೀದ್, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜರ್ ಆಲಂ ಖಾನ್, ಮಾಜಿ ಸಚಿವ ರೇವು ನಾಯಕ ಬೆಳಮಗಿ, ಡಿ.ಸಿ. ಬಿ.ಫೌಜಿಯಾ ತರನ್ನುಮ್, ಎಸ್.ಪಿ. ಅಕ್ಷಯ್ ಹಾಕೆ, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಕೆ.ಕೆ.ಆರ್.ಟಿ.ಸಿ. ಎಂ.ಡಿ ಎಂ.ರಾಚಪ್ಪ, ಪ್ರೊಬೇಷನರ್ ಐ.ಎ.ಎಸ್. ಅಧಿಕಾರಿ ಗಜಾನನ್ ಬಾಳೆ, ಚಿತ್ತಾಪುರ ತಹಶೀಲ್ದಾರರ ಶೇಖ್ ಷಾಷಾವಲಿ, ಶಹಾಬಾದ ತಹಶೀಲ್ದಾರ ಮಲ್ಲಶೆಟ್ಟಿ ಎಸ್. ಚಿದ್ರೆ, ಕಾಳಗಿ ತಹಶೀಲ್ದಾರ ಗಮಾವತಿ ರಾಠೋಡ, ತಾಲೂಕ ಪಂಚಾಯತ್ ಇ.ಓ. ನೀಲಗಂಗಾ ಬಬಲಾದ, ಮುಖಂಡರಾದ ಡಿ.ಜಿ.ಸಾಗರ, ಜಗದೇವ ಗುತ್ತೇದಾರ, ಸುಭಾಷ ರಾಠೋಡ, ಮಾಪಣ್ಣ ಗಂಜಿಗೇರಿ ಸೇರಿದಂತೆ ಅನೇಕ ಜಿಲ್ಲಾ-ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು. ಸಹಾಯಕ ಆಯುಕ್ತ ಆಶಪ್ಪ ಪೂಜಾರಿ ಸ್ವಾಗತಿಸಿದರು. ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿದ್ದಾರ್ಥ ಚಿಮ್ಮಾಇದ್ಲಾಯಿ ಅವರ ತಂಡವು ಅಂಬೇಡ್ಕರ್ ಜೀವನ ಕುರಿತ ಹಲವು ಹೋರಾಟದ ಹಾಡುಗಳನ್ನು ಹಾಡಿದರು.