ಕಲಬುರಗಿ: ರಾಷ್ಟ್ರಕವಿ ಕುವೆಂಪು ರಚಿಸಿದ ಉಳುವ ಯೋಗಿಯ ನೋಡಲ್ಲಿ ಎಂಬ ಕವಿತೆಯನ್ನು ರೈತಗೀತೆಯನ್ನಾಗಿ ರಾಜ್ಯ ಸರಕಾರ ಅಂಗೀಕರಿಸಿದೆ. ಆದರೆ ನೇಗಿಲಯೋಗಿ ಎಂದು ಕರೆಯಲ್ಪಡುವ ರೈತರಿಗೆ ಯಾವುದೇ ಗೌರವ ಸಿಗುತ್ತಿಲ್ಲ. ಕನಿಷ್ಠ ರೈತ ದಿನಾಚರಣೆ ಆಚರಿಸುವ ಮೂಲಕ ರೈತ ಸಮುದಾಯಕ್ಕೆ ಗೌರವ ಸೂಚಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ( ಕನ್ನಡಿಗರ ಬಣ) ದ ಕಲ್ಯಾಣ ಕರ್ನಾಟಕ ಅಧ್ಯಕ್ಷರಾದ ಶರಣು ಹೊಸಮನಿ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು ದೇಶದ ಮಹಾನ್ ನಾಯಕರ ಹಾಗೂ ವಿವಿಧ ವಿಶೇಷ ದಿನಗಳ ಮತ್ತು ಪುಣ್ಯ ಪುರುಷರ ದಿನಾಚರಣೆಗಳನ್ನು ಆಚರಿಸುತ್ತಾ ಬರಲಾಗುತ್ತಿದೆ. ಆದರೆ ದೇಶವಾಸಿಗಳಿಗೆ ಅನ್ನ ಹಾಕುವ, ಬೆವರಿಳಿಸಿ ದುಡಿಯುವ ನೇಗಿಲ ಯೋಗಿ ರೈತರ ದಿನಾಚರಣೆ ಆಚರಿಸಿ, ಕೃಷಿಕರ ಆತ್ಮಗೌರವ ಹೆಚ್ಚಾಗುವಂತೆ ಪ್ರೇರೆಪಿಸುವ ಕಾರ್ಯಕ್ರಮವನ್ನು ದೇಶಾದ್ಯಂತ ರೂಪಿಸಬೇಕು ಎಂದರು.
ಈಗಾಗಲೇ ಯೋಗವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ರೈತರ ದಿನಾಚರಣೆಗೆ ಮನಸ್ಸು ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.