ಶಹಾಬಾದ: ಸ್ವಾತಂತ್ರ್ಯಪೂರ್ವದಿಂದಲೂ ಅನೇಕ ಸಹಕಾರಿ ಸಂಘಗಳು ಜನಸಾಮಾನ್ಯರನ್ನು ಸಂಘಟಿಸಿ, ಸ್ಥಳೀಯ ಕೃಷಿ, ವ್ಯಾಪಾರ, ವ್ಯವಹಾರಗಳಿಗೆ ಬೆನ್ನೆಲುಬಾಗಿ ನಿಂತಿವೆ ಎಂದು ಬಿಜೆಪಿ ಮುಖಂಡೆ ಜಯಶ್ರೀ ಬಸವರಾಜ ಮತ್ತಿಮಡು ಹೇಳಿದರು.
ಅವರು ನಗರದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾದ ಓಂ ಪತ್ತಿನ ಸಹಕಾರ ಸಂಘದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಸಹಕಾರಿ ಬ್ಯಾಂಕುಗಳು ಸ್ಥಳೀಯ ಬಡ ವ್ಯಾಪಾರಸ್ಥರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ನೀಡಿ ಅವರ ಬದುಕಿಗೆ ಆಸರೆಯಾಗಿವೆ. ಗ್ರಾಹಕರ ಸಹಕಾರದಿಂದಲೇ ಸಹಕಾರಿ ಬ್ಯಾಂಕಗಳು ಅಭಿವೃದ್ಧಿಯನ್ನು ಸಾಧಿಸುತ್ತಿವೆ. ಆದ್ದರಿಂದ ಸಾಲ ತೆಗೆದುಕೊಂಡವರು ಸರಿಯಾಗಿ ಕಟ್ಟಿದರೇ ಮಾತ್ರ ಸಹಕಾರಿ ಬ್ಯಾಂಕುಗಳು ಅಭಿವೃದ್ಧಿ ಸಾಧಿಸುತ್ತವೆ ಎಂದು ಹೇಳಿದರು.
ಎಸಬಿಐ ಬ್ಯಾಂಕ್ ವ್ಯವಸ್ಥಾಪಕ ನಾಗರಾಜ.ವಿ ಮಾತನಾಡಿ, ನಮ್ಮ ದೇಶದ ಸಹಕಾರಿ ರಂಗದ ವ್ಯಾಪ್ತಿ ಬಹಳ ದೊಡ್ಡದು. ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಸಹಕಾರ ಕ್ಷೇತ್ರದ ಪಾತ್ರ ಬಹಳ ಮಹತ್ತ್ವದ್ದು. ಈಗಂತೂ ಅವುಗಳ ಮಹತ್ತ್ವ, ವ್ಯಾಪ್ತಿ ಮತ್ತು ಸಂಖ್ಯೆ ಇನ್ನೂ ಹೆಚ್ಚಾಗಿದೆ. ಸಹಕಾರವು ಸಂಸ್ಕಾರಯುತವಾದಾಗ ಸಮಾಜಕ್ಕೆ ಹೆಚ್ಚು ಹಿತ. ಎಲ್ಲರೂ ಪ್ರತ್ಯೇಕವಾಗಿ ತಮ್ಮ ತಮ್ಮದೇ ಸಹಕಾರಿ ಸಂಘಗಳನ್ನು ನಡೆಸುತ್ತಾ ಒಬ್ಬರಿಗೊಬ್ಬರ ಪರಿಚಯವಿಲ್ಲದೇ ತಮ್ಮ ದಾರಿಯಲ್ಲಿ ತಾವು ನಡೆಯುವುದಕ್ಕಿಂತ ಎಲ್ಲರ ನಡುವೆ ಬಾಂಧವ್ಯ ಬೆಳೆದರೆ, ಪರಸ್ಪರ ಅನುಭವಗಳನ್ನು ಹಂಚಿಕೊಳ್ಳುವಂತಾದರೆ, ಜನರಿಗೆ ಅನುಕೂಲವಾಗುವ ಹೊಸ ಹೊಸ ಪ್ರಯೋಗಗಳನ್ನು ನಡೆಸುವಂತಾದರೆ ಮಾತ್ರ ಸಂಘದ ಅಭಿವೃದ್ಧಿಗೂ ಹಾಗೂ ದೇಶದ ಅಭಿವೃದ್ಧಿಗೂ ಸಹಕಾರಿಯಾಗುತ್ತದೆ ಎಂದು ಹೇಳಿದರು.
ಶಹಾಬಾದ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಡಾ.ಅಹ್ಮದ್ ಪಟೇಲ್, ಸಂಘದ ಉಪಾಧ್ಯಕ್ಷ ಸೋಮಶೇಖರ ಕೆರಳ್ಳಿ ವೇದಿಕೆಯ ಮೇಲಿದ್ದರು. ಓಂ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಸವರಾಜ ಮದ್ರಕಿ ಅಧ್ಯಕ್ಷತೆ ವಹಿಸಿದ್ದರು.
ಹಣಮಂತ ಜಾಧವ ನಿರೂಪಿಸಿದರು, ರಾಮಣ್ಣ ಇಬ್ರಾಹಿಂಪೂರ ಸ್ವಾಗತಿಸಿದರು, ಶಿವಕುಮಾರ ಕುಸಾಳೆ ವಂದಿಸಿದರು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರು, ಸದಸ್ಯರು ಹಾಗೂ ಸಾರ್ವಜನಿಕರು ಹಾಜರಿದ್ದರು.