ವಾಡಿ: ನಾವು ಕೊಡುವ ಗ್ಯಾರಂಟಿ ಯೋಜನೆ ಬಿಟ್ಟಿ ಭಾಗ್ಯಾ ಅಲ್ಲ ನಿಮ್ಮ ತೆರಿಗೆ ಹಣ ನಿಮಗೆ ಕೊಡುತ್ತಿದ್ದೇವೆ. ಆದರೆ ಬಿಜೆಪಿಯವರಿಗೆ ತೆಲೆಯಲ್ಲಿ ಮೆದುಳು ಇಲ್ಲ ಹಾಗಾಗಿ, ಬಡವರ ಭಾಗ್ಯಗಳನ್ನು ಬಿಟ್ಟಿ ಎಂದು ಬಿಂಬಿಸುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐಟಿ/ಬಿಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಪಟ್ಟಣ ಸಮೀಪದದ ರಾವೂರ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ರಾಧಾಕೃಷ್ಣ ದೊಡ್ಡಮನಿ ಅವರ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡುತ್ತ, ನಮ್ಮ ಸರ್ಕಾರ 52 ಸಾವಿರ ಕೋಟಿ ಬಡವರಿಗೆ ಖರ್ಚು ಮಾಡಿದರೆ, ದೇಶ ಆರ್ಥಿಕವಾಗಿ ದಿವಾಳಿಯಾಗುತ್ತಿದೆ ಎನ್ನುವ ಬಿಜೆಪಿಗರು, ಅಂಬಾನಿ-ಅಧಾನಿಗೆ ಲಕ್ಷಾಂತರ ಕೋಟಿ ಸಾಲಾ ಮನ್ನಾ ಮಾಡಿದರೆ ದೇಶ ದಿವಾಳಿ ಆಗಲ್ವಾ? ಎಂದು ಪ್ರಶ್ನಿಸಿದರು.
ಬಿಜೆಪಿಗರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಬಗ್ಗೆ ಟೀಕೆ ಮಾಡಲು ಕುಣಿಕುಣಿದು ಮಾತನಾಡುತ್ತಾರೆ. ಬರದ ಬಗ್ಗೆ, ನಿರುದ್ಯೋಗದ ಬಗ್ಗೆ, ಬೆಲೆ ಏರಿಕೆ ಬಗ್ಗೆ ಮಾತಾಡು ಅಂತ್ರೆ ಬಾಯಿಗೆ ಬೀಗ ಬೀಳುತ್ತೆ. ಇವರಿಗೆ ಬಡವರ ಬಗ್ಗೆ ಯೋಚಿಸಲು ಸಮಯವಿಲ್ಲ ಎಂದು ಟೀಕಿಸಿದರು.
ನಾವು ಕಟ್ಟಿದ ರೈಲ್ವೆ ಇಲಾಖೆಯಿಂದ ನಾವು ಮಾಡಿದ ರೈಲು ನಿಲ್ದಾಣದಿಂದ, ನಾವು ಹಾಕಿದ ಹಳಿಯ ಮೇಲೆ ಒಂದು ರೈಲು ಓಡಿಸಿ ಮಹಾನ್ ಸಾಧನೆ ಮಾಡಿದ ಹಾಗೆ ಬೀಗುತ್ತಿದ್ದಾರೆ. ಆದರೆ, 1700 ರಿಂದ 2700 ಬೆಲೆ ಟಿಕೆಟ್ ಇರುವ ಒಂದೇ ಭಾರತ ರೈಲು ಬಡವರಿಗಾಗಿ ಅಲ್ಲ. ಅದು ಶ್ರೀಮಂತರಿಗಾಗಿ ಮಾಡಿದ್ದಾರೆ ಎಂದರು.
ಮಾಜಿ ಸಚಿವರಾದ ಬಾಬುರಾವ ಚಿಂವನಸೂರ ಮಾತನಾಡಿ, ನನ್ನ ಕೋಲಿ ಸಮುದಾಯವನ್ನು ಎಸ್ಟಿ ಪಟ್ಟಿಯಲ್ಲಿ ಸೇರಿಸುತ್ತೇವೆ ಎಂದು ಭರವಸೆ ನೀಡಿ ಅಧಿಕಾರ ಹಿಡಿದ ಸಂಸದ ಡಾ. ಉಮೇಶ ಜಾಧವ ಐದು ವರ್ಷಗಳಲ್ಲಿ ಒಮ್ಮೆಯೂ ನಮ್ಮ ಕೋಲಿ ಸಮಾಜವನ್ನು ಎಸ್ಟಿ ಪಟ್ಟಿಗೆ ಸೇರಿಸುವ ಬಗ್ಗೆ ಸಂಸತ್ತಿನಲ್ಲಿ ಮಾತಾಡಿಲ್ಲ. ಆದರೆ ಸಮಾಜ ಕಲ್ಯಾಣ ಸಚಿವರಾಗಿದ್ದಾಗ ಪ್ರಿಯಾಂಕ್ ಖರ್ಗೆ ಅವರು ಎರಡು ಸಲ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ವಿದಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ, ಚಂದ್ರಿಕಾ ಪರಮೇಶ್ವರಿ, ನಾಗರೆಡ್ಡಿ ಕರದಾಳ, ಮಹಮೂದ್ ಸಾಹೆಬ್, ಭಗಣಗೌಡ ಸಂಕನೂರ, ಟೋಪಣ್ಣ ಕೋಮಟೆ, ಡಾ ಜಾಹಿದಾ ಬೇಗಂ ಕೆಪಿಸಿಸಿ ಕಾರ್ಯದರ್ಶಿ, ಭೀಮಣ್ಣ ಸಾಲಿ, ರಾಜಗೋಪಾಲ ರೆಡ್ಡಿ, ಶ್ರೀನಿವಾಸ ಸಗರ, ರಮೇಶ್ ಮರಗೋಳ, ಶಂಬುಲಿಂಗ ಗುಂಡಗುರ್ತಿ, ಗುರುನಾಥ ಗುದಗಲ್ ಸೇರಿದಂತೆ ಹಲವರಿದ್ದರು.