ಕೇರಳದಲ್ಲಿ ಕರ್ನಾಟಕ ಸಿಎಂಗೆ ಅವಮಾನ: ಅಧಿಕಾರಿಗಳ ವಜಾಕ್ಕೆ ಕರಾವೇ ಆಗ್ರಹ

0
63

ಕಲಬುರಗಿ: ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೇರಳ ಪ್ರವಾಸ ಕೈಗೊಂಡಾಗ ಅಲ್ಲಿ ಅವರ ವಾಹನವನ್ನು ತಡೆದು ಜಖಂಗೊಳಿಸಿ ಅವಮಾನಗೊಳಿಸಿದ್ದ ಘಟನೆಗೆ ಸಂಬಂಧಿಸಿದಂತೆ ಸಂಬಂಧಿಸಿದ ಅಧಿಕಾರಿಗಳನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ನಡೆಸಿದರು.

ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಪತ್ರ ಸಲ್ಲಿಸಿ, ಕರ್ನಾಟಕದ ಮುಖ್ಯಮಂತ್ರಿಗಳು ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕೇರಳಕ್ಕೆ ಹೋದಾಗ ಅವರಿಗೆ ಕಪ್ಪು ಬಾವುಟ ತೋರಿಸಿ, ಅವರ ಕಾರಿಗೆ ಮುತ್ತಿಗೆ ಹಾಕಿ, ಕಾರು ಜಖಂಗೊಳಿಸಿದ್ದು ಖಂಡನೀಯ ಎಂದು ಆಕ್ಷೇಪಿಸಿದರು.
ಈ ಸಂದರ್ಭದಲ್ಲಿ ಕೆಲ ರಾಜಕೀಯ ಪಕ್ಷಗಳು ಉದ್ಧಟತನದಿಂದ ವರ್ತಿಸಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಕನ್ನಡಿಗರನ್ನು ಕೆಣಕುವ ದುಸ್ಸಾಹಸಕ್ಕೆ ಯತ್ನಿಸಲಾಗಿದೆ. ಆದಾಗ್ಯೂ, ಕನ್ನಡಿಗರು ಶಾಂತಿಪ್ರಿಯರಾಗಿ ಸುಮ್ಮನಿದ್ದಾರೆ ಎಂದರು.

Contact Your\'s Advertisement; 9902492681

ಈಗಿನ ವರ್ತಮಾನದ ಪ್ರಕಾರ ಮುಖ್ಯಮಂತ್ರಿಗಳಿಗೆ ಅವಮಾನ ಮಾಡಿದ್ದು ವ್ಯವಸ್ಥಿತ ಪಿತೂರಿಯಾಗಿದೆ. ಅದಕ್ಕೆ ಕೇರಳದ ಸರ್ಕಾರವೇ ಹಿಂಬಾಗಿಲ ಮೂಲಕ ಬೆಂಬಲಿಸಿದ್ದರಿಂದ ಅದಕ್ಕೆ ಆ ಸರ್ಕಾರವೇ ನೇರ ಹೊಣೆಯಾಗಿದೆ. ಅದನ್ನು ಸಹಿಸಲು ಸಾಧ್ಯವಿಲ್ಲ ಎಂದು ಅವರು ಎಚ್ಚರಿಸಿದರು.

ಕರ್ನಾಟಕದಲ್ಲಿಯೂ ಕೇರಳದ ಜನರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅವರೂ ಸಹ ಮುಂದೆ ಭಾರೀ ಬೆಲೆ ತೆತ್ತಬೇಕಾಗುತ್ತದೆ. ಕೂಡಲೇ ಕೇರಳ್ ಸರ್ಕಾರವು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ ಅವರು, ಸಂಬಂಧಿಸಿದ ಅಧಿಕಾರಿಗಳನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಒಂದು ವೇಳೆ ಕೇರಳದ ಸರ್ಕಾರವು ಬೇಡಿಕೆಗಳಿಗೆ ಸ್ಪಂದಿಸದೇ ಹೋದಲ್ಲಿ ಕೇರಳ ಸರ್ಕಾರದ ಯಾವೊಬ್ಬ ಪ್ರತಿನಿಧಿಯನ್ನು ಕರ್ನಾಟಕದೊಳಕ್ಕೆ ಪ್ರವೇಶಿಸಲು ಬಿಡುವುದಿಲ್ಲ ಎಂದು ಅವರು ಎಚ್ಚರಿಸಿದರು.

ಸಂಘಟನೆಯ ಜಿಲ್ಲಾಧ್ಯಕ್ಷ ಮಾರುತಿ ಎಮ್. ಕಮ್ಮಾರ, ಜಿಲ್ಲಾ ಗೌರವಾಧ್ಯಕ್ಷ ಮಂಜು ಕುಸನೂರ, ತಾಲ್ಲೂಕು ಅಧ್ಯಕ್ಷ ಸಂಪತ ಹಿರೇಮಠ್, ನಗರಾಧ್ಯಕ್ಷ ಸಂದು ಶಾಬಾದಕರ ಮುಂತಾದವರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here