ಶೋಷಣೆಯ ಸಂಕೋಲೆಯಲ್ಲಿ ಸ್ತ್ರೀ ಬಂಧನ: ಪದ್ಮರೇಖಾ

0
37

ವಾಡಿ: ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಾದರೂ ದೇಶದ ಅಸಂಖ್ಯಾತ ಮಹಿಳೆಯರಿಗೆ ಶೋಷಣೆಯ ಸಂಕೋಲೆಯಿಂದ ಇನ್ನೂ ಮುಕ್ತಿ ಸಿಕ್ಕಿಲ್ಲ. ಶಿಕ್ಷಣ ಪಡೆದ ಮಹಿಳೆಯರೂ ಕೂಡ ಪುರುಷ ಪ್ರಧಾನ ವ್ಯವಸ್ಥೆಯ ವಿರುದ್ಧ ದನಿ ಎತ್ತಲು ಸಾಧ್ಯವಾಗುತ್ತಿಲ್ಲ ಎಂದು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ಸದಸ್ಯೆ ಪದ್ಮರೇಖಾ ವಿ.ಕೆ ಆಕ್ರೋಶ ವ್ಯಕ್ತಪಡಿಸಿದರು.

ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ವತಿಯಿಂದ ಪಟ್ಟಣದ ಎಸ್‌ಯುಸಿಐ (ಸಿ) ಪಕ್ಷದ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ದೇಶದ ಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಮನೆಯ ನಾಲ್ಕು ಗೋಡೆಗಳ ಮಧ್ಯೆ ನರಕದ ಬದುಕು ಸವೆಸುತ್ತಿದ್ದ ೧೮ನೇ ಶತಮಾನದ ಮಹಿಳೆಯರ ದುಸ್ಥಿತಿಗೆ ಮರುಗಿದ ಜ್ಯೋತಿಬಾ ಫುಲೆ ಹಾಗೂ ಸಾವಿತ್ರಿಬಾಯಿ ಫುಲೆ ದಂಪತಿಗಳು, ಮೇಲ್ವರ್ಗ ಕೀಳು ವರ್ಗ ಎಂಬ ಬೇಧ ತೋರದೆ ಅವರವರ ಬಡಾವಣೆಗಳಿಗೆ ಹೋಗಿ ಅಕ್ಷರ ಕಲಿಸುತ್ತಿದ್ದರು. ಮಹಿಳೆಯರಿಗಾಗಿ ವಿಶೇಷ ಬಯಲು ಪಾಠ ಶಾಲೆಗಳನ್ನು ತೆರೆದ ಈ ಮಹಾನ್ ವ್ಯಕ್ತಿಗಳು ಸ್ತ್ರೀ ಜಾಗೃತಿಗಾಗಿ ಅನುಭವಿಸಿದ ಅವಮಾನ ಅಷ್ಟಿಷ್ಟಲ್ಲ. ಅಂತಹ ತ್ಯಾಗಮಯಿ ಫುಲೆ ದಂಪತಿಗಳು ನಮಗೆ ಆದರ್ಶವಾಗಬೇಕು ಎಂದರು.

Contact Your\'s Advertisement; 9902492681

ಸಾವಿತ್ರಿಬಾಯಿ ಫುಲೆ ಭಾವಚಿತ್ರಕ್ಕೆ ಪುಷ್ಪಮಾಲೆ ಅರ್ಪಿಸಿ ಮಾತನಾಡಿದ ಶಿಕ್ಷಣ ಉಳಿಸಿ ಸಮಿತಿಯ ಜಿಲ್ಲಾ ಸಂಚಾಲಕ ವೀರಭದ್ರಪ್ಪ ಆರ್.ಕೆ, ಮಹಿಳೆಯ ಶೋಷಣೆಗೆ ಶತಶತಮಾನಗಳ ಇತಿಹಾಸವಿದೆ. ಪುರುಷರ ಕಾಲಾಳಾಗಿ ಮಹಿಳೆ ಕಾಲವನ್ನು ದೂಡುತ್ತಿದ್ದಾಳೆ. ಗಂಡು ಹೆಣ್ಣಿನ ಸಮಾನತೆಯ ಬಗ್ಗೆ ಭಾಷಣ ಮಾಡುವವರು ತಮ್ಮ ಮನೆಯ ಮಹಿಳೆಯರಿಗೆ ಯಾವ ಸ್ವಾತಂತ್ರ್ಯ ಕೊಡುತ್ತಿದ್ದಾರೆ ಎಂಬುದು ಆತ್ಮಾವಲೋಕನ ಮಾಡಿಕೊಳ್ಳಬೇಕು. ಜಾತಿ ಅಸಮಾನತೆ ಒಂದೆಡೆಯಾದರೆ ಮಹಿಳೆಯರಲ್ಲಾ ವರ್ಗಗಳ ಪುರುಷರಿಂದ ತುಳಿತಕ್ಕೊಳಗಾಗಿದ್ದಾರೆ. ಅನ್ಯಾಯ, ಅಸಮಾನತೆ ಹಾಗೂ ಶೋಷಣೆಯನ್ನು ಕಾಪಾಡಿಕೊಂಡು ಹೋಗುತ್ತಿರುವ ಈ ಬಂಡವಾಳಶಾಹಿ ವ್ಯವಸ್ಥೆ ಮೊದಲು ತೊಲಗಬೇಕು. ಎಲ್ಲಾ ಜಾತಿ ಜನಾಂಗದ ಮಹಿಳೆಯರು ಸಂಘಟಿತರಾಗಿ ಹೋರಾಡಿದಾಗ ಮಾತ್ರ ಸಾವಿತ್ರಿಬಾಯಿ ಫುಲೆ ಅವರ ಕನಸು ನನಸಾಗುತ್ತದೆ ಎಂದರು.

ಶಿಕ್ಷಕಿ ಶ್ರೀದೇವಿ ಎಸ್.ಮಲಕಂಡಿ ಅಧ್ಯಕ್ಷತೆ ವಹಿಸಿದ್ದರು. ಸೀತಾ ಎಂ.ಹೇರೂರ, ಕೋಕಿಲಾ ಎಸ್.ಹೇರೂರ, ವೆಂಕಟೇಶ ದೇವದುರ್ಗಾ ಪಾಲ್ಗೊಂಡಿದ್ದರು. ಶಿವಲೀಲಾ ರಮೇಶ ಮಾಶಾಳ ನಿರೂಪಿಸಿ, ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here