ಶಹಾಪುರ : ಜಾತಿಯತೆಯ ಅಸಮಾನತೆಯ ವಿರುದ್ಧ ವಿಚಾರದ ಅಲಗನ್ನು ಝಳಪಿಸಿ ಸಮಾಜವನ್ನು ಮಟ್ಟಸ ಮಾಡಿದವರು ನಿಜ ಶರಣ ಅಂಬಿಗರ ಚೌಡಯ್ಯನವರು ಎಂದು ಡಾ. ಮೋನಪ್ಪ ಶಿರವಾಳ ಅಭಿಪ್ರಾಯ ಪಟ್ಟರು. ಸ್ಥಳೀಯ ಬಸವಮಾರ್ಗ ಪ್ರತಿಷ್ಠಾನ ಏರ್ಪಡಿಸಿದ್ದ ತಿಂಗಳ ಬಸವ ಬೆಳಕು -೯೫ ರ ಸಭೆಯಲ್ಲಿ ಕಟ್ಟಿದ ಲಿಂಗವ ಕಿರಿದು ಮಾಡಿ ಎಂಬ ವಿಷಯದ ಕುರಿತು ಅನುಭಾವ ನೀಡಿದರು.
ಮುಂದುವರೆದು ಮಾತನಾಡಿದ ಅವರು, ಅಂಬಿಗರ ಚೌಡಯ್ಯ , ಮಡಿವಾಳ ಮಾಚಯ್ಯ ಮುಂತಾದ ನಿಷ್ಠುರವಾದಿ , ಹೋರಾಟದ ಮನೋಭಾವನೆ ಇರುವ ಶರಣರು ಇಲ್ಲದೆ ಹೋಗಿದ್ದರೆ ನಮಗೆ ಶರಣರ ವಚನಗಳನ್ನು ಓದಲು ಸಿಗುತ್ತಿರಲಿಲ್ಲ. ಅಂದಿನ ರಾಜಶಾಹಿ ಹಾಗೂ ಪುರೋಹಿತ ಶಾಹಿ ಜನಗಳ ಕಪಿಮುಷ್ಠಿಯಿಂದ ವಚನಗಳನ್ನು ರಕ್ಷಿಸಿದರು. ಚೌಡಯ್ಯನವರ ಸಾತ್ವಿಕ ಸಿಟ್ಟು, ಆಕ್ರೋಶಗಳು ಅವರ ವಚನಗಳಲ್ಲಿ ಹೇರಳವಾಗಿ ಸಿಗುತ್ತವೆ. ಮಠಾಧಿಪತಿಗಳು ಚೌಡಯ್ಯನವರ ವಚನಗಳನ್ನು ಜಾಸ್ತಿ ಇಷ್ಟ ಪಡುವುದಿಲ್ಲ. ಕಾರಣ ಅಂದಿನ ಮ ಠಾಧಿಪತಿಗಳ ಇಬ್ಬದಿ ನೀತಿಯನ್ನು ಖಾರವಾಗಿ ಖಂಡಿಸಿದ್ದಾರೆ. ಶಿವನ ವೇಷ ಧರಿಸಿ, ಮನೆ ಮನೆ ತಿರುಗಿ ಬೇಡಿ ಉಣ್ಣುವ ಹಕ್ಕು ಯಾರಿಗೂ ಇಲ್ಲ. ಅಮರೇಶ್ವರ ಲಿಂಗವಾದರೂ ಕಾಯಕದೊಳಗೂ ಎಂದಿರುವುದರಿಂದ ಮಠಾಧಿಪತಿಯೂ ದುಡಿದು ಉಣ್ಣಬೇಕು. ವೇಷಕ್ಕೆ ತಕ್ಕ ಆಚಾರವಿಲ್ಲದಿದ್ದರೆ ಚೌಡಯ್ಯನವರು ಸಹಿಸಲಿಲ್ಲ ಎಂದು ಮಾರ್ಮಿಕವಾಗಿ ಅವರ ವಚನಗಳನ್ನು ವಿವರಿಸಿ ಬಣ್ಣಿಸಿದರು.
ಏಕ ದೇವೋಪಾಸಕರು ಎಂದು ತಮ್ಮನ್ನು ಕರೆದುಕೊಳ್ಳುತ್ತಿದ್ದ ಲಿಂಗವಂತರು , ಕಟ್ಟಿದ ಲಿಂಗವನ್ನು ಬಿಟ್ಟು ಬೆಟ್ಟದ ಸ್ಥಾವರ ಲಿಂಗಕ್ಕೆ ಹೋಗುವುದನ್ನು ಚೌಡಯ್ಯನವರು ಸಹಿಸುತ್ತಿರಲಿಲ್ಲ. ವೇಷಾಡಂಬಕರ ಕಂಡರೆ ಅವರನ್ನು ತಮ್ಮ ನಾವಿಯಲ್ಲಿ ಕುಳ್ಳಿರಿಸಿ ಭೋಂಕನೆ ಮುಳುಗಿಸಿ ಬಿಡುತ್ತೇನೆ ಎಂಬ ಸಾತ್ವಿಕ ಸಿಟ್ಟು ಅವರಲ್ಲಿತ್ತು. ಆದರೆ ಇನ್ನಿತರ ಶರಣರ ಕುರಿತು ಅಪಾರವಾದ ಪ್ರೀತಿಯನ್ನು ತಮ್ಮ ಎದೆಯೊಳಗೆ ಇಟ್ಟುಕೊಂಡಿದ್ದರು.ಜನ ಸಾಮಾನ್ಯರು ಬದಲಾಗಲಿ ಎಂದು ಹಂಬಲಿಸಿದರು. ಜಾತಿ, ಮೌಢ್ಯಗಳು, ಪುರೋಹಿತ ಸೃಷ್ಟಿಸಿದ ದೇವರುಗಳ ಬಗೆಗೆ ನ್ಯಾಯೋಚಿತವಾದ ಕ್ರೋಧ ಚೌಡಯ್ಯವರ ವಚನಗಳಲ್ಲಿ ವ್ಯಕ್ತವಾಗುತ್ತದೆ ಎಂದು ಸಭೆಗೆ ವಿವರಿಸಿದರು.
ಸೂರ್ಯ ಗ್ರಹಣ, ಚಂದ್ರ ಗ್ರಹಣಗಳು ಪ್ರಾಕೃತಿಕ ಬದಲಾವಣೆಗಳು. ಯಾವ ಗ್ರಹಣಗಳು ಮನುಷ್ಯನ ಮೇಲೆ ಯಾವ ಪರಿಣಾಮಗಳನ್ನು ಉಂಟು ಮಾಡುವುದಿಲ್ಲ. ಜ್ಯೋತಿಷ್ಯ , ವಾಸ್ತು, ಪಂಚಾಂಗ ಹೇಳುವವರು ಗ್ರಹಗಳ ಬಗೆಗೆ ತಪ್ಪು ಮಾಹಿತಿ ಹೊಂದಿ ಜನ ಸಾಮಾನ್ಯರನ್ನು ಭಯದಲ್ಲಿ ಇಟ್ಟಿದ್ದಾರೆ. ಗ್ರಹಣದ ದಿನ ನೀರನ್ನಷ್ಟೆ ಹೊರ ಚಲ್ಲುವ ಬದಲು ಮನೆಯಲ್ಲಿರುವ ಇತರ ಪದಾರ್ಥಗಳನ್ನು ಹೊರಗೆ ಬಿಸುಟಬೇಕು ! ನೀರು ಪುಕ್ಕಟ್ಟೆಯಾಗಿ ಸಿಗುತ್ತದೆ ಎಂದು ಜ್ಯೋತಿಷ್ಯಿಯ ಮಾತು ಕೇಳಬಾರದು. ಎಲ್ಲಾ ಧರ್ಮಗಳು ಏನೇ ಹೇಳಿದರು ಎದೆಯ ಧರ್ಮ ಬಹು ದೊಡ್ಡದು. ಎದೆಯ ದ್ವನಿಯೆ ನಮಗೆ ಋಷಿ ಆಗಿರುವುದರಿಂದ , ನಮ್ಮ ಎದೆಯ ಧ್ವನಿಗೆ ಮಾತ್ರ ಕಿವಿಗೊಡಬೇಕು ಎಂದು ವಿಶ್ವಾರಾಧ್ಯ ಸತ್ಯಂಪೇಟೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಭೆಯನ್ನು ಜ್ಯೋತಿ ಬೆಳಗಿಸುವ ಮೂಲಕ ರಾಯಣ್ಣ ಸಾಲಿಮನಿ ಉದ್ಘಾಟಿಸಿದರು. ಬಸವರಾಜ ಅರುಣಿ ಅತಿಥಿಯಾಗಿ ಭಾಗವಹಿಸಿದ್ದರು. ಮಹಾದೇವಪ್ಪ ಗಾಳೇನೋರ, ಅಲ್ಲಮಪ್ರಭು ಸತ್ಯಂಪೇಟೆ, ಚೆನ್ನಮಲ್ಲಿಕಾರ್ಜುನ ಗುಂಡಾನೋರ ವಚನ ಗಾಯನ ಮಾಡಿದರು. ಬಸವರಾಜ ಸಿನ್ನೂರ ಸ್ವಾಗತಿಸಿದರು.ಶಿವಣ್ಣ ಇಜೇರಿ ನಿರ್ವಹಿಸಿದರು.
ಸಭೆಯಲ್ಲಿ ಮಾನಪ್ಪ ಶಿರವಾಳ, ಶಿವಯೋಗಪ್ಪ ಹವಾಲ್ದಾರ, ಶಿವಕುಮಾರ ಕರದಳ್ಳಿ, ಹೊನ್ನಾರೆಡ್ಡಿ ವಕೀಲರು, ಗುರುಬಸವಯ್ಯ ಗದ್ದುಗೆ, ಎಂ.ಬಿ.ನಾಡಗೌಡ, ಪಂಪಣ್ಣಗೌಡ ಮಳಗ, ಶಿವಕುಮಾರ ಆವ ಂಟಿ, ಮರಿಲಿಂಗಪ್ಪ ತಳವಾರ, ಶರಾವತಿ ಸತ್ಯಂಪೇಟೆ, ನಾಗರತ್ನ, ಗೀತಾ ವಾಗಾ,ಸಂಗಮ್ಮ ಹರನೂರ ಮೊದಲಾದವರು ಭಾಗವಹಿಸಿದ್ದರು.