“ಮನಸ್ಸು” ದೇಹದ ಅತ್ಯದ್ಭುತ ಶಕ್ತಿ ಕೇಂದ್ರ

0
228
ಲೋಕದ ಚೇಷ್ಟೆಗೆ ರವಿ ಬೀಜವಾದಂತೆ
ಕರಣಂಗಳ ಚೇಷ್ಟೆಗೆ ಮನವೇ ಬೀಜ
ಎನಗುಳ್ಳುದೊಂದು ಮನ
ಆ ಮನ ನಿಮ್ಮಲ್ಲಿ ಸಿಲುಕಿದ ಬಳಿಕ
ಎನಗೆ ಭವವುಂಟೆ ಚೆನ್ನಮಲ್ಲಿಕಾರ್ಜುನ
-ಅಕ್ಕಮಹಾದೇವಿ

ಈ ದೇಹದ ಇಂದ್ರೀಯಗಳಲ್ಲಿ ಅತ್ಯದ್ಭುತವಾದ ವಸ್ತು ಮನಸ್ಸು. ಮನಸ್ಸಿಗೆ ದೇಹ ಆಳುವ ಶಕ್ತಿಯಿದೆ. ಅಂತೆಯೇ ನಮ್ಮೆಲ್ಲರ ಬದುಕು ನಮ್ಮ ನಮ್ಮ ಮನಸ್ಸಿನ ಮೇಲೆಯೇ ನಿಂತಿದೆ. ದೇವರು ನಮ್ಮನ್ನು ಆಳುವುದಿಲ್ಲ. ದೇವರು ನಮ್ಮ ಭಾವನೆಗೆ ಸಂಬಂಧಪಟ್ಟದ್ದು. ದೇವರು ಎನ್ನುವುದು ಕೃತಜ್ಞತಾ ಮನೋಭಾವ. ದೇಹವನ್ನು ಆಳುವ ರಾಜ ಮನಸ್ಸು. ಮನಸ್ಸೇ ಅದಕೂ, ಇದಕೂ ಎಲ್ಲದಕ್ಕೂ ಕಾರಣ. ಅದಕ್ಕೆ ದೇವರು ಕಾರಣನಲ್ಲ. ಹೀಗಾಗಿ ದೇಹದಲ್ಲಿರುವ ಮನಸ್ಸಿಗೆ ಮಾತ್ರ ಬೋಧನೆ ಅಗತ್ಯ. ಎಲ್ಲ ಮಹಾತ್ಮರು ಮನಸ್ಸಿನ ಮೇಲೆಯೇ ಪ್ರಯೋಗ ಮಾಡಿದರು. ಬದುಕಿನಲ್ಲಿ ಮನಸ್ಸನ್ನು ಚೆನ್ನಾಗಿಟ್ಟುಕೊಳ್ಳಬೇಕು.

Contact Your\'s Advertisement; 9902492681

ನಮಗೆ ಎದುರಾಗುವ ಎಡರು-ತೊಡರುಗಳಿಗೆ ಹಿಂದಿನ ಜನ್ಮದ ಕರ್ಮ ಎಂದು ನಾವು ತಿಳಿದುಕೊಂಡಿದ್ದೇವೆ. ಆದರೆ ಇದಲ್ಲ. ಮನಸ್ಸಿಗೆ ಶಿಕ್ಷಣ ಕೊಟ್ಟರೆ ಮಗುವಿನಂತೆ ಚೆನ್ನಾಗಿ ಕೇಳುತ್ತದೆ ಅದು. ನೋಡುವ ಕಣ್ಣಿಗೆ, ಕೇಳುವ ಕಿವಿಗೆ, ಸವಿಯುವ ನಾಲಿಗೆಗೆ, ಸ್ಪರ್ಶಿಸುವ ಚರ್ಮಕ್ಕೆ ಮನಸ್ಸು ಕಾರಣ. ಮನಸ್ಸು ದೇಹದ ಅತ್ಯದ್ಭುತ ಶಕ್ತಿ ಕೇಂದ್ರ. ಇದನ್ನೇ ಶರಣರು “ತನುವೆಂಬ ಹುತ್ತದಲ್ಲಿ ಮನವೆಂಬ ಸರ್ಪ ಎಡೆ ಎತ್ತಿ ಹಾಡುತ್ತಿರಲು ನೋಡಾ, ಹುತ್ತವ ಬಡಿದಡೆ ಹಾವು ಸಾಯಬಲ್ಲುದೆ ಅಯ್ಯಾ” ಎಂದು ಹೇಳಿದ್ದಾರೆ. ನಮ್ಮೊಳಗಿರುವ ಮನ, ಬುದ್ಧಿ, ಚಿತ್ತ ಮತ್ತು ಅಹಂಕಾರ ನಾಲ್ಕು ಅಂತರಿಂದ್ರೀಯ, ನಮ್ಮೊರಗಡೆ ಇರುವ ಕಿವಿ, ಚರ್ಮ, ಕಣ್ಣು, ನಾಲಿಗೆ ಮತ್ತು ಮೂಗು ಎಂಬ ಐದು ಪಂಚೇಂದ್ರೀಯಗಳು “ಒಂದು ಮೊಲಕ್ಕೆ ನಾಯಿನೊಂಬತ್ತು ಬಿಟ್ಟಂತೆ” ಮನಸ್ಸನ್ನು ಅಲ್ಲಾಡಿಸುತ್ತವೆ.

ಜಗತ್ತಿನಲ್ಲಿ ಏನೆಲ್ಲವನ್ನು ಗೆಲ್ಲಬಹುದು. ಆದರೆ ಮನಸ್ಸು ಗೆಲ್ಲುವುದು ಕಷ್ಟ. ಮನಸ್ಸು ಗೆದ್ದವರು ಮಹಾದೇವರಾಗುತ್ತಾರೆ. ಮನಸ್ಸು ಹತೋಟಿಯಲ್ಲಿ ಇಲ್ಲದಿದ್ದರೆ ಸೂತ್ರವಿಲ್ಲದ ಗಾಳಿಪಟದಂತೆ ಆಗುತ್ತದೆ. ಮನಸ್ಸು ಸ್ವಚ್ಛ ಮಾಡುವ ಸಾಬೂನು ಶರಣರ ಸೂಳ್ನೂಡಿಗಳಲ್ಲಿದೆ. ಕಾಮ ಜೀವನವಲ್ಲ, ಕಥೆಯೂ ಜೀವನವಲ್ಲ. ಮನಸ್ಸಿನಲ್ಲಿ ಅರಿವಿನ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಅಂತೆಯೇ ಬಸವಣ್ಣನವರು “ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯ ತಂದೆ.. ಎಂದು ಹೇಳಿದ್ದಾರೆ. ಬರೀ ಶರೀರ ಬೆಳೆಸುವುದಕ್ಕಿಂತ ಸತ್ಯ ಶುದ್ಧ ಕಾಯಕದ ತನು, ಶಿವಾನುಭವದ ಮನ, ಶಿವಯೋಗದ ಆತ್ಮ ಬೆಳೆಸಿಕೊಳ್ಳಬೇಕು. ಮನೆಗೆ ಬಂದ ಕಳ್ಳನ ಮನ ಪರಿವರ್ತನೆ ಮಾಡಿದ ಬಸವಣ್ಣ ನಿಜವಾದ ಮನಶಾಸ್ತ್ರಜ್ಞ.

ಹೆತ್ತ ತಂದೆ-ತಾಯಿಗೆ ನೋವಾಗದಂತೆ ಜೀವನ ನಡೆಸಬೇಕು. ತಂದೆ-ತಾಯಿ ನಮ್ಮ ಮನೆ ದೇವರು. ತಂದೆ-ತಾಯಿ ಸೇವೆಯೇ ಮುಕ್ತಿಗೆ ಸೋಪಾನ. ಧರ್ಮವೆಂದರೆ ಕೇವಲ ಗುಡಿ, ಮಸೀದಿ, ಚರ್ಚು ಅಲ್ಲ. ಪ್ರಾರ್ಥನೆ, ನಮಾಜು ಕೂಡ ಅಲ್ಲ. ಇದನ್ನೇ “ದಯೆ ಇಲ್ಲದ ಧರ್ಮ ಯಾವುದಯ್ಯ? ಎಂದು ಬಸವಣ್ಣನವರು ಪ್ರಶ್ನಿಸಿದ್ದಾರೆ. ಜಾತಿ-ಧರ್ಮಕ್ಕಿಂತ ಬದುಕು ಮುಖ್ಯ. ವಿವಿಧ ಸಂಸ್ಕೃತಿಯ ಭಾರತದ ಭವ್ಯ ಪರಂಪರೆಗೆ ಬುದ್ಧನ ಕರುಣೆ, ಬಸವಣ್ಣನ ದಯೆ, ಮಹಾವೀರನ ಶಾಂತಿ ಬೇಕಾಗಿದೆ. ಮಂದಿರ-ಮಸೀದಿಗಳಿಂದ ಧರ್ಮ ಉಳಿಯುವುದಿಲ್ಲ. ಕುಟುಂಬ ಉಳಿದರೆ ದೇಶ-ಧರ್ಮ ಉಳಿಯಲು ಸಾಧ್ಯ.

ಬರಹಕ್ಕೆ: ಶಿವರಂಜನ್ ಸತ್ಯಂಪೇಟೆ

(ಸ್ಥಳ: ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನ, ಜೇವರ್ಗಿ)

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here