ಬೋಧನೆಯಾಗಲಿ ನೈತಿಕ ಶಿಕ್ಷಣ-ಸುರಕ್ಷತೆ ಕಾಳಜಿ: ಪಿಎಸ್ಐ ವಿಜಯಕುಮಾರ

0
233

ವಾಡಿ: ವಿದ್ಯಾರ್ಥಿಗಳ ಹಣೆಯಲ್ಲಿ ಅಕ್ಷರ ಭವಿಷ್ಯ ಬರೆಯುವ ಜತೆಗೆ ಬದುಕಿನ ನೈತಿಕ ಶಿಕ್ಷಣ ಹೇಳಿಕೊಡಬೇಕು. ಮಕ್ಕಳಲ್ಲಿ ಜೀವ ಸುರಕ್ಷತೆಯ ಜಾಗೃತಿ ಮೂಡಿಸಿ ಕಾಳಜಿ ಮೆರೆಯಬೇಕು ಎಂದು ವಾಡಿ ಠಾಣೆಯ ಪೊಲೀಸ್ ಅಧಿಕಾರಿ ವಿಜಯಕುಮಾರ ಭಾವಗಿ ಶಿಕ್ಷಕರಿಗೆ ಕಿವಿಮಾತು ಹೇಳಿದರು.

ಪಟ್ಟಣದ ಸೇವಾಲಾಲ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ನಾಲವಾರ ಹೋಬಳಿ ಮಟ್ಟದ ಶಿಕ್ಷಕರ ಸಮಾಲೋಚನಾ ಕಾರ್ಯಾಗಾರದಲ್ಲಿ ಕಾನೂನು ಉಪನ್ಯಾಸ ನೀಡಿ ಅವರು ಮಾತನಾಡಿದರು. ಶಿಕ್ಷಕ ವೃತ್ತಿಗಿಂತ ಶ್ರೇಷ್ಟವಾದ ವೃತ್ತಿ ಮತ್ತೊಂದಿಲ್ಲ. ಸಮಾಜ ಸರಿದಾರಿಯಲ್ಲಿ ಸಾಗಬೇಕು ಎಂದಾದರೆ ಉತ್ತಮ ಪ್ರಜೆಗಳ ನಿರ್ಮಾಣ ಅಗತ್ಯ. ಶಿಕ್ಷಕರು ಮಕ್ಕಳಿಗೆ ಮಾನವೀಯ ಮೌಲ್ಯಗಳ ಶಿಕ್ಷಣ ಬೋಧಿಸಿದರೆ ಮಕ್ಕಳು ಪ್ರಜೆಗಳಾಗಿ ದೇಶದ ಭವಿಷ್ಯ ಬರೆಯುತ್ತಾರೆ. ಶಿಕ್ಷಕರಲ್ಲಿನ ಸೋಮಾರಿತನ, ಕರ್ತವ್ಯ ನಿಷ್ಕಾಳಜಿ, ಆಲಸ್ಯ, ಬೇಜವಾಬ್ದರಿ ಧೋರಣೆ ವಿದ್ಯಾರ್ಥಿಗಳ ಭವಿಷ್ಯವನ್ನೇ ಹೊಸಕಿ ಹಾಕುತ್ತದೆ. ವೃತ್ತಿ ಜವಾಬ್ದಾರಿ ಅರಿತು ಕರ್ತವ್ಯನಿಷ್ಠರಾಗುವ ಮೂಲಕ ಜಾಗೃತ ಸಮಾಜವನ್ನು ಕಟ್ಟಬಲ್ಲ ಪ್ರಜೆಗಳನ್ನು ಸೃಷ್ಠಿಮಾಡಬೇಕು ಎಂದು ಹೇಳಿದರು.

Contact Your\'s Advertisement; 9902492681

ಮಹಿಳೆಯರು ಕೆಲಸ ಮಾಡುವ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ಮತ್ತು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ಪ್ರಕರಣಗಳು ನಡೆಯುತ್ತಿರುವುದನ್ನು ಕಾಣುತ್ತೇವೆ. ಇದನ್ನು ಪ್ರತಿಭಟಿಸುವ ಧೈರ್ಯ ಹೆಣ್ಣುಮಕ್ಕಳು ಬೆಳೆಸಿಕೊಳ್ಳಬೇಕು. ಕಾನೂನಿನ ರಕ್ಷಣೆ ಪಡೆದು ತಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡಬೇಕು ಎಂದು ವಿವಿರಿಸಿದ ಪೊಲೀಸ್ ಅಧಿಕಾರಿ ಭಾವಗಿ, ಕುಟುಂಬದಲ್ಲಿನ ಅಸುರಕ್ಷತೆ, ಮೀಟೂ ಅಭಿಯಾನ, ಬ್ರೂಣ ಹತ್ಯೆ, ಬಾಲ್ಯ ವಿವಾಹ, ಪೋಸ್ಕೋ ಕಾಯ್ದೆ, ಮಹಿಳೆಯರ ಮಾರಾಟದಂತಹ ಗುಜ್ಜರಕೀ ಶಾದಿ, ಒಂಟಿ ಮಹಿಳೆಯರ ಮೇಲಿನ ದೌರ್ಜನ್ಯ, ಮಕ್ಕಳು ಮತ್ತು ಮಹಿಳೆಯರ ಹಕ್ಕುಗಳು, ಮೋಟಾರು ವಾಹನ ಕಾಯ್ದೆ, ರಸ್ತೆ ಸುರಕ್ಷತೆ ಹೀಗೆ ಬದುಕಿನ ಹಲವು ಮಜಲುಗಳಿಗೆ ಕಾನೂನಾತ್ಮಕ ಪರಿಹಾರಗಳ ಕುರಿತು ಜಾಗೃತಿ ಮೂಡಿಸಿದರು.

ನಾಲವಾರ ವಲಯ ಶಿಕ್ಷಣ ಸಂಪನ್ಮೂಲ ವ್ಯಕ್ತಿ (ಬಿಆರ್‌ಪಿ) ದತ್ತಪ್ಪಾ ಡೋಂಬಳೆ ಮಾತನಾಡಿ, ಜೀವನ ಕೌಶಲ್ಯ, ಗುಣಮಟ್ಟದ ಶಿಕ್ಷಣ ಮತ್ತು ನಲಿಕಲಿ ಶಿಕ್ಷಣದ ಕುರಿತು ವಿವರಿಸಿದರು. ನೌಕರರ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಬಳೂಂಡಗಿ ಸೇರಿದಂತೆ ರಾವೂರ, ವಾಡಿ, ನಾಲವಾರ, ಹಳಕರ್ಟಿ, ಕೊಲ್ಲೂರು ಕ್ಲಸ್ಟರ್ ಶಿಕ್ಷಕರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here