ಭಾಲ್ಕಿ: ಅನೇಕ ಸಾಧನೆಗಳಿಂದ ಈ ಭಾಗದ ನಡೆದಾಡುವ ದೇವರೆನಿಸಿದ್ದ ಶತಾಯುಶಿ ಲಿಂಗೈಕ್ಯ ಡಾ. ಚನ್ನಬಸವ ಪಟ್ಟದ್ದೇವರ ಜೀವನಾಧಾರಿತ ಚಲನಚಿತ್ರ “ಕಲ್ಯಾಣ ಕುವರ” ಇದೇ ಏ. ೨೨ರಂದು ರಾಜ್ಯದಾದ್ಯಂತ ಬಿಡುಗಡೆ ಆಗುತ್ತಿದೆ. ಅಂದು ಪೂಜ್ಯ ಪಟ್ಟದ್ದೇವರ ಸ್ಮರಣೋತ್ಸವ (ಲಿಂಗೈಕ್ಯ) ದಿನವಾಗಿದ್ದು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಬೇಕೆಂದು ನಟ, ನಿರ್ದೇಶಕ ಬಿ.ಜೆ. ವಿಷ್ಣುಕಾಂತ ಮನವಿ ಮಾಡಿದರು.
ಭಾಲ್ಕಿಯ ಸದ್ಗುರು ವಿದ್ಯಾಲಯದಲ್ಲಿ ಮಂಗಳವಾರ ನಡೆದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಅನೇಕ ಕಷ್ಟ, ನಷ್ಟಗಳನ್ನು ಎದುರಿಸಿ ಪಟ್ಟದ್ದೇವರು ಮಾಡಿದ ಹೋರಾಟಗಳು, ಧಾರ್ಮಿಕ ಸಾಮಾಜಿಕ, ಶೈಕ್ಷಣಿಕ ವಿಧಾಯಕ ಕಾರ್ಯಗಳ ಬಗ್ಗೆ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಪೂಜ್ಯರ ಸಾಧನೆಗಳು ನಾಡಿನಾದ್ಯಂತ ಪರಿಚಿತವಾಗಬೇಕು. ಅವರ ಆದರ್ಶಗಳು ಇಂದಿನ ಮಠಾಧೀಶರಿಗೆ ಮಾದರಿ ಮತ್ತು ಅನುಕರಣೀಯವಾಗಿವೆ ಎಂದರು.
ಸಚಿವ ಯೋಗೇಶ್ವರ ಐತಿಹಾಸಿಕ ಜಾಮೀಯಾ ಮಸೀದಿಗೆ ಭೇಟಿ: ಶೀಘ್ರವೇ ಸ್ವಚ್ಛತಾ ಕಾರ್ಯ ಸೂಚನೆ
ಹಿರಿಯ ಸಾಹಿತಿ ಡಾ. ಸೋಮನಾಥ ನುಚ್ಚಾ ಅವರು ಮಾತನಾಡಿ, ವಿಷ್ಣುಕಾಂತ ಅವರಲ್ಲಿ ಅಪಾರ ಪ್ರತಿಭೆ ಇದೆ. ಹಿಂದೆ ಡಾ. ಅಂಬೇಡ್ಕರ ಸಿನೆಮಾ ಮಾಡಿ, ನಟನೆ ಮತ್ತು ನಿರ್ದೇಶನ ಮಾಡಿದ್ದಾರೆ. ಈಗ ಈ ಭಾಗದ ಜಂಗಮಜ್ಯೋತಿಯಾಗಿದ್ದ ಹಿರೇಮಠಾಧೀಶರ ಚಿತ್ರ ಮಾಡಿದ್ದು ಹೆಮ್ಮೆಯ ವಿಷಯ. ಎಲ್ಲರೂ ಅಭಿಮಾನಿಗಳನ್ನು ಸ್ನೇಹಿತರನ್ನು ಕರೆದುಕೊಂಡು ಥೇಟರ‍್ಗಳಲ್ಲಿ ವೀಕ್ಷಣೆ ಮಾಡಬೇಕು ಎಂದರು.
ಸದ್ಗುರು ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಸೋಮನಾಥ ಮುದ್ದಾ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಗುರು ಸುಜಾತಾ ಪಾಟೀಲ ಸ್ವಾಗತಿಸಿದರು. ಸಿದ್ರಾಮ ಅಳ್ಳೆ ವಂದಿಸಿದರು. ದಯಾಳ್ ದಂಡಿನ್, ಇಮ್ಯಾನುಯಲ್ ಬೀದರ್, ಪಂಕಜಾ ಅಳ್ಳೆ, ಕಾವೇರಿ, ರಾಜಕುಮಾರ ಮೇತ್ರೆ, ಯಲ್ಲಾಲಿಂಗ ಮುಂತಾದವರು ಇದ್ದರು.