ಕಲಬುರಗಿ: ನಮ್ಮ ಜಿಲ್ಲೆ ಸೇರಿದಂತೆ ದೇಶದಲ್ಲಿ ಅನೇಕ ಸುಕ್ಷೇತ್ರಗಳು, ಸ್ಮಾರಕಗಳು, ನೈಸರ್ಗಿಕ ತಾಣಗಳು, ಐತಿಹಾಸಿಕ ಸ್ಥಳಗಳಿದ್ದು ಅವುಗಳನ್ನು ಅಭಿವೃದ್ಧಿಗೊಳಿಸುವುದು ಅವಶ್ಯಕವಾಗಿದೆ. ಇದರಿಂದ ನಮ್ಮ ದೇಶದ ಇತಿಹಾಸ, ಪರಂಪರೆಯನ್ನು ಮುಂದಿನ ಪೀಳಿಗೆಗೆ ದೊರೆಯಲು ಸಾಧ್ಯವಾಗುತ್ತದೆ ಎಂದು ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ.ಬಾಬುರಾವ ಶೇರಿಕಾರ ಹೇಳಿದರು.
‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ’್ರ ಮತ್ತು ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶುಕ್ರವಾರ ನಗರದ ಬಹುಮನಿ ಕೋಟೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ‘ವಿಶ್ವ ಪ್ರವಾಸೋದ್ಯಮ ದಿನಾಚರಣೆ’ಯ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಉಪನ್ಯಾಕ ಎಚ್.ಬಿ.ಪಾಟೀಲ ಮಾತನಾಡಿ, ‘ದೇಶ ಸುತ್ತು, ಕೋಶ ಓದು’ ಎಂಬ ಮಾತು ಪ್ರವಾಸದ ಮಹತ್ವವನ್ನು ನೀಡುತ್ತದೆ. ಪ್ರಸ್ತುತವಾಗಿ ನಮ್ಮ ದೇಶದಲ್ಲಿ ಅನೇಕ ಸ್ಮಾರಕಗಳು, ಐತಿಹಾಸಿಕ ಸ್ಥಳಗಳ ಬಗ್ಗೆ ಹೆಚ್ಚಿನ ಸಂಶೋಧನೆ ಜರುಗಿ, ಅವುಗಳ ಮಹತ್ವವನ್ನು ಸಾರಬೇಕು. ವಿಶ್ವ ಪರಂಪರೆಯು ಮನುಕುಲದ ಸಂಪತ್ತಾಗಿದೆ. ನಮ್ಮ ದೇಶದ ಶ್ರೀಮಂತ ಸಂಸ್ಕøತಿ, ಪರಂಪರೆಯನ್ನು ಸಂರಕ್ಷಿಸುವ ಜವಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.
ಸಕ್ಸಸ್ ಕಂಪ್ಯೂಟರ ತರಬೇತಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಪುಸ್ತಕದ ಅಧ್ಯಯನ ಮಾಡಿದರೆ ಅವರಿಗೆ ಸ್ಪಷ್ಟವಾದ ಚಿತ್ರಣ ಮೂಡುವುದಿಲ್ಲ. ಬದಲಿಗೆ ಐತಿಹಾಸಿಕ, ಪಾರಂಪರಿಕ ಸ್ಥಳಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಬೇಕು. ಇದರಿಂದ ಮಕ್ಕಳಿಗೆ ಹಿಂದಿನ ಪರಂಪರೆ, ಇತಿಹಾಸ ತಿಳಿದುಬರುತ್ತದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಪ್ರವಾಸಿ ಮಿತ್ರ ಪ್ರಭಾಕರ ಕಟ್ಟಿಮನಿ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಶಿಕ್ಷಕಿಯರಾದ ಪ್ರಿಯಾಂಕಾ ಉಜಳಂಬಿ, ನಿಲೊಫರ್ ಶೇಖ್, ಐಶ್ವರ್ಯ ಬಿರಾದಾರ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.