ಕಲಬುರಗಿ: ನಗರದ ರಸ್ತೆ ಸಾರಿಗೆ ಇಲಾಖೆಯ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ವಾಹನ ಚಾಲನಾ ಪರವಾನಿಗೆ ಪಡೆಯುವವರಿಗೆ ಹಣದ ಬರೆ ಬೀಳುತ್ತಿದೆ ಎಂದು ಹೆಚ್. ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಸಂಚಾಲಕ ಮಂಜುನಾಥ ನಾಲವಾರಕರ್ ಆರೋಪಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಧ್ಯವರ್ತಿಗಳು ಹಾಗೂ ವಾಹನ ಚಾಲನಾ ತರಬೇತಿ ಶಾಲೆಗಳೊಂದಿಗೆ ಇಲ್ಲಿನ ರಸ್ತೆ ಸಾರಿಗೆ ನಿರೀಕ್ಷಕರೂ ಶಾಮೀಲಾಗಿದ್ದು, ಕೂಡಲೇ ಮಧ್ಯವರ್ತಿಗಳ ಉಪಟಳ ತಡೆಯಲು ಹಿರಿಯ ಅಧಿಕಾರಿಗಳು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.
ದ್ವಿಚಕ್ರ, ತ್ರಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳ ಚಾಲನಾ ಪರವಾನಿಗೆ ಪಡೆಯಲು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಪಡೆಯುವಂತೆ ಸರ್ಕಾರ ಹೇಳುತ್ತದೆ ಆದರೂ ಆನ್ ಲೈನ್ ಅರ್ಜಿಗಳು ತಿರಸ್ಕಾರ ಮಾಡುತ್ತಿದ್ದಾರೆ. ನಂತರ ರೋಸಿ ಹೋದ ಜನ ದಲ್ಲಾಳಿಗಳ ಬಳಿ ಮೊರೆ ಹೋದಾಗ ಅಲ್ಲಿ ಅವರು ಹೇಳಿದಷ್ಟು ಹಣ ಕೊಟ್ಟರೆ ಲೈಸೆನ್ಸ್ ತಾನಾಗಿಯೇ ಕೈ ಸೇರುತ್ತದೆ.
ಓರ್ವ ವ್ಯಕ್ತಿಗೆ ವಾಹನ ಚಲಾಯಿಸಲು ಪರೀಕ್ಷೆ ತೆಗೆದು ಪರವಾನಿಗೆ ನೀಡಬೇಕು ಎಂಬ ನಿಯಮವನ್ನು ಗಾಳಿಗೆ ತೂರಿ ಹಣ ಕೊಟ್ಟರೆ ವಾಹನ ಚಾಲನಾ ಪರೀಕ್ಷೆಯೂ ಗಮನಿಸದೇ ಪರವಾನಿಗೆ ನೀಡಿ ಸಾರ್ವಜನಿಕರ ಜೊತೆ ಚಲ್ಲಾಟವಾಡುತ್ತಿದ್ದಾರೆ. ಇದು ಸರಿಯಲ್ಲ ಕೂಡಲೇ ಇದನ್ನು ನಿಲ್ಲಿಸಿ ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕು ಎಂದು ಆಗ್ರಹಿಸಿದರು.
ಮಧ್ಯವರ್ತಿಗಳ ಹಾವಳಿ ತಡೆಯಲು ಇದೇ ೧೫ ರಂದು ರಸ್ತೆ ಸಾರಿಗೆ ಕಚೇರಿ ಮುಂದೆ ಪ್ರತಿಭಟನೆ ಮಾಡಲು ಹೆಚ್. ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ನಿರ್ಧರಿಸಿದೆ ಎಂದು ತಿಳಿಸಿದರು.