ಶಹಾಬಾದ:ವೈಚಾರಿಕ ಚಿಂತನೆ ಮತ್ತು ತ್ಯಾಗ ಮನೋಭಾವನೆಯಿಂದ ಭಾರತೀಯ ಸಮಾಜವನ್ನು ಸಮೃದ್ಧಗೊಳಿಸಿದ ಸಾವಿತ್ರಿಬಾಯಿ ಫುಲೆಯವರು ದೇಶ ಕಂಡ ಮಹಾನ್ ಮಹಿಳೆ ಹಾಗೂ ದೇಶ ಕಂಡ ಮೊದಲ ಮಹಿಳಾ ಶಿಕ್ಷಕಿ ಎಂದು ದಲಿತ ವಿದ್ಯಾರ್ಥಿ ಒಕ್ಕೂಟ ಸಮಿತಿಯ ತಾಲೂಕಾ ಸಂಚಾಲಕ ಪೂಜಪ್ಪ ಮೇತ್ರೆ ಹೇಳಿದರು.
ಅವರು ರವಿವಾರ ನಗರದ ಕನ್ನಡ ಭವನದಲ್ಲಿ ದಸಂಸ ವತಿಯಿಂದ ಆಯೋಜಿಸಲಾದ ಸಾವಿತ್ರಿಬಾಯಿ ಫುಲೆಯವರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೇವಲ 13ನೇ ವಯಸ್ಸಿನಲ್ಲಿಯೇ ಮದುವೆಯಾದ ಸಾವಿತ್ರಿಬಾಯಿಗೆ ಅಕ್ಷರ,ಪುಸ್ತಕ ಜ್ಞಾನವಿರಲಿಲ್ಲ. ಆದರೆ ವಿದ್ಯೆ ಕಲಿಯಬೇಕೆಂಬ ಆಸೆ ಇತ್ತು.ಇವರ ಆಸೆಗೆ ಒತ್ತಾಸೆಯಾಗಿ ನಿಂತವರು ಆ ಕಾಲಕ್ಕೆ ಪ್ರಗತಿಪರ ಚಿಂತನೆಯ ಪತಿ ಜ್ಯೋತಿಬಾ ಪುಲೆಯವರು.ಇವರ ಪ್ರೋತ್ಸಾಹ ಮತ್ತು ಪ್ರೇರಣೆಯಿಂದ ಶಿಕ್ಷಣ ಪಡೆದರು. ಆಗಿನ ಬ್ರಿಟಿಷರ ಆಳ್ವಿಕೆಯ ಭಾರತದಲ್ಲಿ ಮೊದಲ ಶಿಕ್ಷಕಿಯ ತರಬೇತಿ ಪಡೆದು 17ನೇ ವಯಸ್ಸಿಗೆ ಶಿಕ್ಷಕಿಯಾದರು.ನಂತರಮಹಿಳೆ ಸಬಲಳಾಗಬೇಕೆಂದರೆ ಅವಳಿಗೆ ಶಿಕ್ಷಣ ನೀಡುವುದು ಅಗತ್ಯವೆಂದು ಅರಿತು ಶಿಕ್ಷಣ ನೀಡಲು ಪ್ರಾರಂಭಿಸಿದರು.ಆಗ ಪಟಭದ್ರಿಗೆ, ಸಂಪ್ರದಾಯಸ್ಥರಿಗೆ ಇದನ್ನು ಇವರ ಕಾರ್ಯ ಸಹಿಸಲಾಗದೇ ಕಾಟ ನೀಡಲು ಪ್ರಾರಂಭಿಸಿದರು.ಆದರೂ ಎದೆಗುಂದದೆ ಬಿಡೇವಾಡದಲ್ಲಿ ಭಾರತದಲ್ಲಿಯೇ ಮೊದಲ ಬಾರಿಗೆ ನಿರ್ಲಕ್ಷಿತ ಬಾಲಕಿಯರಿಗೆ,ಅವಕಾಶ ವಂಚಿತ ಹೆಣ್ಣು ಮಕ್ಕಳಿಗಾಗಿ ಹಾಗೂ ದಿಕ್ಕೆಟ್ಟ ಸ್ತ್ರೀಯರಿಗೆ ಶಾಲೆ ಆರಂಭಿಸಿ ಹೊಸ ಇತಿಹಾಸವನ್ನೇ ಬರೆದರು. ತಳವರ್ಗದ ಅನಕ್ಷರಸ್ಥ ಸಾವಿತ್ರಿಬಾಯಿ ಅಕ್ಷರ ಕಲಿತು, ಶಿಕ್ಷಣವಂಚಿತ ಮಹಿಳೆಯರಿಗೆ ಅಕ್ಷರ ಕಲಿಸಿದ ಕರುಣಾಮಯಿ ಎಂದು ಹೇಳಿದರು.
ಕಸಾಪ ಕಲಬುರಗಿ ಗ್ರಾಮೀಣ ಅಧ್ಯಕ್ಷ ಶರಣಗೌಡ ಪಾಟೀಲ, ನಗರಾಧ್ಯಕ್ಷ ಮಲ್ಲಿಕಾರ್ಜುನ ಪೂಜಾರಿ ಮಾತನಾಡಿದರು. ದಸಂಸ ತಾಲೂಕಾ ಸಂಘಟನಾ ಸಂಚಾಲಕ ಮಲ್ಲಣ್ಣ ಮಸ್ಕಿ, ಜಯಶ್ರೀ ಜಾಯಿ, ಅರುಣ ಜಾಯಿ,ಮಲ್ಲಿಕಾರ್ಜುನ ಹಳ್ಳಿ, ಮಲ್ಲಿಕಾರ್ಜುನಶೆಟ್ಟಿ, ರಾಘವೇಂದ್ರ ಗುಡೂರ, ಸಚಿನ್ ಗಿರೇನೂರ್, ಅರ್ಜುನ ಮೇತ್ರೆ, ನಿಂಗಪ್ಪ ನ್ಯಾವನಿ, ಮಲ್ಲಿಕಾರ್ಜುನ ಹುಗ್ಗಿ ಇತರರು ಇದ್ದರು.