ಕಲಬುರಗಿ: ಬೇಲೂರ ಕ್ರಾಸ್ ನಿಂದ ಬೇಲೂರ ಊರಿಗೆ ಹೋಗುವ ಮಾರ್ಗದ ತಾಂಡಾದ ತಿರುವಿನಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಾಳಾಗಿದ್ದು,ರಸ್ತೆಯು ಮಳೆಯಿಂದ ಕೆಸರು ಗದ್ದೆಯಾಗಿದ್ದು, ಇದರಿಂದ ವಾಹನ ಸಂಚಾರ ಮತ್ತು ಪಾದಚಾರಿಗಳ ಓಡಾಟಕ್ಕೆ ತೀವ್ರ ತೊಂದರೆಯಾಗುತ್ತಿದ್ದು, ರಸ್ತೆ ದುರಸ್ತಿಗೊಳಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಕನ್ನಡ ಭೂಮಿ ಜಾಗೃತಿ ಸಮಿತಿ ಉತ್ತರ ಕರ್ನಾಟಕ ವಕ್ತಾರರಾದ ಆನಂದ ತೆಗನೂರ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು,ಕೆಸರು ಗದ್ದೆಯಾದ ಈ ರಸ್ತೆಯೂ ಸುಮಾರು 3 ಕಿ.ಮೀ. ಉದ್ದದ ಈ ರಸ್ತೆಯು ಹಿಂದೆ ಚೆನ್ನಾಗಿತ್ತು ಎಂಬುದನ್ನು ಊಹಿಸಲೂ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.ಹೀಗಾಗಿ ಇಲ್ಲಿ ನಿರಂತರವಾಗಿ ವಾಹನಗಳ ಒಡಾಟ ಇರುತ್ತದೆ.
ಮಳೆಗಾಲದಲ್ಲಂತೂ ಇಲ್ಲಿ ಸಂಚರಿಸುವವರ ಅವಸ್ಥೆ ಹೇಳತೀರದು.ಬೇಲೂರ (ಜೆ) ತಾಂಡಾದಲ್ಲಿ ಸಾರ್ವಜನಿಕರು ಹೆಚ್ಚಾಗಿರುವ ಕಾರಣ ದಿನಕ್ಕೆ ಸಾವಿರಾರು ಜನ ಕೆಲಸಗಾರರು,ಸಾರ್ವಜನಿಕರು, ವಿದ್ಯಾರ್ಥಿಗಳು ದಿನ ನಿತ್ಯ ಓಡಾಡುತ್ತಾರೆ.ಆದರೆ ಸಣ್ಣ ಸೋನೆ ಮಳೆ ಬಂದರೂ ಈ ರಸ್ತೆಯಲ್ಲಿ ಓಡಾಡುವುದು ಕಷ್ಟಕರವಾಗಿದೆ.
ಈ ರಸ್ತೆಯು ತುಂಬಾ ಕಿರಿದಾಗಿರುವುದರಿಂದಲೂ ವಾಹನಗಳು ಸುಗಮವಾಗಿ ಓಡಾಡಲು ಸಾಧ್ಯ ವಾಗುತ್ತಿಲ್ಲ.ಅಲ್ಲದೆ ಈ ತಾಂಡಾದಲ್ಲಿ ಅಲ್ಲಲ್ಲಿ ಚರಂಡಿ ಕಟ್ಟಿಕೊಂಡಿರುವುದರಿಂದ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ಇದರಲ್ಲೇ ವಾಹನಗಳು ಓಡಾಡುವಂತಾಗಿದೆ. ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ. ಪ್ರತಿನಿತ್ಯ ಸಾವಿರಾರು ವಾಹನಗಳು ಓಡಾಡುತ್ತವೆ. ಈ ಭಾಗದ ಪ್ರಯಾಣಿಕರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಈಗಲಾದರೂ ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿಗಳು ಇತ್ತ ಗಮನಹರಿಸಿ ರಸ್ತೆ ದುರಸ್ತಿ ಗೊಳಿಸುವ ಮೂಲಕ ಮೂಲ ಸೌಕರ್ಯ ಒದಗಿಸಬೇಕು ಎಂದರು.
ಇದನ್ನು ಸರಿಪಡಿಸಲು ಯಾರೂ ಮುಂದೆ ಬರುತ್ತಿಲ್ಲ.ಅಧಿಕಾರಿಗಳು ಶೀಘ್ರ ಇತ್ತ ಗಮನ ಹರಿಸಿ, ರಸ್ತೆಗೆ ಡಾಂಬರು ಹಾಕಲು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.