ಶಹಾಪುರ : ರಾಜ್ಯದಲ್ಲಿ ನಡೆಯುತ್ತಿರುವ ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ತಾಲೂಕಿನ ಸಗರ ಗ್ರಾಮದಲ್ಲಿ ಶಾಂತಿಯುತವಾಗಿ ಮತದಾನ ನಡೆಯಿತು.ಬೆಳಗಿನ ವಿಪರೀತ ಚಳಿ ಲೆಕ್ಕಿಸದೆ ಗ್ರಾಮೀಣ ಭಾಗಗಳಲ್ಲಿ ಶಾಂತಿಯುತವಾಗಿ ಮತದಾನ ನಡೆಯಿತು ಬೆಳಿಗ್ಗೆ ಸ್ವಲ್ಪ ಮಟ್ಟಿಗೆ ನಿರುತ್ಸಾಹ ಕಂಡು ಬಂದರೂ ಮಧ್ಯಾಹ್ನದ ನಂತರ ತುರುಸಿನಿಂದ ಮತದಾನ ಜರುಗಿತು.ಗ್ರಾಮದ ವಿವಿಧ ವಾರ್ಡ್ಗಳಿಂದ ಜನರನ್ನು ಆಟೋ,ಬೈಕ್,ಇನ್ನಿತರ ವಾಹನಗಳಲ್ಲಿ ಬಂದು ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.
ಮಧ್ಯಾಹ್ನದ ವರೆಗೆ ಕೆಲವು ಕಡೆ ಕಡಿಮೆ ಪ್ರಮಾಣದ ಮತದಾನ ಆದರೆ ಇನ್ನೂ ಕೆಲವು ಮತಗಟ್ಟೆಗಳಲ್ಲಿ ಹೆಚ್ಚಿನ ಪ್ರಮಾಣದ ಮತದಾನ ನಡೆದಿರುವುದು ವರದಿಯಾಗಿವೆ, ತಂಡೋಪತಂಡವಾಗಿ ಮತದಾನ ಮಾಡಲು ಬಂದಿರುವ ದೃಶ್ಯ ಕಂಡುಬಂತು.ಕೆಲವರ ಹೆಸರುಗಳು ಮತದಾರರ ಪಟ್ಟಿಯಿಂದ ನಾಪತ್ತೆಯಾಗಿರುವುದರಿಂದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಹಾಗೂ ಯಂತ್ರಗಳ ಸಣ್ಣಪುಟ್ಟ ದೋಷಗಳು ಸೇರಿದಂತೆ ಕೆಲವೊಂದು ಅಹಿತಕರ ಘಟನೆಯನ್ನು ಹೊರತುಪಡಿಸಿದರೆ ಮತ್ಯಾವ ತೊಂದರೆಗಳು ಕಂಡು ಬಂದಿರುವುದಿಲ್ಲ.
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಹಿಂಬಾಲಕರು ಹಾಗೂ ಅವರ ಸಂಬಂಧಿಕರು ಗ್ರಾಮದ ಶತಾಯುಷಿಗಳನ್ನು ಹೊತ್ತು ತಂದು,ಆಟೋ ಬೈಕ್ ಗಳಲ್ಲಿ ಕರೆತಂದು ಮತ ಚಲಾಯಿಸುವಂತೆ ಸಹಕಾರ ನೀಡಿದರು. ಒಟ್ಟು 13 ವಾರ್ಡ್ ಗಳ ಪೈಕಿ ಪ್ರತಿಶತ 78% ಮತದಾನ ಜರುಗಿದೆ. ಎಪ್ಪತ್ತೆಂಟರಷ್ಟು ಚುನಾವಣಾ ಕಣಕ್ಕಿಳಿದಿರುವ ಸದಸ್ಯರ ಭವಿಷ್ಯ ಇನ್ನು ಮೂರು ನಾಲ್ಕು ದಿನಗಳಲ್ಲಿ ತಿಳಿಯಲಿದೆ ಆದ್ದರಿಂದ ಎಲ್ಲದಕ್ಕೂ ಸಮಯ ಕಾದುನೋಡಬೇಕಿದೆ.