ಕಲಬುರಗಿ: ಮೈಕ್ರೋ ಫೈನಾನ್ಸ್ ಕಂಪನಿಗಳು ಹಣ ವಸೂಲಿಯ ನೆಪದಲ್ಲಿ ಸಾಲಗಾರರಿಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ, ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಾವಿರಾರು ಮಹಿಳೆಯರು ಪ್ರತಿಭಟನೆ ನಡೆಸಿದರು.
ಜನತಾ ಪರಿವಾರ ಸಂಘಟನೆಯ ಆಶ್ರಯದಲ್ಲಿ ಹಮ್ಮಿಕೊಂಡ ಬೃಹತ್ ಪ್ರತಿಭಟನೆಯಲ್ಲಿ ಸಾಲ ಪಡೆದುಕೊಂಡ ಮಹಿಳೆಯರು ಮೈಕ್ರೋ ಫೈನಾನ್ಸ್ ಗಳ ವಿರುದ್ಧ ಕಿಡಿಕಾರಿದರು.
ನಗರದಲ್ಲಿರುವ ಧರ್ಮಸ್ಥಳ ಮೈಕ್ರೋ ಫೈನಾನ್ಸ್, ಎಲ್ ಅಂಡ್ ಟಿ ಮೈಕ್ರೋ ಫೈನಾನ್ಸ್, ಎಸ್.ಕೆ.ಎಸ್ ಮೈಕ್ರೋ ಫೈನಾನ್ಸ್, ಭಾರತ್ ಮೈಕ್ರೋ ಫೈನಾನ್ಸ್, ಇಂಡಸ್ಲಾಂಡ್, ಫೆಡರಲ್, ಆರ್.ಬಿ.ಎಲ್, ಜನಲಕ್ಷ್ಮಿ, ಸ್ಪಂದನ, ಯಸ್ ಬ್ಯಾಂಕ್, ಪೂರ್ಣಿಮಾ, ಮುಥೂಟ್, ಗ್ರಾಮೀಣ ಕೋಟ, ಬಜಾಜ್, ಎಚ್ ಡಿ ಎಫ್ ಸಿ ಫೈನಾನ್ಸ್ ಸೇರಿದಂತೆ ಹಲವು ಮೈಕ್ರೋ ಫೈನಾನ್ಸ್ ಗಳ ಏಜೆಂಟರು, ಮ್ಯಾನೇಜರ್ ಗಳು, ಗ್ರೂಪ್ ನಾಯಕರು ಮತ್ತಿತರ ಅನಧಿಕೃತ ವ್ಯಕ್ತಿಗಳು ನಮ್ಮ ಮನೆಗಳಿಗೆ ಬಂದು ಮಾನಸಿಕವಾಗಿ ಹಿಂಸೆ ಕೊಡುತ್ತಿದ್ದಾರೆ ಎಂದು ಮಹಿಳೆಯರು ತಮ್ಮ ಅಳಲನ್ನು ತೋಡಿಕೊಂಡರು.
ಮಹಿಳೆಯರು ಸರಿಯಾದ ಸಮಯಕ್ಕೆ ಹಣ ಕಟ್ಟದಿದ್ದರೆ, ಅವರಿಗೆ ಮೈಕ್ರೋ ಫೈನಾನ್ಸ್ ಏಜೆಂಟ್, ಮ್ಯಾನೇಜರ್ಸ್, ಗ್ರೂಪ್ ನಾಯಕರು ಮಾನಸಿಕ ಹಿಂಸೆ ನೀಡುವುದಲ್ಲದೆ ಅವರಿಗೆ ದೈಹಿಕವಾಗಿ ಸೆಕ್ಸ್ ಗೆ ಸಹಕರಿಸುವಂತೆಯೂ ಒತ್ತಾಯಿಸಿದ್ದಾರೆ. ಇದರಿಂದ ಬೇಸತ್ತು ವಾರದಲ್ಲೇ ಈಗಾಗಲೇ 3 ಜನ ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದರು.
ಕುಟುಂಬ ನಿರ್ವಹಣೆ, ಮಕ್ಕಳ ಶಾಲೆಯ ಫೀಸ್ ಸೇರಿದಂತೆ ಇತರೆ ಕಾರ್ಯಗಳಿಗೆ ಮೈಕ್ರೋ ಫೈನಾನ್ಸ್ ಗಳಿಂದ ಹಣ ತಗೊಂಡಿದ್ದೇವೆ, ಆದರೆ, ಹಣ ವಸೂಲಿಗೆ ಮನೆಗೆ ಬಂದಾಗ ಬೆಳಗ್ಗೆಯಿಂದ ರಾತ್ರಿ 11 ಗಂಟೆಯ ವರೆಗೆ ಮನೆ ಬಿಟ್ಟು ಕದಲುವುದಿಲ್ಲ, ಹಣ ಕೊಡಿ ಇಲ್ಲದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳಿ, ನಿಮ್ಮ ಸಾಲ ಮುಕ್ತವಾಗುತ್ತದೆ ಎಂದು ಆತ್ಮಹತ್ಯೆಗೆ ಪ್ರೇರೇಪಿಸುತ್ತಿದ್ದಾರೆಂದು ಮಹಿಳೆಯರು ಆರೋಪಿಸಿದರು.
ಸಾಲ ವಾಪಸಾತಿಗೆ ಮೈಕ್ರೋ ಫೈನಾನ್ಸ್ ಗಳಿಂದ ಬಹಳಷ್ಟು ತೊಂದರೆ ಅನುಭವಿಸುತ್ತಿದ್ದೇವೆ, ಮನೆಯಲ್ಲೇ ಮಹಿಳೆಯರು ಒಬ್ಬರೇ ಇದ್ದರೂ ಹಲವು ಒತ್ತಡಗಳು ಹಾಕುತ್ತಾರೆ, ಹಾಗಾಗಿ ಈ ತರಹ ಟಾರ್ಚರ್ ಕೊಡುವ ಫೈನಾನ್ಸ್ ಗಳನ್ನು ಕೂಡಲೇ ಮುಚ್ಚಿಸಬೇಕು, ಮಾನಸಿಕ ಹಿಂಸೆ ನೀಡುತ್ತಿರುವ ಬ್ಯಾಂಕ್ ಗಳಿಂದ ಸಾಲ ಮುಕ್ತರನ್ನಾಗಿಸಬೇಕೆಂದು ಮಹಿಳೆಯರು, ಜಿಲ್ಲಾಧಿಕಾರಿಗಳಿಗೆ ಬರೆದ ಮನವಿ ಪತ್ರದಲ್ಲಿ ಒತ್ತಡ ಹೇರಿದರು.
ಈ ಸಂದರ್ಭದಲ್ಲಿ ಜನತಾ ಪರಿವಾರ ಸಂಘಟನೆಯ ಅಧ್ಯಕ್ಷ ಸಿರಾಜ್ ಶಾಬ್ಧಿ, ಶೈಖ್ ಸೈಫನ್, ಖಾಲಿದ್ ಅಬ್ರಾರ್, ಅಜರ್ ಮುಬಾರಕ್ ಸೇರಿದಂತೆ ಸಾವಿರಾರು ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ನಗರದಾದ್ಯಂತ ಅಲ್ಲದೆ, ಇಡೀ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಗಳ ಹಾವಳಿ ಹೆಚ್ಚಾಗಿದೆ, ಹಣ ವಸೂಲಿ ಮಾಡಿಕೊಂಡರು ಸಹ ಫೈನಾನ್ಸ್ ಕಡೆಯವರು ದಿನಾಲೂ ಮಹಿಳೆಯರಿಗೆ ಟಾರ್ಚರ್ ಕೊಡುತ್ತಿದ್ದಾರೆ. ಈ ಬಗ್ಗೆ ಹಲವು ಬಾರಿ ಪೊಲೀಸರಿಗೆ ಮಾಹಿತಿ ಕೊಟ್ಟರೂ ಯಾವುದೇ ಕ್ರಮ ಕೈಗೊಂಡಿಲ್ಲ, ಹಾಗಾಗಿ ಇಂದು ನಾವು ರಸ್ತೆಗೆ ಇಳಿದು ಪ್ರತಿಭಟಿಸುವ ಅನಿವಾರ್ಯ ಎದುರಾಗಿದೆ. –ಸಿರಾಜ್ ಶಾಬ್ಧಿ, ಅಧ್ಯಕ್ಷ, ಜನತಾ ಪರಿವಾರ ಸಂಘಟನೆ ಕರ್ನಾಟಕ.