ಕಲಬುರಗಿ: ಜಿಲ್ಲೆಯ ಮತದಾರರ ಅಂತಿಮ ಪಟ್ಟಿಯನ್ನು ಇದೇ ಜನವರಿ 18 ರಂದು ಪ್ರಕಟಿಸಲು ನಿರ್ಧರಿಸಲಾಗಿದೆ ಎಂದು ಕಲಬುರಗಿ ವಿಭಾಗದ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರೂ ಆದ ಕಲಬುರಗಿ ಜಿಲ್ಲೆಯ ಮತದಾರರ ಪಟ್ಟಿ ವೀಕ್ಷಕÀರಾದ ನಲಿನ್ ಅತುಲ್ ಅವರು ತಿಳಿಸಿದರು.
ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಯ ಕುರಿತು ದಿನಾಂಕ 01-01-2021ರ ಅರ್ಹತಾ ಪಟ್ಟಿಯನ್ನು ಆಧರಿಸಿ ಶುಕ್ರವಾರ ಕರೆದಿದ್ದ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.
ದಿನಾಂಕ 18-11-2020 ರಿಂದ 17-12-2020ರವರೆಗೆ ಮತದಾರರ ಹಕ್ಕುಗಳು ಹಾಗೂ ಆಕ್ಷೇಪಣೆಗಳನ್ನು ಸಲ್ಲಿಸಲು ಕಾಲಾವಕಾಶ ನೀಡಲಾಗಿತ್ತು. ಈ ಅವಧಿಯಲ್ಲಿ ಬಂದ ಆಕ್ಷೇಪಣೆಗಳಿಗೆ ಸ್ಪಂದಿಸಲಾಗಿದೆ ಎಂದರು. ಜಿಲ್ಲೆಯಲ್ಲಿ ದಿನಾಂಕ 22-11-2020 ಮತ್ತು 29-11-2020, 6-12-2020 ಹಾಗೂ 13-12-2020ರಂದು ವಿಶೇಷ ಮತದಾರರ ನೋಂದಣಿ ಅಭಿಯಾನವನ್ನು ಜರುಗಿಸಲಾಗಿತ್ತು ಎಂದು ಮತದಾರರ ಪಟ್ಟಿ ವೀಕ್ಷಕÀ ನಲಿನ್ ಅತುಲ್ ಅವರು ಹೇಳಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಡಾ.ಶಂಕರ್ ವಣಿಕ್ಯಾಳ ಅವರು, ದಿನಾಂಕ 7-01-2021ರಂದು ಮತದಾರರ ಹಕ್ಕುಗಳು ಹಾಗೂ ಆಕ್ಷೇಪಣೆಗಳ ವಿಲೇವಾರಿ ಮಾಡಲಾಗಿತ್ತು ಎಂದು ವಿವರಿಸಿದರು.
ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ಸ್ನೇಹಲ್ ಸುಧಾಕರ ಲೋಖಂಡೆ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.