ಶರಣ ಸ್ಮಾರಕ: ಜಗದೇವಪ್ಪ, ಮೊಲ್ಲೆಬೊಮ್ಮಯ್ಯಗಳು

0
58

ಹರಳಯ್ಯ ಮಧುವಯ್ಯರಿಗೆ ಎಳೆಹೂಟೆ ಶಿಕ್ಷೆ ನೀಡಿದ್ದರಿಂದ ರೊಚ್ಚಿಗೆದ್ದ ಶರಣ ಸಂಕುಲ ಬಿಜ್ಜಳನನ್ನು ಕೊಲೆ ಮಾಡಿತು ಎಂದು ಹೇಳಲಾಗುತ್ತಿದೆ. ಆದರೆ ಶರಣರು ಬಿಜ್ಜಳನನ್ನು ಕೊಲೆ ಮಾಡಲಿಲ್ಲ ಎಂಬುದಕ್ಕೆ ಜಗದೇವ ಮತ್ತು ಮೊಲ್ಲೆಬೊಮ್ಮಯ್ಯರ ಜೀವನ ಚರಿತ್ರೆಯ ಅಧ್ಯಯನದಿಂದ ತಿಳಿದು ಬರುತ್ತದೆ. “ಕಾಳರುದ್ರನು ಮಾಚ ಭಾಳಲೋಚನ ಭಕ್ತ ಮಲ್ಲಿಬೊಮ್ಮಯ್ಯ ಜಗದೇವ/ ಮನೆ ಹೊಕ್ಕು ಸೀಳಿ ತಲೆ ಹೊಡೆದು” ಎಂಬ ಜಾನಪದ ತ್ರಿಪದಿ, ಪುರಾಣಗಳು ಹಾಗೂ ನಂತರದ ಕೃತಿಕಾರರು ಹೇಳುತ್ತ ಬಂದಿರುವುದನ್ನು ಗಮನಿಸಬಹುದು.

ಪಾಲ್ಕುರಿಕೆ ಸೋಮನಾಥನ ತೆಲುಗು ಬಸವಪುರಾಣ (1180)ದ ಪ್ರಕಾರ ಕಲ್ಯಾಣದ ಕಡೆಯಿಂದ ಹೋದ ಕೆಲ ಶರಣರು ಬಸವ ಕಥೆಯನ್ನು ನಿರೂಪಿಸಿದರು. ದೋಚಮಾಂಬೆ ಎಂಬ ಶರಣೆ ಇವರ ಜೊತೆಗಿದ್ದರು. ಹರಳಯ್ಯ-ಮದುವಯ್ಯಗಳಿಗೆ ವಿನಾಕಾರಣ ಬಿಜ್ಜಳನು ಕಣ್ಣುಗಳನ್ನು ಕೀಳಿಸಿದ ಎಂಬ ಉಲ್ಲೇಖವಿದೆ. ನಂತರದ ಕೃತಿಗಳಲ್ಲಿ ಎಳೆಹೂಟೆ ಶಿಕ್ಷ ಆಯಿತೆಂಬ ಸಮಾಚಾರ ಕೂಡ ಇದೆ. ಬಸವಣ್ಣನವರ ಸಂಘಟನಾ ಸಾಮಥ್ರ್ಯ ಕಂಡು ಸಹಿಸಲಾಗದ ಕೆಲವು ಜನರು ಬಸವಣ್ಣ-ಬಿಜ್ಜಳರ ನಡುವೆ ಹುಳಿ ಹಿಂಡಿರುವ ಕೆಲಸ ಮಾಡಿರಬೇಕು. ಅಲ್ಲಿಂದಲೇ ಸಂಘರ್ಷ ಪ್ರಾರಂಭವಾಯಿತು.

Contact Your\'s Advertisement; 9902492681

ಕೊನೆಗೆ ಹರಳಯ್ಯ-ಮಧುವರಸರಿಗೆ ಎಳೆಹೂಟೆ ಶಿಕ್ಷೆ ನೀಡಲಾಯಿತು ಎಂಬುದಂತೂ ನಾವೆಲ್ಲರೂ ತಿಳಿದಿರುವ ಸಂಗತಿ. ಶರಣ ದಂಪತಿಗೆ ಎಳೆಹೂಟೆ ಶಿಕ್ಷೆ ಕೊಡುವ ವೇಳೆಯಲ್ಲಿ ಬಿಜ್ಜಳನ ಮಂತ್ರಿಯಾಗಿದ್ದ ಜಗದೇವಪ್ಪನು ಅಲ್ಲಿದ್ದ. ಮನೆಗೆ ಬಂದ ಕೋಪಗೊಂಡ ತಾಯಿ ಜಗದೇವಪ್ಪನನ್ನು ಉದ್ದೇಶಿಸಿ “ನಮ್ಮ ಸತ್ಯ ಶರಣರಿಗೆ ಎಳೆಹೂಟೆ ಶಿಕ್ಷೆ ನೀಡಿದ ಬಿಜ್ಜಳನನ್ನು ನೀನು ಕೊಲ್ಲಬೇಕಿತ್ತು. ಇಲ್ಲದಿದ್ದರೆ ನೀನಾದರೂ ಸಾಯಬೇಕಿತ್ತು” ಎಂದು ಹೇಳುತ್ತಾಳೆ. ಶರಣರಿಗೆ ಶಿಕ್ಷೆ ನೀಡಿದ ಪ್ರತೀಕಾರದ ಸೇಡು ನೀನು ತೀರಿಸುವವರೆಗೆ ನಾಯಿಗೆ ಹಾಕಿದ ಹಾಗೆ ನಿನಗೆ ಅನ್ನ ಹಾಕುತ್ತೇನೆ ಎಂದಳು. ಜಗದೇವ ತಾಯಿಯ ಮಾತನ್ನು ಕೇಳಿ ಅದನ್ನು ಪರಿಪಾಲಿಸುತ್ತಿದ್ದ.

ಹೀಗಿರಲು, ಅವನ ಗೆಳೆಯ ಮೊಲ್ಲೆಬೊಮ್ಮಯ್ಯ ಬಂದು, ನಾನು ಕೂಡ ಹೀಗೆಯೇ ಇರುತ್ತೇನೆ. ನನಗೂ ನಾಯಿಗೆ ಹಾಕಿದ ಹಾಗೆ ಅನ್ನ ಹಾಕು ಎಂದು ಜಗದೇವನ ತಾಯಿಯನ್ನು ಕೇಳುತ್ತಾನೆ. ಮೇಲಾಗಿ ಅಂದು ರಾತ್ರಿ ಬಿಜ್ಜಳನ ಸಭೆ ನಡೆದಾಗ ಅರಸನನ್ನು ಕೊಂದರು” ಮನೆಗೆ ಬಂದ ಜಗದೇವ ತಾಯಿಗೆ ಈ ವಿಷಯ ತಿಳಿಸಿ ಈ ಕೆಲಸವನ್ನು ತಾನು ಮೊದಲೇ ಮಾಡಲಾರದ್ದಕ್ಕೆ ತಾಯಿ ಮುಂದೆ ಪ್ರಾಣಾರ್ಪಣೆ ಮಾಡಿಕೊಳ್ಳುತ್ತಾನೆ ಎಂಬುದು ಸೋಮನಾಥನ ಬಸವ ಪುರಾಣದಿಂದ ತಿಳಿದು ಬರುತ್ತದೆ. 1280ರ ಮರಡಿಪುರ ಶಾಸನ ಕೂಡ ಇದಕ್ಕೆ ಪೂರಕವಾಗಿರುವುದನ್ನು ನಾವು ಗಮನಿಸಬಹುದು.

ವಿಜಯಪುರ ಜಿಲ್ಲೆಯ ಸಿಂದಗಿಯಿಂದ 12 ಕಿ.ಮೀ. ದೂರದ ಆಲಮೇಲದಲ್ಲಿ ದೇಸಾಯಿ ಮನೆತನವಿದ್ದು, ಅಲ್ಲೊಂದು ಮಲ್ಲೆಬೊಮ್ಮನ ಮಠವಿದೆ. ನಂತರ ವಿಜಯಪುರ ತಾಲ್ಲೂಕಿನ ಬಬಲೇಶ್ವರದಲ್ಲಿ ಜಗದೇವಪ್ಪನ ತಂದೆ ಗುರುಬಸಪ್ಪನ ಸಮಾದಿ ಕೂಡ ಇದೆ. ಸಮಾದಿಯ ಕಾಂಪೌಂಡ್ ಹೊರಗಡೆ ಗವಿಯ ಬಾಗಿಲು ಕಾಣಿಸುತ್ತದೆ. ಅಲ್ಲಿಯೇ ಜಗದೇವಪ್ಪನ ಮನೆಯ ಪಳಿಯುಳಿಕೆ ಕಾಣಬಹುದು. ಹೆಳವರ ದಾಖಲೆಯಲ್ಲಿ ಕೂಡ ಬೊಮ್ಮಿನ ದೇಸಾಯಿ ಮನೆತನದ ಪ್ರಸ್ತಾಪವಿದೆ. ಆದರೆ ಮೊಲ್ಲೆಬೊಮ್ಮನ ಹೆಸರು ಕಾಣುವುದಿಲ್ಲ. ಕೊಪ್ಪಳ ಜಿಲ್ಲೆಯ ರ್ಯಾವಣಕಿ ಮೊಲ್ಲೆಬೊಮ್ಮಯ್ಯಗಳ ಹುಟ್ಟೂರು. ಅಲ್ಲಿರುವ ಕಲ್ಲೇಶ್ವರ ದೇವಲಯದ ಪಕ್ಕದಲ್ಲಿ ಹಿರೇಮಠವಿದೆ. ಮಗ್ಗುಲಲ್ಲಿರುವ ಮನೆಯವರು ನಾವು ಇದೇ ಮಠಕ್ಕೆ ಸಂಬಂಧಿಸಿದವರು. ಕಲ್ಲೇಶ್ವರ ನಮ್ಮ ಮನೆದೇವರು ಎಂದು ಹೇಳುತ್ತಾರೆ. ಅವರ ಮನೆಯ ಜಗಲಿ ಮೇಲೆ ಎರಡು ಖಡ್ಗಗಳಿದ್ದು ಈ ಖಡ್ಗಗಳನ್ನು ಬಳಸಿಯೇ ಬಿಜ್ಜಳನನ್ನು ಕೊಲೆ ಮಾಡಿದರು ಎಂದು ಹೇಳುತ್ತಾರೆ.

ಇಲ್ಲಿಗೆ ಸಮೀಪದಲ್ಲಿಯೇ ಕಲ್ಲೂರು ಗ್ರಾಮವಿದೆ. ಕಲ್ಯಾಣದಿಂದ ಕಲ್ಲೂರಿಗೆ ನಂದಿಯ ಮೇಲೆ ರ್ಯಾವಣಿಕೆಗೆ ಬಂದಿರಬಹುದು. ಆ ಗುರುತಿಗಾಗಿ ನಂದಿಕಟ್ಟೆ (ಜಗದೇವ-ಮೊಲ್ಲೆಬೊಮ್ಮ) ಕಟ್ಟಿದ್ದಾರೆ. ಕಲ್ಲೇಶ್ವರ ದೇವಾಲಯ ಎದುರಿನ ಬೇವಿನ ಮರದ ಕಟ್ಟೆಯ ಮೇಲೆ ನಂದಿಯ ಪ್ರತೀಕವಾಗಿ ಎರಡು ಕಲ್ಲುಗಳನ್ನು ಇಟ್ಟಿದ್ದಾರೆ. ಕಲ್ಲೂರಿನ ಕಲ್ಲೇಶ್ವರ ದೇವಸ್ಥಾನದ ಹಿಂದೆ ಮಲ್ಲೆಬೊಮ್ಮಯ್ಯಗಳ ಸಮಾದಿ ಎಂದು ಹೇಳುತ್ತಾರೆ. ಮೊಲ್ಲೆಬೊಮ್ಮಯ್ಯಗಳ ಕಾವ್ಯ (1700)ದ ಪ್ರಕಾರ ಬೊಮ್ಮೆಗೌಡ-ಕಲ್ಲಮ್ಮ ಕಲ್ಲೂರಿನ ಕಲ್ಲೇಶ್ವರನಿಗೆ ಮಕ್ಕಳಿಗಾಗಿ ಹರಕೆ ಹೊತ್ತು ತಾಯಿ ಕಲ್ಲಮ್ಮ ತನಗೆ ಗಂಡು ಮಗು ಜನಿಸಿದರೆ ನಿನ್ನ ಹೆಸರಿಡುವುದಾಗಿ ಹರಕೆ ಹೊತ್ತಳು. ಹರಕೆ ಮರೆತು ಚಿಕ್ಕನರೇಗಲ್ಲ/ಕೋಡಿಕೊಪ್ಪ ನೆನೆದು ಮೂಲಬ್ರಹ್ಮಯ್ಯ ಎಂದು ಹೆಸರಿಡುತ್ತಾರೆ. ಈ ಮೂಲಬ್ರಹ್ಮಯ್ಯ ಎಂಬುದೇ ಮೊಲ್ಲೆಬೊಮ್ಮ ಆಗಿರಬೇಕು (1120ರ ಶಾಸನದ ಪ್ರಕಾರ ಮೂಲಬ್ರಹ್ಮ/ ಮೊಲ್ಲೆಬ್ರಹ್ಮ/ ಮೊಲ್ಲೆಬೊಮ್ಮ ಹೆಸರಿಡುತ್ತಿದ್ದರು) ಹೀಗಾಗಿ ಜಗದೇವ ಆಲಮೇಲ ಗ್ರಾಮದವರಾಗಿದ್ದು, ಮೊಲ್ಲೆಬೊಮ್ಮ ರ್ಯಾವಣಕಿ-ಕಲ್ಲೂರ ಗ್ರಾಮದವರಾಗಿದ್ದರು. ಅವರಿಬ್ಬರು ಸಹೋದರರು ಆಗಿರದೆ ಇಬ್ಬರ ಮಧ್ಯೆ ಗಾಢವಾದಸ್ನೇಹ ಸಂಬಂಧ ಇತ್ತು ಎಂಬುದು ಜೋಡು-ಜೋಡಾಗಿರುವ ಅವರ ಸ್ಮಾರಕಗಳಿಂದ ಸ್ಪಷ್ಟವಾಗುತ್ತದೆ.

ಕಲ್ಲೂರಿನ ಕಲ್ಲೇಶ್ವರ ದೇವಸ್ಥಾನದಲ್ಲಿ 18 ಶಾಸನಗಳಿದ್ದು, ಈ ದೇವಸ್ಥಾನ ಆಗ ಕಾಳಾಮುಖ ಶೈವ ಧರ್ಮದ ಶಿಕ್ಷಣ ಕೇಂದ್ರವಾಗಿತ್ತು. ಮೊಲ್ಲೆಬೊಮ್ಮ ಇಲ್ಲಿ ಕಾಳಮುಖ ಪಂಥದ ಶಿಕ್ಷಣ ಪಡೆದಿರಬೇಕು. ಬಿಜ್ಜಳ ಅಧಿಕಾರದಲ್ಲಿದ್ದಾಗಲೇ ಕೊಲೆಯಾಗಿದೆ ಎಂದು ಹೇಳಿದರೆ ನಂತರ ಬಂದ ಅವನ ಮಗ ಸೋವಿದೇವ ಈ ಮೊಲ್ಲೆಬೊಮ್ಮಯ್ಯನವರನ್ನು ಹೇಗೆ ಬಿಟ್ಟ? ಎಂಬುದು ಸಂಶಯವಾಗಿಯೇ ಉಳಿಯುತ್ತದೆ. ಬಿಜ್ಜಳನ ಆಳ್ವಿಕೆಯ ಕೊನೆ 1167ರ ಮಧ್ಯಭಾಗ ಎಂಬುದನ್ನು ಬಹುತೇಕ ಎಲ್ಲ ಸಂಶೋಧಕರು ಒಪ್ಪಿಕೊಂಡಿದ್ದಾರೆ. ಆದರೆ ಬಳ್ಳಿಗಾವಿಯ (1168) ಶಾಸನದಲ್ಲಿ ಬಿಜ್ಜಳ ತನ್ನ ಮಗ ಸೋವಿದೇವನಿಗೆ ಅಧಿಕಾರ ಹಸ್ತಾಂತರ ಮಾಡಿದ (ಸೋವಿದೇವ ಬಿಜ್ಜಳನ ಮೇಲೆ ಎರಗಿ ಬಂದ) ಎಂಬ ಉಲ್ಲೇಖವಿರುವುದನ್ನು ಸಂಶೋಧಕ ಪಿ.ಬಿ. ದೇಸಾಯಿ ತಿಳಿಸುವುದನ್ನು ನೋಡಿದರೆ ಅಧಿಕಾರದಲ್ಲಿದ್ದಾಗಲೇ ಬಿಜ್ಜಳನ ಕೊಲೆ ಆಗಿಲ್ಲ ಎಂಬುದು ನಮಗೆ ತಿಳಿದು ಬರುತ್ತದೆ.

ಸ್ಥಳ: ಅನುಭವ ಮಂಟಪ,
ಜಯನಗರ, ಕಲಬುರಗಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here