ಕುಟುಂಬಕ್ಕೆ ಒಬ್ಬರಂತೆ ಉದ್ಯೋಗ ಕಲ್ಪಿಸಬೇಕು

0
305
  • ಎಂ.ಡಿ ಮಶಾಖ ಚಿತ್ತಾಪುರ

ಚಿತ್ತಾಪುರ; ತಾಲೂಕಿನ ಬೊಮ್ಮನಹಳ್ಳಿ ಮತ್ತು ಕರದಾಳ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ದಿ ರಾಮ್ಕೊ ಸಿಮೆಂಟ್ ಕಂಪೆನಿಯವರು ಕುಟುಂಬಕ್ಕೆ ಒಬ್ಬರಂತೆ ಉದ್ಯೋಗ ಕಲ್ಪಿಸಿ ಕೊಡಬೇಕು ಎಂದು ಜಿಪಂ ಮಾಜಿ ಸದಸ್ಯ ನಾಗರೆಡ್ಡಿ ಪಾಟೀಲ್ ಕರದಾಳ ಹೇಳಿದರು.

ತಾಲೂಕಿನ ಬೊಮನಹಳ್ಳಿ ಮತ್ತು ಕರದಾಳ ಗ್ರಾಮಗಳ ರಸ್ತೆಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ ವತಿಯಿಂದ ಹಮ್ಮಿಕೊಂಡಿದ್ದ ಪರಿಸರ ಸಾರ್ವಜನಿಕ ಆಲಿಕೆ ಸಭೆಯಲ್ಲಿ ಅವರು ಮಾತನಾಡಿದರು‌.

Contact Your\'s Advertisement; 9902492681

ಕಂಪೆನಿ ಸ್ಥಾಪನೆ ಮಾಡಲು ಗ್ರಾಮಗಳ ರೈತರು ತಮ್ಮ ಫಲವತ್ತಾದ ಭೂಮಿ ಕಂಪೆನಿಗೆ ನೀಡಿದ್ದಾರೆ. ಅದರಂತೆ ತಾವು ರೈತರಿಂದ ಭೂಮಿ ಖರೀದಿ ಮಾಡುವಾಗ ನೀಡಿದ ಭರವಸೆಯಂತೆ ಕುಟುಂಬಕ್ಕೆ ಒಬ್ಬರಂತೆ ಉದ್ಯೋಗ ನೀಡುವುದರ ಮೂಲಕ ನಿರುದ್ಯೋಗ ಸಮಸ್ಯೆ ಬಗೆಹರಿಸಬೇಕು ಎಂದರು.

ಬೊಮ್ಮನಹಳ್ಳಿ ಮತ್ತು ಕರದಾಳ ಗ್ರಾಮಗಳ ಪ್ರಮುಖ ರಸ್ತೆಗಳು ಕಂಪೆನಿಯ ಒಳಗಡೆ ಬರುತ್ತಿವೆ. ಈ ರಸ್ತೆಯಿಂದ ಎರಡು ಗ್ರಾಮಗಳ ಗ್ರಾಮಸ್ಥರಿಗೆ ಬೇರೆ ಬೇರೆ ಗ್ರಾಮ, ಪಟ್ಟಣಗಳಿಗೆ ಹೋಗಲು ಸಹಾಯವಾಗಲಿದೆ. ಹೀಗಾಗಿ ಆ ಎರಡು ರಸ್ತೆಗಳನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡಬಾರದು ಎಂದರು.

ಗ್ರಾಪಂ ಸದಸ್ಯ ರಾಜು ಗುತ್ತೇದಾರ ಮಾತನಾಡಿ, ಕಂಪೆನಿಗೆ ನಾನು 24 ಎಕರೆ ಜಮೀನು ನೀಡಿದ್ದೇನೆ. ಹೀಗಾಗಿ ಕೂಡಲೇ ಕಂಪೆನಿಯ ಕೆಲಸ ಬೇಗ ಶುರು ಮಾಡಬೇಕು. ಈ ಭಾಗದ ಜನರು ಬೇರೆ ಬೇರೆ ರಾಜ್ಯಗಳಿಗೆ ಕೆಲಸಕ್ಕಾಗಿ ಗುಳೆ ಹೋಗಿದ್ದಾರೆ. ಹೀಗಾಗಿ ಕಂಪೆನಿ ಬಿದ್ದರೇ ನಮ್ಮ ಭಾಗದ ಜನರಿಗೆ ಉದ್ಯೋಗ ಸಿಗುವುದರಿಂದ ಅವರು ಗುಳೆ ಹೋಗದೇ ಇಲ್ಲಿಯೇ ಕೆಲಸ ಮಾಡುವುದರ ಮೂಲಕ ಜೀವನ ಸಾಗಿಸುತ್ತಾರೆ ಎಂದರು.

ವೀರೇಶ ಕರದಳ್ಳಿ ಮಾತನಾಡಿ, ಕಂಪೆನಿ ಬೀಳುತ್ತಿರುವುದು ತುಂಬಾ ಖುಷಿಯ ವಿಚಾರವಾಗಿದೆ. ಕಂಪೆನಿಯವರು ಸಹ ತಮ್ಮ ಕಂಪೆನಿಯ ಆವರಣದಲ್ಲಿ ಶಾಲಾ ಕಾಲೇಜುಗಳನ್ನು ಆರಂಭಿಸಿ, ಈ ಭಾಗದ ರೈತರ ಮಕ್ಕಳಿಗೆ ಫ್ರೀಯಾಗಿ ಗುಣ ಮಟ್ಟದ ಶಿಕ್ಷಣ ಕೊಡಬೇಕು ಎಂದರು.

ರೈತ ಮುಖಂಡ ರಫೀಕ್ ಲಿಂಕ್ ಮಾತನಾಡಿ, ಕರದಾಳ ಮತ್ತು ಬೊಮ್ಮನಹಳ್ಳಿ ಗ್ರಾಮದ ರೈತರು ತಮ್ಮ ತಮ್ಮ ಫಲವತ್ತಾದ ಭೂಮಿಯನ್ನು ರಾಮ್ಕೊ ಕಂಪೆನಿಗೆ ನೀಡಿದ್ದಾರೆ. ಹೀಗಾಗಿ ಕಂಪೆನಿಯವರು ಸಹ ಬೊಮ್ಮನಹಳ್ಳಿ ಹಾಗೂ ಕರದಾಳ ಗ್ರಾಮಗಳನ್ನು ದತ್ತುಗೆ ತೆಗೆದುಕೊಂಡು ಗ್ರಾಮಗಳನ್ನು ಅಭಿವೃದ್ಧಿ ಪಡಿಸಬೇಕು. ಸಿಎಸ್.ಆರ್ ಅನುದಾನದಲ್ಲಿ ಹೆಚ್ಚಿನ ಚಟುವಟಿಕೆಗಳು ಕೈಗೊಳ್ಳಬೇಕು ಎಂದರು.

ರೈತರರಾದ ತೋಟಪ್ಪ ಪೂಜಾರಿ, ರೇವಣಸಿದ್ದಪ್ಪ ತಳವಾರ, ಮಲ್ಲಣ್ಣ, ನಾಗಪ್ಪ ಮಾತನಾಡಿ, ಕಂಪೆನಿಯವರು ಗ್ರಾಮದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದರ ಮೂಲಕ ಶಿಕ್ಷಣ, ಆಸ್ಪತ್ರೆ, ರಸ್ತೆಗಳು, ಶೌಚಾಲಯ ಸೇರಿದಂತೆ ಪ್ರತಿಯೊಂದು ಸೌಲಭ್ಯಗಳನ್ನು ಒದಗಿಸಿಕೊಡಬೇಕು ಎಂದರು.

ರೈತ ಮುಖಂಡರಾದ ಅಯ್ಯಪ್ಪ, ವೀರಣ್ಣ ಯಾರಿ, ದೊಡ್ಡಪ್ಪಗೌಡ ಮಾತನಾಡಿ, ಕಂಪೆನಿಯವರು ರೈತರಿಂದ ಭೂಮಿ ಖರೀದಿಸುವಾಗ ಕಡಿಮೆ ಬೆಲೆಗೆ ಭೂಮಿ ತೆಗೆದುಕೊಂಡಿದ್ದಾರೆ. ಹೀಗಾಗಿ ಪ್ರಸ್ತುತ ಬೆಲೆ ಕೊಡಬೇಕು. ಪರಿಸರ ಮಾಲಿನ್ಯದಿಂದ ಅನೇಕ ಜನರು ರೋಗ ರುಜನಿಗಳಿಗೆ ತುತ್ತಾಗುತ್ತಾರೆ. ಅದನ್ನು ತಡೆಗಟ್ಟಲು ಯಾವ ರೀತಿಯ ಕ್ರಮಗಳನ್ನು ಅನುಸರಿಸಿದ್ದೀರಿ ಎನ್ನುವುದನ್ನು ಮಾಹಿತಿ ನೀಡಬೇಕು ಎಂದರು.

ಜಿಲ್ಲಾಧಿಕಾರಿ ಫೌಜೀಯಾ ತರನ್ನುಮ ಮಾತನಾಡಿ, ಜಮೀನು ಕಳೆದು ಕೊಂಡವರಿಗೆ ಸ್ಥಳಿಯರಿಗೆ ಆದ್ಯತೆ ಮೇರೆಗೆ ಉದ್ಯೋಗ ನೀಡುವುದು, ಶಾಲೆ, ಆಸ್ಪತ್ರೆ, ಅಂಗನವಾಡಿ ಕೇಂದ್ರಗಳ ನಿರ್ಮಾಣ, ಈಗಿರುವ ಎರಡು ರಸ್ತೆಗಳಲ್ಲಿ ಓಡಾಡಲು ತೊಂದರೆ ಆಗದಂತೆ ನೋಡಿಕೊಳ್ಳುವುದು, ಜಮೀನಿನ ಬೆಲೆ ಹೆಚ್ಚಿಸುವುದು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎನ್ನುವ ಚರ್ಚಿತ ವಿಷಯಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.

ಸಾರ್ವಜನಿಕರು ತಮ್ಮ ಸಲಹೆಗಳು, ಅನಿಸಿಕೆಗಳು, ಟೀಕೆ ಟಿಪ್ಪಣಿಗಳು ಹಾಗೂ ಅಹವಾಲುಗಳನ್ನು ಜಿಲ್ಲಾಧಿಕಾರಿಗಳಿಗೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ, ಸೇಡಂ ಸಹಾಯಕ ಆಯುಕ್ತರಿಗೆ, ಚಿತ್ತಾಪುರ ತಹಶೀಲ್ದಾರ್ ಅವರಿಗೆ ಸಲ್ಲಿಸಲು ಮೂರು ವಾರಗಳ ಕಾಲಾವಕಾಶ ನೀಡಲಾಗುವುದು ಎಂದು ಹೇಳಿದರು.

ಪುರಸಭೆ ಸದಸ್ಯ ಜಗದೀಶ ಚವ್ಹಾಣ, ನಾಗರಾಜ, ಚಂದ್ರಪ್ಪ ಪೂಜಾರಿ, ಶಂಕ್ರಪ್ಪ ಕರದಾಳ, ಧೂಳಮ್ಮ, ಚಂದ್ರಪ್ಪ ಬೊಮ್ಮನಳ್ಳಿ, ಸಂಗಮೇಶ ಕರದಾಳ, ಮೌನೇಶ ಬೊಮ್ಮನಳ್ಳಿ, ಬಸವರಾಜ ಕರದಾಳ ಮಾತನಾಡಿದರು.

ಪರಿಸರ ಹಿರಿಯ ಅಧಿಕಾರಿ ರೇಖಾ, ಸೇಡಂ ಸಹಾಯಕ ಆಯುಕ್ತ ಪ್ರಭುರೆಡ್ಡಿ, ತಹಶೀಲ್ದಾರ್ ನಾಗಯ್ಯ ಹಿರೇಮಠ, ರಾಮ್ಕೊ ಕಂಪೆನಿಯ ಕಾರ್ಯನಿರ್ವಾಹಕ ನಿರ್ದೇಶಕ ಎಂ.ಶ್ರೀನಿವಾಸ, ಎಜಿಎಂ ಟಿ.ಮದ್ದಿ ವನ್ನನ್, ಜಿಎಂ ವಿ.ಎಸ್. ಸಾಂಬಾಶೀವ, ಕಂಪೆನಿ ಮ್ಯಾನೇಜರ್ ಸೋಮಶೇಖರ ರೆಡ್ಡಿ ವೇದಿಕೆಯಲ್ಲಿದ್ದರು.

ಡಿವೈಎಸ್ಪಿ ಶಂಕರಗೌಡ ಪಾಟೀಲ್, ಸಿಪಿಐಗಳಾದ ಜಗದೇವಪ್ಪ ಪಾಳಾ, ನಟರಾಜ ಲಾಡೆ, ಪಿಎಸ್’ಐಗಳಾದ ಶ್ರೀಶೈಲ್ ಅಂಬಾಟಿ, ತಿರುಮಲೇಶ ಕುಂಬಾರ, ಚಂದ್ರಾಮಪ್ಪ ಅವರು ಸೂಕ್ತ್ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.

ಕಂಪೆನಿ ಅಧಿಕಾರಿ ಮುರುಳಿ ಮನೋಜ್ ಉದ್ದೇಶಿತ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಪರಿಸರ ಅಧಿಕಾರಿ ಸೋಮಶೇಖರ ಸ್ವಾಗತಿಸಿದರು. ಕಂಪೆನಿ ಅಧಿಕಾರಿ ಸಣ್ಣ ವೆಂಕಟೇಶ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here