ಕಲಬುರಗಿ: ಅದೊಂದು ತುಂಬಿ ತುಳಕಿದ ಸಭಾಂಗಣ, ಅಲ್ಲಿ ವಿವಿ, ಕಾಲೇಜು ಅಧ್ಯಾಪಕರು, ರಂಗಭೂಮಿ, ಸಂಗೀತ, ಸಾಹಿತ್ಯ, ಕಲೆ, ವಿದ್ಯಾರ್ಥಿ, ಮಹಿಳೆ, ಮಕ್ಕಳು ಹೀಗೆ ಬದುಕಿನ ಎಲ್ಲ ಕ್ಷೇತ್ರಗಳಿಗೆ ಸಂಬಂಧಿಸಿದ ಜನರು ಜಮಾಯಿಸಿದ್ದರು.
ವೇದಿಕೆ ಮೇಲಿದ್ದವರು ಕಾರ್ಯಕ್ರಮ ದ ಕೇಂದ್ರಬಿಂದು ವ್ಯಕ್ತಿಯ ಗುಣ ವಿಶೇಷಗಳನ್ನು ಕುರಿತು ಅಭಿಮಾನಪೂರ್ವಕ ಮಾತುಗಳನ್ನು ಆಡುತ್ತಿದ್ದರು.
ಬಳಿಕ ಆ ವ್ಯಕ್ತಿಯ ಬದುಕಿನ ಕುರಿತಾದ ಡಾಕ್ಯೂಮೆಂಟರಿ ಫಿಲ್ಮ್ (ವಿಟಿ) ತುಂಬಾ ಗಮನಸೆಳೆಯಿತು.ಇದು ಗುಲ್ಬರ್ಗ ವಿವಿ ಮೈಕ್ರೋಬಯಾಲಜಿ ವಿಭಾಗದ ಪ್ರಾಧ್ಯಾಪಕ ಹಾಗೂ ವಿದ್ಯಾರ್ಥಿ ಕಲ್ಯಾಣಾಧಿಕಾರಿ, ಸಾಂಸ್ಕೃತಿಕ ರಾಯಬಾರಿ ಡಾ. ಕೆ. ಲಿಂಗಪ್ಪ ಅವರ ವಯೋನಿವೃತ್ತಿ ನಿಮಿತ್ತ ನಗರದ ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಭಿನಂದನ ಸಮಾರಂಭದಲ್ಲಿ ಕಂಡು ಬಂದ ಸನ್ನಿವೇಶ.
ಮೈಸೂರು ಗಂಗೂಬಾಯಿ ಹಾನಗಲ್ ಸಂಗೀತ ಹಾಗೂ ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ವಿ. ನಾಗೇಶ ಬೆಟ್ಟುಕೋಟೆ ಕಾರ್ಯಕ್ರಮ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿದ್ದ ನಾಡಿನ ಖ್ಯಾತ ವಿದ್ವಾಂಸ ಪ್ರೊ. ರಾಜಪ್ಪ ದಳವಾಯಿ ಅವರು ಮಾತನಾಡಿ, ಸಾಂಸ್ಕೃತಿಕ ಪರಂಪರೆಯ ಶ್ರೀಮಂತಿಕೆಗೆ ತಮ್ಮದೇ ಆದ ಕೊಡುಗೆ ನೀಡಿದ ಲಿಂಗಪ್ಪ ಅವರ ಸಾರ್ಥಕ ಸೇವೆಗೆ ಈ ಕಾರ್ಯಕ್ರಮವೇ ಸಾಕ್ಷಿ ಎಂದರು.
ಡಾ. ಲಿಂಗಪ್ಪ ಅವರು ಸೂಕ್ಷ್ಮ ಜೀವಶಾಸ್ತ್ರದ ಪ್ರಾಧ್ಯಾಪಕರಾಗಿದ್ದರೂ ಸದಾ ವಿದ್ಯಾರ್ಥಿಗಳ ಕಲ್ಯಾಣ ಬಯಸುವ ಮೂಲಕ ಸಮಾಜ ಕಟ್ಟುವ ಕೆಲಸ ಮಾಡಿದ್ದಾರೆ. ರಂಗಭೂಮಿಗೂ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದರು.
ಡಾ. ಎಸ್.ಎಸ್. ಗುಬ್ಬಿ ಅಧ್ಯಕ್ಷತೆ ವಹಿಸಿದ್ದರು. ನಂತರ ಡಾ. ಲಿಂಗಪ್ಪ ಅವರ ಬದುಕಿನ ಕುರಿತಾಗಿ ಸಂವಾದ ನಡೆಯಿತು.ಡಾ. ಸುಜಾತಾ ಜಂಗಮಶೆಟ್ಟಿ, ಮಹೇಶ ಬಡಿಗೇರ, ಡಾ. ಎಸ್.ಎಸ್. ಗುಬ್ಬಿ, ಪ್ರಭಾಕರ ಜೋಶಿ, ಬಸವಪ್ರಭು, ಡಾ. ಸುಜಾತಾ ಜಂಗಮಶೆಟ್ಟಿ, ಲಕ್ಷ್ಮೀ ಶಂಕರ ಜೋಶಿ, ಸುನಿಲಕುಮಾರ ವಂಟಿ, ಡಾ. ಗೀತಾ ಆರ್.ಎಂ. ಇತರರು ಮಾತನಾಡಿದರು.
ಪತ್ರಕರ್ತ- ಲೇಖಕ ಮಹಿಪಾಲರೆಡ್ಡಿ ಮುನ್ನೂರ ಅವರ ನುಡಿ ಸಾರಥ್ಯ ಕಾರ್ಯಕ್ರಮಕ್ಕೆ ಕಳೆ ಕಟ್ಟುವಂತಿತ್ತು. ಡಾ. ವಿಶ್ವರಾಜ ಪಾಟೀಲ, ಶಾಂತಲಿಂಗಯ್ಯ ಮಠಪತಿ ವಂದಿಸಿದರು.