ಕಲಬುರಗಿ: ಮಾಜಿ ಮಂತ್ರಿ ಮಾಲೀಕಯ್ಯ ಗುತ್ತೇದಾರ ಬಿಜೆಪಿಗೆ ಸೇರ್ಪಡೆಯಾದ ಬಳಿಕ ಬಿಜೆಪಿಗೆ ಅಧಿಕ ಬಲ ಬಂದಿದೆ. ಸೋಲರಿಯದ ಮಲ್ಲಿಕಾರ್ಜುನ ಖರ್ಗೆ ಅವರನ್ನೆ ಸೋಲಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಅಫಜಲಪುರ ಬಿಜೆಪಿ ಮುಖಂಡರು ಹೇಳಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅವರ ವಿರುದ್ಧವೇ ಸ್ಪರ್ಧಿಸಿದ್ದ ಅವರ ಸಹೋದರ ನಿತಿನ್ ಗುತ್ತೇದಾರ ಅವರನ್ನು ಪಕ್ಷದೊಳಗೆ ಸೇರಿಸಿಕೊಳ್ಳುವ ಪ್ರಯತ್ನ ನಡೆದಿದೆ ಎಂಬ ಸುದ್ದಿ ಹರಿದಾಡುತ್ತಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಒಂದುವೇಳೆ ಈ ಸುದ್ದಿ ನಿಜವಾಗಿದ್ದಲ್ಲಿ ಜಿಲ್ಲೆಯ ಹಾಗೂ ರಾಜ್ಯದ ನಾಯಕರು ಭಾರೀ ದಂಡ ತೆರಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ನರೇಂದ್ರ ಮೋದಿ ಅವರನ್ನು ಮೂರನೇ ಬಾರಿ ಪ್ರಧಾನಿ ಮಾಡಬೇಕೆಂದು ಪಣತೊಟ್ಟು ಲೋಕಸಭೆ ಚುನಾವಣೆಯಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಿದ್ದಾರೆ. ನಿತಿನ್ ಗುತ್ತೇದಾರ ಅವರನ್ನು ಬಿಜೆಪಿ ಆರು ವರ್ಷಗಳ ಕಾಲ ಸಸ್ಪೆಂಡ್ ಮಾಡಿದ್ದು, ಅವರನ್ನು ಮತ್ತೆ ಪಕ್ಷದೊಳಗೆ ಸೇರಿಸಿಕೊಳ್ಳಬಾರದು ಎಂದು ಎಚ್ಚರಿಸಿದರು.
ಸಿದ್ದರಾಮ ಸಾಲಿಮನಿ, ರಾಮಣ್ಣ ನಾಯ್ಕೋಡಿ, ಸುರೇಶ ಹಲಸಂಗಿ, ಶ್ರೀಮಂತ ಭಂಡಾರಿ, ಪರುಶುರಾಮ, ಚಂದ್ರಕಾಂತ ಇತರರಿದ್ದರು.