ವರ್ಕನಳ್ಳಿ ರಸ್ತೆ ದುರಸ್ತಿಗೆ ಆಗ್ರಹಿಸಿ ಕರವೇಯಿಂದ ಲೋಕೋಪ ಯೋಗಿ ಇಲಾಖೆಗೆ ಮುತ್ತಿಗೆ; ಮುಳ್ಳುಬೇಲಿ ಪ್ರತಿಭಟನೆ

0
46

ಯಾದಗಿರಿ: ಜಿಲ್ಲಾ ಕೇಂದ್ರಕ್ಕೆ ಸಮೀಪ ವಿರುವ ವರ್ಕನಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಗುಂಡಿಗಳಿಂದ ತುಂಬಿದ್ದು, ಹದೆಗೆಟ್ಟ ರಸ್ತೆಯನ್ನು ಕೂಡಲೇ ದುರಸ್ತಿಗೊಳಿಸುವಂತೆ ಒತ್ತಾಯಿಸಿ ಕರವೇ ಕಾರ್ಯಕರ್ತರು ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ನೇತೃತ್ವದಲ್ಲಿ ಲೋಕೋಪಯೋಗಿ ಇಲಾಖೆ ಕಚೇರಿಗೆ ಬೇಲಿ ಹಚ್ಚಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಟಿ.ಎನ್. ಭೀಮುನಾಯಕ, ಜಿಲ್ಲಾ ಕೇಂದ್ರಕ್ಕೆ ಸಮೀಪ ವಿರುವ ವರ್ಕನಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಗುಂಡಿಗಳಿಂದ ತುಂಬಿದೆ. ಅದರ ಮಧ್ಯೆ ರಸ್ತೆಯಲ್ಲಿ ಗುಂಡಿ ಬಿದ್ದು. ದಾರಿ ಯಾವುದು ಎಂಬುದನ್ನು ಗುರುತಿಸದಂತಹ ಪರಿಸ್ಥಿತಿ ವಾಹನ ಸವಾರರಿಗಾಗುತ್ತಿದೆ. ಈ ರಸ್ತೆ ಪ್ರಸಿದ್ದ ಕ್ಷೇತ್ರ ಮೈಲಾಪೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವುದರ ಜೊತೆಗೆ ಮಸ್ಕನಳ್ಳಿ, ಹಳಿಗೇರಾ, ವರ್ಕನಳ್ಳಿ, ತಾಂಡಾ, ಆರ್.ಹೊಸಳ್ಳಿ ಹಾಗೂ ಇತರೆ ಗ್ರಾಮಗಳಿಗೆ ಹೋಗುವ ಸಂಪರ್ಕ ರಸ್ತೆ ಇದ್ದು, ಈ ರಸ್ತೆ ಮೇಲೆ ಜಾತ್ರೆ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ತಮ್ಮ ವಾಹನಗಳೊಂದಿಗೆ ಸಂಚರಿಸುತ್ತಾರೆ. ಅಲ್ಲದೇ ಈ ರಸ್ತೆಯ ಅಕ್ಕ-ಪಕ್ಕದಲ್ಲಿ ಸರ್ಕಾರವೇ ಅನುಮತಿ ನೀಡಿ ಸೇಫರ್ ಜೋನ್ ಕಂಕರ್ ಮಷಿನ್ & ಬ್ಲಾಸ್ಟಿಂಗ್ ಗಾಗಿ ಅನುಮತಿ ನೀಡಿದ್ದು, ದಿನನಿತ್ಯ ಸಾವಿರಾರು ಭಾರಿ ಗಾತ್ರದ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ. ಇಂತಹ ವಾಹನಗಳಿಂದ ಈ ರಸ್ತೆ ಸಂಪೂರ್ಣ ಹದೆಗೆಟ್ಟು ಹೋಗಿದೆ. ಈ ರಸ್ತೆಯಲ್ಲಿ ಈಗಾಗಲೇ ಅಪಘಾತ ಸಂಭವಿಸಿ ಇಬ್ಬರು ಮೃತಪಟ್ಟಿರುತ್ತಾರೆ, ದಿನನಿತ್ಯ ಸಣ್ಣ-ಪುಟ್ಟ ಅಪಘಾತಗಳು ನಿರಂತರವಾಗಿ ಸಂಭವಿಸುತ್ತಲೇ ಇರುತ್ತವೆ. ಇಂತಹ ರಸ್ತೆ ದುರಸ್ತಿಗಾಗಿ ಯಾವೊಬ್ಬ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕ್ರಮಕೈಗೊಳ್ಳದಿರುವುದು ಅವರ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು
ಆಕ್ರೋಶ ವ್ಯಕ್ತಪಡಿಸಿದರು.

Contact Your\'s Advertisement; 9902492681

ರಸ್ತೆ ದುರಸ್ತಿಗಾಗಿ ಹಲವು ದಿನಗಳಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಜಿಲ್ಲಾಧಿಕಾರಿಗಳಿಗೂ ಹಾಗೂ ಮುಖ್ಯಮಂತ್ರಿಗಳಿಗೆ ಯಾದಗಿರಿ ಪ್ರವಾಸಕ್ಕೆ ಬಂದಾಗ ಮನವಿ ಸಲ್ಲಿಸಿದರೂ ಕೂಡಾ ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ಕಾರವೂ ಬೇಕಾ-ಬಿಟ್ಟಿಯಾಗಿ ಅವಶ್ಯಕತೆ ಇಲ್ಲದ ಕಡೆ, ಗುಣಮಟ್ಟದ ರಸ್ತೆಯ ಮೇಲೆ ಕಾಮಗಾರಿಯನ್ನು ಮಾಡಿ ಹಣ ದುರ್ಬಳಕೆ ಮಾಡುತ್ತಿದ್ದು, ಜಿಲ್ಲೆಯ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಸಂಪೂರ್ಣ ಹದೆಗೆಟ್ಟಿರುವ ರಸ್ತೆಯನ್ನು ಮತ್ತು ಜಿಲ್ಲಾ ಕೇಂದ್ರಕ್ಕೆ ಅತೀ ಸಮೀಪ ಇರುವ ರಸ್ತೆ ಕಾಮಗಾರಿ ಕೈಗೊಳ್ಳಲು ಆಗುತ್ತಿಲ್ಲ ಎಂದು ದೂರಿದರು.

ಮಕರ ಸಂಕ್ರಮಣದಂದು ಮೈಲಾಪೂರ ಮಲ್ಲಯ್ಯ ದೇವರ ಬೃಹತ್ ಜಾತ್ರೆ ನಡೆಯುವ ಹಿನ್ನೆಲೆಯಲ್ಲಿ ಜಾತ್ರೆಗೆ ತೆರಳಲು ಇದು ಪ್ರಮುಖ ರಸ್ತೆಯಾಗಿದ್ದು, ಈ ರಸ್ತೆ ತಕ್ಷಣ ದುರಸ್ತಿಯಾಗಬೇಕು ಎಂದು ಒತ್ತಾಯಿಸಿದರು.
ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರರು ಹಾಗೂ ಕಾರ್ಯನಿರ್ವಾಹಕ ಅಭಿಯಂತರು ತಕ್ಷಣ ಕಾಮಗಾರಿಗೆ ಟೆಂಡರ್ ಕರೆಯಲಾಗುವುದು ಎಂದು ಭರವಸೆ ನೀಡಿದರು. ಆದರೆ ಜಾತ್ರೆಗೆ ಇನ್ನು ತಿಂಗಳು ಮಾತ್ರ ಬಾಕಿ ಇದ್ದು ಅಷ್ಟರಲ್ಲಿ ಟೆಂಡರ್ ಪ್ರಕ್ರಿಯೆಯೇ ಮುಗಿಯುವುದಿಲ್ಲ. ಆದ್ದರಿಂದ ತಕ್ಷಣ ಪಾಟ್ ವಾಲ್ ಗಳನ್ನು ತುಂಬಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಭೀಮುನಾಯಕ ಒತ್ತಾಯಿಸಿದರು. ಇದಲ್ಲದೇ ಕಂಕರ್ ಹಾಗೂ ಕಲ್ಲುಗಳು ತುಂಬಿದ ಲಾರಿಗಳು ಇದೇ ಮಾರ್ಗದಲ್ಲಿ ಸಂಚರಿಸುವುದರಿಂದ ರಸ್ತೆ ಹದಗೆಡುತ್ತಿದ್ದು ಭಾರಿ ಸರಕು ವಾಹನಗಳ ಮಾರ್ಗವನ್ನು ಬದಲಿಸಿ ರಸ್ತೆ ಉಳಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಸ್ಪಂದಿಸಿದ ತಹಸೀಲ್ದಾರರು ಡಿಸಿ ಗಮನಕ್ಕೆ ತಂದು ರಸ್ತೆ ಸಂಚಾರ ಮಾರ್ಗ ಬದಲಾವಣೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಉಭಯ ಅಧಿಕಾರಿಗಳ ಸ್ಪಷ್ಟ ಭರವಸೆ ನಂತರ ಮುತ್ತಿಗೆ ಮುಳ್ಳು ಬೇಲಿ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು. ಪ್ರತಿಭಟನೆಯಲ್ಲಿ ಮಲ್ಲು ಮಾಳಿಕೇರಿ, ಸಿದ್ದು ನಾಯಕ ಹತ್ತಿಕುಣಿ, ವಿಶ್ವಾರಾಧ್ಯ ದಿಮ್ಮೆ, ಶಿವಕುಮಾರ ವಡಗೇರಾ, ಹಣಮಂತ ಖಾನಳ್ಳಿ, ವೆಂಕಟೇಶ ರಾಠೋಡ, ಅರ್ಜುನ ಪವಾರ, ಸಾಹೇಬಗೌಡ ನಾಯಕ, ಸಿದ್ದಪ್ಪ ಕುಲೂರು, ಭೀಮು ಮಡ್ಡಿ, ರಿಯಾಜ್ ಪಟೇಲ್, ಮಲ್ಲು ದೇವಕರ್, ಯಮುನಯ್ಯ ಗುತ್ತೇದಾರ, ರಾಜುಗೌಡ ಪಗಲಾಪುರ, ದೀಪಕ ಒಡೆಯರ್, ಭೀಮು ಬಸವಂತಪುರ, ರವಿ ನಾಯಕ, ನಾಗಪ್ಪ ಗೋಪಾಳಪುರ, ಸೈದಪ್ಪ ಗೌಡಗೇರಾ, ಮಹೇಶ ಠಾಣಗುಂದಿ, ಮಲ್ಲಿಕಾರ್ಜುನ ಕನ್ನಡಿ, ವೆಂಕಟೇಶ ಕೌಳೂರು, ಹಣಮಂತ ಯಡ್ಡಳ್ಳಿ, ಭೀಮಣ್ಣ ಶೇಟ್ಟಿಗೇರ, ಯಲ್ಲಾಲಿಂಗ ಹತ್ತಿಕುಣಿ, ಭೀಮು, ಶರಣು ಮಡಿವಾಳ, ವಿಜಯಕುಮಾರ ರಾಠೋಡ, ದೇವು ಹತ್ತಿಕುಣಿ, ಈಶಪ್ಪ ಠಾಣಗುಂದಿ ಇನ್ನಿತರರು ಭಾಗಿಯಾಗಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here