ಸತ್ತವರ ಮಕ್ಕಳು ಇದ್ದವರ ಕೈಯಲ್ಲಿ ವೇಣುಗೋಪಾಲರನ್ನು ಗೆಲ್ಲಿಸಿ; ದರ್ಶನಾಪುರ
ಸುರಪುರ : ಸತ್ತವರ ಮಕ್ಕಳು ಇದ್ದವರ ಕೈಯಲ್ಲಿ ಎನ್ನುವ ಮಾತಿನಂತೆ ಇಂದು ರಾಜಾ ವೆಂಕಟಪ್ಪ ನಾಯಕ ಅವರು ನಮ್ಮ ನಡುವೆ ಇಲ್ಲ,ಇಂತಹ ಸಂದರ್ಭದಲ್ಲಿ ತಾವೆಲ್ಲರು ಈಬಾರಿ ರಾಜಾ ವೇಣುಗೋಪಾಲ ನಾಯಕರನ್ನು ಹಾಗೂ ಸಂಸತ್ ಚುನಾವಣೆಯಲ್ಲಿ ಜಿ.ಕುಮಾರ ನಾಯಕ ಅವರನ್ನು ಗೆಲ್ಲಿಸುವಂತೆ ಸಣ್ಣ ಕೈಗಾರಿಕೆಗಳ ಸಚಿವ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಮನವಿ ಮಾಡಿದರು.
ನಗರದ ಕಾಂಗ್ರೆಸ್ ಕಚೇರಿ ವಸಂತ ಮಹಲ್ ಆವರಣದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಹಾಗೂ ಜಿ.ಪಂ ಮಾಜಿ ಸದಸ್ಯರು ಮತ್ತು ನಗರಸಭೆ ಹಾಲಿ ನದಸ್ಯರು ಮತ್ತು ಮುಖಂಡರ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ,ಕರ್ನಾಟಕ ಸರಕಾರದ ಗ್ಯಾರಂಟಿ ಯೋಜನೆಗಳನ್ನು ಬಿಜೆಪಿ ಕಾಪಿ ಮಾಡಿ ತನ್ನ ಅಸ್ತಿತ್ವದ ರಾಜ್ಯಗಳಲ್ಲಿ ಚುನಾವಣೆ ಸಂದರ್ಭಗಳಲ್ಲಿ ಆಯಾ ರಾಜ್ಯಗಳಿಗೆ ಕೊಟ್ಟಿದೆ. ಜನರಿಗೆ ಸುಳ್ಳು ಹೇಳುವುದೇ ಬಿಜೆಪಿ ಜಾಯಾಮಾನ ಎಂದು ಸಣ್ಣ ಕೈಗಾರಿಕಾ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಆರೋಪಿಸಿದರು.
ಬಿಜೆಪಿಗೆ ಜನರ, ರೈತರ, ಕೂಲಿ ಕಾರ್ಮಿಕರ ಬಗ್ಗೆ ಎಳ್ಳಷ್ಟು ಕಾಳಜಿ ಇಲ್ಲ. ರಾಜ್ಯದಲ್ಲಿ 223 ಬರ ಪೀಡಿತ ತಾಲೂಕುಗಳು ಎಂದು ಘೋಷಣೆ ಮಾಡಲಾಗಿದೆ. ಕಳೆದ 6 ತಿಂಗಳ ಹಿಂದೆ ಕೇಂದ್ರ ತಂಡದವರು ರಾಜ್ಯಕ್ಕೆ ಭೇಟಿ ನೀಡಿ ಬರ ಅಧ್ಯಯನ ಮಾಡಿಕೊಂಡು ಹೋಗಿದ್ದಾರೆ. ಆದರೆ ಇದುವರೆಗೂ ಕೇಂದ್ರದಿಂದ ಒಂದು ನೈಯಾ ಪೈಸಾ ನೆರವು ಬಂದಿಲ್ಲ. ಬಿಜೆಪಿಯ ಸಂಸದರು, ಶಾಸಕರು ಈ ಕುರಿತಂತೆ ಒಂದೂ ಹೇಳಿಕೆ ನೀಡಿಲ್ಲ ಎಂದು ದೂರಿದರು.
ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ 2 ಸಾವಿರ ಹಣ ರೈತರ ಖಾತೆಗೆ ಹಾಕಿದೆ. ಸಿದ್ದರಾಮಯ್ಯ ಅವರು ವಿಎಸ್‍ಎಸ್‍ಎನ್‍ಗಳಲ್ಲಿ ರೈvರ ಬಡ್ಡಿ ಮನ್ನಾ ಮಾಡಿದ್ದಾರೆ. ಗೃಹಲಕ್ಷ್ಮೀ ಯೋಜನೆಯಲ್ಲಿ ಪ್ರತಿ ಕುಟುಂಬಕ್ಕೆ ತಿಂಗಳ 2 ಸಾವಿರ ನೀಡಲಾಗುತ್ತಿದೆ. ಚುನಾವಣೆಯಲ್ಲಿ ನೀಡಿದ ಗ್ಯಾರಂಟಿಗಳನ್ನು ಕೊಡುವ ಕೆಲಸವನ್ನು ನಮ್ಮ ಪಕ್ಷ ಮಾಡುತ್ತಿದೆ. ನುಡಿದಂತೆ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷ ಯಾವತ್ತೂ ರೈತರ, ಕೂಲಿ ಕಾರ್ಮಿಕರ, ಹಿಂದುಳಿದವರ, ಅಲ್ಪಸಂಖ್ಯಾತರ ಪರವಾಗಿದೆ. ನಮ್ಮದು ತೆರೆದ ಪುಸ್ತಕ. ನಾವು ಕೆಲಸ ಮಾಡಿದ್ದೇವೆ ನಮಗೆ ವೋಟ್ ಹಾಕಿ ಎಂದು ಚುನಾವಣೆ ಸಂದರ್ಭದಲ್ಲಿ ಕೇಳುತ್ತೇವೆ ಎಂದರು.
ರಾಯಚೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಕುಮಾರನಾಯಕ ಮಾತನಾಡಿ, ಗಂಡುಮೆಟ್ಟಿನ ಈ ನೆಲದಲ್ಲಿ ನನ್ನನ್ನು ಅತ್ಯಂತ ಆತ್ಮೀಯವಾಗಿ ಸ್ವಾಗತಿಸಿ ತೋರಿರುವ ಪ್ರೀತಿಗೆ ನನಗೆ ಮಾತುಗಳೆ ಬರುತ್ತಿಲ್ಲ. ಐಎಎಸ್ ಅಧಿಕಾರಿಯಾಗಿ 35 ವರ್ಷ ಕೆಲಸ ಮಾಡಿರುವೆ. ಜನಸೇವೆ ಮಾಡಲು ಇನ್ನೂ ನನಗೆ ಶಕ್ತಿಯಿದೆ ಆ ತುಡಿತದಿಂದ ನಿಮ್ಮ ಮುಂದೆ ಬಂದಿರುವೆ. ಶಾಸಕ ದಿ.ರಾಜಾ ವೆಂಕಟಪ್ಪನಾಯಕ ಮತ್ತು ನಿಮ್ಮಗಳ ಆಶೀರ್ವಾದ ಬೇಡುತ್ತೇನೆ. ಮುಂದಿನ ಐದು ವರ್ಷಗಳ ಕಾಲ ಅನುದಾನ, ವಿಶೇಷ ಕೊಡುಗೆಗಳ ಮೂಲಕ ಈ ಭಾಗದ ಅಭಿವೃದ್ಧಿಗೆ ಪೂರ್ಣ ಸಹಕಾರ ನೀಡುವೆ. ಅದೇ ರೀತಿ ಸುರಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ರಾಜಾ ವೇಣುಗೋಪಾಲನಾಯಕ ಅವರನ್ನು ಸಹ ಅಭೂತಪೂರ್ವವಾಗಿ ಗೆಲ್ಲಿಸಬೇಕು ಎಂದು ಹೇಳಿದರು.
ಸುರಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲನಾಯಕ ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ಜಿ.ಕುಮಾರನಾಯಕ ಅವರಿಗೆ ಮತ್ತು ಸುರಪುರ ವಿಧಾನಸಭೆ ಉಪ ಚುನಾವಣೆಯಲ್ಲಿ ನನ್ನಗೆ ಆಶೀರ್ವದಿಸಬೇಕು. ನಾನು ನಮ್ಮ ತಂದೆಯವರ ರೀತಿಯಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡುವ ಮೂಲಕ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಸೇವೆಗೈಯುವೆ ಎಂದು ಭರವಸೆ ನೀಡಿದರು.
ಸುರಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ್ ಬಾಚಿಮಟ್ಟಿ, ಹುಣಸಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ದಂಡಿನ್, ನಯೋಪ್ರಾ ಅಧ್ಯಕ್ಷ ಪ್ರಕಾಶ ಗುತ್ತೇದಾರ್, ಮುಖಂಡರಾದ ಅಬ್ದುಲ್ ಅಲಿಂ ಗೋಗಿ, ಭೀಮರಾಯ ಮೂಲಿಮನಿ, ದೊಡ್ಡ ದೇಸಾಯಿ ದೇವರಗೋನಾಲ, ಮರಿಲಿಂಗಪ್ಪ ನಾಯಕ ಕರ್ನಾಳ ಮಾತನಾಡಿದರು.ಪಕ್ಷ ಸೇರ್ಪಡೆಗೆ ಆಗಮಿಸುವ ಮುನ್ನ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ಮೂರ್ತಿಗೆ ಮಾಲಾರ್ಪಣೆ ಮಾಡಿ ನಂತರ ಮಹಾತ್ಮ ಗಾಂಧಿ ವೃತ್ತದ ಮೂಲಕ ವಸಂತ ಮಹಲ್ ವರೆಗೂ ತೆರೆದ ವಾಹನದಲ್ಲಿ ಬೃಹತ್ ಮೆರವಣಿಗೆ ನಡೆಸಲಾಯಿತು.
ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಾ ಕುಮಾರ ನಾಯಕ, ಪ್ರಮುಖರಾದ ವಿಠ್ಠಲ ಯಾದವ, ವೆಂಕೋಬ ಮಂಗಳೂರು, ಮಲ್ಲಣ್ಣ ಸಾಹು ಮುಧೋಳ, ಬಸವರಾಜ ಜಮದ್ರಖಾನಿ, ಬಸನಗೌಡ ಪಾಟೀಲ್ ದೇವಪುರ, ರಾಜಾ ವಾಸುದೇವ ನಾಯಕ, ಬಾಪುಗೌಡ ಪಾಟೀಲ್, ರಮೇಶ ದೊರೆ ಆಲ್ದಾಳ, ಗುಂಡಪ್ಪ ಸೊಲ್ಲಾಪುರ, ರಾಜಾ ಪಿಡ್ಡನಾಯಕ(ತಾತಾ), ಸುವರ್ಣಾ ಎಲಿಗಾರ, ಲಕ್ಷ್ಮೀ ಬಿಲ್ಲವ್, ವೆಂಕಟೇಶ ಹೊಸ್ಮನಿ, ಅಹ್ಮದ್ ಪಠಾಣ, ಸುರೇಶ ತಂಬಾಕೆ, ಆದಪ್ಪ ಹೊಸ್ಮನಿ, ಭಂಡಾರೆಪ್ಪ ನಾಟೇಕರ, ವೆಂಕಟೇಶ ಬೇಟೆಗಾರ, ರಂಗನಗೌಡ ಪಾಟೀಲ್ ದೇವಿಕೇರಿ ಸೇರಿ ಇನ್ನಿತರರು ವೇದಿಕೆಯಲ್ಲಿದ್ದರು. ಮಾನಪ್ಪ ಸೂಗೂರು ನಿರೂಪಿಸಿದರು. ರಾಮುನಾಯಕ ಅರಳಹಳ್ಳಿ ವಂದಿಸಿದರು.
ಕಾಂಗ್ರೆಸ್‍ಗೆ ಸೇರ್ಪಡೆ; ಜಿಪಂ ಮಾಜಿ ಸದಸ್ಯರಾದ ಮರಿಲಿಂಗಪ್ಪ ನಾಯಕ ಕರ್ನಾಳ, ದೊಡ್ಡ ದೇಸಾಯಿ ದೇವರಗೋನಾಲ, ಮುಖಂಡ ಕುಮಾರಸ್ವಾಮಿ ಗುಡ್ಡೋಡಗಿ, ಹಾಗೂ ಬಿಜೆಪಿಯ 4 ಜನ ನಗರಸಭೆ ಸದಸ್ಯರು ಸೇರಿದಂತೆ ವಿವಿಧ ಗ್ರಾಮಗಳ ಬಿಜೆಪಿ ಮುಖಂಡರು, ಕಾರ್ಯಕರ್ತರು ಸಚಿವ ದರ್ಶನಾಪುರ ಸಮ್ಮುಖದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಅವರಿಗೆ ಪಕ್ಷದ ಧ್ವಜ ನೀಡಿ ಸ್ವಾಗತಿಸಲಾಯಿತು.