ಕಲಬುರಗಿ: ಕುರಿ ಫಾರ್ಮ್ ನಲ್ಲಿ ತರಕಾರಿಯನ್ನು ತೆಗೆದಿಟ್ಟು ಗಾಂಜಾ ಪ್ಯಾಕೇಟ್ ಗಳನ್ನು ಸುರಂಗದೊಳಗೆ ಶೇಖರಣೆ ಮಾಡಿಟ್ಟಿದ ಒಟ್ಟು 1350 ಕೆ.ಜಿ ಗಾಂಜಾ ಜಪ್ತಿ ಮಾಡಿ, ನಾಲ್ವರು ಆರೋಪಿಗಳಿಗೆ ಬಂಧಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಡ್ರಗ್ಸ್ ಜಾಲದ ವಿರುದ್ಧ ಕೇಂದ್ರ ವಿಭಾಗದ ಪೊಲೀಸರು ಸಮರ ಸಾರಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಹತ್ ಕಾರ್ಯಾಚರಣೆ ನಡೆಸಿದ್ದಾರೆ.
ಗಾಂಜಾ ಮಾರಾಟದ ಸಂಬಂಧ ವೃತ್ತಿಯಲ್ಲಿ ಆಟೋ ಚಾಲಕನಾಗಿರುವ ಗಾಯತ್ರಿನಗರ ನಿವಾಸಿ ಜ್ಞಾನಶೇಖರ್, ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಸಿದ್ದುನಾ ಲಾವಟೆ, ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ನಾಗನಾಥ, ಹಾಗೂ ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಚಂದ್ರಕಾಂತ್ ಎಂಬ ನಾಲ್ವರು ಖರ್ನಾಕ್ ಆರೋಪಿಗಳನ್ನು ಬಂಧಿಸಲಾಗಿದೆ.
ಖಚಿತ ಮಾಹಿತಿ ಆಧಾರಿಸಿ ಕಲಬುರಗಿಯ ಮಾಡಬೂಳ ಟೋಲ್ ಬಳಿ ದಾಳಿ ನಡೆಸಿ ಚಂದ್ರಕಾಂತ್ ಮತ್ತು ನಾಗನಾಥ್ ಎಂಬವರನ್ನು ಬಂಧಿಸಲಾಯಿತು. ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಾಳಗಿ ತಾಲೂಕಿನ ಲಚ್ಚು ನಾಯಕ ತಾಂಡಾ ಬಳಿಯ ಕುರಿ ಫಾರ್ಮ್ ನಲ್ಲಿ ಗಾಂಜಾ ಅಡಗಿಸಿಟ್ಟಿದ್ದಾಗಿ ಆರೋಪಿಗಳು ಹೇಳಿದ್ದಾರೆ.
ಹೆಸರಿಗೆ ಕುರಿ ಫಾರ್ಮ್ ಆದರೂ ಇಲ್ಲಿ ಕುರಿ ಸಾಕಾಣಿಕೆ ಇರಲಿಲ್ಲ, ಕುರಿ ಫಾರ್ಮ್ ಒಳಗೆ ವಿಶಾಲ ಪ್ರದೇಶವಿದ್ದು, ಅಲ್ಲಿ ಗಾಂಜಾ ಇಟ್ಟ ಯಾವ ಕುರುಹೂ ಕಂಡುಬರಲಿಲ್ಲ. ಚಂದ್ರಕಾಂತ್ ನನ್ನು ವಿಚಾರಣೆ ನಡೆಸಿದಾಗ, ನೆಲದ ಮೇಲಿದ್ದ ಮಣ್ಣನ್ನು ಸರಿಸಿದಾಗ ಹಲಗೆಯನ್ನು ತೆಗೆದಾಗ ಒಳಗಡೆ ರಹಸ್ಯ ಅಂಡರ್ ಗ್ರೌಂಡ್ ಪತ್ತೆಯಾಯಿತು.
ಚಂದ್ರಕಾಂತ್ ಗಾಂಜಾ ಶೇಖರಣೆ ಮಾಡಿ ಇಡಲು ಈ ಸುರಂಗವನ್ನು ನಿರ್ಮಿಸಿದ್ದ ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಆಯುಕ್ತರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.