ರಾಯಚೂರು: ಹಟ್ಟಿ ತಾಲ್ಲೂಕಿನ ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್‌ಎಫ್‌ಐ) ಜಿಲ್ಲಾ ಸಮಿತಿಯ ವೀರಾಪೂರು ಗ್ರಾಮದಲ್ಲಿ ಎಸ್‌ಎಫ್‌ಐ ನಿಂದ ಬಸವ ಜಯಂತಿ ಆಚರಣೆ ಮಾಡಲಾಯಿತು.
ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ರಮೇಶ ವೀರಾಪುರು ಮಾತನಾಡಿ, ೧೨ ನೇ ಶತಮಾನದಲ್ಲಿ ಎಲ್ಲರೂ ಗುಡಿ ಗುಂಡಾರ, ದೇವರು ಮತ್ತು ಧರ್ಮದ ಬಗ್ಗೆ ಯೋಚಿಸುತ್ತಿದ್ದಾಗ ಬಸವಣ್ಣ ಅವರು ಮನುಷ್ಯರ ಬಗ್ಗೆ ಯೋಚಿಸಿದರು. ಈ ಸಮಾಜದಲ್ಲಿ ತುಂಬಿ ತುಳುಕುತ್ತಿದ್ದ ಮೌಢ್ಯ, ಕಂದಾಚಾರ, ಅಜ್ಞಾನ, ಮೋಸ, ವಂಚನೆಗಳ ವಿರುದ್ಧ ಬಸವಣ್ಣ ಹೋರಾಟ ನಡೆಸಿದರು ಎಂದರು.
ಬಸವಣ್ಣ ಅವರನ್ನು ಲಿಂಗಾಯತ ಎಂಬ ಜಾತಿಗೆ ಸೀಮಿತಗೊಳಿಸುತ್ತಿದ್ದಾರೆ. ಆದರೆ ಬಸವಣ್ಣ ಹೇಳಿದ್ದು ಲಿಂಗಾಯತ ವನ್ನು ಜಾತಿ ಮಾಡಿಕೊಳ್ಳಿ ಎಂದು ಅಲ್ಲ. ಲಿಂಗಾಯತ ಧರ್ಮದ ತತ್ವಗಳನ್ನು ಅನುಸರಿಸಲು ಕರೆ ನೀಡಿದ್ದರು. ಲಿಂಗಾಯತ ಚಳವಳಿಯನ್ನು ಬಸವಣ್ಣ ಅವರು ಅಷ್ಟೇ ಅಲ್ಲದೇ ಮಾದರ ಚನ್ನಯ್ಯ, ಹಡಪದ ಹಪ್ಪಣ್ಣ, ಸೂಳೆ ಸಂಕವ್ವ, ಸನಾದಿ ಅಪ್ಪಣ್ಣ, ಅಕ್ಕ ಮಹಾದೇವಿಯಂತಹ ಅದೇಷ್ಟೋ ದುಡಿಯುವ ವರ್ಗದಿಂದ ಈ ಚಳುವಳಿಯನ್ನು ಕಟ್ಟಿ ಸಮಾಜ ಸುಧಾರಣೆ ಮಾಡಿದ್ದಾರೆ ಎಂದು ಹೇಳಿದರು.
ಬಸವಣ್ಣ ಅವರ ನಿಜವಾದ ವಿಚಾರಗಳನ್ನು ಗಾಳಿಗೆ ತೂರಲಾಗ್ತಿದೆ. ಬದಲಾಗಿ ಅವರ ಚಿಂತನೆಗೆ ವಿರುದ್ಧವಾದ ಆಚರಣೆ ನಡೆಸಿ ಬಸವಣ್ಣ ಅವರಿಗೆ ಅವಮಾನ ಮಾಡಲಾಗುತ್ತಿದೆ. ಬಸವಣ್ಣ ಅವರ ಮೂರ್ತಿ ಕಟ್ಟಿ ಅವರಿಗೆ ದೊಡ್ಡ ಹೂವಿನ ಹಾರ ಹಾಕಿ, ಕಾಯಿ ಹೊಡೆದು ಕರ್ಪೂರ ಹಚ್ಚಿ, ಊದಿನ ಕಡ್ಡಿ ಹಚ್ಚುವುದು ಬಸವಣ್ಣ ಅವರ ಚಿಂತನೆಗೆ ವಿರುದ್ಧವಾಗಿದೆ ಎಂದರು. ಈ ವೇಳೆ ಆಕ್ಸಿಸ್ ಬ್ಯಾಂಕ್ ಸಿಬ್ಬಂದಿ ಆಚಿಜನೇಯ ಹೂವಿನಬಾವಿ ಮಾತನಾಡಿದರು.
ಈ ಸಂದರ್ಭದಲ್ಲಿ ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು, ಎಸ್‌ಡಿಎಂಸಿ ಅಧ್ಯಕ್ಷ ನಿಂಗಪ್ಪ ಎಂ., ಮಾಜಿ ಎಸ್‌ಡಿಎಂಸಿ ಅನ್ನಪೂರ್ಣ, ಶಿಕ್ಷಕಿ ಗಿರಿಜಾ, ಹಟ್ಟಿ ಚಿನ್ನದ ಗಣಿ ಸಿಬ್ಬಂದಿ ರಮೇಶ ಚಿತ್ರನಾಳ, ಬಸವರಾಜ ಚೆನ್ನಪ್ಪ, ಅನಿಲ್ ಕುಮಾರ್, ಶಶಿಕಲಾ ಸೇರಿದಂತೆ ಅನೇಕರಿದ್ದರು.