“ಸಾಧಿಸಿದ್ದು ಅಂಗೈಯಗಲ, ಸಾಧಿಸಬೇಕಾದದ್ದು ಆಕಾಶದಗಲ”: ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರ ವಿಶೇಷ ಸಂದರ್ಶನ

0
232

“ಭಾಲ್ಕಿ ಹಿರೇಮಠಕ್ಕೆ ಪೂಜ್ಯ ಗುರುಬಸವ ಪಟ್ಟದ್ದೇವರನ್ನು ನಿಯುಕ್ತಿಗೊಳಿಸಿದ ನಂತರ ನಮ್ಮ ಬಹುತೇಕ ಭಾರ ಕಡಿಮೆಯಾಗಿದೆ. ಎಲ್ಲವೂ ಅವರೇ ಅತ್ಯಂತ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಅಂತೆಯೇ ಮತ್ತಷ್ಟು ಬಸವ ತತ್ವ ಪ್ರಸಾರ ಮತ್ತು ಪ್ರಚಾರ ಕಾರ್ಯ ಕೈಗೊಳ್ಳಲು ನಮಗೆ ಸಾಕಷ್ಟು ಸಮಯ ಸಿಗುತ್ತಿದೆ.” -ಇದು ಬಸವ ಕಲ್ಯಾಣ ವಿಶ್ವ ಬಸವ ಧರ್ಮ ಟ್ರಸ್ಟ್ ಅಧ್ಯಕ್ಷರಾಗಿರುವ ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರ ಅಭಿಮತ. ನ.೨೩-೨೪ರಂದು ಬಸವ ಕಲ್ಯಾಣದ ಅನುಭವ ಮಂಟಪದ ವಾತಾವರಣದಲ್ಲಿ ಜರುಗಲಿರುವ 40ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವ ನಡೆಯುವ ಹಿನ್ನೆಲೆಯಲ್ಲಿ ಅವರನ್ನು ಭೇಟಿಯಾದಾಗ ಆಡಿದ ಮಾತುಗಳಿವು.

Contact Your\'s Advertisement; 9902492681

ಪ್ರ: ನೂತನ ಅನುಭವ ಮಂಟಪ ನಿರ್ಮಾಣದ ಹಿನ್ನೆಲೆ?

ಉ: ಯಾವ ಸರ್ಕಾರ, ಯಾವ ಮಠಾಧೀಶರು ಬಸವ ಕಲ್ಯಾಣದ ಕಡೆ ನೋಡದೆ ಇದ್ದಾಗ ಭಾಲ್ಕಿ ಹಿರೇಮಠದ ಪೂಜ್ಯ ಲಿಂ. ಡಾ. ಚನ್ನಬಸವ ಪಟ್ಟದ್ದೇವರು ೪೮ ವರ್ಷಗಳ ಹಿಂದೆ ಭಾಲ್ಕಿ ಮಠ ಬಿಟ್ಟು ಬರಿಗೈಯಿಂದ ಬಂದು ಯಾವ ನೆಲದಲ್ಲಿ ಏಳುನೂರಾ ಎಪ್ಪತ್ತು ಶರಣರು ಕೂತು ಚರ್ಚಿಸಿದ್ದರೋ, ಯಾವ ನೆಲದಲ್ಲಿ ಕೂತು ಅನುಭಾವ ಗೋಷ್ಠಿ ಮಾಡಿದ್ದರೋ ಅದೇ ನೆಲದಲ್ಲಿ ಅನುಭವ ಮಂಟಪ ಪುನರ್ ನಿರ್ಮಾಣ ಮಾಡಿದ್ದಾರೆ. “ಹಳ್ಳಿಗೆ ಏಕರಾತ್ರಿ ಪಟ್ಟಣಕ್ಕೆ ಪಂಚರಾತ್ರಿ” ಎನ್ನುವಂತೆ ಮುಗಿದ ಕೈ, ಬಾಗಿದ ತಲೆಯಾಗಿ ಎಲ್ಲೆಡೆ ಸಂಚರಿಸಿ ಧನ ಸಂಗ್ರಹ ಮಾಡಿದ್ದಲ್ಲದೆ ಸ್ವತಃ ತಾವೇ ತಮ್ಮ ಕೈಯಾರೆ ಕಲ್ಲು, ಮಣ್ಣು ಹೊತ್ತು ಅನುಭವ ಮಂಟಪವನ್ನು ನಿರ್ಮಾಣ ಮಾಡಿದರು.

ಪ್ರ: ಅನುಭವ ಮಂಟಪದ ಈಗಿನ ಕಾರ್ಯ ಯೋಜನೆಗಳೇನು?

ಉ: ನಿರಂತರ ದಾಸೋಹ, ಅನುಭವ ಮಂಟಪ ಉತ್ಸವ, ಡಾ. ಚನ್ನಬಸವ ಪಟ್ಟದ್ದೇವರ ಅನುಭವ ಮಂಟಪ ಪುರಸ್ಕಾರ, ಡಾ. ಎಂ.ಎಂ. ಕಲ್ಬುರ್ಗಿ ರಾಷ್ಟ್ರೀಯ ಸಂಶೋಧನ ಪ್ರಶಸ್ತಿ, ಮನೆಗೊಂದು ಅನುಭವ ಮಂಟಪ, ರಾಜ್ಯ ಮಟ್ಟದ ವಚನ ಕಂಠಪಾಠ ಸ್ಪರ್ಧೆ, ಡಾ. ಜಯದೇವಿ ತಾಯಿ ಲಿಗಾಡೆ ರಾಷ್ಟ್ರೀಯ ಪುರಸ್ಕಾರ, ಪ್ರವಚನ ಕಾರ್ಯಕಮ್ರ, ವಚನ ಜನಜಾಗೃತಿ ಪಾದಯಾತ್ರೆ ಮುಂತಾದ ವಿಧಾಯಕ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರಲಾಗುತ್ತಿದೆ. ಸಾಧಿಸಿದ್ದು ಅಂಗೈಯಗಲ, ಸಾಧಿಸಬೇಕಾದದ್ದು ಆಕಾಶದಗಲ ಎನ್ನುವಂತೆ ಇನ್ನು ಹತ್ತು ಹಲವು ಸಂಕಲ್ಪಗಳನ್ನು ಮಾಡಿಕೊಳ್ಳಲಾಗಿದೆ.

ಪ್ರ: ಶರಣ ಕಮ್ಮಟ ಅನುಭವ ಮಂಟಪ ಉತ್ಸವ ಯಾವಾಗಿನಿಂದ ಆರಂಭವಾಯಿತು?

ಉ: ಲಿಂ. ಡಾ. ಚನ್ನಬಸವ ಪಟ್ಟದ್ದೇವರು ಇದ್ದಾಗಲೇ ಪ್ರತಿ ವರ್ಷ ಶಿಬಿರ, ಕಮ್ಮಟಗಳನ್ನು ಆಯೋಜಿಸಿಕೊಂಡು ಬರುತ್ತಿದ್ದರು. ಆ ವಿಧೇಯಕ ಕಾರ್ಯಕ್ರಮಕ್ಕೆ ಈಗ ೪೦ ಆಯುಷ್ಯ. ನಾವು ಬಂದ ಮೇಲೆ ಶರಣ ಕಮ್ಮಟದ ಜೊತೆಗೆ ಅನುಭವ ಮಂಟಪ ಉತ್ಸವ ಆಚರಿಸಲಾಗುತ್ತಿದೆ. ಇದಕ್ಕೆ ಈ ಭಾಗದ ರಾಜಕೀಯ ನಾಯಕರ, ಸಾಮಾಜಿಕ ಕಾರ್ಯಕರ್ತರ, ಭಕ್ತರೆಲ್ಲರ ಪ್ರೇರಣೆ-ಪ್ರೋತ್ಸಾಹ, ಸಹಾಯ-ಸಹಕಾರ ಇದೆ.

ಪ್ರ: ನಿಮ್ಮ ಕನಸಿನ ವಚನ ವಿಶ್ವವಿದ್ಯಾಲಯ ಸ್ಥಾಪನೆ ಏನಾಯ್ತು?

ಉ: ಹೌದು! ಈ ಹಿಂದೆ ನಾವು ವಚನ ವಿವಿ ಸ್ಥಾಪಿಸಲಾಗುವುದು ಎಂದು ಹೇಳಿದ್ದೇವು. ಆ ಹಿನ್ನೆಲೆಯಲ್ಲಿ ೧೬ ಎಕರೆ ಜಮೀನು ಕೂಡ ಖರೀದಿಸಲಾಗಿದೆ. ಅಧ್ಯಯನ, ಅದ್ಯಾಪನ, ಆಡಳಿತ, ಸಂಶೋಧನೆಗೆ ಸಂಬಧಿಸಿದಂತೆ ಅಗತ್ಯ ರೂಪುರೇಷಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ಆದರೆ ಕೆಲವರ ಅಭಿಪ್ರಾಯದಂತೆ ಒಂದು ವಿಶ್ವವಿದ್ಯಾಲಯ ಸ್ಥಾಪನೆಗೆ ಬೇಕಾದ ಮೂಲಸೌಕರ್ಯ ಕಲ್ಪಿಸುವುದು ಕಷ್ಟ ಸಾಧ್ಯವೆನಿಸುತ್ತಿದೆ. ಜನಪದ, ಸಂಸ್ಕೃತ ವಿಶ್ವವಿದ್ಯಾಲಯ ಆರಂಭಿಸಿದಂತೆ ಇಂದಲ್ಲ ನಾಳೆ ಸರ್ಕಾರವೇ ವಚನ ವಿವಿ ಸ್ಥಾಪಿಸುವ ಕಾಲ ಬಂದೇ ಬರುತ್ತದೆ. ಹೀಗಾಗಿ ಇದನ್ನು ಇದೀಗ ಲಿಂಗಾಯತ ವಿವಿ ಎಂದು ಪರಿವರ್ತನೆ ಮಾಡಲು ಯೋಚಿಸಲಾಗುತ್ತಿದೆ. ಈಗ ನಿರ್ಮಾಣಗೊಂಡಿರುವ ಮೂರು ಅಂತಸ್ತಿನ “ಶರಣಧಾಮ” ಕಟ್ಟಡವನ್ನೇ ಕಾರ್ಯಾಲಯ ಮಾಡಲಾಗುವುದು.

ಪ್ರ: ಈ ದಿಶೆಯಲ್ಲಿ ಸಿದ್ಧತೆ ನಡೆದಿದೆಯಾ?

ಉ: ಬಸವ ಸಿದ್ಧಾಂತವನ್ನು ಚಾಚೂ ತಪ್ಪದೆ ಪ್ರಚಾರ ಮತ್ತು ಪ್ರಸಾರ ಮಾಡುವುದು ಇದರ ಪ್ರಮುಖ ಉದ್ದೇಶವಾಗಿದ್ದು, ಕನ್ನಡ, ಮರಾಠಿ, ತೆಲುಗು, ಹಿಂದಿ ಭಾಷೆಯಲ್ಲಿ ನೂರಾರು ಪುಸ್ತಕಗಳನ್ನು ಪ್ರಕಟಿಸಲಾಗಿದೆ. ಪ್ರವಚನಕಾರರಿಗೆ, ಕೀರ್ತನೆಕಾರರಿಗೆ, ಮಹಿಳೆಯರಿಗೆ ತರಬೇತಿ ನೀಡುವ ಕಾರ್ಯ ನಡೆದಿದೆ. ಲಿಂಗಾಯತರ ಬೈಬಲ್ ಎಂದು ಕರೆಯಲಾಗುವ ಫ.ಗು. ಹಳಕಟ್ಟಿಯವರ ಸಂಪಾದಿಸಿದ “ವಚನಶಾಸ್ತ್ರ ಸಾರ” ವನ್ನು ವಿಷಯಕ್ಕನುಸಾರ ಎಲ್ಲ ಭಾಷೆಗಳಲ್ಲಿ ತರ್ಜುಮೆ ಮಾಡಲಾಗುವುದು.

ಪ್ರ: ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಯಾವ ಅನುಭವ ಮಂಟಪಕ್ಕೆ ಅನುದಾನ ನೀಡಿದ್ದು?

ಉ: ನೂತನ ಅನುಭವ ಮಂಟಪ ಕಟ್ಟಡ ನಿರ್ಮಾಣಕ್ಕಾಗಿ ಇದೇ ಪರಿಸರದಲ್ಲಿನ ೨೦ ಎಕರೆ ಜಾಗವನ್ನು ವಿಶ್ವ ಬಸವ ಧರ್ಮ ಟ್ರಸ್ಟ್ ವತಿಯಿಂದ ನೀಡಲಾಗಿದೆ.

ಪ್ರ: ಅನುಭವ ಮಂಟಪ ಉತ್ಸವದ ಈ ಬಾರಿಯ ವಿಶೇಷತೆ?

ಉ: ಅನುಭವ ಮಂಟಪ ಉತ್ಸವ ನಿಮಿತ್ತ ಔರಾದ್‌ನಿಂದ ಬಸವಕಲ್ಯಾಣದವರೆಗೆ ಅನುಭವ ಮಂಟಪ ಪಾದಯಾತ್ರೆ ಮತ್ತು ಬಸವ ಕಲ್ಯಾಣದ ಅಕ್ಕಮಹಾದೇವಿ ಕಾಲೇಜು ಆವರಣದಲ್ಲಿ ಅನುಭವ ಮಂಟಪ ದರ್ಶನ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಹೀಗೆ ಮಾತನಾಡುತ್ತಿರುವಾಗ ಪಕ್ಕದಲ್ಲಿದ್ದ ಭಾಲ್ಕಿ ಹಿರೇಮಠದ ಗುರುಬಸವ ಪಟ್ಟದ್ದೇವರು ಬಂದು ಪೂಜ್ಯರಿಗೆ ಅನುಭವ ಮಂಟಪ ಉತ್ಸವದ ಕೆಲಸ ಕಾರ್ಯಗಳ ಕಡತಗಳ ಮೇಲೆ ಸಹಿ ಮಾಡಲು ವಿನಂತಿಸಿಕೊಂಡರು. ನಮ್ಮನ್ನು ಪ್ರಸಾದಕ್ಕೆ ಆಹ್ವಾನಿಸಿದರು.

================
ಅಪ್ಪಗಳ ಹೆಜ್ಜೆಯಲ್ಲಿ ಪೂಜ್ಯರ ಹೆಜ್ಜೆ

ಈಗಿನ ವಿಶ್ವ ಬಸವಧರ್ಮ ಅನುಭವ ಮಂಟಪದ ಅಧ್ಯಕ್ಷರಾಗಿರುವ ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರು ಅವರು ಲಿಂ. ಪೂಜ್ಯ ಡಾ. ಚನ್ನಬಸವ ಪಟ್ಟದ್ದೇವರ (ದೊಡ್ಡ ಅಪ್ಪ) ಹೆಜ್ಜೆಯಲ್ಲಿ ಹೆಜ್ಜೆ ಹಾಕುತ್ತಿರುವ ಗುರುಕರುಣಾಮೂರ್ತಿ.

ದೊಡ್ಡ ಅಪ್ಪ ಅವರ ಪ್ರಭಾ ವಲಯದಲ್ಲಿ ಬೆಳೆದಿರುವ ಡಾ. ಬಸವಲಿಂಗ ಪಟ್ಟದ್ದೇವರು, ಭಾಲ್ಕಿ ಹಿರೇಮಠ ಮಾತ್ರವಲ್ಲ, ಕರಡ್ಯಾಳದಲ್ಲಿರುವ ಗುರುಕುಲ, ಬಸವಕಲ್ಯಾಣದಲ್ಲಿರುವ ಅನುಭವ ಮಂಟಪವನ್ನು ಎಲ್ಲರೂ ತಿರುಗಿ ನೋಡುವಂತೆ ಮಾಡಿದ್ದಾರೆ. ವಿದ್ಯೆಯ ಜೊತೆಗೆ ವಿನಯ ಉಳಿಸಿಕೊಂಡು ಬಂದಿರುವ ಅಪರೂಪದ ಸ್ವಾಮೀಜಿ ಅವರು.

ನಿಮ್ಮ ತಂದೆ ಲಿಂಗಣ್ಣ ಸತ್ಯಂಪೇಟೆಯವರು ಡಾ. ಬಸವಲಿಂಗ ಪಟ್ಟದ್ದೇವರನ್ನು ಮಾತೃ ಹೃದಯಿಗಳು ಎಂದು ಕರೆಯುತ್ತಿದ್ದರು. ಅವರ ಕಣ್ಣಲ್ಲಿ ಸದಾ ನೀರಾಡುವುದನ್ನು ಗುರುತಿಸಿದ್ದ ಅವರು, ವೇದಿಕೆಯ ಮೇಲೆ ಆ ಬಗ್ಗೆ ವಿಸ್ತರಿಸಿ ವಿವರಣೆ ನೀಡುತ್ತಿದ್ದರೆ ಕಲ್ಲು ಹೃದಯ ಸಹ ಕರಗುವಂತಿರುತ್ತಿತ್ತು. ದೊಡ್ಡ ಅಪ್ಪ ಇರುವಾಗ ನಿಮ್ಮ ತಂದೆ ಅನುಭವ ಮಂಟಪಕ್ಕೆ ಆಗಾಗ ಭೇಟಿ ನೀಡುತ್ತಿದ್ದರು. ಅವರಿಗೆ ಎಲ್ಲ ಗೊತ್ತಿತ್ತು ಅನಿಸುತ್ತದೆ. ಅವರು ಎಲ್ಲರಿಗೆ ದಾರಿ ದೀಪವಾಗಿದ್ದರು. ಅವರ ಲೇಖನ-ಭಾಷಣ ಎಲ್ಲವೂ ಹಸಿ ಗೋಡೆಗೆ ಹರಳು ಹೊಡೆದಂತೆ ಇರುತ್ತಿದ್ದವು.
ಭಾಲ್ಕಿ ಹಿರೇಮಠದ ಈಗಿನ ಉತ್ತರಾಧಿಕಾರಿ ಪೂಜ್ಯ ಗುರುಬಸವ ದೇವರು ಡಾ. ಬಸವಲಿಂಗ ಪಟ್ಟದ್ದೇವರ ಹೆಗಲಿಗೆ ಹೆಗಲಾಗಿ ಕೆಲಸ ಮಾಡುತ್ತಿದ್ದಾರೆ. ಅವರೊಬ್ಬ ಒಳ್ಳೆಯ ಕಾರ್ಯಕರ್ತ. ಈ ಹಿಂದೆ ನಾನು ಸಹ ಎರಡು ವರ್ಷ ಅನುಭವ ಮಂಟಪದ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸಿದ್ದೇನೆ. ಸುಮಾರು ೪೦ ವರ್ಷ ಅನುಭವ ಮಂಟಪ ಸಂಚಾಲಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಡಾ. ಚೆನ್ನಬಸವ ಪಟ್ಟದ್ದೇವರ ಅನುಭವ ಮಂಟಪ ಪ್ರಶಸ್ತಿಯನ್ನು ಕೂಡ ಸ್ವೀಕರಿಸಿದ್ದೇನೆ.

-ವಿ. ಸಿದ್ಧರಾಮಣ್ಣ, ದಾವಣಗೆರೆ
===============

ಡಾ. ಚನ್ನಬಸವ ಪಟ್ಟದ್ದೇವರ ಅನುಭವ ಮಂಟಪ ಪ್ರಶಸ್ತಿ:

೨೦೧೯ನೇ ಸಾಲಿಗೆ ಧಾರವಾಡ ಜಿಲ್ಲೆಯ ಮನಗಂಡಿ ಗುರುಬಸವ ಮಹಾಮನೆಯ ಪೂಜ್ಯ ಬಸವಾನಂದ ಸ್ವಾಮೀಜಿಯವರು ಆಯ್ಕೆಯಾಗಿದ್ದು, ಈ ಪ್ರಶಸ್ತಿಯನ್ನು ೧೯೯೯ರಲ್ಲಿ ಸ್ಥಾಪಿಸಲಾಗಿದೆ. ಭಾಲ್ಕಿ ಶಾಂತಿವರ್ಧಕ ಶಿಕ್ಷಣ ಸಂಸ್ಥೆ ವತಿಯಿಂದ ಶ್ರೀ ಈಶ್ವರ ಖಂಡ್ರೆ ಪ್ರಶಸ್ತಿಯ ದಾಸೋಹಿಗಳಾಗಿದ್ದಾರೆ. ಪ್ರತಿ ವರ್ಷ ಐವತ್ತು ಸಾವಿರ ರೂಪಾಯಿ ನಗದು ಪುರಸ್ಕಾರ ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ.

ಡಾ. ಎಂ.ಎಂ. ಕಲ್ಬುರ್ಗಿ ರಾಷ್ಟ್ರೀಯ ಸಂಶೋಧನ ಪ್ರಶಸ್ತಿ: 

೨೦೧೯ನೇ ಸಾಲಿಗೆ ಕಲಬುರಗಿಯ ಡಾ. ಜಯಶ್ರೀ ದಂಡೆ ಹಾಗೂ ಡಾ. ವೀರಣ್ಣ ದಂಡೆ ದಂಪತಿ ಆಯ್ಕೆಯಾಗಿದ್ದು, ಈ ಪ್ರಶಸ್ತಿಯನ್ನು ೨೦೧೬ರಿಂದ ಪ್ರದಾನ ಮಾಡಲಾಗುತ್ತಿದೆ. ಇದರ ದಾಸೋಹಿಗಳು ಶರಣ ರ್ಶರೀ ಬಸವರಾಜ ಕಾಶಪ್ಪ ಧನ್ನೂರ ಆಗಿದ್ದಾರೆ. ಪ್ರತಿ ವರ್ಷ ಐವತ್ತು ಸಾವಿರ ರೂಪಾಯಿ ನಗದು ಪುರಸ್ಕಾರ ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ.

ಕೃಪೆ: ಶರಣ ಮಾರ್ಗ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here